ಶಾಲೆಯಲ್ಲಿ ನೈತಿಕತೆ ಪಾಠ ತೆರೆಮರೆಯಲ್ಲಿ ಮನೆ ಹಾಳು ಮಾಡೋ ದಂಧೆ: ಶಿಕ್ಷಕಿಯರ ನೆಟ್‌ವರ್ಕ್ ಕಂಡು ಪೊಲೀಸರೇ ಶಾಕ್! Teachers
- ಕೇರಳದಲ್ಲಿ ಎಂಡಿಎಂಎ ಮಾದಕ ದ್ರವ್ಯ ಜಾಲದ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದ ಮೂವರು ಶಿಕ್ಷಕಿಯರ ಬಂಧನ
- ಇನ್ಸ್ಟಾಗ್ರಾಮ್ ಮೂಲಕ ಡ್ರಗ್ಸ್ ದಂಧೆ ನಡೆಸಿ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂಪಾಯಿ ಜಮೆ ಮಾಡಿಕೊಂಡಿದ್ದ ಶಿಕ್ಷಕಿಯರು
- ಹಣ ಬಂದ ತಕ್ಷಣ ಗೂಗಲ್ ಮ್ಯಾಪ್ ಮೂಲಕ ಡ್ರಗ್ಸ್ ಅಡಗಿಸಿಟ್ಟ ಲೊಕೇಶನ್ ರವಾನಿಸುತ್ತಿದ್ದ ಆರೋಪಿ ಶಿಕ್ಷಕಿಯರು
- ಬೆಂಗಳೂರು ಮತ್ತು ಹೈದರಾಬಾದ್ ಡ್ರಗ್ಸ್ ಗ್ಯಾಂಗ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಗುತ್ತಿಗೆ ಶಿಕ್ಷಕಿಯರ ಬಂಧನ
ತಿರುವನಂತಪುರಂ: ಸಮಾಜಕ್ಕೆ ನೈತಿಕತೆ ಬೋಧಿಸಿ, ವಿದ್ಯಾರ್ಥಿಗಳಿಗೆ ಉತ್ತಮ ದಾರಿ ತೋರಿಸಬೇಕಾದ ಶಿಕ್ಷಕಿಯರೇ ( Teachers ) ದುಡ್ಡಿನ ಆಸೆಗೆ ಬಿದ್ದು ಮಾದಕ ದ್ರವ್ಯ ಜಾಲದ ಕೊಂಡಿಗಳಾಗಿ ಕೆಲಸ ಮಾಡುತ್ತಿದ್ದ ಅಘಾತಕಾರಿ ಸತ್ಯವೊಂದು ಕೇರಳ ಜನತೆಯನ್ನು ಆತಂಕಕ್ಕೆ ದೂಡಿದೆ. ಎಂಡಿಎಂಎ (MDMA) ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ಮೂವರು ಶಿಕ್ಷಕಿಯರನ್ನು ಪೊಲೀಸರು ಬಂಧಿಸಿದ್ದು, ಅವರ ಕ್ರಿಮಿನಲ್ ನೆಟ್‌ವರ್ಕ್ ಮತ್ತು ಅಕ್ರಮ ಹಣಕಾಸು ವ್ಯವಹಾರದ ಸ್ಫೋಟಕ ಮಾಹಿತಿಗಳು ತನಿಖೆ ವೇಳೆ ಒಂದೊಂದಾಗಿ ಹೊರಬರುತ್ತಿವೆ.
