ಜೋಜಿಲಾ ಸುರಂಗ ಮಾರ್ಗದ ಕಾಮಗಾರಿಯಲ್ಲಿ ಮಹತ್ವದ ಸಾಧನೆ: ಅಂತಿಮ ಬ್ರೇಕ್ ಥ್ರೂ ಯಶಸ್ವಿ! Zojila Tunnel  
ದೇಶ

ಜೋಜಿಲಾ ಸುರಂಗ ಮಾರ್ಗದ ಕಾಮಗಾರಿಯಲ್ಲಿ ಮಹತ್ವದ ಸಾಧನೆ: ಅಂತಿಮ ಬ್ರೇಕ್ ಥ್ರೂ ಯಶಸ್ವಿ! Zojila Tunnel

ಪ್ರಮುಖ ಮುಖ್ಯಾಂಶಗಳು

  • 13.153 ಕಿಲೋ ಮೀಟರ್ ಉದ್ದದ ಜೋಜಿಲಾ ಸುರಂಗ ಮಾರ್ಗದ ಅಂತಿಮ ಬ್ರೇಕ್ ಥ್ರೂ ಯಶಸ್ವಿ
  • ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಡುವೆ ಸರ್ವಋತು ಸಂಪರ್ಕ ಕಲ್ಪಿಸುವಲ್ಲಿ ಮಹತ್ವದ ಪಾತ್ರ
  • ಅಂತಿಮ (ಬ್ರೇಕ್‌ಥ್ರೂ) ಸಾಧನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಸಾಕ್ಷಿ
  • ಸೋನಾ ಮಾರ್ಗ್​ನಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ಮೀನ್ ಮಾರ್ಗ್​ದಲ್ಲಿ ಬ್ರೇಕ್‌ಥ್ರೂ ಸಕ್ಸಸ್​
ಸೋನಾಮಾರ್ಗ್ (ಶ್ರೀನಗರ): ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಡುವೆ ಸರ್ವಋತು ಸಂಪರ್ಕ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿರುವ, 13.153 ಕಿಲೋ ಮೀಟರ್ ಉದ್ದದ ಜೋಜಿಲಾ ಸುರಂಗ ಮಾರ್ಗದ ( Zojila Tunnel ) ಅಂತಿಮ ಛೇಧ (ಬ್ರೇಕ್ ಥ್ರೂ) ವನ್ನು ಸಾಧಿಸುವ ಮೂಲಕ ಯೋಜನೆ ಮಹತ್ವದ ಘಟ್ಟ ತಲುಪಿದೆ.
ಬಾಲ್ತಾಲ್‌ನ ಪಶ್ಚಿಮ ಪ್ರವೇಶ ದ್ವಾರದಿಂದ ಮೀನ್ ಮಾರ್ಗ್ ಪೂರ್ವ ಪ್ರವೇಶ ದ್ವಾರದವರೆಗೆ ನಿರ್ಮಾಣವಾಗುತ್ತಿರುವ ಮುಖ್ಯ ಸುರಂಗದ ಉತ್ಖನನವನ್ನು ಎರಡೂ ತುದಿಗಳಿಂದ ಏಕಕಾಲದಲ್ಲಿ ನಡೆಸಲಾಗಿತ್ತು. ಇದೀಗ ಅಂತಿಮ (ಬ್ರೇಕ್‌ಥ್ರೂ) ಸಾಧನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಸಾಕ್ಷಿಯಾದರು. ಸೋನಾ ಮಾರ್ಗ್​ನಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ಮೀನ್ ಮಾರ್ಗ್​ದಲ್ಲಿ ಮಂಗಳವಾರ ಈ ಕಾರ್ಯಕ್ರಮ ನಡೆಯಿತು.
''ಭಾರತದ ಮೂಲಸೌಕರ್ಯ ಇತಿಹಾಸದಲ್ಲಿ ಇದು ಐತಿಹಾಸಿಕ ದಿನವಾಗಿದೆ. ಜೋಜಿಲಾ ಸುರಂಗ ಪೂರ್ಣಗೊಂಡ ಬಳಿಕ ವಿಶ್ವದಾಖಲೆ ನಿರ್ಮಿಸಲಿದೆ. ಇದು ಲಡಾಖ್ ಮತ್ತು ಜಮ್ಮು-ಕಾಶ್ಮೀರದ ಜನರಿಗೆ ಜೀವನಾಡಿಯಾಗಲಿದೆ. ಮೈನಸ್ 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ಇಂಜಿನಿಯರ್‌ಗಳು ಮತ್ತು ಕಾರ್ಮಿಕರು ಹಗಲಿರುಳು ಶ್ರಮಿಸಿ ಈ ಸಾಧನೆ ಮಾಡಿದ್ದಾರೆ. ಯೋಜನೆಯಲ್ಲಿ ಶೇ.80ರಷ್ಟು ಸ್ಥಳೀಯರು ಕೆಲಸ ನಿರ್ವಹಿಸಿರುವುದು ವಿಶೇಷ” ಎಂದು ಸಚಿವ ನಿತಿನ್ ಗಡ್ಕರಿ ಹೇಳಿದರು.
ಈ ಯೋಜನೆಗೆ 12 ಸಾವಿರ ಕೋಟಿ ರೂ. ಅಂದಾಜು ವೆಚ್ಚದ ಡಿಪಿಆರ್ ಸಿದ್ದಪಡಿಸಲಾಗಿತ್ತು. ನಾಲ್ಕು ಬಾರಿ ಟೆಂಡರ್ ಆಹ್ವಾನಿಸಿದರೂ ಆಗಿರಲಿಲ್ಲ, ನಂತರ ಎಂಇಐಎಲ್ ಕಡಿಮೆ ಮೊತ್ತಕ್ಕೆ ಕಾಮಗಾರಿ ಕೈಗೊಂಡ ಪರಿಣಾಮ ಸರ್ಕಾರವು ಅಂದಾಜು 4 ಸಾವಿರ ಕೋಟಿ ರೂ.ಗಳನ್ನು ಉಳಿಸುವಂತಾಯಿತು ಎಂದರು. ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಎಂಇಐಎಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ರಾವ್ ಮುಂತಾದವರು ಉಪಸ್ಥಿತರಿದ್ದರು.

