Tarique Rahman | ತಾರಿಕ್ ರೆಹಮಾನ್
ಢಾಕಾ: ಸುಮಾರು 60 ವರ್ಷಗಳ ಹಿಂದೆ, ಅಮೆರಿಕದ ನಾಗರಿಕ ಹಕ್ಕುಗಳ ಕಾರ್ಯಕರ್ತ ಮಾರ್ಟಿನ್ ಲೂಥರ್ ಕಿಂಗ್, ಜೂನಿಯರ್ ಲಿಂಕನ್ ಸ್ಮಾರಕದಿಂದ ಅಮೆರಿಕದ ಇತಿಹಾಸದ ಅತ್ಯಂತ ಪ್ರಸಿದ್ಧ ಭಾಷಣದಲ್ಲಿ "ನನಗೆ ಒಂದು ಕನಸು ಇದೆ" ಎಂದು ಹೇಳಿದ್ದರು.
ಆ ಭಾಷಣವು ಮಾನವ ಹಕ್ಕುಗಳ ಹೋರಾಟದಲ್ಲಿ ಶಾಶ್ವತವಾದ ಪ್ರಭಾವ ಬೀರಿತು ಮತ್ತು ಜನಾಂಗೀಯ ಸಮಾನತೆಗಾಗಿ ಅಮೆರಿಕದ ಅನ್ವೇಷಣೆಯಲ್ಲಿ ಒಂದು ಮೂಲಾಧಾರವೂ ಆಗಿತ್ತು. ಡಿಸೆಂಬರ್ 25 ರಂದು, ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಮುಖ್ಯಸ್ಥ ತಾರಿಕ್ ರೆಹಮಾನ್ 17 ವರ್ಷಗಳ ಬಳಿಕ ಮತ್ತೆ ತವರು ನೆಲದಲ್ಲಿ ನಿಂತು ಮೊದಲ ಭಾಷಣ ಮಾಡುತ್ತಾ, ಮಾರ್ಟಿನ್ ಲೂಥರ್ ಮಾತುಗಳನ್ನು ಪ್ರಸ್ತಾಪಿಸುತ್ತಾ, ತಮ್ಮದೇ ಆದ ದಾಟಿಯಲ್ಲಿ "ನನಗೆ ಒಂದು ಯೋಜನೆ ಇದೆ" ಎಂದು ಹೇಳಿದರು.
ಕಾಕತಾಳೀಯವೇನೋ ಎಂಬಂತೆ ಮಾರ್ಟಿನ್ ಲೂಥರ್ ಅವರಂತೆಯೇ 17 ನಿಮಿಷಗಳ ಭಾಷಣದಲ್ಲಿ, ತಾರಿಕ್ ತಮ್ಮ ಆಡಳಿತ ಯೋಜನೆಗಳನ್ನು ವಿವರಿಸಿದರು. ಪ್ರಧಾನ ಮಂತ್ರಿ ಹುದ್ದೆಯ ರೇಸ್ನಲ್ಲಿರುವ ರೆಹಮಾನ್, ಎಲ್ಲರನ್ನು ಒಳಗೊಳ್ಳುವ ಆಲೋಚನೆಯಲ್ಲಿ ಮಾತನಾಡಿದರು. ಮುಸ್ಲಿಮರು ಮತ್ತು ಹಿಂದೂಗಳು ಇಬ್ಬರೂ ನೂತನ ಬಾಂಗ್ಲಾದೇಶವನ್ನು ನಿರ್ಮಿಸಲು ಮನವಿ ಮಾಡಿದರು.
ಛಿದ್ರಗೊಂಡ ರಾಜಕೀಯ ಭೂದೃಶ್ಯ ಮತ್ತು ಮುಹಮ್ಮದ್ ಯೂನಸ್ ಆಡಳಿತದಲ್ಲಿ ತೀವ್ರಗಾಮಿ ಇಸ್ಲಾಮಿಸ್ಟ್‌ಗಳು ಉದ್ರಿಕ್ತರಾಗಿರುವ ನಡುವೆ, ರೆಹಮಾನ್ ಸಂದೇಶದ ಸಮಯ ಅತ್ಯಂತ ನಿರ್ಣಾಯಕವಾಗಿತ್ತು. ಬಾಂಗ್ಲಾದೇಶದೊಂದಿಗಿನ ಸಂಬಂಧಗಳು ಅತ್ಯಂತ ಕೆಳಮಟ್ಟದಲ್ಲಿರುವ ಇಂತಹ ಸಮಯದಲ್ಲಿ ತಾರಿಕ್ ಭಾಷಣ ಭಾರತಕ್ಕೆ ಹೊಸ ವಿಶ್ವಾಸವನ್ನು ತುಂಬುತ್ತದೆ.