ಖರೀದಿದಾರರು ಮತ್ತು ಸರಬರಾಜುದಾರರ ನಡುವೆ ಮಧ್ಯವರ್ತಿಗಳಾಗಿ ಕಾರ್ಯಾಚರಿಸುತ್ತಿದ್ದ ಈ ಶಿಕ್ಷಕಿಯರ ಕೆಲಸದ ಶೈಲಿ ಪೊಲೀಸರನ್ನೇ ಬೆರಗುಗೊಳಿಸಿದೆ. ಗ್ರಾಹಕರಿಂದ ಬಂದ ಹಣವು 10,000 ರಿಂದ 20,000 ರೂಪಾಯಿ ತಲುಪುತ್ತಿದ್ದಂತೆ, ಅದನ್ನು ಮುಖ್ಯ ಡ್ರಗ್ಸ್ ಪೂರೈಕೆದಾರರಿಗೆ ವರ್ಗಾಯಿಸುತ್ತಿದ್ದರು. ಹಣ ತಲುಪಿದ ಬಳಿಕ ಡ್ರಗ್ಸ್ ಅಡಗಿಸಿಟ್ಟ ರಹಸ್ಯ ಸ್ಥಳದ ಲೊಕೇಶನ್ ಅನ್ನು ಗೂಗಲ್ ಮ್ಯಾಪ್ ಮೂಲಕ ಗ್ರಾಹಕರಿಗೆ ಕಳುಹಿಸಿಕೊಡುತ್ತಿದ್ದರು. ಇನ್ಸ್ಟಾಗ್ರಾಮ್ ಮೂಲಕ ಗ್ಯಾಂಗ್‌ಗಳ ಸಂಪರ್ಕ ಬೆಳೆಸಿಕೊಂಡಿದ್ದ ಈ ಶಿಕ್ಷಕಿಯರು ಬಂದ ಲಾಭವನ್ನು ಹಂಚಿಕೊಳ್ಳುತ್ತಿದ್ದರು. ಇವರ ಜಾಲವು ಬೆಂಗಳೂರು ಮತ್ತು ಹೈದರಾಬಾದ್‌ನ ಡ್ರಗ್ಸ್ ಜಾಲದೊಂದಿಗೆ ನಿಕಟ ಸಂಪರ್ಕ ಹೊಂದಿತ್ತು ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿ ಶಿಕ್ಷಕಿಯರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಕೋಟಿಗಟ್ಟಲೆ ರೂಪಾಯಿಗಳ ಅಕ್ರಮ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಶಿಕ್ಷಕಿ ಕೀರ್ತನಾ ಬ್ಯಾಂಕ್ ಖಾತೆಗೆ ಒಂದೇ ವರ್ಷದಲ್ಲಿ 14 ಲಕ್ಷ ರೂಪಾಯಿ ಹಾಗೂ ಕಾವ್ಯಾ ಖಾತೆಗೆ ಕೇವಲ ಐದು ತಿಂಗಳಲ್ಲಿ 9 ಲಕ್ಷ ರೂಪಾಯಿ ಜಮೆಯಾಗಿರುವುದು ಪತ್ತೆಯಾಗಿದೆ. ಈ ಖಾತೆಗಳಿಗೆ ಹಣ ರವಾನಿಸಿದ ಪ್ರತಿಯೊಬ್ಬರ ಮೇಲೆಯೂ ಪೊಲೀಸರು ಕಣ್ಣಿಟ್ಟಿದ್ದು, ಸ್ಥಳೀಯವಾಗಿ ಈ ಡ್ರಗ್ಸ್ ಅನ್ನು ನೇರವಾಗಿ ಯಾರಿಗೆಲ್ಲಾ ವಿತರಿಸಲಾಗುತ್ತಿತ್ತು ಎಂಬ ಮೂಲವನ್ನು ಹುಡುಕಲು ತನಿಖಾ ತಂಡ ಮುಂದಾಗಿದೆ.
ಪೇರಂಬ್ರ ಬಿಆರ್‌ಎಸ್ ಶಾಲೆಯಲ್ಲಿ ಶಿಕ್ಷಕಿಯರಾಗಿದ್ದ ಕಾವ್ಯಾ, ಕೀರ್ತನಾ ಮತ್ತು ನಿಷ್ಮಾ ಬಂಧಿತ ಆರೋಪಿಗಳಾಗಿದ್ದಾರೆ. ಇವರಲ್ಲಿ ನಿಷ್ಮಾ ಅವರು ಆಟಿಸಂ ಪೀಡಿತ ಮಕ್ಕಳಿಗೆ ಬೋಧಿಸುವ ವಿಶೇಷ ಶಿಕ್ಷಕಿ ಹಾಗೂ ಇತರ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದ ತರಬೇತುದಾರರಾಗಿದ್ದರು. ಕೀರ್ತನಾ ಎಂಬಾಕೆ ಶಾಲೆಯಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಳು ಎಂಬುದು ಕಟು ಸತ್ಯ. ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆ ಶಿಕ್ಷಣ ಇಲಾಖೆಯು ಈ ಮೂವರನ್ನೂ ತಕ್ಷಣವೇ ಸೇವೆಯಿಂದ ವಜಾಗೊಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರಿನ ಇರಿಟ್ಟಿಯ ಜಿಜಿ ಎಂಬ ಮತ್ತೊಬ್ಬ ವ್ಯಕ್ತಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿದ್ದುಕೊಂಡು, ಒಂದು ಕಡೆ ಮಾದಕ ದ್ರವ್ಯ ವಿರೋಧಿ ಚಟುವಟಿಕೆಗಳ ನಾಟಕವಾಡುತ್ತಾ ಮತ್ತೊಂದೆಡೆ ಅದೇ ಜಾಲದಲ್ಲಿ ಸಕ್ರಿಯರಾಗಿದ್ದ ಶಿಕ್ಷಕಿಯರ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಾಲದ ಹಿಂದೆ ಇರುವ ಪ್ರಮುಖ ಸೂತ್ರಧಾರರನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ, (ಏಜೆನ್ಸೀಸ್).