ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಪಟನಾ: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಯುವತಿಯೊಬ್ಬಳ ಹಿಜಾಬ್ ಎಳೆದ ಬಳಿಕ ಭಾರಿ ಟೀಕೆಗೆ ಗುರಿಯಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪರವಾಗಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬ್ಯಾಟ್ ಬೀಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಗಿರಿರಾಜ್ ಸಿಂಗ್, ನಿತೀಶ್ಮಾಡಿದ್ದರಲ್ಲಿ ಏನು ತಪ್ಪಿದೆ..? ಯಾರಾದರೂ ಅಪಾಯಿಂಟ್ಮೆಂಟ್ ಲೆಟರ್ ತೆಗೆದುಕೊಳ್ಳಲು ಬಂದಿದ್ದರೆ, ಅವರು ಮುಖ ತೋರಿಸಲು ಏಕೆ ಹೆದರಬೇಕು? ನೀವು ಮತ ಚಲಾಯಿಸಲು ಹೋದಾಗ ನಿಮ್ಮ ಮುಖ ತೋರಿಸಬೇಕಾಗಿಲ್ಲವೇ ಎಂದು ಪ್ರಶ್ನಿಸಿದರು.
ಬಿಹಾರದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮಾ ಖಾನ್ ಮಾತನಾಡಿದ್ದು, ನಿತೀಶ್ ಕುಮಾರ್ ಅವರು ಮುಸ್ಲಿಂ ಮಗಳ ಮೇಲೆ ಪ್ರೀತಿ ತೋರಿಸಿದ್ದಾರೆ, ಜೀವನದಲ್ಲಿ ಯಶಸ್ವಿಯಾದ ಬಳಿಕ ಸಮಾಜ ಆ ಹುಡುಗಿಯ ಮುಖವನ್ನು ನೋಡಬೇಕೆಂದು ಅವರು ಬಯಸಿದ್ದರು ಎಂದು ಸಮರ್ಥಿಸಿಕೊಂಡರು.
ಬೇರೆಡೆ ಮುಟ್ಟಿದ್ದರೆ ಏನಾಗುತ್ತಿತ್ತು ಎಂದ ಯುಪಿ ಸಚಿವ
ನಿತೀಶ್ ಕುಮಾರ್ರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ನೀಡಿರುವ ಕೀಳು ಮಟ್ಟದ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ. ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ನಿಶಾದ್, ನಿತೀಶ್ ಕುಮಾರ್ ಬೇರೆಡೆ ಮುಟ್ಟಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದು, ಅವರು ಕೂಡ ಒಬ್ಬ ಮನುಷ್ಯ. ಹಿಜಾಬ್ ಅನ್ನು ಮುಟ್ಟಿದ ಮಾತ್ರಕ್ಕೆ ಅವರನ್ನು ಈ ರೀತಿ ಬೇಟೆಯಾಡಬಾರದು ಎಂದಿದ್ದಾರೆ. ಸಚಿವ ನಿಶಾದ್ರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಸಮಾಜವಾದಿ ಪಕ್ಷದ ನಾಯಕಿ ಸುಮಿಯಾ ರಾಣಾ ದೂರು ದಾಖಲಿಸಿದ್ದಾರೆ.
ಮಾನಸಿಕ ಆರೋಗ್ಯ ಪ್ರಶ್ನಿಸಿದ ಆರ್ಜೆಡಿ
ಈ ಘಟನೆಯ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆರ್ಜೆಡಿ ವಕ್ತಾರ ಎಜಾಜ್ ಅಹ್ಮದ್, ಪರ್ದಾ ಆಚರಿಸುವ ಮುಸ್ಲಿಂ ಮಹಿಳೆಯ ಮುಖದಿಂದ ಹಿಜಾಬ್ ತೆಗೆದುಹಾಕುವ ಮೂಲಕ, ಮಹಿಳಾ ಸಬಲೀಕರಣದ ಹೆಸರಿನಲ್ಲಿ ಜೆಡಿಯು ಮತ್ತು ಬಿಜೆಪಿ ಯಾವ ರೀತಿಯ ರಾಜಕೀಯದಲ್ಲಿ ತೊಡಗಿವೆ ಎಂಬುದನ್ನು ಸಿಎಂ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ಏನಿದು ವಿವಾದ...?
ತಮ್ಮ ಸಚಿವಾಲಯದಲ್ಲಿ ನಡೆದ ಸಂವಾದ್ ಎಂಬ ಅಭಿನಂದನಾ ಕಾರ್ಯಕ್ರಮದಲ್ಲಿ ಸಿಎಂ ನಿತೀಶ್ ಕುಮಾರ್ ಮುಖ ಗಂಟಿಕ್ಕಿ ಇದು ಏನು? ಎಂದು ಉದ್ಗರಿಸುತ್ತಾ ಯುವತಿಯ ಹಿಜಾಬ್ ಕೆಳಗೆ ಎಳೆದರು. ಸಿಎಂ ಪಕ್ಕದಲ್ಲಿ ನಿಂತಿದ್ದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಅವರ ತೋಳನ್ನು ಎಳೆದು ಅವರನ್ನು ತಡೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿತು. ಈ ಕಾರ್ಯಕ್ರಮದಲ್ಲಿ 1,000 ಕ್ಕೂ ಹೆಚ್ಚು ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ನೀಡಲಾಯಿತು(ಏಜೆನ್ಸೀಸ್).