ಕಾಶ್ಮೀರ ಕಣಿವೆ 
ದೇಶ

ಕಣಿವೆ ನಾಡಲ್ಲಿ ಕಂಡಿದ್ದು, ಕೇಳಿದ್ದು, ಕಾಣದ್ದು...

| ನಾಗರಾಜ ಇಳೆಗುಂಡಿ

ಜಮ್ಮು-ಕಾಶ್ಮೀರ ಹಲವು ಅಚ್ಚರಿಗಳ, ನಿಸರ್ಗ ಸೌಂದರ್ಯದ ನಾಡು. ಕಳೆದ ಒಂದು ದಶಕದಲ್ಲಿ ಇಲ್ಲಿನ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾಗಿದ್ದು, ಅಭಿವೃದ್ಧಿಗೆ ತೆರೆದುಕೊಂಡಿದೆ. ಪ್ರವಾಸೋದ್ಯಮ ಮತ್ತೆ ಗರಿಗೆದರಿದೆ. ಹೊಸ ಯೋಜನೆಗಳು ಅನುಷ್ಠಾನವಾಗುತ್ತಿದ್ದು, ಮೂಲಸೌಕರ್ಯಗಳು ವಿಸ್ತಾರವಾಗುತ್ತಿವೆ. ಈ ಬೆಳವಣಿಗೆಗಳು ಸ್ಥಳೀಯ ಜನರಲ್ಲಿ ಸಮಾಧಾನ ಮೂಡಿಸಿದ್ದು, ಇದಕ್ಕೆ ಸಾಕ್ಷಿಯಾಗಿರುವ ಯುವಸಮೂಹದಲ್ಲಿ ಆಶಾವಾದವೂ ಹೆಚ್ಚಿದೆ. ಕಣಿವೆ ನಾಡಿನ ಈ ಕೌತುಕಗಳನ್ನು ಪ್ರತ್ಯಕ್ಷವಾಗಿ ಕಣ್ತುಂಬಿಕೊಂಡಾಗ ದಕ್ಕಿದ ಅನುಭವಗಳಿವು.

ಭದ್ರತೆಯ ಅಭಯ ಪ್ರವಾಸಿಗರ ಲಗ್ಗೆ

ಜಮ್ಮು-ಕಾಶ್ಮೀರ ಪ್ರವಾಸಿಗರ ಸ್ವರ್ಗ ಎಂಬ ಹೆಗ್ಗಳಿಕೆ ಮೊದಲಿಂದ ಇದೆ. ಆದರೆ ಭಯೋತ್ಪಾದನಾ ಚಟುವಟಿಕೆಗಳಿಂದಾಗಿ ಸ್ವಲ್ಪ ಹಿನ್ನಡೆ ಆಗಿತ್ತು. 370ನೆಯ ವಿಧಿಯನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಚಿತ್ರಣ ಬದಲಾಗಿದೆ. 2025ರ ಏಪ್ರಿಲ್ 22ರಂದು ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಮ್​ನ ನಡೆದ ಭಯೋತ್ಪಾದನಾ ದಾಳಿ ತರುವಾಯ ಪ್ರವಾಸಿಗರ ಸಂಖ್ಯೆ ಸ್ವಲ್ಪ ಕಡಿಮೆ ಆಗಿದ್ದರೂ ಈಗ ಮತ್ತೆ ಚೇತರಿಕೆ ಕಂಡಿದೆ. ಭದ್ರತಾ ಕ್ರಮಗಳನ್ನು ಹೆಚ್ಚಿಸಿರುವುದು ಜನರಿಗೆ ಧೈರ್ಯ ತುಂಬಿದೆ. ಕುಟುಂಬ ಸಮೇತ ಪ್ರವಾಸಕ್ಕೆ ಬರುವುದು ಸಾಮಾನ್ಯವಾಗಿದೆ. 

