ಬೆಂಗಳೂರಿನ ಪ್ರತಿಷ್ಠಿತ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್ಸಿಬಿ ತಂಡದ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆಲುವಿನ ವಿಜಯೋತ್ಸವದ ವೇಳೆ 11 ಜನರನ್ನು ಬಲಿ ಪಡೆದ ಕಾಲ್ತುಳಿತ ದುರಂತಕ್ಕೆ ಇಂದಿಗೆ ಒಂದು ವರುಷ (ಜೂನ್ 4). ನಿಷ್ಠಾವಂತ ಅಭಿಮಾನಿಗಳ ಜತೆಗಿನ ಸಂಭ್ರಮಾಚರಣೆಯ ದುರಂತ ಆರ್ಸಿಬಿ ಹಾಗೂ ಭಾರತದ ಕ್ರೀಡಾ ಇತಿಹಾಸದಲ್ಲಿ ಕಪು್ಪಚುಕ್ಕೆಯಾಗಿ ಉಳಿದಿದೆ. ಕಾಲ್ತುಳಿತ ದುರಂತದ ಬಳಿಕ ಕ್ರಿಕೆಟ್ನಿಂದ ದೂರವಾಗಿದ್ದ ಚಿನ್ನಸ್ವಾಮಿ ಸ್ಟೇಡಿಯಂ 2026ರ ಮಾರ್ಚ್ 28ಕ್ಕೆ ಐಪಿಎಲ್ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯದೊಂದಿಗೆ ತನ್ನ ಗತವೈಭವಕ್ಕೆ ಮರಳಿತು. ಇದರೊಂದಿಗೆ 11 ತಿಂಗಳ ಬಳಿಕ ಈ ಕ್ರೀಡಾಂಗಣ ಮತ್ತೆ ಪ್ರತಿಷ್ಠಿತ ಕ್ರಿಕೆಟ್ ಪಂದ್ಯವೊಂದರ ಆತಿಥ್ಯ ವಹಿಸಿತು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಬೆಂಗಳೂರು ಪೊಲೀಸರು ಕೈಗೊಂಡಿದ್ದ ವಿವಿಧ ಸುರಕ್ಷಾ ಕ್ರಮಗಳಿಂದ ಪ್ರೇಕ್ಷಕರು ಹೆಚ್ಚಿನ ತೊಂದರೆ ಇಲ್ಲದೆ ಸ್ಟೇಡಿಯಂ ಪ್ರವೇಶಿಸುವಂತಾಯಿತು. ಕಳೆದೊಂದು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಈ ಕುರಿತಾದ ಅವಲೋಕನ ಇಲ್ಲಿದೆ.
ಅಂದು ಏನಾಯಿತು?
ಗುಜರಾತ್ನ ಅಹಮದಾಬಾದ್ನಲ್ಲಿ 2025ರ ಜೂನ್ 3ರಂದು ಪ್ರಶಸ್ತಿ ಗೆದ್ದ ಮರುದಿನವೇ ಅಂದರೆ ಜೂನ್ 4ರಂದು ಬೆಂಗಳೂರಿಗೆ ಆಗಮಿಸಿದ ಆರ್ಸಿಬಿ ತಂಡದ ಆಟಗಾರರಿಗೆ ವಿಧಾನಸೌಧ ಮುಂಭಾಗ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಷಯ ತಿಳಿಯುತ್ತಿದಂತೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆಗೊಂಡಿದ್ದರು. ಆರ್ಸಿಬಿ ಟೀಮ್ ಬರುವ ಹೊತ್ತಿಗೆ ಅಭಿಮಾನಿಗಳು ಹೈಕೋರ್ಟ್ ಮುಂಭಾಗದ ಮರ ಏರಿ ಕುಳಿತು ಬಾವುಟ ಹಾರಿಸಿದ ದೃಶ್ಯ ಎಲ್ಲರ ಗಮನ ಸೆಳೆದರೆ, ಮತ್ತೊಂದೆಡೆ ಹೈಕೋರ್ಟ್, ವಿಧಾನಸೌಧ ಅಧಿಕಾರಿ ಸಿಬ್ಬಂದಿ ಕಟ್ಟಡ ಏರಿ ಕ್ರೀಡಾಪಟುಗಳನ್ನು ಕಣ್ತುಂಬಿಕೊಂಡರು.
