ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
- ಶನಿವಾರ ತಡರಾತ್ರಿ ಅಮೆರಿಕ ಸೇನಾ ಪಡೆಗಳು ವೆನಿಜುವೆಲಾದ ಮೇಲೆ ದಾಳಿ ಮಾಡಿ
- ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ರನ್ನು ಬಂಧನ
- ವರ್ಷಗಳಲ್ಲಿ ಘಟಿಸಿದ ಅತ್ಯಂತ ಮಹತ್ವದ ಜಾಗತಿಕ ರಾಜಕೀಯ ಬೆಳವಣಿಗೆ
- ಅಮೆರಿಕ-ವೆನೆಜುವೆಲಾ ಪ್ರಕರಣವನ್ನು ಭಾರತದ ದೃಷ್ಟಿಯಿಂದ ನೋಡಿದಾಗ ಏನು ಪರಿಣಾಮ ಬೀರುತ್ತೆ?
ಕಳೆದ ಶನಿವಾರ ತಡರಾತ್ರಿ ಅಮೆರಿಕ ಸೇನಾ ಪಡೆಗಳು ವೆನಿಜುವೆಲಾದ ( Venezuela ) ಮೇಲೆ ದಾಳಿ ಮಾಡಿ, ಅದರ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ರನ್ನು ಬಂಧಿಸಿ ಅಮೆರಿಕದ ನ್ಯಾಯಾಲಯದ ಮುಂದೆ ಸೋಮವಾರ ಹಾಜರುಪಡಿಸಿದೆ. ಈ ಒಂದು ದಾಳಿ ಇತ್ತೀಚಿನ ವರ್ಷಗಳಲ್ಲಿ ಘಟಿಸಿದ ಅತ್ಯಂತ ಮಹತ್ವದ ಜಾಗತಿಕ ರಾಜಕೀಯ ಬೆಳವಣಿಗೆಯಾಗಿದೆ. ಇದರಿಂದ ಒಂದು ರಾಷ್ಟ್ರದ ಸಾರ್ವಭೌಮತೆ, ಆಡಳಿತ ಬದಲಾವಣೆ ಮತ್ತು ಅಂತಾರರಾಷ್ಟ್ರೀಯ ಕಾನೂನುಗಳ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಅಮೆರಿಕದ ಅಧಿಕಾರಿಗಳ ಹೇಳುವಂತೆ, ಮಡುರೊ ಅವರ ಬಂಧನ ಕಾರ್ಯಾಚರಣೆ ಅತ್ಯಂತ ನಿಖರ ಮತ್ತು ನಿಯಂತ್ರಿತವಾಗಿ ನಡೆದಿದೆ. ಡೆಲ್ಟಾ ಫೋರ್ಸ್ ಎಂದು ಕರೆಯಲಾಗುವ 1st Special Forces Operational Detachment-Delta ಘಟಕದ ಸಕ್ರಿಯ ಭಾಗವಹಿಸುವಿಕೆ ಇದರಲ್ಲಿ ಇದೆ ಎಂದು ಅಂದಾಜಿಸಲಾಗಿದೆ. ಈ ಸೇನಾ ಘಟಕವು ರಾಜಕೀಯವಾಗಿ “ಹೈ ವ್ಯಾಲ್ಯೂ ಟಾರ್ಗೆಟ್” ಬಂಧನ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿದೆ.
ಅಮೆರಿಕ ದಾಳಿಯನ್ನು ಗಮನಿಸಿದರೆ, ಇದೊಂದು ದೀರ್ಘಕಾಲದ ಸೈನಿಕ ಸಂಘರ್ಷವಲ್ಲ, ಬದಲಾಗಿ ಕಡಿಮೆ ಸಮಯದಲ್ಲಿ ನಿಖರವಾದ ಗುರಿಯನ್ನು ಸಾಧಿಸುವಂತಹ ಕಾರ್ಯಾಚರಣೆ ಎಂಬುದನ್ನು ಸೂಚಿಸುತ್ತದೆ. ಇಂತಹ ಕಾರ್ಯಾಚರಣೆಗಳನ್ನು ನಡೆಸಲು ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳ ಅನುಮತಿ ಅಗತ್ಯವಿದ್ದು, ಗುಪ್ತಚರ ಸಂಸ್ಥೆಗಳ ನಿಕಟ ಸಮನ್ವಯದಲ್ಲೇ ಈ ಕಾರ್ಯಾಚರಣೆ ನಡೆಯುತ್ತವೆ.
