ಲೋಹಗಢ ಕೋಟೆಯಲ್ಲಿ 'ಸಿಯಾ ಪಾಯಿಂಟ್' ನೋಡಲು ಮುಗಿಬಿದ್ದ ಜನ: ಕೇತನ್​ ಕೊಲೆ ಬಳಿಕ ಹೆಚ್ಚಾಯ್ತು ಕೋಟೆಯ ಕ್ರೇಜ್​! Siya Spot 
ದೇಶ

ಲೋಹಗಢ ಕೋಟೆಯಲ್ಲಿ ಸಿಯಾ ಪಾಯಿಂಟ್ ನೋಡಲು ಮುಗಿಬಿದ್ದ ಜನ: ಕೇತನ್​ ಕೊಲೆ ಬಳಿಕ ಹೆಚ್ಚಾಯ್ತು ಕೋಟೆಯ ಕ್ರೇಜ್​! Siya Spot

ಪ್ರಮುಖ ಮುಖ್ಯಾಂಶಗಳು

  • ಕೇತನ್ ಕೊಲೆ ಪ್ರಕರಣದ ಬೆನ್ನಲ್ಲೇ ಲೋಹಗಢ ಕೋಟೆಗೆ ಭೇಟಿ ನೀಡಿದ ಪ್ರವಾಸಿಗರು 25% ಹೆಚ್ಚಳ!
  • ಲೋಹಗಢ ಕೋಟೆಯಲ್ಲಿ 'ಸಿಯಾ ಪಾಯಿಂಟ್' ನೋಡಲು ಮುಗಿಬಿದ್ದ ಜನ!
  • 2000 ವರ್ಷದ ಹಳೆಯ ಕಬ್ಬಿಣದ ಕೋಟೆಗೆ ಹರಿದುಬರುತ್ತಿದೆ ಪ್ರವಾಸಿಗರ ಪ್ರವಾಹ!
  • ಲೋಹಗಢ ಕೋಟೆಯಲ್ಲಿ ಹೆಚ್ಚಿದ ಪ್ರವಾಸಿಗರ ಹಾವಳಿ, ಇತಿಹಾಸ ತಜ್ಞರ ತೀವ್ರ ಆತಂಕ!
Siya Spot : ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆ ಮತ್ತು ಚರ್ಚೆಯೂ ನ್ಯಾಯಾಲಯದ ಗಡಿಗಳನ್ನೂ ದಾಟಿ ಪ್ರವಾಸಿ ತಾಣಗಳಿಗೂ ವ್ಯಾಪಿಸಿದೆ. ಈ ಹೈಪ್ರೊಫೈಲ್ ಕೊಲೆ ಪ್ರಕರಣದ ಬೆನ್ನಲ್ಲೇ ಮಹಾರಾಷ್ಟ್ರದ ಐತಿಹಾಸಿಕ 'ಲೋಹಗಢ ಕೋಟೆ'ಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಅಪರಾಧ ನಡೆದಿದೆ ಎನ್ನಲಾದ ಆ ನಿರ್ದಿಷ್ಟ ಸ್ಥಳವನ್ನು ಕಣ್ಣಾರೆ ನೋಡಲು ಜನರು ಅತ್ಯಂತ ಕುತೂಹಲದಿಂದ ಮುಗಿಬೀಳುತ್ತಿದ್ದಾರೆ.
ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ಲೋಹಗಢ ಕೋಟೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಬರೋಬ್ಬರಿ 25 ಪ್ರತಿಶತದಷ್ಟು ಭಾರೀ ಏರಿಕೆ ಕಂಡುಬಂದಿದೆ. ಪುಣೆ ಸಮೀಪವಿರುವ ಈ ಕೋಟೆಗೆ ಪ್ರವಾಸಕ್ಕೆ ಬಂದಿದ್ದ ವೇಳೆ ಕೇತನ್ ಅಗರ್ವಾಲ್‌ನನ್ನು ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಕೆಳಗೆ ತಳ್ಳಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಅಪರಾಧ ನಡೆದಿದೆ ಎನ್ನಲಾದ ಆ ನಿರ್ದಿಷ್ಟ ಜಾಗವನ್ನು ಈಗ ಸ್ಥಳೀಯವಾಗಿ ಅನಧಿಕೃತವಾಗಿ "ಸಿಯಾ ಪಾಯಿಂಟ್" ಎಂದೇ ಕರೆಯಲಾಗುತ್ತಿದೆ.