2025ರಲ್ಲಿ ಕಣಿವೆ ರಾಜ್ಯಕ್ಕೆ 1.77 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದು ದಾಖಲೆ. ಬರಲಿರುವ ವರ್ಷಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ ಎಂಬುದು ಪ್ರವಾಸೋದ್ಯಮ ತಜ್ಞರ ಅಭಿಪ್ರಾಯ. ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಆದಾಯ ಮೂಲವೂ ಹೌದು. ಬಂದೂಕು ಹಿಡಿದು ಭದ್ರತೆಗೆ ನಿಂತ ಸೈನಿಕರು ಎಲ್ಲೆಡೆ ಕಂಡುಬರುತ್ತಾರೆ. ಜನನಿಬಿಡ ಸ್ಥಳಗಳು ಮಾತ್ರವಲ್ಲದೆ, ಗಿರಿಶಿಖರಗಳ ಮೇಲೂ ಸೈನಿಕರು ಗೋಚರಿಸುತ್ತಾರೆ. ರಸ್ತೆಗಳಲ್ಲಿ ಸೇನಾ ವಾಹನಗಳ ಓಡಾಟ ಸಾಮಾನ್ಯ ದೃಶ್ಯ.

ಎತ್ತರದಲ್ಲಿ ಶಿವ-ಶಂಕರ

ಕಾಶ್ಮೀರ ಕಣಿವೆಯ ಪ್ರಾಚೀನ ಶಂಕರಾಚಾರ್ಯ ದೇಗುಲ ಅಥವಾ ಜ್ಯೇಷ್ಠೇಶ್ವರ ದೇಗುಲ ಶ್ರೀನಗರದ ಹೆಗ್ಗುರುತುಗಳಲ್ಲಿ ಒಂದು. ಇದು ಶಂಕರಾಚಾರ್ಯ ಬೆಟ್ಟದ ಮೇಲಿದೆ. ಶ್ರೀನಗರದ ನೆಲಮಟ್ಟದಿಂದ ಒಂದು ಸಾವಿರ ಅಡಿ ಎತ್ತರದಲ್ಲಿ, ಜಬರ್ವಾನ್ ಅರಣ್ಯ ವಲಯದಲ್ಲಿ ಇದು ಸ್ಥಿತವಾಗಿದೆ. ರಾಜ ಮಿಹಿರಕುಲನು ಈ ದೇಗುಲ ನಿರ್ವಿುಸಿದನೆಂಬ ಐತಿಹ್ಯವಿದೆ. ಶಂಕರರು ಇಲ್ಲಿ ತಪಸ್ಸುಗೈದರು. ಸೌಂದರ್ಯ ಲಹರಿಯನ್ನು ಅವರು ರಚಿಸಿದ್ದು ಇಲ್ಲಿಯೇ. ಬೆಟ್ಟದ ದಾರಿಯಲ್ಲಿ ಬಂದ ನಂತರ 280 ಮೆಟ್ಟಿಲುಗಳನ್ನು ಏರಬೇಕು. ಅಲ್ಲಿಂದ ತುಸು ಎತ್ತರದಲ್ಲಿ ಭಗವಾನ್ ಶಿವನ ಚಿಕ್ಕ ದೇಗುಲ ಇದೆ. ದೊಡ್ಡ ಶಿವಲಿಂಗ ಇದ್ದು, ಅಲ್ಲೇ ಕೆಳಗೆ ಶಂಕರರು ತಪಸ್ಸು ಮಾಡಿದ ಗುಹೆ ನೋಡಬಹುದು.

ಕಲ್ಹಣನ ಸಾಹಿತ್ಯದಲ್ಲಿ ಈ ಬೆಟ್ಟದ ಉಲ್ಲೇಖವಿದೆ. ಆತ ಇದನ್ನು ‘ಗೋಪ ಪರ್ವತ’ ಅಥವಾ ‘ಗೋಪಾದ್ರಿ’ ಎಂದು ಕರೆದಿದ್ದಾನೆ. ರಾಜ ಗೋಪಾದಿತ್ಯನು ಈ ಪರ್ವತದ ಕೆಳಪ್ರದೇಶವನ್ನು ಬ್ರಾಹ್ಮಣರಿಗೆ ಉಂಬಳಿಯಾಗಿ ನೀಡಿದ್ದನೆಂದು ಕಲ್ಹಣ ನಮೂದಿಸಿದ್ದಾನೆ. ಈಗ ಈ ಮೂಲಜಾಗವನ್ನು ಗುಪ್ಕರ್ ಎಂದು ಕರೆಯಲಾಗುತ್ತದೆ. ಈ ಪ್ರದೇಶದಲ್ಲಿಯೇ ಸಿಎಂ ಒಮರ್ ಅಬ್ದುಲ್ಲಾ ಮುಂತಾದ ಗಣ್ಯರು ಹಾಗೂ ಸಚಿವರ ನಿವಾಸಗಳಿವೆ.

