Janmabhumi-Chandrika Mix-up
ತಿರುವನಂತಪುರಂ: ಹೊಸ ವರ್ಷದ ಆರಂಭದಲ್ಲೇ ಕೇರಳದಲ್ಲಿ ವಿಚಿತ್ರ ರಾಜಕೀಯ ಘಟನೆಯೊಂದು ನಡೆದಿದ್ದು, ಬಿಜೆಪಿಯ ಮುಖವಾಣಿಯಾಗಿ ಗುರುತಿಸಿಕೊಂಡಿರುವ ಜನ್ಮಭೂಮಿ ಪತ್ರಿಕೆಯಲ್ಲಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನಾಯಕರ ಲೇಖನ ಪ್ರಕಟವಾಗಿರುವುದು ರಾಜ್ಯದ ಜನತೆಗೆ ಅಚ್ಚರಿಯನ್ನುಂಟುಮಾಡಿದೆ.
ಏನಿದು ಘಟನೆ..?
ನಿನ್ನೆ ( ಗುರುವಾರ-ಜನವರಿ 1) ಕೇರಳದ ಕಣ್ಣೂರು ಮತ್ತು ಕಾಸರಗೋಡು ಆವೃತ್ತಿಯ ಜನ್ಮಭೂಮಿ ಪತ್ರಿಕೆಯನ್ನು ತೆರೆದ ಓದುಗರು ಒಂದು ಕ್ಷಣ ಆಶ್ಚರ್ಯಪಟ್ಟಿದ್ದಾರೆ, ಪತ್ರಿಕೆಯ 4ನೇ ಪುಟದಲ್ಲಿ (ಸಂಪಾದಕೀಯ ಪುಟ) ಬಿಜೆಪಿಯ ವಿಚಾರಧಾರೆಗಳ ಬದಲು ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ಸಯ್ಯದ್ ಸಾದಿಕಲಿ ಶಿಹಾಬ್ ತಂಗಳ್ ಅವರ ಲೇಖನ ಎದ್ದು ಕಾಣುತ್ತಿತ್ತು. ಇದಷ್ಟೆ ಅಲ್ಲದೇ ಲೀಗ್ ನಾಯಕರಾದ ಎಂ.ಕೆ. ಮುನೀರ್ ಮತ್ತು ಮೊಹಮ್ಮದ್ ಶಾ ಅವರ ಬರಹಗಳೂ ಕೂಡ ಇದ್ದವು. ಇದಕ್ಕೂ ಅಚ್ಚರಿಯೆಂದರೆ, ಆ ಪುಟದ ಮೇಲ್ಭಾಗದಲ್ಲಿ ಜನ್ಮಭೂಮಿ ಹೆಸರಿನ ಬದಲು ಚಂದ್ರಿಕಾ ಪತ್ರಿಕೆಯ ಲಾಂಛನವೇ (Masthead) ಪ್ರಕಟವಾಗಿತ್ತು.
ಕಾರಣವೇನು..?
ಪತ್ರಿಕೆಯಲ್ಲಿನ ವ್ಯತ್ಯಸ ಗಮನಿಸಿದ ಅನೇಕರು ಇದರಲ್ಲಿ ರಾಜಕೀಯ ಒಳಸಂಚಿರಬಹುದೇ ಎಂದು ಆಲೋಚಿಸುತ್ತಿದ್ದರು, ಆದರೆ ಇದಕ್ಕೆ ಕಾರಣ ತಾಂತ್ರಿಕ ದೋಷ. ಎರಡೂ ಪತ್ರಿಕೆಗಳಾದ ಜನ್ಮಭೂಮಿ ಮತ್ತು ಚಂದ್ರಿಕಾ ಕಣ್ಣೂರಿನ ಒಂದೇ ಖಾಸಗಿ ಮುದ್ರಣ ಕೇಂದ್ರವೊಂದರಲ್ಲಿ ಮುದ್ರಣವಾಗುತ್ತಿದ್ದರಿಂದ ಈ ಘಟನೆ ನಡೆದಿದೆ. ಕಂಪ್ಯೂಟರ್-ಟು-ಪ್ಲೇಟ್ ಪ್ರಕ್ರಿಯೆಯ ಸಮಯದಲ್ಲಿ, ಚಂದ್ರಿಕಾ ಪತ್ರಿಕೆಯ ಸಂಪಾದಕೀಯ ಪುಟದ ಪ್ಲೇಟ್ ತಪ್ಪಾಗಿ ಜನ್ಮಭೂಮಿ ಪತ್ರಿಕೆಯ ಪ್ಲೇಟ್‌ಗಳ ಜೊತೆ ಸೇರಿಹೋಗಿದ್ದರಿಂದ ಮುದ್ರಣದ ಸಮಯದಲ್ಲಿ ಸಿಬ್ಬಂದಿ ಇದನ್ನು ಗಮನಿಸಿಲ್ಲ, ಆದ ಕಾರಣ ಸಾವಿರಾರು ಪ್ರತಿಗಳು ಹಾಗೆಯೇ ಮಾರುಕಟ್ಟೆಗೆ ಹೋಗಿವೆ ಎನ್ನಲಾಗಿದೆ.
ಬೆಳಕಿಗೆ ಬಂದಿದ್ದೇಗೆ..?
ಮುಸ್ಲಿಂ ಲೀಗ್ ರಾಜ್ಯ ಅಧ್ಯಕ್ಷ ಸಯ್ಯದ್ ಸಾದಿಕಲಿ ಶಿಹಾಬ್ ತಂಗಳ್ಗೆ ಕಣ್ಣೂರಿನ ಪಕ್ಷದ ಕಾರ್ಯಕರ್ತರೊಬ್ಬರು ಜನ್ಮಭೂಮಿಯಲ್ಲಿ ತಮ್ಮ ಲೇಖನ ಪ್ರಕಟವಾಗಿದೆ ಎಂದು ಫೋನ್ ಕರೆ ಮಾಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದ್ದು, ಆರಂಭದಲ್ಲಿ ಇದನ್ನು ತಮಾಷೆ ಎಂದು ತಳ್ಳಿಹಾಕಿದ ತಂಗಳ್, ಆ ನಂತರ ತಮ್ಮ ಲೇಖನವು ಜನ್ಮಭೂಮಿಯಲ್ಲಿ ಪ್ರಕಟವಾಗಿದೆ ಎಂದು ದೃಢಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರತಿಕ್ರಿಯೆ ಹೀಗಿತ್ತು..
ಈ ಅಚಾತುರ್ಯ ಕೇರಳದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಮುಸ್ಲಿಂ ಲೀಗ್ ನಾಯಕ ತಂಗಳ್ ಇದನ್ನು ತಮಾಷೆಯಾಗಿ ಸ್ವೀಕರಿಸಿ ಹೊಸ ವರ್ಷದಂದು ಹೊಸ ವರ್ಗದ ಓದುಗರನ್ನು ತಲುಪಲು ಇದೊಂದು ಸುಸಂದರ್ಭ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ(ಏಜೆನ್ಸೀಸ್).