ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ ಜತೆ ಅವಿವಾ ಬೇಗ್
- ಕಳೆದೊಂದು ದಿನದಿಂದ ಅವಿವಾ ಬೇಗ್ ಹೆಸರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ಚರ್ಚೆಯಲ್ಲಿದೆ
- ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ ಜತೆ ಅವಿವಾಗೆ ಎಂಗೇಜ್ಮೆಂಟ್ ಆಗಿದೆ ಅನ್ನೋ ಸುದ್ದಿ ಇದೆ
- ಅವಿವಾ ಯಾರೆಂದು ತಿಳಿದುಕೊಳ್ಳಲು ಅನೇಕ ಮಂದಿ ಜಾಲತಾಣವನ್ನು ಜಾಲಾಡುತ್ತಿದ್ದಾರೆ
- ಇದರ ನಡುವೆ ಅವಿವಾಗೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ
ನವದೆಹಲಿ: ಕಳೆದೊಂದು ದಿನದಿಂದ ಅವಿವಾ ಬೇಗ್ ( Aviva Baig ) ಹೆಸರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ಚರ್ಚೆಯಲ್ಲಿದೆ. ಅದಕ್ಕೆ ಕಾರಣ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ ಜತೆ ಅವಿವಾಗೆ ಎಂಗೇಜ್ಮೆಂಟ್ ಆಗಿದೆ ಅನ್ನೋದು. ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ ಅನೇಕ ಮಾಧ್ಯಮಗಳು ಇಂಥದ್ದೊಂದು ಸುದ್ದಿಯನ್ನು ನಿನ್ನೆಯಿಂದ ಬಿತ್ತರಿಸಿವೆ. ಹೀಗಾಗಿ, ಅವಿವಾ ಯಾರೆಂದು ತಿಳಿದುಕೊಳ್ಳಲು ಅನೇಕ ಮಂದಿ ಜಾಲತಾಣವನ್ನು ಜಾಲಾಡುತ್ತಿದ್ದಾರೆ. ಇದರ ನಡುವೆ ಅವಿವಾಗೆ ಸಂಬಂಧಿಸಿದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರೈಹಾನ್ ವಾದ್ರಾ ಮತ್ತು ಭಾವಿ ಪತ್ನಿ ಅವಿವಾ, ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇರಳದ ವಯನಾಡುವಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಮಾವೇಶ ನಡೆಯುತ್ತಿರುವಾಗ ರೈಹಾನ್ ವಾದ್ರಾ, ಅವಿವಾ ಬೇಗ್ ಪಕ್ಕದಲ್ಲೇ ನಿಂತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಆ ಸಮಯದಲ್ಲಿ ಯಾರೋಬ್ಬರು ಇದನ್ನು ಗಮನಿಸಲೇ ಇಲ್ಲ. ಇದೀಗ ಎಂಗೇಜ್ಮೆಂಟ್ ಸುದ್ದಿ ಹೊರ ಬೀಳುತ್ತಿದ್ದಂತೆ ಹಳೇ ವಿಡಿಯೋ ಮತ್ತೆ ಮುನ್ನಲೆಗೆ ಬಂದಿದೆ.
2024ರ ನವೆಂಬರ್‌ನಲ್ಲಿ ನಡೆದ ಲೋಕಸಭಾ ಉಪಚುನಾವಣೆಗೂ ಮುಂಚಿತವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಚುನಾವಣಾ ಪ್ರಚಾರದ ಭಾಗವಾಗಿ ವಯನಾಡಿನಲ್ಲಿ ಸಮಾವೇಶ ನಡೆಸಿದರು. ತಮ್ಮ ಸಹೋದರ ರಾಹುಲ್ ಗಾಂಧಿ ಅವರು ರಾಯ್ಬರೇಲಿ ಮತ್ತು ವಯನಾಡುವಿನಿಂದ ಎರಡು ಕ್ಷೇತ್ರಗಳಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದರು. ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರು. ಬಳಿಕ ರಾಯ್ ಬರೇಲಿ ಸ್ಥಾನವನ್ನು ಉಳಿಸಿಕೊಂಡರು. ಇದರಿಂದ ತೆರವಾದ ವಯನಾಡು ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರು. ಈ ಮೂಲಕ ಚೊಚ್ಚಲ ಬಾರಿ ಚುನಾವಣಾ ಕಣಕ್ಕೆ ಪ್ರವೇಶ ಮಾಡಿದರು. ಈ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಗೆದ್ದು ಬೀಗಿದರು. ಪ್ರಿಯಾಂಕಾ ಗಾಂಧಿ 6.2 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದು, ಸಿಪಿಐ ಅಭ್ಯರ್ಥಿ ಸತ್ಯನ್ ಮೊಕೇರಿ ಮತ್ತು ಬಿಜೆಪಿಯ ನವ್ಯಾ ಹರಿದಾಸ್ ಅವರನ್ನು ಸೋಲಿಸಿದರು.
ಯಾರು ಈ ಅವಿವಾ ಬೇಗ್?