ಯೋಜನೆಯ ವಿವರ

ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಎನ್‌ಎಚ್‌ಐಡಿಸಿಎಲ್) ಪರವಾಗಿ ಮೇಘಾ ಇಂಜಿನಿಯರಿಂಗ್ ಆಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಸಮುದ್ರ ಮಟ್ಟದಿಂದ ಸುಮಾರು 11,578 ಅಡಿ ಎತ್ತರದಲ್ಲಿರುವ ಜೋಜಿಲಾ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಸುರಂಗವು ಅತ್ಯಂತ ಕಠಿಣ ಭೌಗೋಳಿಕ ಹಾಗೂ ಹವಾಮಾನ ಪರಿಸ್ಥಿತಿಗಳ ನಡುವೆ ಸಾಕಾರಗೊಳ್ಳುತ್ತಿದೆ. ಯೋಜನೆ ಪೂರ್ಣಗೊಂಡ ಬಳಿಕ ಶ್ರೀನಗರ-ಕಾರ್ಗಿಲ್-ಲೇಹ್ ರಾಷ್ಟ್ರೀಯ ಹೆದ್ದಾರಿ ಮೂಲಕ ಲಡಾಖ್ ಗೆ ವರ್ಷಪೂರ್ತಿ ಸಂಚಾರ ಸಾಧ್ಯವಾಗಲಿದೆ. ಭಾರೀ ಹಿಮಪಾತ ಹಾಗೂ ಹಿಮಕುಸಿತದಿಂದ ಈಗ ವರ್ಷಕ್ಕೆ ಸುಮಾರು ಆರು ತಿಂಗಳ ಕಾಲ ರಸ್ತೆ ಮುಚ್ಚಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಸಂಚಾರ ಮತ್ತು ಸರಕು ಸಾಗಣೆಗೆ ತೊಂದರೆ ಆಗುತ್ತಿದೆ. ಯೋಜನೆಯಲ್ಲಿ ನ್ಯೂ ಆಸ್ಟ್ರಿಯನ್ ಟನಲಿಂಗ್ ವಿಧಾನ (ಎನ್‌ಎಟಿಎಂ) ಅಳವಡಿಸಲಾಗಿದ್ದು, ಬದಲಾಗುವ ಶಿಲಾಸ್ತರಗಳು ಮತ್ತು ಭೌಗೋಳಿಕ ಅನಿಶ್ಚಿತತೆಗಳಿಗೆ ಹೊಂದಿಕೊಳ್ಳುವ ಈ ತಂತ್ರಜ್ಞಾನ ಸುರಕ್ಷಿತ ಸುರಂಗ ನಿರ್ಮಾಣಕ್ಕೆ ನೆರವಾಗಿದೆ.