ಹಿಮಾಲಯವೆಂಬ ನಿಗೂಢ

ಈ ಕಣಿವೆ ರಾಜ್ಯದಲ್ಲಿ ಮಳೆ ಕಡಿಮೆ. ನಮ್ಮಲ್ಲಿನ ಹಾಗೆ ಮಳೆಗಾಲ ಎಂಬ ಪ್ರತ್ಯೇಕ ಋತುವನ್ನು ಗುರುತಿಸುವುದು ಕಷ್ಟ. ಆದರೆ ಪರ್ವತಗಳಿಂದ ಹಿಮ ಕರಗಿ ಹರಿಯುತ್ತಲೇ ಇರುವುದರಿಂದ ನದಿಗಳು ಸದಾ ಜುಳುಜುಳು ನಾದ ಮಾಡುತ್ತಿರುತ್ತವೆ. ಶ್ರೀನಗರದಿಂದ ಸೋನಾಮಾರ್ಗ್ ಕಡೆ ಬರುವಾಗ ಉದ್ದಕ್ಕೂ ಸಿಂಧ್ ನದಿ ಬಾಗುತ್ತ ಬಳುಕುತ್ತ ಸಾಗುವುದನ್ನು ನೋಡುವುದೇ ಚೆಂದ. ಇಲ್ಲಿನ ಅನೇಕ ಪ್ರದೇಶಗಳಲ್ಲಿ ಹಿಮಪಾತ ಸಾಮಾನ್ಯ. ಸಣ್ಣದಾಗಿ ಆದರೆ ಅಷ್ಟು ತೊಂದರೆ ಇಲ್ಲ. ಆದರೆ ಬೃಹತ್ ಹಿಮಪಾತವು ದೈನಂದಿನ ಜನಜೀವನವನ್ನೇ ಅಸ್ತವ್ಯಸ್ತ ಮಾಡುತ್ತದೆ. 

‘ಕಾಶ್ಮೀರದಲ್ಲಿ ಜೀವನ ಸುಲಭವಲ್ಲ. ಭಾಳ ಸ್ಟ್ರಗಲ್ ಮಾಡಬೇಕಾಗುತ್ತದೆ’ ಎಂದು ಟ್ಯಾಕ್ಸಿ ಚಾಲಕ ಜುಬೇರ್ ಎನ್ನುವವರು ಹೇಳಿದ್ದು ಇದಕ್ಕೇ ಇರಬೇಕು. ಹಿಮಾಲಯ ಪರ್ವತಗಳ ಸಾಲು ಈ ನೆಲದ ಸತ್ವವನ್ನು ಹೆಚ್ಚಿಸಿದೆ. ಒಮ್ಮೊಮ್ಮೆ ಹಿಮಾವೃತವಾಗಿ ಬೆಣ್ಣೆ ಶಿಖರದಂತೆ ವಿಶಿಷ್ಟ ರೂಪವನ್ನು ತೋರುವ ಈ ಪರ್ವತಶ್ರೇಣಿಗಳು, ಮಗದೊಮ್ಮೆ ಹಿಮವನ್ನು ಹರಿಬಿಟ್ಟು ರಸ್ತೆಯನ್ನೇ ಬಂದ್ ಮಾಡುತ್ತವೆ. ತಮ್ಮ ಮಡಿಲು ನೋಡಬಂದವರನ್ನು ಹಿಮಪಾತದ (ಅವಲಾಂಚ್) ಮೂಲಕ ಮುಚ್ಚಿಬಿಡುವುದೂ ಇದೆ. ‘ನಾನೇರುವೆತ್ತರಕೆ ನೀನೇರಬಲ್ಲೆಯಾ?’ ಎಂದು ಸವಾಲೆಸೆಯುವ ನಿಸರ್ಗದ ನಿಗೂಢವನ್ನು ಅರಿತವರಾರು? ಹಿಮಾಲಯ ಶ್ರೇಣಿಗೊಂದು ಸಾಷ್ಟಾಂಗ!

