Pune Woman Late Night Text 
ದೇಶ

'ನಿಮ್ಮ ವಯಸ್ಸೇನು?'; ಹೋಟೆಲ್ ಬಿಲ್ ಕೊಟ್ಟ ಬೆನ್ನಲ್ಲೇ ಯುವತಿಗೆ ಸಿಬ್ಬಂದಿಯಿಂದ ಮೆಸೇಜ್. ಇದು ದೌರ್ಜನ್ಯ ಎಂದ ಯುವತಿ..Pune Woman Late Night Text

ಪ್ರಮುಖ ಮುಖ್ಯಾಂಶಗಳು

  • ಪುಣೆಯ ಹೋಟೆಲ್‌ ಒಂದಕ್ಕೆ ಭೇಟಿ ನೀಡಿದ್ದ ಯುವತಿಗೆ ಸಿಬ್ಬಂದಿಯಿಂದ ಮೆಸೇಜ್
  • ವಾಟ್ಸಾಪ್ ಮೆಸೇಜ್‌ಗಳ ಸ್ಕ್ರೀನ್​ ಶಾಟ್ ಹಂಚಿಕೊಂಡ ಯುವತಿ
  • ಗ್ರಾಹಕರ ಫೋನ್ ನಂಬರ್ ಪಡೆದು ವಯಸ್ಸು ಕೇಳೋದು ಎಷ್ಟು ಸರಿ ಎಂದು ಪ್ರಶ್ನೆ
ಪುಣೆ: ಈ ಆಧುನಿಕ ಜಗತ್ತಿನಲ್ಲಿ ಗೌಪ್ಯತೆ ಎನ್ನುವುದು ಗೌಣವಾಗಿದೆ. ಕೆಫೆ, ಶಾಪಿಂಗ್​ ಮಾಲ್​​ಗಳಲ್ಲಿ ಬಿಲ್​ ಮಾಡುವ ಸಂದರ್ಭ ಇ-ಬಿಲ್​ಗಾಗಿ ಮೊಬೈಲ್ ನಂಬರ್​ಗಳನ್ನು ಅಲ್ಲಿನ ಸಿಬ್ಬಂದಿ ಕೆಟ್ಟ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪುಣೆಯ ಯುವತಿಯೊಬ್ಬರು ವಿಡಿಯೋ ಮೂಲಕ ಆರೋಪ ಮಾಡಿದ್ದಾರೆ.
ಪುಣೆಯ ರೆಸ್ಟೋರೆಂಟ್​ಗೆ ಯುವತಿಯೊಬ್ಬಳು ಭೇಟಿ ನೀಡಿ ಬಿಲ್​ ಪಾವತಿ ಮಾಡಿ ಬಂದ ನಂತರ ಆಕೆಗೆ ಮಧ್ಯರಾತ್ರಿ ವೈಯಕ್ತಿಕವಾಗಿ ವಾಟ್ಸಾಪ್ ಸಂದೇಶ ಕಳುಹಿಸಿ "ನಿಮ್ಮ ವಯಸ್ಸು ಎಷ್ಟು?" ಎಂದು ಕೇಳಿದ್ದಾನೆ ಎಂದು ಪುಣೆಯ ಯುವತಿಯೊಬ್ಬರು ವಿಡಿಯೋ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.

ಯುವತಿಯ ಆರೋಪವೇನು?

ಸಂತ್ರಸ್ತ ಯುವತಿ ಪುಣೆಯ ಪ್ರಸಿದ್ಧ ರೆಸ್ಟೋರೆಂಟ್‌ ಒಂದಕ್ಕೆ ಆಹಾರ ಸೇವಿಸಲು ಹೋಗಿದ್ದರು. ಅಲ್ಲಿ ಬಿಲ್ ಪಾವತಿಸುವ ಪ್ರಕ್ರಿಯೆಯ ಭಾಗವಾಗಿ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದ್ದರು. ಆದರೆ, ಅದೇ ದಿನ ಮಧ್ಯರಾತ್ರಿ ಅವರ ಫೋನ್‌ಗೆ ಅಪರಿಚಿತ ನಂಬರ್‌ನಿಂದ ವಾಟ್ಸಾಪ್ ಮೆಸೇಜ್‌ಗಳು ಬರಲು ಆರಂಭವಾಗಿವೆ.
ಅಪರಿಚಿತ ವ್ಯಕ್ತಿ ಮೊದಲು ಹಲೋ ಎಂದು ಕಳುಹಿಸಿದ್ದು, ಯುವತಿ "ಯಾರು?" ಎಂದು ಕೇಳಿದಾಗ, ತಾನು ಅವರು ಭೇಟಿ ನೀಡಿದ್ದ ರೆಸ್ಟೋರೆಂಟ್‌ನ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾನೆ. ಅಷ್ಟಕ್ಕೆ ನಿಲ್ಲಿಸದ ಆತ, ಮಧ್ಯರಾತ್ರಿಯ ಹೊತ್ತಿನಲ್ಲಿ "What is your age?" ಎಂದು ಪ್ರಶ್ನಸಿ ಮೆಸೇಜ್ ಹಾಕಿದ್ದನಂತೆ.
ಈ ವಿಚಾರವಾಗಿ ಆನ್​ಲೈನ್​ಗೆ ಬಂದು ಮಾತನಾಡಿ ಯುವತಿ ಆತನೊಂದಿಗೆ ನಡೆದ ಸಂಭಾಷಣೆಯನ್ನು ಸ್ಕ್ರೀನ್​ ಶಾಟ್​ ತೆಗೆದು ಇನ್‌ಸ್ಟಾಗ್ರಾಮ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಗ್ರಾಹಕರ ಡೇಟಾ ಮತ್ತು ಗೌಪ್ಯತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಹೋಟೆಲ್ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನೆಟ್ಟಿಗರು ಹೇಳಿದ್ದೇನು?

ಬಿಲ್ ನೆಪದಲ್ಲಿ ಮಹಿಳೆಯರ ನಂಬರ್ ಪಡೆದು ಹೀಗೆ ರಾತ್ರಿ ವೇಳೆ ಪೀಡಿಸುವುದು ಕ್ರಿಮಿನಲ್ ಅಪರಾಧ. ಆ ರೆಸ್ಟೋರೆಂಟ್ ಇಂತಹ ಸಿಬ್ಬಂದಿಯನ್ನು ತಕ್ಷಣ ಕೆಲಸದಿಂದ ವಜಾಗೊಳಿಸಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ, (ಏಜೆನ್ಸೀಸ್).