ಮುಖ್ಯ ಸುರಂಗದ ಜೊತೆಗೆ ಸಂಪರ್ಕ ರಸ್ತೆಗಳು, ಸೇತುವೆಗಳು, ಹಿಮರಕ್ಷಣೆ ವ್ಯವಸ್ಥೆಗಳು, ಕಟ್-ಅಂಡ್-ಕವರ್ ವಿಭಾಗಗಳು ಹಾಗೂ ಇತರೆ ಸುರಂಗ ಮೂಲಸೌಕರ್ಯಗಳ ನಿರ್ಮಾಣವೂ ಯೋಜನೆಯ ಭಾಗವಾಗಿದೆ. ಈ ಯೋಜನೆಯಿಂದ ಪ್ರವಾಸೋದ್ಯಮ, ವ್ಯಾಪಾರ, ಅಗತ್ಯ ಸೇವೆಗಳು ಮತ್ತು ಗಡಿ ಪ್ರದೇಶಗಳ ಸಂಪರ್ಕ ವ್ಯವಸ್ಥೆಗೆ ಮಹತ್ತರ ಉತ್ತೇಜನ ಸಿಗಲಿದೆ. ದೇಶದ ಭದ್ರತೆ ಮತ್ತು ಸೇನಾ ಲಾಜಿಸ್ಟಿಕ್ಸ್ ದೃಷ್ಟಿಯಿಂದಲೂ ಈ ಮಾರ್ಗ ಮಹತ್ವದ್ದಾಗಿದೆ. ಇದೀಗ ಉತ್ಖನನ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸುರಂಗದ ಒಳಭಾಗದ ಲೈನಿಂಗ್, ವಿದ್ಯುತ್-ಯಾಂತ್ರಿಕ ವ್ಯವಸ್ಥೆಗಳು ಹಾಗೂ ಇತರೆ ಅಂತಿಮ ಕಾಮಗಾರಿಗಳು ಮುಂದಿನ ಹಂತದಲ್ಲಿ ನಡೆಯಲಿವೆ.

ಯೋಜನೆಯ ಮುಖ್ಯಾಂಶ

* ಮುಖ್ಯ ಜೋಜಿಲಾ ಸುರಂಗದ ಉದ್ದ: 13.153 ಕಿ.ಮೀ.
* ಒಟ್ಟು ಯೋಜನೆ: 30.894 ಕಿ.ಮೀ.
* ಸ್ಥಳ: ಬಾಲ್ತಾಲ್- ಮೀನ್ ಮಾರ್ಗ್, ಜಮ್ಮು-ಕಾಶ್ಮೀರ ಮತ್ತು ಲಡಾಖ್
* ಉದ್ದೇಶ: ಶ್ರೀನಗರ-ಲಡಾಖ್ ನಡುವೆ ಇಡೀ ವರ್ಷ ಸಂಪರ್ಕ
* ಯೋಜನೆ ಆರಂಭ: ಅಕ್ಟೋಬರ್ 1, 2020
* ನಿಲ್ಗ್ರಾರ್ ಸುರಂಗದಲ್ಲಿ ಮೊದಲ ಸ್ಫೋಟ: ಅಕ್ಟೋಬರ್ 14, 2020
* ಮೊದಲ ಹಂತದ ಕಾಮಗಾರಿ ಪೂರ್ಣ: ಮಾರ್ಚ್ 15, 2025
* ಜೋಜಿಲಾ ಮುಖ್ಯ ಸುರಂಗದ ಅಂತಿಮ ಬ್ರೇಕ್‌ಥ್ರೂ: ಜೂನ್ 9, 2026