Thirukkural |.ಪುಟಿನ್​ಗೆ ನೀಡಲು ಪ್ರಧಾನಿ ಮೋದಿ ತಿರುಕ್ಕುರಲ್ ಕೃತಿಯನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ..? 
ದೇಶ

1,330 ದ್ವಿಪದಿಗಳ ರಹಸ್ಯ, 3 ವಿಭಾಗಗಳ ಬೋಧನೆ!...ಪುಟಿನ್​ಗೆ ನೀಡಲು ಪ್ರಧಾನಿ ಮೋದಿ ತಿರುಕ್ಕುರಲ್ ಕೃತಿಯನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ..? | Thirukkural

ನವದೆಹಲಿ: ಭಾರತವು ಸೆಪ್ಟೆಂಬರ್ 12-13 ರಂದು ಆಯೋಜಿಸುತ್ತಿರುವ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit) ಭಾಗವಹಿಸಲು ನವದೆಹಲಿಗೆ ಆಗಮಿಸಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾಗತಿಸಿದ್ದಾರೆ. ಶುಕ್ರವಾರ ರಾಷ್ಟ್ರ ರಾಜಧಾನಿಗೆ ಆಗಮಿಸಿದ ಪುಟಿನ್, ಶೃಂಗಸಭೆಯ ಜೊತೆಗೆ ಭಾರತ-ರಷ್ಯಾ ಆಯಕಟ್ಟಿನ ಪಾಲುದಾರಿಕೆಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ.
ಈ ಉನ್ನತ ಮಟ್ಟದ ರಾಜತಾಂತ್ರಿಕ ಭೇಟಿಯ ನಡುವೆ, ಪ್ರಧಾನಿ ಮೋದಿ ಅವರು ಪುಟಿನ್ ಅವರಿಗೆ ತಮಿಳು ಸಾಹಿತ್ಯದ ಶ್ರೇಷ್ಠ ಮಹಾಕಾವ್ಯ ತಿರುಕ್ಕುರಲ್ ಕೃತಿಯ ರಷ್ಯನ್ ಅನುವಾದದ ಪ್ರತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಗ್ರಂಥದ ಬೋಧನೆಗಳು ಮತ್ತು ವಿಚಾರಗಳು ಅದು ರಚನೆಯಾದ ಭಾಷೆ ಹಾಗೂ ಪ್ರದೇಶದ ಗಡಿಗಳನ್ನು ದಾಟಿ ವಿಶ್ವವ್ಯಾಪಿಯಾಗಿ ಪ್ರಸಾರವಾಗಿವೆ. ಈ ಪುಸ್ತಕವನ್ನು ಕ್ಲಾಸಿಕಲ್ ತಮಿಳು ಕೇಂದ್ರೀಯ ಸಂಸ್ಥೆ (CICT) ಇದೇ ವರ್ಷ ಪ್ರಕಟಿಸಿದ್ದು, ಸಿಐಸಿಟಿಯ ಕೆಟಲಾಗ್ ಪ್ರಕಾರ, ನೈರಾ ಮ್ಕರ್ಟ್ಚ್ಯಾನ್ ಅವರು ಈ ರಷ್ಯನ್ ಅನುವಾದದ ಲೇಖಕಿಯಾಗಿದ್ದಾರೆ.
ಪುಟಿನ್ ಅವರಿಗೆ ಉಡುಗೊರೆಯಾಗಿ ನೀಡಲಾದ ಪುಸ್ತಕ ತಿರುಕ್ಕುರಲ್ (ಇದನ್ನು 'ಕುರಲ್' ಎಂದೂ ಕರೆಯಲಾಗುತ್ತದೆ), ಇದನ್ನು ಪ್ರಾಚೀನ ತಮಿಳು ಕವಿ ಮತ್ತು ದಾರ್ಶನಿಕ ತಿರುವಳ್ಳುವರ್ ಬರೆದಿದ್ದಾರೆ. ಪೋಟೋದಲ್ಲಿ ಕಾಣಿಸುವ ಆವೃತ್ತಿಯು Thirukkural - Text, Transliteration and Translation ಎಂಬ ಶೀರ್ಷಿಕೆಯನ್ನು ಹೊಂದಿದ್ದು, ತಮಿಳು ಶೀರ್ಷಿಕೆಯೊಂದಿಗೆ ರಷ್ಯನ್ ಪಠ್ಯವನ್ನು ಒಳಗೊಂಡಿದೆ. ಪುಸ್ತಕದ ಮುಖಪುಟದಲ್ಲಿ ಲೇಖಕರಾಗಿ ತಿರುವಳ್ಳುವರ್ ಮತ್ತು ಅನುವಾದಕರಾಗಿ ನೈರಾ ಮ್ಕರ್ಟ್ಚ್ಯಾನ್ ಹೆಸರು ಉಲ್ಲೇಖವಾಗಿದೆ.

