ವಿರಾಟ ದೇಗುಲದಲ್ಲಿ 210 ಟನ್ ತೂಕದ ಏಕಶಿಲಾ ಶಿವಲಿಂಗ 
ದೇಶ

2,500 ಕಿಮೀ, 210 ಟನ್​ ತೂಕ! ಬಿಹಾರದಲ್ಲಿ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗ; ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

ಪ್ರಮುಖ ಮುಖ್ಯಾಂಶಗಳು

  • ಬಿಹಾರದ ವಿರಾಟ ರಾಮಾಯಣ ಮಂದಿರದಲ್ಲಿ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗ
  • 33 ಅಡಿ ಎತ್ತರ, 210 ಟನ್ ತೂಕದ ಶಿವಲಿಂಗ
  • ಈ ಬೃಹತ್ ಆಕಾರದ ಶಿವಲಿಂಗದ ವಿಶೇಷತೆಗಳೇನು? ಇಲ್ಲಿದೆ ವಿವರ
ಪಾಟ್ನಾ: ನಿನ್ನೆಯಷ್ಟೇ (ಜ.18) ಬಿಹಾರದ ವಿರಾಟ ರಾಮಾಯಣ ಮಂದಿರದಲ್ಲಿ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗ ಮೂರ್ತಿ ಪ್ರತಿಷ್ಠಾಪನೆಗೊಂಡಿತು. ಈ ಭವ್ಯವಾದ ದೃಶ್ಯ ನೋಡುಗರನ್ನು ಒಂದು ನಿಮಿಷ ರೋಮಾಂಚನಗೊಳಿಸಿತು.
ಬಿಹಾರದ ಮೋತಿಹಾರಿ ಜಿಲ್ಲೆಯ ವಿರಾಟ ರಾಮಾಯಣ ಮಂದಿರದಲ್ಲಿ ಬಹುದಿನಗಳಿಂದ ಕುತೂಹದಲ್ಲಿ ಕಾಯತೊಡಗಿದ್ದ ಬೃಹತ್ ಆಕಾರದ ಶಿವಲಿಂಗವನ್ನು ನೋಡಲು ಸ್ಥಳೀಯರು ಭಾನುವಾರ (ಜ.18) ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ನುರಿತ ಇಂಜಿನಿಯರ್​ಗಳ ಸಹಾಯದಿಂದ 750 ಟನ್​ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದ ಕ್ರೇನ್​ಗಳಿಂದ ಏಕಶಿಲಾ ಶಿವಲಿಂಗವನ್ನು ಗುರುತುಪಡಿಸಲಾದ ಸ್ಥಳದಲ್ಲಿ ಸ್ಥಾಪಿಸಲಾಯಿತು.

210 ಟನ್​ ತೂಕ, 2,500 ಕಿಮೀ ದೂರ

33 ಅಡಿ ಎತ್ತರವಿರುವ ಈ ಏಕಶಿಲಾ ಶಿವಲಿಂಗವು ಬರೋಬ್ಬರಿ 210 ಟನ್​ ತೂಕವಿದ್ದು, ಇದನ್ನು 2,500 ಕಿಲೋಮೀಟರ್ ದೂರದಿಂದ ವಿರಾಟ ಮಂದಿರಕ್ಕೆ ತರಲಾಯಿತು. ತಮಿಳುನಾಡಿನ ಮಹಾಬಲಿಪುರಂನಿಂದ ಬಿಹಾರಕ್ಕೆ ಶಿವಲಿಂಗವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾದ ಮಲ್ಟಿ-ಆ್ಯಕ್ಸಲ್ ಟ್ರಕ್‌ನಲ್ಲಿ ಕರೆತರಲಾಯಿತು. 45 ದಿನಗಳು, 2,500 ಕಿ.ಮೀ. ಪ್ರಯಾಣದಲ್ಲಿ ಶಿವಲಿಂಗವು ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಮಾರ್ಗವಾಗಿ ಸಾಗಿ, ದೇಗುಲವನ್ನು ತಲುಪಿತು.
3 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಶಿವಲಿಂಗದ ಪ್ರತಿಷ್ಠಾಪನೆ ಆಗುತ್ತಿದ್ದಂತೆ ಹೆಲಿಕಾಪ್ಟರ್​ನಿಂದ ಹೂವಿನ ಮಳೆಯನ್ನು ಸುರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತಿಯಿಂದ ಕೈಮುಗಿದು ನಿಂತಿದ್ದ ಜನರು, ಹರ ಹರ ಮಹಾದೇವ ಎಂದು ಘೋಷಣೆ ಕೂಗಿದರು. ಇದರ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿವೆ,(ಏಜೆನ್ಸೀಸ್).