ಕಾಶ್ಮೀರ ಸ್ಪೆಷಲ್

  • ವಾಲ್​ನಟ್ ಎಂಬುದು ಜಮ್ಮು-ಕಾಶ್ಮೀರದ ರಾಜ್ಯವೃಕ್ಷ. ಖಾಸಗಿ ಮಾಲೀಕತ್ವದಲ್ಲಿದ್ದರೂ ಸರ್ಕಾರದ ಒಪ್ಪಿಗೆ ಇಲ್ಲದೆ ಇದನ್ನು ಕಡಿಯುವಂತಿಲ್ಲ. ಆದರೆ ಇದರ ಹಣ್ಣುಗಳನ್ನು ಸಂಗ್ರಹಿಸಬಹುದು. ಇದು ಜನರಿಗೆ ಆದಾಯ ಮೂಲವೂ ಹೌದು. ಅಖ್ರೋಟ್ ಎಂದೂ ಕರೆಯಲಾಗುತ್ತದೆ.
  • ಕಾಶ್ಮೀರ ಕಣಿವೆಯಲ್ಲಿ ರಾತ್ರಿ ಏಳೂವರೆಯಾದರೂ ನಿಚ್ಚಳ ಬೆಳಕು ಇರುತ್ತದೆ. ಬೆಳಗ್ಗೆ ನಾಲ್ಕೂವರೆ ಐದು ಗಂಟೆಗೆಲ್ಲ ಬೆಳಗಾಗಿಬಿಡುತ್ತದೆ.
  • ಶ್ರೀನಗರದಿಂದ 15 ಕಿಮೀ ದೂರದಲ್ಲಿರುವ ಪ್ಯಾಂಪೋರ್ ಎಂಬ ಪಟ್ಟಣ ಪ್ರದೇಶ ಕೇಸರಿ ಬೆಳೆಗೆ ಹೆಸರುವಾಸಿ. ‘ಭಾರತದ ಕೇಸರಿ ರಾಜಧಾನಿ’ ಎಂಬ ವಿಶೇಷಣವೂ ಇದಕ್ಕಿದೆ. ಇಲ್ಲಿನ ಮಣ್ಣು ಮತ್ತು ಹವಾಮಾನ ಕೇಸರಿಗೆ ಪೂರಕವಾಗಿದೆ. ‘ಇದುವೇ ಒರಿಜಿನಲ್ ಕೇಸರಿ’ ಎಂಬುದು ಅಲ್ಲಿನವರ ಅಂಬೋಣ. ಅಲ್ಲಿನದೇ ರೇಟ್ ನೋಡಿದರೆ, ಪ್ರತಿ ಗ್ರಾಂ ಕೇಸರಿಗೆ 300, 350 ರೂ. ದರ ಇದೆ. ಅಂದರೆ, ಕೆಜಿಗೆ ಕನಿಷ್ಠ 3 ಲಕ್ಷ ರೂ.!