ಈ ಕೊಲೆ ನಡೆದಿದೆ ಎನ್ನಲಾದ ಜಾಗವನ್ನು ಕಣ್ಣಾರೆ ನೋಡುವ ಸಾರ್ವಜನಿಕರ ಹಪಾಹಪಿಯೇ ಈಗ ಇಲ್ಲಿಗೆ ಬರುವ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಮಾರ್ಪಟ್ಟಿದೆ. ಕೋಟೆಗೆ ಬರುತ್ತಿರುವ ಪ್ರವಾಸಿಗರು ಅಲ್ಲಿನ ಭದ್ರತಾ ಸಿಬ್ಬಂದಿ ಹಾಗೂ ಸಹ ಪ್ರವಾಸಿಗರನ್ನು ವಿಚಾರಿಸಿ, ಘಟನೆ ನಡೆದ ನಿಖರವಾದ ಸ್ಥಳ ಯಾವುದು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ. ಇಡೀ ಪ್ರಕರಣದ ಸುತ್ತಲಿರುವ ತೀವ್ರ ಕುತೂಹಲವು, ಈ ಹಿಂದೆ ಕೇವಲ ಒಂದು ಪ್ರಸಿದ್ಧ ಚಾರಣ (Trekking) ತಾಣವಾಗಿದ್ದ ಈ ಐತಿಹಾಸಿಕ ಕೋಟೆಯನ್ನು ಈಗ ಸಾರ್ವಜನಿಕ ಆಸಕ್ತಿಯ ಪ್ರಮುಖ ಕೇಂದ್ರವಾಗಿ ಬದಲಾಯಿಸಿದೆ.
ಲೋಹಗಢ ಕೋಟೆಯು ಮಹಾರಾಷ್ಟ್ರದಲ್ಲಿಯೇ ಅತಿ ಹೆಚ್ಚು ಜನ ಭೇಟಿ ನೀಡುವ ಪ್ರಮುಖ ಪರಂಪರೆ ತಾಣಗಳಲ್ಲಿ ಒಂದಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಾಮಾನ್ಯವಾಗಿ ವಾರಾಂತ್ಯ ಹಾಗೂ ಸಾರ್ವಜನಿಕ ರಜೆ ದಿನಗಳಲ್ಲಿ ಇಲ್ಲಿ ದಿನಕ್ಕೆ 4,000 ದಿಂದ 5,000 ಪ್ರವಾಸಿಗರು ಬರುತ್ತಿದ್ದರು. ಆದರೆ, ಈ ಕೊಲೆ ಪ್ರಕರಣದ ಬಳಿಕ ಸಾಮಾನ್ಯ ದಿನಗಳಲ್ಲೂ ಸಹ ವಾರಾಂತ್ಯದಷ್ಟೇ ಭಾರಿ ಜನಜಂಗುಳಿ ಕಂಡುಬರುತ್ತಿದ್ದು, ಬರುವ ಪ್ರತಿಯೊಬ್ಬರ ಗಮನವೂ ಈಗ "ಸಿಯಾ ಪಾಯಿಂಟ್" ಎಂದೇ ಕರೆಯಲಾಗುತ್ತಿರುವ ಆ ವಿವಾದಿತ ಜಾಗದ ಮೇಲೆಯೇ ನೆಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರವಾಸಿಗರ ಈ ದಿಢೀರ್ ಆಸಕ್ತಿ ಮತ್ತು ಭೇಟಿಯು ಇತಿಹಾಸ ಹಾಗೂ ಪರಂಪರೆ ಸಂರಕ್ಷಕರ ಆತಂಕಕ್ಕೆ ಕಾರಣವಾಗಿದೆ. 