ತಿರುಕ್ಕುರಲ್ ಕೃತಿಯಲ್ಲೇನಿದೆ...?

ತಿರುಕ್ಕುರಲ್ ಕೃತಿಯು ಪ್ರಾಚೀನ ತಮಿಳು ಸಾಹಿತ್ಯದ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಒಂದಾಗಿದ್ದು, ಇದು 1,330 ಸಣ್ಣ ದ್ವಿಪದಿಗಳನ್ನು (ಕುರಲ್) ಒಳಗೊಂಡಿದೆ, ಕೃತಿಯನ್ನು ಧರ್ಮ, ಅರ್ಥ ಮತ್ತು ಕಾಮ (Virtue, Wealth, Love) ಎಂಬ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
ಅರಂ ಎಂಬ ಮೊದಲ ವಿಭಾಗವು ಧರ್ಮ, ನೈತಿಕತೆ ಮತ್ತು ಸದಾಚಾರದ ಕುರಿತು ವಿವರಿಸಿದರೆ, ಪೊರುಳ್ ಎನ್ನುವ ಎರಡನೇ ವಿಭಾಗವು ಸಂಪತ್ತು, ಸಾಮಾಜಿಕ ಜೀವನ, ಆಡಳಿತ, ನಾಯಕತ್ವ ಮತ್ತು ರಾಜಕೀಯ ಜವಾಬ್ದಾರಿಗಳನ್ನು ತಿಳಿಸುತ್ತದೆ, ಹಾಗೆಯೇ ಮೂರನೇಯದಾಗಿ ಇಂಬಮ್ ಪ್ರೀತಿ, ಪ್ರಣಯ ಮತ್ತು ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಮೂರು ವಿಭಾಗಗಳು ಸೇರಿ ವೈಯಕ್ತಿಕ ನಡವಳಿಕೆಯ ಜೊತೆಗೆ ಸಾಮಾಜಿಕ ಮತ್ತು ಸಾರ್ವಜನಿಕ ಜೀವನದ ವಿಶಾಲ ಪ್ರಶ್ನೆಗಳನ್ನು ಸ್ಪರ್ಶಿಸುತ್ತವೆ.
ಈ ಕೃತಿಯ ವಿಶೇಷತೆಯೆಂದರೆ ಇದರ ಸಂಕ್ಷಿಪ್ತತೆ. ಪ್ರತಿಯೊಂದು ದ್ವಿಪದಿಗಳು ಕೇವಲ ಎರಡೇ ಸಾಲುಗಳಲ್ಲಿ ಆಳವಾದ ವಿಚಾರವನ್ನು ತಿಳಿಸುತ್ತದೆ. ಆದರೂ ಇದರ ವಿಷಯಗಳು ಕೌಟುಂಬಿಕ ಜೀವನ ಮತ್ತು ಸ್ನೇಹದಿಂದ ಹಿಡಿದು ನ್ಯಾಯ, ನಾಯಕತ್ವ, ಕರುಣೆ ಮತ್ತು ಮಾನವ ಸಂಬಂಧಗಳವರೆಗೆ ವ್ಯಾಪಿಸಿವೆ. ಸಿಐಸಿಟಿ ಈ ಕೃತಿಯನ್ನು ನಿರ್ದಿಷ್ಟ ಸಮುದಾಯ ಅಥವಾ ಸಂಸ್ಕೃತಿಗೆ ಸೀಮಿತವಾಗದೆ, ಸಾರ್ವತ್ರಿಕ ಮೌಲ್ಯಗಳನ್ನು ಹೊಂದಿರುವ ಶ್ರೇಷ್ಠ ಕೃತಿ ಎಂದು ಬಣ್ಣಿಸಿದೆ.

ಯಾರು ಈ ತಿರುವಳ್ಳುವರ್...?