ಅವಿವಾ ಬೇಗ್ ದೆಹಲಿಯ ವೃತ್ತಿಪರ ಛಾಯಾಗ್ರಾಹಕಿ. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಬೇಗ್ ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮುಗಿಸಿದ್ದಾರೆ. ದೆಹಲಿಯ ಮಾಡರ್ನ್ ಸ್ಕೂಲ್‌ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದು, ನಂತರದಲ್ಲಿ ಭಾರತದ ಏಜೆನ್ಸಿ, ಬ್ರ್ಯಾಂಡ್‌ಗಳು ಮತ್ತು ಅನೇಕ ಕ್ಲೈಂಟ್‌ಗಳೊಂದಿಗೆ ಕೆಲಸ ಮಾಡುವ ಬ್ರ್ಯಾಂಡ್ ಸ್ಟುಡಿಯೋ ಮತ್ತು ನಿರ್ಮಾಣ ಕಂಪನಿಯಾದ ಅಟೆಲಿಯರ್ 11ರ ಸಹ-ಸಂಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಲ್ಲರಂತೆ ಸಿಂಪಲ್ ಲೈವ್ಸ್ಟೈಲ್ ನಡೆಸುತ್ತಿರುವ ಅವರು, ಕ್ಯಾಮರಾ ಜಗತ್ತಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿರುವುದು ವಿಶೇಷ. ಹಲವಾರು ಆರ್ಟ್ ಗ್ಯಾಲರಿಗಳಲ್ಲಿ ತಮ್ಮ ಫೋಟೋಗಳನ್ನು ಪ್ರದರ್ಶಿಸಿರುವ ಅವಿವಾ, 'ವರ್ವ್'ನಂತಹ ಜನಪ್ರಿಯ ಮ್ಯಾಗ್ಜೀನ್ಗಳಲ್ಲಿ ಕೆಲಸ ಮಾಡಿದ್ದಾರೆ. ಮೆಥಡ್ ಗ್ಯಾಲರಿಯೊಂದಿಗೆ 'ಯು ಕ್ಯಾಂಟ್ ಮಿಸ್ ದಿಸ್' (2023), ಇಂಡಿಯಾ ಆರ್ಟ್ ಫೇರ್ ಯಂಗ್ ಕಲೆಕ್ಟರ್ ಪ್ರೋಗ್ರಾಂನ ಭಾಗವಾಗಿ 'ಯು ಕ್ಯಾಂಟ್ ಮಿಸ್ ದಿಸ್' (2023), ದಿ ಕ್ವಾರಮ್ ಕ್ಲಬ್‌ನಲ್ಲಿ 'ದಿ ಇಲ್ಯೂಸರಿ ವರ್ಲ್ಡ್' (2019), ಇಂಡಿಯಾ ಡಿಸೈನ್ ಐಡಿ, ಕೆ2 ಇಂಡಿಯಾ (2018) ರಲ್ಲಿ 'ದಿ ಇಲ್ಯೂಸರಿ ವರ್ಲ್ಡ್' (2019) ಮುಂತಾದ ಪ್ರದರ್ಶನಗಳಲ್ಲಿ ತಮ್ಮ ಫೋಟೋಗ್ರಾಫ್ಗಳನ್ನು ಪ್ರದರ್ಶಿಸಿದ್ದಾರೆ. ಪ್ರಸ್ತುತ, ಐ-ಪಾರ್ಲಿಮೆಂಟ್‌ನಲ್ಲಿ 'ದಿ ಜರ್ನಲ್'ನ ಪ್ರಧಾನ ಸಂಪಾದಕಿಯಾಗಿರುವ ಅವಿವಾ, ವರ್ವ್ ಮ್ಯಾಗಜೀನ್ ಇಂಡಿಯಾ ಮತ್ತು ಕ್ರಿಯೇಟಿವ್ ಇಮೇಜ್ ಮ್ಯಾಗಜೀನ್‌ನಲ್ಲಿ ಇಂಟರ್ನ್‌ಶಿಪ್‌ಗಳನ್ನು ಸಹ ಪೂರ್ಣಗೊಳಿಸಿದ್ದಾರೆ.
ರೈಹಾನ್ ವಾದ್ರಾ ಹಿನ್ನೆಲೆ ಏನು?
ಅಂದಹಾಗೆ, ರೈಹಾನ್ ವಾದ್ರಾ ಓರ್ವ ವಿಸ್ಯುವಲ್ ಆರ್ಟಿಸ್ಟ್. ಕಳೆದ ಹತ್ತು ವರ್ಷದಿಂದಲೂ ತಮ್ಮ ಕ್ಯಾಮೆರಾ ಲೆನ್ಸ್ ಮೂಲಕ ಜಗತ್ತನ್ನು ಸೆರೆಹಿಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಮುಂಬೈನ ಕೊಲಾಬಾದಲ್ಲಿರುವ ಆರ್ಟ್ ಗ್ಯಾಲರಿ ಎಪಿಆರ್‌ಇ ಆರ್ಟ್ ಹೌಸ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ರೈಹಾನ್ ಅವರು ವನ್ಯಜೀವಿಗಳನ್ನು, ಬೀದಿ ಬದಿಯಲ್ಲಿ ಕಾಣ ಸಿಗುವ ಅಪರೂಪದ ಕ್ಷಣಗಳನ್ನು ಮತ್ತು ಕಮರ್ಷಿಯಲ್ ಫೋಟೋಗ್ರಫಿಯನ್ನು ಮಾಡುತ್ತಾರೆ,(ಏಜೆನ್ಸೀಸ್).