ಚಿನ್ನಸ್ವಾಮಿಯಲ್ಲಿ ಸ್ಮಾರಕ ನಿರ್ಮಾಣ
ಆರ್ಸಿಬಿ ತಂಡದ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 11 ಮಂದಿಯ ಸ್ಮರಣಾರ್ಥ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರಮುಖ ಪ್ರವೇಶದ್ವಾರದ ಬಳಿ ಸ್ಮಾರಕ ಫಲಕವನ್ನು ನಿರ್ವಿುಸಲಾಗಿದೆ. ಈ ಮೂಲಕ ಮೃತ ಕ್ರಿಕೆಟ್ ಪ್ರೇಮಿಗಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ವಿಶೇಷ ಗೌರವವನ್ನು ಸಲ್ಲಿಸಿದೆ. ‘ಇನ್ ಮೆಮೋರಿ ಆಫ್ ಅವರ್ ಕ್ರಿಕೆಟ್ ಫ್ಯಾನ್ಸ್- 04 ಜೂನ್ 2025’ ಎಂದು ಸ್ಮಾರಕದಲ್ಲಿ ಬರೆಯಲಾಗಿದೆ. 11 ಮೃತ ಅಭಿಮಾನಿಗಳ ಗೌರವಾರ್ಥ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಅನಿಲ್ ಕುಂಬ್ಳೆ ಎಂಡ್ ಗ್ಯಾಲರಿಯಲ್ಲಿನ 11 ಆಸನಗಳನ್ನು ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯ ವೇಳೆ ಖಾಲಿ ಇಡಲಾಗಿತ್ತು. ಮುಂಬರುವ ಪ್ರತಿ ಪಂದ್ಯದ ವೇಳೆಯೂ 11 ಆಸನಗಳನ್ನು ಖಾಲಿ ಬಿಡಲಾಗುತ್ತದೆ. ಸ್ಮಾರಕ ಫಲಕ ಅನಾವರಣಕ್ಕೆ ಮುನ್ನ ಅದರ ಎದುರು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಸಹಿತ ಸರ್ವ ಧರ್ಮಗುರುಗಳು ದುರಂತದಲ್ಲಿ ಮೃತರಾದವರ ಸದ್ಗತಿಗೆ ಪ್ರಾರ್ಥಿಸಿ, ಶ್ರದ್ಧಾಂಜಲಿ ಸಲ್ಲಿಸಿದ್ದರು. ಆರ್ಸಿಬಿ ತಂಡದ ಎಲ್ಲ ಆಟಗಾರರು ಉದ್ಘಾಟನಾ ಪಂದ್ಯಕ್ಕೆ ಮುನ್ನ 11 ನಂಬರ್ ಜೆರ್ಸಿಯನ್ನು ಧರಿಸಿ ಅಭ್ಯಾಸ ನಡೆಸುವ ಮೂಲಕ ಗೌರವ ಸಲ್ಲಿಸಿದ್ದರು. ಇತ್ತೀಚೆಗೆ ಆರ್ಸಿಬಿ ತಂಡ ಸತತ 2ನೇ ಬಾರಿ ಕಪ್ ಗೆದ್ದ ಬಳಿಕ ನಾಯಕ ರಜತ್ ಪಾಟೀದಾರ್ ಅದನ್ನು 11 ಮೃತ ಅಭಿಮಾನಿಗಳಿಗೆ ಅರ್ಪಿಸಿದರು.
ಕೆಎಸ್ಸಿಎ ಆಡಳಿತ ಮಂಡಳಿ ಬದಲಾವಣೆ
ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ) ಆಗಿನ ಕಾರ್ಯದರ್ಶಿ, ಖಜಾಂಚಿ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ಇದು ಕೆಎಸ್ಸಿಎಯಲ್ಲಿನ ಆಡಳಿತ ಮಂಡಳಿ ಬದಲಾವಣೆಗೆ ಮೊದಲ ಹೆಜ್ಜೆ ಎನಿಸಿತು. ನಂತರ ವಿಳಂಬವಾಗಿ ನಡೆದ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯ ಲಾಭದ ಜತೆಗೆ ಚಿನ್ನಸ್ವಾಮಿ ಕ್ರೀಡಾಂಗಣದ ಗತವೈಭವವನ್ನು ಮರಳಿ ತರುವ ಆಶ್ವಾಸನೆಯೊಂದಿಗೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸಾರಥ್ಯದ ‘ಗೇಮ್ ಚೇಂಜರ್ಸ್ ಬಣ’ ಕೆಎಸ್ಸಿಎ ಚುಕ್ಕಾಣಿ ಹಿಡಿಯಿತು. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯೊಂದಿಗೆ ರಾಜ್ಯ ಸರ್ಕಾರ, ಬಿಸಿಸಿಐ ಮತ್ತು ಆರ್ಸಿಬಿ ಫ್ರಾಂಚೈಸಿಯೊಂದಿಗೆ ಸಮನ್ವಯ ಸಾಧಿಸಿದ ವೆಂಕಿ ಬಣ, ಬೆಂಗಳೂರಿಗೆ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳ ಆತಿಥ್ಯ ದೊರೆಯುವಂತೆ ಮಾಡಿತು.
