ಭಾರತದ ಮೊದಲ ಹೈಡ್ರೋಜನ್​ ರೈಲು 
ದೇಶ

120 ಕಿಮೀ ವೇಗದ ಪ್ರಾಯೋಗಿಕ ಪರೀಕ್ಷೆ ಯಶಸ್ವಿ! ಹೈಡ್ರೋಜನ್​ ರೈಲಿಗೆ ಕೇಂದ್ರ ಗ್ರೀನ್​ ಸಿಗ್ನಲ್​; ಹೀಗಿದೆ ವಿಶೇಷತೆ

ಪ್ರಮುಖ ಮುಖ್ಯಾಂಶಗಳು

  • ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಗ್ರೀನ್​ ಸಿಗ್ನಲ್​
  • ಹರಿಯಾಣದ ಜಿಂದ್-ಸೋನೆಪತ್ ಮಾರ್ಗದಿಂದ ಪ್ರಾರಂಭ
  • 120 ಕಿಮೀ ವೇಗದ ಪ್ರಾಯೋಗಿಕ ಪರೀಕ್ಷೆ ಯಶಸ್ವಿ
Hydrogen Train: ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಕೇಂದ್ರ ಸರ್ಕಾರದಿಂದ ಗ್ರೀನ್​ ಸಿಗ್ನಲ್​ ಸಿಕ್ಕಿದ್ದು, 120 ಕಿಮೀ ವೇಗದ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ.
ಈ ರೈಲು ಹರಿಯಾಣದ ಉತ್ತರ ರೈಲ್ವೆಯ ಜಿಂದ್-ಸೋನೆಪತ್ ಮಾರ್ಗದಲ್ಲಿ ಚಲಿಸಲಿದೆ. ಇದನ್ನು ಬ್ರಾಡ್ ಗೇಜ್ ಜಾಲದಲ್ಲಿ ಚಲಿಸುವ ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಉದ್ದವಾದ ಹೈಡ್ರೋಜನ್ ರೈಲು ಎಂದು ಹೇಳಲಾಗಿದೆ. ಪ್ರಸ್ತುತ, ಜರ್ಮನಿ, ಜಪಾನ್, ಚೀನಾ ಮತ್ತು ಅಮೆರಿಕದಂತಹ ದೇಶಗಳು ಮಾತ್ರ ಜಾಗತಿಕವಾಗಿ ಹೈಡ್ರೋಜನ್ ರೈಲುಗಳನ್ನು ಹೊಂದಿವೆ. ಈಗ ಭಾರತ ಕೂಡ ಈ ಪಟ್ಟಿಗೆ ಸೇರಿದೆ ಎಂಬುದು ಗಮನಾರ್ಹ.

ಏನೀ ರೈಲಿನ ವೈಶಿಷ್ಟ್ಯ?

ಈ ರೈಲು 10 ಕೋಚ್‌ಗಳನ್ನು ಹೊಂದಿರಲಿದೆ. ಹೈಡ್ರೋಜನ್ ಇಂಧನ ಕೋಶ ವ್ಯವಸ್ಥೆ ಇದರಲಿದ್ದು, ಒಟ್ಟು ಶಕ್ತಿ 2400 ಕಿಲೋವ್ಯಾಟ್ ಎನ್ನಲಾಗಿದೆ. ನೀಲಿ ಬಣ್ಣದ ರೈಲಿನ ವಾಣಿಜ್ಯ ವೇಗ ಗಂಟೆಗೆ 75 ಕಿಲೋಮೀಟರ್. ಪ್ರಾಯೋಗಿಕ ಸಮಯದಲ್ಲಿ, ಗಂಟೆಗೆ 120 ಕಿಮೀ ವೇಗದಲ್ಲಿ ಚಲಿಸಿದೆ. ಒಂದು ಬಾರಿ ಹೈಡ್ರೋಜನ್ ತುಂಬಿಸಿದರೆ, ಸುಮಾರು 250 ಕಿಮೀ ಕ್ರಮಿಸಲಿದೆ. ಹೈಡ್ರೋಜನ್ ಸಿಲಿಂಡರ್‌ಗಳು, ಬ್ಯಾಟರಿಗಳು ಮತ್ತು ನಿಯಂತ್ರಣ ವ್ಯವಸ್ಥೆಗೆ ಪ್ರತ್ಯೇಕ ಹಾಗೂ ವಿಶೇಷ ಘಟಕಗಳಿವೆ.

ಹೈಡ್ರೋಜನ್ ಇಂಧನ ಸೆಲ್​ ಕೆಲಸವೇನು?

ಡೀಸೆಲ್ ಮತ್ತು ವಿದ್ಯುತ್ ಲೋಕೋಮೋಟಿವ್‌ಗಳಿಗೆ ಹೋಲಿಸಿದರೆ, ಹೈಡ್ರೋಜನ್ ರೈಲುಗಳು ಕಡಿಮೆ ಮಾಲಿನ್ಯಕ್ಕೆ ಒಳಪಟ್ಟಿವೆ. ಈ ರೈಲಿನಲ್ಲಿ, ಹೈಡ್ರೋಜನ್ ಮತ್ತು ಆಮ್ಲಜನಕದ ನಡುವಿನ ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದನೆಗೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ, ನೀರಿನ ಆವಿ ಮತ್ತು ಸ್ವಲ್ಪ ಪ್ರಮಾಣದ ಶಾಖ ಮಾತ್ರ ಹೊರಬರುತ್ತದೆ. ಯಾವುದೇ ಇಂಗಾಲದ ಹೊರಸೂಸುವಿಕೆಯೂ ಇರುವುದಿಲ್ಲ.
ರೈಲಿನ ಮುಂಭಾಗದಲ್ಲಿ 27 ಮತ್ತು ಹಿಂಭಾಗದಲ್ಲಿ 27 ಹೈಡ್ರೋಜನ್ ಸಿಲಿಂಡರ್‌ಗಳನ್ನು ಇಡಲಾಗಿದೆ. ಸ್ಥಳೀಯ ಟೆಕ್ನಾಲಜಿಯನ್ನು ಬಳಸಿಕೊಂಡು ಜಿಂದ್‌ನಲ್ಲಿ ಹೈಡ್ರೋಜನ್ ಸಂಗ್ರಹ ಮತ್ತು ಇಂಧನ ತುಂಬುವ ಕೇಂದ್ರವನ್ನು ನಿರ್ಮಿಸಲಾಗಿದೆ. ಈ ರೈಲಿನಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹೈಡ್ರೋಜನ್ ಸೋರಿಕೆ ಪತ್ತೆಕಾರಕಗಳು, ಜ್ವಾಲೆ ಪತ್ತೆಕಾರಕಗಳು ಮತ್ತು ಸುರಕ್ಷತಾ ಸಂವೇದಕಗಳನ್ನು ಇರಿಸಲಾಗಿದೆ. ಇದನ್ನು ಆತ್ಮ ನಿರ್ಭರ ಭಾರತ ಕಾರ್ಯಕ್ರಮದ ಭಾಗವಾಗಿ ಭಾರತದಲ್ಲಿಯೇ ಸಂಪೂರ್ಣವಾಗಿ ಡಿಸೈನ್​ ಮಾಡಲಾಗಿದೆ,(ಏಜೆನ್ಸೀಸ್).