ದಾಲ್ ಲೇಕ್ ದೌಲತ್ತು

ಶ್ರೀನಗರದಲ್ಲಿ ಪ್ರವಾಸಿಗರು ಕಡ್ಡಾಯವಾಗಿ ಹೋಗುವ ಜಾಗಗಳಲ್ಲಿ ದಾಲ್ ಲೇಕ್ ಕೂಡ ಒಂದು. ಜಮ್ಮು-ಕಾಶ್ಮೀರದ ಎರಡನೇ ಅತಿ ದೊಡ್ಡ ಸರೋವರ ಎಂಬ ಖ್ಯಾತಿ ಇದಕ್ಕಿದೆ. ‘ಕಾಶ್ಮೀರದ ಮುಕುಟಮಣಿ’ ‘ಶ್ರೀನಗರದ ರತ್ನ’ ಎಂಬಿತ್ಯಾದಿ ವಿಶೇಷಣಗಳೂ ಇದಕ್ಕಿವೆ. ಹಲವು ಕಿಲೋಮೀಟರ್ ವಿಸ್ತಾರವಾದ ಈ ಸರೋವರ, ಉದ್ಯಾನಗಳ ಮೂಲಕ ಸುತ್ತುವರಿದಿದ್ದು, ಸೊಬಗನ್ನು ವರ್ಧಿಸಿದೆ. ಸಾವಿರಾರು ಕುಟುಂಬಗಳು ದಾಲ್ ಲೇಕ್ ಅನ್ನು ಅವಲಂಬಿಸಿ ಜೀವನ ಮಾಡುತ್ತಿವೆ. ಇಲ್ಲಿ ಬೋಟ್ ಅಥವಾ ದೋಣಿಯಲ್ಲಿ ಒಂದು ಸುತ್ತು ಹಾಕದಿದ್ದರೆ ಕಾಶ್ಮೀರ ಪ್ರವಾಸ ಅಪೂರ್ಣ ಎಂಬುದು ಪ್ರವಾಸಿಗರ ಭಾವನೆ.

ಜೋರು ಹಿಮ ಬೀಳುವ ಸಂದರ್ಭದಲ್ಲಿ ಈ ಸರೋವರ ಮಂಜುಗಡ್ಡೆಯಂತೆ ಗಟ್ಟಿಯಾಗಿ ಇಲ್ಲಿ ಮಕ್ಕಳು ಕ್ರಿಕೆಟ್ ಆಡುವುದೂ ಇದೆ! ಆದರೆ, ನಿತ್ಯ ಸಾವಿರಾರು ಪ್ರವಾಸಿಗರು ಬರುವ ಇಲ್ಲಿ ಪ್ರವೇಶ ಅಥವಾ ದೋಣಿ ವಿಹಾರಕ್ಕೆ ಒಂದು ಸರಿಯಾದ ವ್ಯವಸ್ಥೆ ಇಲ್ಲವೆಂಬುದು ನಿಜಕ್ಕೂ ಆಶ್ಚರ್ಯಕರ. ಟಿಕೆಟ್ ಪಡೆದು ಪ್ರವೇಶಿಸುವ ಪರಿಪಾಠ ಇಲ್ಲ. ದೋಣಿ ವಿಹಾರಕ್ಕೆ ನಿರ್ದಿಷ್ಟ ಶುಲ್ಕ ಕೂಡ ಇಲ್ಲ. ಅಲ್ಲಿರುವ ಕೆಲವರು ಚೌಕಾಸಿ ಮಾಡಿ, ಮೊತ್ತ ನಿಗದಿಮಾಡುತ್ತಾರೆ.

ಲಾಲ್ ಚೌಕ

ಒಂದು ಕಾಲದಲ್ಲಿ ರಾಜಕೀಯ ಸಭಾ ವೇದಿಕೆಯಾಗಿತ್ತು ಲಾಲ್ ಚೌಕ. ಮೊದಲ ಪ್ರಧಾನಿ ಜವಾಹರಲಾಲ್ ನೆಹರು 1948ರಲ್ಲಿ ಇಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದರು. ‘ಧೈರ್ಯವಿದ್ದರೆ ಇಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ’ ಎಂದು 1990ರ ದಶಕದಲ್ಲಿ ಪ್ರತ್ಯೇಕತಾ ವಾದಿಗಳು ಸವಾಲೆಸೆದಿದ್ದರು. 1992ರ ಗಣರಾಜ್ಯ ದಿನದಂದು ಬಿಜೆಪಿಯ ಅಂದಿನ ಅಧ್ಯಕ್ಷ ಮುರಳಿ ಮನೋಹರ ಜೋಷಿ ಅವರು ಇಲ್ಲಿ ಧ್ವಜಾರೋಹಣ ಮಾಡಿದ್ದರು. ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿರುವ ಈ ಜಾಗವು ಈಗ ಕಾಯಕಲ್ಪ ಕಂಡಿದ್ದು, ಹೊಸ ವಿನ್ಯಾಸದಿಂದ ಸೆಳೆಯುತ್ತಿದೆ.