ಸ್ವದೇಶಕ್ಕೆ ತಾರಿಕ್ ರೆಹಮಾನ್ ಆಗಮನ
ತಾರಿಕ್ರ ಅದ್ದೂರಿ ಘರ್ ವಾಪ್ಸಿ ಸಾಂಕೇತಿಕತೆಯ ಮೇಲೆ ಕೇಂದ್ರೀಕೃತವಾಗಿತ್ತು. ಕಳೆದ ವರ್ಷ ಶೇಖ್ ಹಸೀನಾ ಪದಚ್ಯುತಗೊಂಡ ಬಳಿಕ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಹಿಂಸಾಚಾರ ಮತ್ತು ಗುಂಪು ದಾಳಿಗಳಿಂದ ಬಾಂಗ್ಲಾದೇಶವನ್ನು ದೂರವಿಡುವ ವ್ಯಕ್ತಿಯ ಬಗ್ಗೆ ಜನ ಬೆರಗು ಕಣ್ಣಿನಿಂದ ನೋಡುತ್ತಿದ್ದಾರೆ. ಬಾಂಗ್ಲಾದೇಶದಿಂದ 17 ವರ್ಷಗಳ ಕಾಲ ಗಡಿಪಾರಾಗಿದ್ದ ಬಾಂಗ್ಲಾದ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್(Tariq Rahman) ಢಾಕಾಗೆ ಗುರುವಾರ (ಡಿ.25) ಬಂದಿಳಿದಿದ್ದಾರೆ. ಅಲ್ಲದೆ, ರೆಹಮಾನ್ರನ್ನು ಸ್ವಾಗತಿಸಲು ಸಾವಿರಾರು ಜನ ವಿಮಾನ ನಿಲ್ದಾಣದ ಬಳಿ ನೆರೆದಿದ್ದರು.
ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯಾದ ಮಾಜಿ ಪ್ರಧಾನಿ ಖಲೀದಾ ಜಿಯಾರನ್ನು ನೋಡಲು 17 ವರ್ಷಗಳ ಬಳಿಕ ಯುನೈಟೆಡ್ ಕಿಂಗ್‌ಡಮ್‌ನಿಂದ ಬಾಂಗ್ಲಾಕ್ಕೆ ಮರಳಿದ್ದಾರೆ. ಅಲ್ಲದೆ, ತಾರಿಕ್ ಬಿಎನ್‌ಪಿ ಹಂಗಾಮಿ ಅಧ್ಯಕ್ಷರಾಗಿದ್ದು, 2026ರ ಫೆಬ್ರವರಿಯಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಹುದ್ದೆಗೆ ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.
ಯುಕೆಯಿಂದ ಪತ್ನಿ ಜುಬೈದಾ ರೆಹಮಾನ್ ಮತ್ತು ಮಗಳು ಜೈಮಾ ರೆಹಮಾನ್ರೊಂದಿಗೆ ಹಿಂದಿರುಗಿದ ರೆಹಮಾನ್ರನ್ನು ಸ್ವಾಗತಿಸಲು ಬಿಎನ್‌ಪಿ ಬೆಂಬಲಿಗರು ಮತ್ತು ಪಕ್ಷದ ಮುಖಂಡರು ಬನಾನಿ ವಿಮಾನ ನಿಲ್ದಾಣ ರಸ್ತೆಯಿಂದ ಢಾಕಾ ವಿಮಾನ ನಿಲ್ದಾಣದ ಕಡೆಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಿದರು.
ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ, ತಾರಿಕ್ರನ್ನು ಬಿಎನ್‌ಪಿ ಸ್ಥಾಯಿ ಸಮಿತಿ ಸದಸ್ಯರು ಬರಮಾಡಿಕೊಂಡರು ಮತ್ತು ಅಲ್ಲಿಂದ ಬೂಲೆಟ್ಫ್ರೂಫ್ ವಾಹನಗಳಲ್ಲಿ ಒಂದರಲ್ಲಿ ಪುರ್ಬಾಚಲ್‌ನ 300 ಅಡಿ ಪ್ರದೇಶದಲ್ಲಿ ಸ್ವಾಗತ ಸಮಾರಂಭಕ್ಕೆ ಪ್ರಯಾಣ ಬೆಳೆಸಿದ್ದರು. ಅಲ್ಲದೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಾರಿಕ್ರನ್ನು ಸ್ವಾಗತಿಸಲು ಬದಿಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ(ಏಜೆನ್ಸೀಸ್).