'ಲೋಹಗಢ ವಿಸಾಪುರ ವಿಕಾಸ್ ಮಂಚ್'ನ ಸಚಿನ್ ತೇಕವಾಡೆ ಅವರು, ಇಂತಹ ಮಹತ್ವದ ಐತಿಹಾಸಿಕ ಕೋಟೆಯು ಒಂದು ಕೊಲೆ ಪ್ರಕರಣದೊಂದಿಗೆ ಗುರುತಿಸಿಕೊಳ್ಳುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಅತ್ಯಂತ ಆಘಾತಕಾರಿ ಮತ್ತು ದುರದೃಷ್ಟಕರ ಎಂದಿರುವ ಅವರು, ಇಷ್ಟು ದೊಡ್ಡ ಇತಿಹಾಸ ಹಾಗೂ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಜಾಗದಲ್ಲಿ ಇಂತಹ ಘೋರ ಅಪರಾಧ ನಡೆದಿರುವುದು ತೀವ್ರ ಕಳವಳಕಾರಿ ಸಂಗತಿ ಎಂದಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಕೋಟೆಯ ಕುರಿತು ಹರಿದಾಡುತ್ತಿರುವ ಮೀಮ್ಸ್ ಹಾಗೂ ಜೋಕ್‌ಗಳು ಈ ಐತಿಹಾಸಿಕ ಸ್ಮಾರಕದ ಘನತೆಗೆ ಧಕ್ಕೆ ತರುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸುಮಾರು 2,000 ವರ್ಷಗಳಿಗಿಂತಲೂ ಸುದೀರ್ಘವಾದ ಇತಿಹಾಸವನ್ನು ಹೊಂದಿರುವ ಲೋಹಗಢ ಕೋಟೆಯು ಪುಣೆ ಜಿಲ್ಲೆಯ ಲೋನಾವಾಲಾ ಬಳಿಯ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿದೆ. ಇದು ಮಹಾರಾಷ್ಟ್ರದ ಅತ್ಯಂತ ಪ್ರಸಿದ್ಧ ಚಾರಣ ತಾಣಗಳಲ್ಲಿ ಒಂದಾಗಿದೆ. 'ಲೋಹಗಢ' ಎಂದರೆ 'ಕಬ್ಬಿಣದ ಕೋಟೆ' ಎಂದರ್ಥವಾಗಿದ್ದು, ಅದರ ಭೇದಿಸಲಾಗದ ಅತ್ಯಂತ ಬಲಿಷ್ಠವಾದ ರಚನೆಗೆ ಈ ಹೆಸರು ಬಂದಿದೆ. ಇದರ ಇತಿಹಾಸವು ಶಾತವಾಹನರ ಕಾಲಕ್ಕೆ ಸೇರಿದ್ದಾಗಿದ್ದು, ಆ ಕಾಲದಲ್ಲೇ ಈ ಕೋಟೆಯ ಮೊದಲ ತಳಪಾಯವನ್ನು ಹಾಕಲಾಗಿತ್ತು ಎಂದು ನಂಬಲಾಗಿದೆ.
ಮಹಾರಾಷ್ಟ್ರದ ಮಾವಳ್ ಪ್ರದೇಶದಲ್ಲಿರುವ ಈ ಲೋಹಗಢ ಕೋಟೆಯು ಲೋನಾವಾಲಾದಿಂದ ಸುಮಾರು 11 ಕಿಲೋಮೀಟರ್ ಹಾಗೂ ಪುಣೆಯಿಂದ ಅಂದಾಜು 60 ಕಿಲೋಮೀಟರ್ ದೂರದಲ್ಲಿದೆ. ಇನ್ನು ಈ ಐತಿಹಾಸಿಕ ಸ್ಮಾರಕಕ್ಕೆ ಭೇಟಿ ನೀಡಲು ಬಯಸುವ ಪ್ರವಾಸಿಗರಿಗೆ ಅತ್ಯಂತ ಹತ್ತಿರವಿರುವ ರೈಲ್ವೆ ನಿಲ್ದಾಣವೆಂದರೆ ಅದು 'ಮಾಲವ್ಲಿ' (Malavli). ಇದು ಕೋಟೆಗೆ ತಲುಪಲು ಪ್ರವಾಸಿಗರಿಗೆ ಅತ್ಯಂತ ಸುಲಭ ಹಾಗೂ ಅನುಕೂಲಕರವಾದ ಸಂಪರ್ಕ ಮಾರ್ಗವಾಗಿದೆ.