ದುರಂತದಲ್ಲಿ ಮೃತಪಟ್ಟವರು
1. ಮನೋಜ್ ಕುಮಾರ್ (18 ವರ್ಷ, ಬೆಂಗ ಳೂರು), 2. ಶ್ರವಣ್ (20 ವರ್ಷ, ಚಿಂತಾಮಣಿ), 3. ಶಿವಲಿಂಗ (16 ವರ್ಷ, ಯಾದಗಿರಿ), 4. ಪ್ರಜ್ವಲ್ (22 ವರ್ಷ, ಬೆಂಗಳೂರು), 5. ಕಾಮಾಚಿ ದೇವಿ (29 ವರ್ಷ, ಬೆಂಗಳೂರು), 6. ದಿವ್ಯಾಂಶಿ (14 ವರ್ಷ, ಬೆಂಗಳೂರು), 7. ಸಹನಾ (25 ವರ್ಷ, ಕೋಲಾರ), 8. ಭೂಮಿಕ್ ಲಕ್ಷ್ಮಣ್ (21 ವರ್ಷ, ಬೆಂಗಳೂರು), 9. ಸಿನ್ಮಯಿ ಶೆಟ್ಟಿ (19 ವರ್ಷ, ಬೆಂಗ ಳೂರು), 10. ಅಕ್ಷತಾ ಪೈ (26 ವರ್ಷ, ಮುಲ್ಕಿ), 11. ಪೂರ್ಣಚಂದ್ರ (26 ವರ್ಷ, ಮಂಡ್ಯ).
ಮಹಿಳಾ ಏಕದಿನ ವಿಶ್ವಕಪ್ ಶಿಫ್ಟ್
ಕಾಲ್ತುಳಿತದ ನಂತರ ಚಿನ್ನಸ್ವಾಮಿ ಕ್ರೀಡಾಂಗಣವು ಕ್ರಿಕೆಟ್ ಪಂದ್ಯ ಹಾಗೂ ಜನಸಂದಣಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಅಸುರಕ್ಷಿತ ಎಂದು ನಿವೃತ್ತ ನ್ಯಾ. ಮೈಕಲ್ ಡಿ ಕುನ್ಹಾ ಸಮಿತಿ ವರದಿ ನೀಡಿತು. ಜತೆಗೆ ಕ್ರೀಡಾಂಗಣದಲ್ಲಿ ಕೆಲ ಬದಲಾವಣೆಗೂ ಶಿಫಾರಸು ಮಾಡಿತು. ಕಾಲ್ತುಳಿತ ದುರಂತ ಮತ್ತು ನಂತರದ ಬೆಳವಣಿಗೆಗಳಿಂದ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ನಡುವಿನ ಬಿಕ್ಕಟ್ಟಿನಿಂದ ಭದ್ರತಾ ಕಾರಣಗಳನ್ನು ನೀಡಿ ಮಹಿಳೆಯರ ಐಸಿಸಿ ಏಕದಿನ ವಿಶ್ವಕಪ್ 13ನೇ ಆವೃತ್ತಿಯ ಪಂದ್ಯಗಳನ್ನು ಚಿನ್ನಸ್ವಾಮಿ ಸ್ಟೇಡಿಯಂನಿಂದ ನವಿ ಮುಂಬೈಗೆ ಸ್ಥಳಾಂತರಿಸಲಾಯಿತು. ಇದರಿಂದ ಟೂರ್ನಿಯ ಉದ್ಘಾಟನಾ ಹಾಗೂ ಫೈನಲ್ ಪಂದ್ಯಗಳ ಜತೆಗೆ ಒಟ್ಟು 5 ಪಂದ್ಯಗಳ ಆತಿಥ್ಯ ಉದ್ಯಾನನಗರಿಯ ಕೈತಪ್ಪಿತು. ಜತೆಗೆ ಬಿಸಿಸಿಐ ದೇಶೀಯ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಲೀಗ್ ಪಂದ್ಯ, ಕೆಎಸ್ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಗಳನ್ನು ಅನಿವಾರ್ಯವಾಗಿ ಸ್ಥಳಾಂತರಿಸಬೇಕಾಯಿತು.
