ಸಾಂದರ್ಭಿಕ ಚಿತ್ರ  
ದೇಶ

ವಾಟ್ಸ್​ಆಪ್ ಹೈಜಾಕ್ ಸೈಬರ್ ಏಜೆನ್ಸಿ ಎಚ್ಚರಿಕೆ

ನವದೆಹಲಿ: ವಾಟ್ಸ್​ಆಪ್​ಅನ್ನು ಕಂಪ್ಯೂಟರ್​ನಲ್ಲಿ ಬಳಸುವ ವೇಳೆ ಸೈಬರ್ ದಾಳಿಕೋರರು ಸಂದೇಶಗಳು, ಫೊಟೋಗಳು, ವಿಡಿಯೋಗಳನ್ನು ವೀಕ್ಷಿಸಬಹುದು ಮತ್ತು ಖಾತೆಯ ಸಂಪೂರ್ಣ ನಿಯಂತ್ರಣ ತೆಗೆದುಕೊಳ್ಳಬಹುದು ಎಂದು ಭಾರತೀಯ ಸೈಬರ್ ಭದ್ರತಾ ಏಜೆನ್ಸಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್​ಟಿ-ಇನ್) ವಾಟ್ಸ್​ಆಪ್​ನ ಡಿವೈಸ್ ಲಿಂಕಿಂಗ್ ವೈಶಿಷ್ಟ್ಯದಲ್ಲಿರುವ ಸಮಸ್ಯೆ ಕುರಿತು ಎಚ್ಚರಿಕೆ ನೀಡಿದೆ.

ಸೈಬರ್ ವಂಚಕರು ವಾಟ್ಸ್​ಆಪ್​ನ ಡಿವೈಸ್ ಲಿಂಕಿಂಗ್ ವೈಶಿಷ್ಟ್ಯವನ್ನು ಬಳಸಿಕೊಂಡು ವಾಟ್ಸ್​ಆಪ್ ಖಾತೆಗಳನ್ನು ಹೈಜಾಕ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಡಿವೈಸ್ ಲಿಂಕಿಂಗ್ ವೇಳೆ ದೃಢೀಕರಣದ ಅಗತ್ಯವಿಲ್ಲದೆ ಪೇರಿಂಗ್ ಕೋಡ್​ಗಳನ್ನು ಬಳಸಿಕೊಂಡು ವಾಟ್ಸ್​ಆಪ್ ಖಾತೆಗಳನ್ನು ಹೈಜಾಕ್ ಮಾಡಬಹುದು. ಹೊಸದಾಗಿ ಗುರುತಿಸಲಾಗಿರುವ ಘೋಸ್ಟ್ ಪೇರಿಂಗ್ ಎಂಬ ಸೈಬರ್ ವಂಚನೆ ವಿಧಾನ ಸೈಬರ್ ವಂಚಕರಿಗೆ ಯಾವುದೇ ಪಾಸ್​ವರ್ಡ್ ಅಥವಾ ಸಿಮ್ ಅಗತ್ಯವಿಲ್ಲದೆ ವಾಟ್ಸ್​ಆಪ್ ಖಾತೆಯ ಸಂಪೂರ್ಣ ನಿಯಂತ್ರಣ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಸಿಇಆರ್​ಟಿ-ಇನ್ ತಿಳಿಸಿದೆ.

ಸಾಮಾನ್ಯವಾಗಿ ಸೈಬರ್ ದಾಳಿ ಸಂದೇಶದೊಂದಿಗೆ ಆರಂಭವಾಗುತ್ತದೆ. ಯಾರಾದರೂ ಈ ನಕಲಿ ಲಿಂಕ್ ಕ್ಲಿಕ್ಕಿಸಿದರೆ ದಾಳಿಕೋರರು ವಾಟ್ಸ್​ಆಪ್ ಡಿವೈಸ್ ಲಿಂಕಿಂಗ್ ವೈಶಿಷ್ಟವನ್ನು ಬಳಸಿಕೊಂಡು ಖಾತೆಯ ಬಳಕೆದಾರನ ಅರಿವಿಗೆ ಬರದಂತೆ ವಾಟ್ಸ್​ಆಪ್ ಖಾತೆಯ ನಿಯಂತ್ರಣ ಪಡೆದುಕೊಳ್ಳುತ್ತಾರೆ. ದಾಳಿಕೋರರು ತಮ್ಮ ಸಾಧನವನ್ನು ಲಿಂಕ್ ಮಾಡಿದ ಬಳಿಕ ವಾಟ್ಸ್​ಆಪ್ ಬಳಕೆದಾರ ವೆಬ್​ನಲ್ಲಿ ಪ್ರವೇಶ ಪಡೆದಾಗ ಅವರಿಗೂ ಪ್ರವೇಶ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಲಿಂಕ್​ಗಳನ್ನು ಕ್ಲಿಕ್ ಮಾಡುವಾಗ ಎಚ್ಚರದಿಂದ ಇರಬೇಕು ಎಂದು ಸಿಇಆರ್​ಟಿ-ಇನ್ ಎಚ್ಚರಿಕೆ ನೀಡಿದೆ.