ವಳ್ಳುವರ್ ಎಂದೇ ಖ್ಯಾತರಾಗಿರುವ ತಿರುವಳ್ಳುವರ್, ತಿರುಕ್ಕುರಲ್ ಎಂಬ ಕೃತಿಯ ಮೂಲ ಲೇಖಕರಾಗಿದ್ದು, ತಮಿಳು ಸಾಹಿತ್ಯಿಕ ಪರಂಪರೆಯ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಕೃತಿಯ ವಿಚಾರಗಳು ಯಾವುದೇ ಒಂದು ನಿರ್ದಿಷ್ಟ ಕಾಲ ಅಥವಾ ಸಮಾಜಕ್ಕೆ ಸೀಮಿತವಾಗಿದ್ದಲ್ಲ, ಶತಮಾನಗಳಿಂದಲೂ ಜನಪ್ರಿಯವಾಗಿ ಉಳಿದುಕೊಂಡಿವೆ. ನೈತಿಕ ನಡವಳಿಕೆ, ಉತ್ತಮ ಆಡಳಿತ, ಉತ್ತಮ ಸಂಬಂಧಗಳು ಮತ್ತು ಜವಾಬ್ದಾರಿಯುತ ಜೀವನದ ಪ್ರಶ್ನೆಗಳು ಈ ಪಠ್ಯದ ಹೃದಯಭಾಗದಲ್ಲಿವೆ.
ತಿರುಕ್ಕುರಲ್ ಮಾನವನ ಗುಣಲಕ್ಷಣಗಳು, ಮೌಲ್ಯಗಳು, ಭಾವನೆಗಳು, ಕ್ರಿಯೆಗಳು ಮತ್ತು ಸಂಬಂಧಗಳ ವ್ಯಾಪಕ ಶ್ರೇಣಿಯನ್ನು ಒಳಗೊಂಡ 1,330 ಪದ್ಯಗಳನ್ನು ಹೊಂದಿದೆ ಎಂದು ಸಿಐಸಿಟಿ ತಿಳಿಸಿದ್ದು, ಇದರ ಸಂಕ್ಷಿಪ್ತ ದ್ವಿಪದಿಗಳನ್ನು ವಿಶ್ವದ ವಿವಿಧ ಭಾಷೆಗಳು ಮತ್ತು ಸಂಸ್ಕೃತಿಗಳಲ್ಲಿ ಅನುವಾದಿಸಲಾಗಿದೆ ಹಾಗೂ ವಿಶ್ಲೇಷಿಸಲಾಗಿದೆ.

ರಾಜತಾಂತ್ರಿಕ ಭೇಟಿಯ ವೇಳೆ ಸಾಹಿತ್ಯಿಕ ಗೌರವ!...

ರಷ್ಯನ್ ಭಾಷೆಯ ತಿರುಕ್ಕುರಲ್ ಕೃತಿಯನ್ನು ನೀಡುವ ಮೂಲಕ, ಮೋದಿ ಮತ್ತು ಪುಟಿನ್ ಅವರ ಭೇಟಿಯು ರಾಜಕೀಯ ಮತ್ತು ಆಯಕಟ್ಟಿನ ಚರ್ಚೆಗಳ ಜೊತೆಗೆ ಸಾಂಸ್ಕೃತಿಕ ಆಯಾಮವನ್ನೂ ಪಡೆದುಕೊಂಡಿದೆ. ರಕ್ಷಣಾ, ಇಂಧನ, ಬಾಹ್ಯಾಕಾಶ ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರಗಳ ಸಹಕಾರವನ್ನು ಒಳಗೊಂಡಿರುವ ಭಾರತ-ರಷ್ಯಾ ಬಾಂಧವ್ಯವನ್ನು ಉಭಯ ನಾಯಕರು ವಿಶೇಷಾಧಿಕಾರ ಹೊಂದಿರುವ ಆಯಕಟ್ಟಿನ ಪಾಲುದಾರಿಕೆ ಎಂದು ಬಣ್ಣಿಸಿದ್ದಾರೆ.
ಅಂತರರಾಷ್ಟ್ರೀಯ ನಾಯಕರಿಗೆ ಭಾರತೀಯ ಸಾಹಿತ್ಯಿಕ ಕೃತಿಗಳನ್ನು ಉಡುಗೊರೆಯಾಗಿ ನೀಡುವ ಭಾರತದ ವಿಶಿಷ್ಟ ಸಂಪ್ರದಾಯದ ಭಾಗವಾಗಿಯೂ ಈ ನಡೆ ಮೂಡಿಬಂದಿದೆ. ಕಳೆದ ವರ್ಷ ಪ್ರಧಾನಿ ಮೋದಿ ಅವರು ಪುಟಿನ್ ಅವರಿಗೆ ರಷ್ಯನ್ ಭಾಷೆಯ ಭಗವದ್ಗೀತೆಯ ಪ್ರತಿಯನ್ನು ನೀಡಿದ್ದರು ಮತ್ತು ಅದರ ಬೋಧನೆಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿವೆ ಎಂದು ಹೇಳಿದ್ದರು(ಏಜೆನ್ಸೀಸ್​).