ಗತವೈಭವಕ್ಕೆ ಮರಳಿದ ಕ್ರೀಡಾಂಗಣ
ಕಾಲ್ತುಳಿತ ದುರಂತದ ಬಳಿಕ ಕ್ರಿಕೆಟ್ನಿಂದ ದೂರವಾಗಿದ್ದ ಚಿನ್ನಸ್ವಾಮಿ ಸ್ಟೇಡಿಯಂ 2026ರ ಮಾರ್ಚ್ 28ಕ್ಕೆ ಐಪಿಎಲ್ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯದೊಂದಿಗೆ ತನ್ನ ಗತವೈಭವಕ್ಕೆ ಮರಳಿತು. 19ನೇ ಆವೃತ್ತಿಯ 5 ಲೀಗ್ ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿತು. ಅಕ್ಟೋಬರ್ 17ಕ್ಕೆ ಭಾರತ-ವೆಸ್ಟ್ ಇಂಡೀಸ್ ನಡುವಿನ ಟಿ20 ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಡ ಬೆಂಗಳೂರಿಗೆ ಮರಳಲಿದೆ.
ಬದಲಿ ತವರಿಗೆ ಹುಡುಕಾಟ
ಮಹಿಳಾ ವಿಶ್ವಕಪ್ ಸ್ಥಳಾಂತರದಿಂದ ಆರ್ಸಿಬಿ ತಂಡವೂ 2026ರ ಐಪಿಎಲ್ ಟೂರ್ನಿಗೆ ಬದಲಿ ತವರು ತಾಣವನ್ನು ಹುಡುಕಬೇಕಾದ ಅನಿವಾರ್ಯತೆಗೆ ಸಿಲುಕಿತು. ಜತೆಗೆ ಛತ್ತೀಸ್ಗಢದ ರಾಯ್ಪುರವನ್ನು ತವರು ಮೈದಾನವಾಗಿ ಅಂತಿಮಗೊಳಿಸಿದ ಆರ್ಸಿಬಿ 19ನೇ ಆವೃತ್ತಿಯಲ್ಲಿ 2 ತವರಿನ ಪಂದ್ಯಗಳನ್ನು ಆಡಿತು.
ತನಿಖೆ ಕೈಗೊಂಡ ಸಂಸ್ಥೆಗಳು
ಕಾಲ್ತುಳಿತ ಘಟನೆಯ ಬಗ್ಗೆ ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮ್ಯಾಜಿಸ್ಟ್ರಿಯಲ್ ತನಿಖೆ ನಡೆಸಲಾಗಿದೆ. ಅಲ್ಲದೆ, ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ಹಾ ವಿಚಾರಣಾ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗ ಜುಲೈ 11ರಂದು ನೀಡಿರುವ ವರದಿಯನ್ನು ರದ್ದುಪಡಿಸಬೇಕೆಂದು ಕೋರಿ ಡಿಎನ್ಎ ಎಂಟರ್ಟೈನ್ವೆುಂಟ್ ನೆಟ್ವರ್ಕ್ಸ್ ಪ್ರೖೆವೇಟ್ ಲಿಮಿಟೆಡ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಸುರಕ್ಷತಾ ಕ್ರಮಗಳು
ದುರದೃಷ್ಟಕರ ಕಾಲ್ತುಳಿತ ಘಟನೆಯ ನಂತರ, ಭದ್ರತೆ ಮತ್ತು ಪ್ರೇಕ್ಷಕರ ಸುರಕ್ಷತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕೆಎಸ್ಸಿಎ ಹಲವು ಪ್ರಮುಖ ನಿರ್ಧಾರ ಮತ್ತು ಸುಧಾರಣೆಗಳನ್ನು ಕೈಗೊಂಡಿವೆ. ನ್ಯಾಯಮೂರ್ತಿ ಮೈಕಲ್ ಡಿ’ ಕುನ್ಹಾ ಸಮಿತಿಯು ಘಟನೆಯ ತನಿಖೆ ನಡೆಸಿ ನೀಡಿದ ವರದಿ ಹಾಗೂ ಸರ್ಕಾರದ ನಿರ್ದೇಶನಗಳ ಆಧಾರದ ಮೇಲೆ ಜಾರಿಗೊಳಿಸಲಾಗಿರುವ ಸುರಕ್ಷತಾ ಕ್ರಮಗಳು.
