ವ್ಯಾಟ್ಸ್​ಆ್ಯಪ್​ ಸ್ಕ್ಯಾಮ್​  
ದೇಶ

'ಹ್ಯಾಪಿ ನ್ಯೂ ಇಯರ್'​ ಮೆಸೇಜ್​ ಕ್ಲಿಕ್​ ಮಾಡುವ ಮುನ್ನ ಎಚ್ಚರ! ಶುಭಾಶಯದ ಹೆಸರಿನಲ್ಲಿ... | WhatsApp Scam

ಪ್ರಮುಖ ಮುಖ್ಯಾಂಶಗಳು

  • ಹೊಸ ವರ್ಷದ ಶುಭಾಶಯ ಹೆಸರಿನಲ್ಲಿ ಸೈಬರ್​ ವಂಚನೆ
  • ಶುಭಾಶಯ ಮೆಸೇಜ್​ ಕ್ಲಿಕ್ ಮಾಡಿದ್ರೆ ಫೋನ್ ಹ್ಯಾಕ್, ಬ್ಯಾಂಕ್​ ಅಕೌಂಟ್​ ಖಾಲಿ
  • ನ್ಯೂ ಇಯರ್​ ಹೊಸ್ತಿಲಲ್ಲಿ ಸೈಬರ್​ ವಂಚಕರ ಮಾಸ್ಟರ್​ಪ್ಲ್ಯಾನ್​
ತೆಲಂಗಾಣ: ಇಡೀ ಜಗತ್ತೇ ಹೊಸ ವರ್ಷವನ್ನು ಸ್ವಾಗತಿಸಲು ತುದಿಗಾಲಿನಲ್ಲಿ ನಿಂತಿದೆ. 2026ಕ್ಕೆ ಒಂದೇ ಒಂದು ದಿನ ಬಾಕಿ ಉಳಿದಿದ್ದು, 'ಹ್ಯಾಪಿ ನ್ಯೂ ಇಯರ್'​ ಎಂಬ ಸಂದೇಶಗಳ ಸುರಿಮಳೆ ಬಹುತೇಕರ ವ್ಯಾಟ್ಸ್​ಆ್ಯಪ್​ನಲ್ಲಿ ತುಂಬಿ ಹೋಗಲಿದೆ. ಪ್ರತಿಯೊಬ್ಬರ ಶುಭಾಶಯಕ್ಕೂ ಪ್ರತಿಕ್ರಿಯಿಸುವ ನಾವು, ಗೊತ್ತಿಲ್ಲದೆ ಕಳುಹಿಸಿರುವ ಅನಾಮಧೇಯ ವ್ಯಕ್ತಿಗೂ ಮೊದಲು ಶುಭಕೋರಿ, ಆ ನಂತರ ವಾಪಾಸ್​ ನೀವು ಯಾರೆಂದು ಕೇಳುವ ಸನ್ನಿವೇಶಗಳು ಹೆಚ್ಚಿವೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಕೆಲ ಸೈಬರ್ ವಂಚಕರು, ಇದೀಗ ಜನರ ಹಣವನ್ನು ದೋಚಲು ಮಾಸ್ಟರ್​ಪ್ಲ್ಯಾನ್​ ಮಾಡಿಕೊಂಡಿದ್ದಾರೆ.
ಇತ್ತೀಚಿನ ವ್ಯಾಟ್ಸ್​ಆ್ಯಪ್​ ಸ್ಕ್ಯಾಮ್​ ಬೆಳಕಿಗೆ ಬಂದಿದ್ದು, ಈ ಒಂದು ಸಣ್ಣ ಹೊಸ ವರ್ಷದ ಶುಭಾಶಯ ಸಂದೇಶವು ನಿಮ್ಮ ಬ್ಯಾಂಕ್ ಖಾತೆಯನ್ನು ಜೀರೋ ಬ್ಯಾಲೆನ್ಸ್​ ಮಾಡಿಡುವುದರಲ್ಲಿ ಅನುಮಾನವೇ ಇಲ್ಲ. ಹ್ಯಾಪಿ ನ್ಯೂ ಇಯರ್​ ಎಂಬ ಮೆಸೇಜ್​ ಕಳುಹಿಸುವ ಸೈಬರ್​ ವಂಚಕರು, ಅದರಲ್ಲಿ ಒಂದು ಲಿಂಕ್​ ಕೂಡ ಅಟ್ಯಾಚ್​ ಮಾಡಿರುತ್ತಾರೆ. ಮಿಸ್​ ಆಗಿ ನೀವೇನಾದರೂ ಅದನ್ನು ಕ್ಲಿಕ್​ ಮಾಡಿದ್ರೆ, ಒಟಿಪಿ ಕೇಳದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕೆಲವೇ ಕ್ಷಣಗಳಲ್ಲಿ ಶೂನ್ಯವಾಗುತ್ತದೆ.

ಏನಿದು ಸೈಬರ್​ ವಂಚನೆ? ಹೇಗೆ ಕೆಲಸ?

ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಹೆಸರಿನಲ್ಲಿ ಬರುವ ಈ ಫೇಕ್​ ಶುಭಾಶಯದ ವ್ಯಾಟ್ಸ್​ಆ್ಯಪ್​ ಮೆಸೇಜ್​ ಅನ್ನು ಯಾವುದೇ ಕಾರಣಕ್ಕೂ ಕ್ಲಿಕ್​ ಮಾಡಬೇಡಿ. APK ಫೈಲ್​ನಲ್ಲಿರುವ ಆ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಅದು ನೇರವಾಗಿ ಒಂದು ವೆಬ್‌ಸೈಟ್‌ ತಲುಪಿ, ನಿಮಗೆ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಲು ಹೇಳುತ್ತದೆ. ಇದರಲ್ಲಿ ವಿಶೇಷ ಗಿಫ್ಟ್​ ಕೂಪನ್​ ಬರಲಿದೆ ಎಂದು ತಿಳಿಸಿ, ನಿಮ್ಮನ್ನು ವಂಚನೆಯ ಗುಂಡಿಗೆ ತಳ್ಳುತ್ತದೆ.

ಕ್ಷಣಮಾತ್ರದಲ್ಲಿ ಫೋನ್ ಹ್ಯಾಕ್​

ಈ ಮೆಸೇಜ್​ ಕ್ಲಿಕ್​ ಮಾಡಿದ ಕೆಲವೇ ಕ್ಷಣದಲ್ಲಿ ಎಪಿಕೆ ಫೈಲ್ ಡೌನ್​ಲೋಡ್​ ಆಗಿ, ನಿಮ್ಮ ಫೋನ್‌ನಲ್ಲಿ ಮಾಲ್‌ವೇರ್ ಅಥವಾ ಸ್ಪೈವೇರ್ ಅನ್ನು ಇನ್​ಸ್ಟಾಲ್​ ಮಾಡುತ್ತದೆ. ಇದಾದ ಕೆಲವೇ ಸೆಕೆಂಡ್​ಗಳಲ್ಲಿ ಹ್ಯಾಕರ್‌ಗಳಿಗೆ ನಿಮ್ಮ ಫೋನ್ ಮೇಲೆ ಸಂಪೂರ್ಣ ನಿಯಂತ್ರಣ ಸಿಗುತ್ತದೆ.

ಡೇಟಾ ಲೂಟಿ

ಈ ಮಾಲ್‌ವೇರ್ ನಿಮ್ಮ ಕಾಲ್​ ಹಿಸ್ಟರಿ, ಕಾಂಟ್ಯಾಕ್ಟ್​ಗಳು, ಫೋಟೋಸ್​, ವಿಡಿಯೋ ಮತ್ತು ವಿಶೇಷವಾಗಿ ನಿಮ್ಮ ಬ್ಯಾಂಕಿಂಗ್ ಆ್ಯಪ್​ನಲ್ಲಿರುವ ಮೂಲ ವಿವರಗಳನ್ನು ಸಂಗ್ರಹಿಸುತ್ತದೆ. ಇದಲ್ಲದೆ, ಹ್ಯಾಕರ್‌ಗಳು ನಿಮಗೆ ಬಂದ ಒಟಿಪಿಯನ್ನು ನಿಮ್ಮ ಅನುಮತಿ ಇಲ್ಲದೆಯೇ ಬಹಳ ಸುಲಭವಾಗಿ ಕದ್ದು, ಬ್ಯಾಂಕ್​ ಖಾತೆಯಲ್ಲಿರುವ ಹಣವನ್ನು ಕದಿಯಬಹುದು.

ಮುನ್ನೆಚ್ಚರಿಕೆ ಏನು?

ಗೊತ್ತಿಲ್ಲದ ಲಿಂಕ್‌ಗಳು, ಅನ್ಯರ ಹೆಸರಿನಲ್ಲಿ ಬರುವ ನಕಲಿ ಸಂದೇಶಗಳ ಮೇಲೆ ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ. ಶುಭಾಶಯದ ನೆಪದಲ್ಲಿ ಬರುವ ಮೆಸೇಜ್​ ಲಿಂಕ್‌ಗಳ ಮೇಲಂತೂ ಮಿಸ್​ ಆಗಿಯೂ ಕ್ಲಿಕ್ ಮಾಡಬೇಡಿ. ಅದು ನಿಮಗೆ ಪರಿಚಯವಿರುವ ವ್ಯಕ್ತಿಯೊಬ್ಬರ ಹೆಸರಿನಿಂದ ಬಂದರೂ ಅಷ್ಟೇ! ಗೂಗಲ್​ ಪ್ಲೇ ಸ್ಟೋರ್​ ಅಥವಾ ಯಾವುದಾದರೂ ವೆಬ್​ಸೈಟ್​ನಿಂದ ಬಂದ ಎಪಿಕೆ ಫೈಲ್​ಗಳನ್ನು ಎಂದಿಗೂ ಡೌನ್​ಲೋಡ್​ ಮಾಡಿಕೊಳ್ಳಬೇಡಿ,(ಏಜೆನ್ಸೀಸ್).