Tamil Nadu Election | ಡಿಎಂಕೆ-ಬಿಜೆಪಿ ಒಂದಾಗಿದ್ದ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು..? 
ದೇಶ

ಇಂದು ಪರಸ್ಪರ ಕೆಸರೆರಚಾಟ, ಅಂದು ಕೈ-ಕೈ ಹಿಡಿದು ಓಡಾಟ!..ಡಿಎಂಕೆ-ಬಿಜೆಪಿ ಒಂದಾಗಿದ್ದ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು..? | Tamil Nadu Election

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ (Tamil Nadu Election) ರಣಕಣ ಸಜ್ಜಾಗುತ್ತಿದ್ದು, ಎಐಎಡಿಎಂಕೆ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ತನ್ನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಚೆನ್ನೈನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಅಂತಿಮ ಮುದ್ರೆ ಒತ್ತಲಾಗಿದೆ.
ಈ ಬಾರಿ ಬಿಜೆಪಿ ಕಳೆದ ಚುನಾವಣೆಗಿಂತ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದರೂ, ಮೈತ್ರಿಕೂಟದಲ್ಲಿ ಎಐಎಡಿಎಂಕೆ ಅತಿ ದೊಡ್ಡ ಪಾಲುದಾರ ಪಕ್ಷವಾಗಿ ಮುಂದುವರಿದಿದೆ. 2021ರಲ್ಲಿ 20 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಈ ಬಾರಿ 27 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದ್ದು, ಎಐಎಡಿಎಂಕೆ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆಯುವ ಗುರಿಯೊಂದಿಗೆ ಗರಿಷ್ಠ ಸ್ಥಾನಗಳನ್ನು ತನ್ನ ಬಳಿಯೇ ಉಳಿಸಿಕೊಂಡಿದೆ.

ಈಗ ಕುಸ್ತಿ ಆಗ ದೋಸ್ತಿ..

ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಡಿಎಂಕೆ ಮತ್ತು ಬಿಜೆಪಿ ಪರಸ್ಪರ ವಿರೋಧಿಗಳಾಗಿದ್ದರೂ, 2001ರ ವಿಧಾನಸಭಾ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ಕೈಜೋಡಿಸಿದ್ದವು ಎಂಬುದು ಕುತೂಹಲಕಾರಿ ಸಂಗತಿ. ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಡಿಎಂಕೆ ಮತ್ತು ಬಿಜೆಪಿ ಒಂದಾಗಿ ಸ್ಪರ್ಧಿಸಿದ ಮೊದಲ ಮತ್ತು ಏಕೈಕ ಚುನಾವಣೆ ಅದಾಗಿತ್ತು. ಆದರೆ ಈ ಪ್ರಯೋಗವು ಮತದಾರರ ಮನಗೆಲ್ಲುವಲ್ಲಿ ವಿಫಲವಾಗಿತ್ತು.
ಆ ಚುನಾವಣೆಯಲ್ಲಿ ಡಿಎಂಕೆ ಕೇವಲ 31 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 4 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದಕ್ಕೆ ವ್ಯತಿರಿಕ್ತವಾಗಿ ಜೆ. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಈ ಸೋಲಿನ ಬಳಿಕ ಎರಡೂ ಪಕ್ಷಗಳು ತಮ್ಮ ರಾಜಕೀಯ ಹಾದಿಯನ್ನು ಬದಲಿಸಿಕೊಂಡವು.
2021ರ ಚುನಾವಣಾ ಸಾಧನೆಯನ್ನು ಗಮನಿಸಿದರೆ, ಎಐಎಡಿಎಂಕೆ 66 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ ಕೊಯಮತ್ತೂರು ದಕ್ಷಿಣ ಮತ್ತು ತಿರುನಲ್ವೇಲಿ ಸೇರಿದಂತೆ ನಾಲ್ಕು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಈ ಬಾರಿಯ ಚುನಾವಣೆಯು ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 4 ರಂದು ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ಫಲಿತಾಂಶದೊಂದಿಗೆ ತಮಿಳುನಾಡಿನ ಭವಿಷ್ಯವೂ ನಿರ್ಧಾರವಾಗಲಿದೆ. ಆಡಳಿತಾರೂಢ ಡಿಎಂಕೆ ಮೈತ್ರಿಕೂಟವನ್ನು ಮಣಿಸಲು ಎಐಎಡಿಎಂಕೆ ಮತ್ತು ಬಿಜೆಪಿ ಹೊಸ ತಂತ್ರಗಳೊಂದಿಗೆ ಅಖಾಡಕ್ಕಿಳಿದಿವೆ(ಏಜೆನ್ಸೀಸ್​).