ಕ್ರೀಡಾಂಗಣದ ಮೂಲಸೌಕರ್ಯ ಸುಧಾರಣೆ ಮತ್ತು ಪ್ರವೇಶದ್ವಾರಗಳ ಅಗಲೀಕರಣ.
ಹೆಚ್ಚುವರಿ ಪ್ರವೇಶ ಮತ್ತು ನಿರ್ಗಮನ ದ್ವಾರ, ತಡೆಗೋಡೆಗಳ ಎತ್ತರಿಸುವಿಕೆ.
ಯಾವುದೇ ಅವಘಡ ಸಂಭವಿಸಿದರೆ ಕೆಲವೇ ನಿಮಿಷಗಳಲ್ಲಿ ಪ್ರೇಕ್ಷಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ವ್ಯವಸ್ಥಿತವಾದ ‘ತುರ್ತ ಸ್ಥಳಾಂತರ ಯೋಜನೆ’.
ಪರ್ಯಾಯ ರಸ್ತೆ ಮತ್ತು ಆಂಬುಲೆನ್ಸ್ ಕಾರಿಡಾರ್: ಕಾಲ್ತುಳಿತದ ಸಮಯದಲ್ಲಿ ಸಂಚಾರ ಸಿಕ್ಕಿನಿಂದ
ಆಂಬುಲೆನ್ಸ್ಗಳು ಆಸ್ಪತ್ರೆಗೆ ತಲುಪಲು ತಡವಾಗಿತ್ತು. ಇದನ್ನು ತಡೆಯಲು ಪಂದ್ಯದ ದಿನಗಳಲ್ಲಿ ಕ್ರೀಡಾಂಗಣದ ಸುತ್ತಮುತ್ತಲೂ ತುರ್ತು ವಾಹನಗಳ ಸಂಚಾರಕ್ಕೆ ಪ್ರತ್ಯೇಕ ‘ಗ್ರೀನ್ ಕಾರಿಡಾರ್’ ನಿರ್ವಣ.
ಸಿಸಿಟಿವಿ ಮತ್ತು ಕ್ರೌಡ್ ಕಂಟ್ರೋಲ್ ತಂತ್ರಜ್ಞಾನ: ಕ್ರೀಡಾಂಗಣದ ಸುತ್ತಮುತ್ತ ಭದ್ರತಾ ಕ್ಯಾಮರಾಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಗೇಟ್ಗಳ ಬಳಿ ಎಷ್ಟು ಜನ ಸೇರುತ್ತಿದ್ದಾರೆ ಎಂದು ನಿಗಾ ವಹಿಸಲು ಆಧುನಿಕ 450 ಕ್ಕೂ ಹೆಚ್ಚು ಎಐ ತಂತ್ರಜ್ಞಾನ ಆಧಾರಿತ ಸಿಸಿಟಿವಿ ಕ್ಯಾಮರಾ ಅಳವಡಿಕೆ.
ಹೋಲ್ಡಿಂಗ್ ಪ್ರದೇಶ: ಪಂದ್ಯ ವೀಕ್ಷಣೆಗೆ ಆಗಮಿಸುವ ಅಭಿಮಾನಿಗಳು ರಸ್ತೆ ಬದಿಯಲ್ಲಿ ನಿಲ್ಲದೆ ಕ್ರೀಡಾಂಗಣದ ಆವರಣದಲ್ಲಿರುವ ಕೆಎಸ್ಸಿಎ-ಬಿ ಗ್ರೌಂಡ್ನಲ್ಲಿ 21 ಸಾವಿರ ಜನರು ಸೇರುವ ಹೋಲ್ಡಿಂಗ್ ಪ್ರದೇಶ ನಿರ್ವಣ.
ಪಾರ್ಕಿಂಗ್ ವಲಯಗಳಿಂದ ಶಟಲ್ ಬಸ್ ಸೇವೆಗಳು, ದ್ವಿಭಾಷಾ ಸಂಕೇತ ವ್ಯವಸ್ಥೆಗಳು, ನೈಜ ಸಮಯದ ಸಾರ್ವಜನಿಕ ಪ್ರಕಟಣೆಗಳು, ಮೆಟ್ರೋ ಸೇವೆ ಬಳಸಲು ಒತ್ತು. ಪಂದ್ಯದ ಟಿಕೆಟ್ ಜತೆಗೆ ಉಚಿತ ಮೆಟ್ರೋ ಟಿಕೆಟ್.