ಏನಿದು ಪ್ರಕರಣ?
ಮಹಾರಾಷ್ಟ್ರದ ಖ್ಯಾತ ಉದ್ಯಮಿಯ ಪುತ್ರನಾದ ಕೇತನ್​ ಅಗರವಾಲ್ ಮತ್ತು ಸಿಯಾ ಗೋಯಲ್ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅರಮನೆಯೊಂದರಲ್ಲಿ ನವೆಂಬರ್​ನಲ್ಲಿ ಅದ್ದೂರಿ ವಿವಾಹವನ್ನು ಯೋಜಿಸಲಾಗಿತ್ತು. ಆದರೆ ಜೂನ್ 18ರಂದು ಪುಣೆ ಸಮೀಪದ ಲೋಹಗಢ ಕೋಟೆಯಲ್ಲಿ ಸಿಯಾ ಹಾಗೂ ಆಕೆಯ ಪ್ರಿಯಕರ ಚೇತನ್ ಸೇರಿ ಕೇತನ್​ನನ್ನು  ಕಣಿವೆಗೆ ತಳ್ಳಿದ ಪರಿಣಾಮ ಮೃತಪಟ್ಟಿದ್ದಾರೆ ಎಂದು ತನಿಖೆ ಬಹಿರಂಗಪಡಿಸಿದೆ. 22 ವರ್ಷದ ಚೇತನ್ ಬಬುಲಾಲ್ ಚೌಧರಿ ಎಂಬಾತನೊಂದಿಗೆ ಸಿಯಾ ಕಳೆದ ವರ್ಷ ಸಭೆಯೊಂದರಲ್ಲಿ ಪರಿಚಯವಾಗಿದ್ದಳು. ಸಿಯಾ ಬೇಕರಿ ವ್ಯವಹಾರ ನಡೆಸುತ್ತಿದ್ದರೆ, ಚೇತನ್ ಡ್ರೈ ಫ್ರೂಟ್ಸ್ ವ್ಯಾಪಾರ ಮಾಡುತ್ತಿದ್ದನು. ಇವರಿಬ್ಬರ ಸಂಬಂಧ 2025ರ ನವೆಂಬರ್‌ನಲ್ಲಿ ಆರಂಭವಾಗಿತ್ತು. ಅದೇ ವೇಳೆಗೆ ಸಿಯಾ ಮತ್ತು ಕೇತನ್​ ಅವರ ಕುಟುಂಬಗಳು ಮದುವೆ ಸಿದ್ಧತೆಯಲ್ಲಿ ತೊಡಗಿದ್ದವು.
ಪೊಲೀಸರ ಪ್ರಕಾರ, ಸಿಯಾ ಮತ್ತು ಕೇತನ್​ ನಡುವಿನ ಸಂಬಂಧದಿಂದ ಚೇತನ್ ಅಸಮಾಧಾನಗೊಂಡಿದ್ದನು. ಕೇತನ್​ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿ ಇಬ್ಬರೂ ಸೇರಿ ಕೊಲೆ ಸಂಚು ರೂಪಿಸಿದ್ದರು. ಸಿಯಾ, ಪ್ರವಾಸದ ನೆಪದಲ್ಲಿ ಕೇತನ್​ನನ್ನು ಲೋಹಗಢ ಕೋಟೆಗೆ ಕರೆದುಕೊಂಡು ಹೋಗಿದ್ದಳು. ಬಳಿಕ ಚೇತನ್ ಸ್ಥಳಕ್ಕೆ ಆಗಮಿಸಿದ್ದಾನೆ. ಇಬ್ಬರೂ ಸೇರಿ ಕೇತನ್​ನನ್ನು ಹಿಂಬದಿಯಿಂದ ತಳ್ಳಿದ ಪರಿಣಾಮ ಆಳವಾದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜೆನ್ಸೀಸ್​).