ನಾರ್ಕೋ ಆರ್ಥಿಕತೆ: ಪ್ರಕರಣದ ಮೂಲ
ವರ್ಷಗಳಿಂದಲೇ ಅಮೆರಿಕ, ವೆನಿಜುವೆಲಾ ಆಡಳಿತದ ವಿರುದ್ಧ ಗಂಭೀರ ಆರೋಪ ಮಾಡುತ್ತಲೇ ಬರುತ್ತಿದೆ. ಮಾದಕ ವಸ್ತು ಹಾಗೂ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿದೆ ಎಂದು ಆರೋಪಿಸುತ್ತಾ ಬಂದಿದೆ. ವೆನೆಜುವೆಲಾದ ಹಿರಿಯ ರಾಜಕೀಯ ಮತ್ತು ಸೈನಿಕ ನಾಯಕರು, ಕೊಲಂಬಿಯಾದ ಗೆರಿಲ್ಲಾ ಸಂಘಟನೆಗಳು, ವಿಶೇಷವಾಗಿ ಫಾರ್ಕ್ (FARC) ಜತೆ ಕೈಜೋಡಿಸಿ ಕೋಕೇನ್ ಸಾಗಣೆಗೆ ನೆರವಾಗಿದ್ದಾರೆ ಎಂದು ಆರೋಪಿಸಿದೆ.
ಅಮೆರಿಕ ಮತ್ತು ಯುರೋಪಿನ ಗುಪ್ತಚರ ಸಂಸ್ಥೆಗಳ ಅಂದಾಜು ಪ್ರಕಾರ, ಉತ್ತರ ಅಮೆರಿಕ ಮತ್ತು ಯುರೋಪ್‌ಗೆ ಸಾಗಿದ ಕೋಕೇನ್‌ನ ಸುಮಾರು 20 ರಿಂದ 25 ರಷ್ಟು ಭಾಗವು ವೆನಿಜುವೆಲಾದ ಮೂಲಕವೇ ಹೋಗುತ್ತಿತ್ತು. ನಾರ್ಕೋ–ಸಬ್‌ಮೆರೀನ್‌ಗಳು, ಗುಪ್ತ ವಿಮಾನ ಪಥಗಳು, ರಾಜ್ಯ ನಿಯಂತ್ರಿತ ಬಂದರುಗಳ ಮೂಲಕ ಕಂಟೈನರ್ ಸಾಗಣೆ ಮತ್ತು ರಾಜತಾಂತ್ರಿಕ ಸರಕುಗಳ ದುರುಪಯೋಗ ಈ ಕಳ್ಳಸಾಗಾಣೆ ಜಾಲದ ಭಾಗವಾಗಿದ್ದವು ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ.
ಕೊಲಂಬಿಯಾ ಮತ್ತು ಮೆಕ್ಸಿಕೋ: ಜಾಗತಿಕ ಕೊಂಡಿಗಳು
ಅಂದಹಾಗೆ, ಕೊಲಂಬಿಯಾ ವಿಶ್ವದ ಅತಿದೊಡ್ಡ ಕೋಕೇನ್ ಉತ್ಪಾದಕ ರಾಷ್ಟ್ರ. ಇತ್ತ ಮೆಕ್ಸಿಕೋ, ಅಮೆರಿಕದ ಗ್ರಾಹಕ ಮಾರುಕಟ್ಟೆಗೆ ಪ್ರವೇಶ ನೀಡುವ ಪ್ರಮುಖ ದ್ವಾರವಾಗಿದೆ. ಪೆಸಿಫಿಕ್ ಮಾರ್ಗಗಳ ಮೇಲೆ ಅಮೆರಿಕ ಪಡೆ ಹೆಚ್ಚು ನಿಗಾವಹಿಸುತ್ತಿದ್ದಂತೆ, ವೆನಿಜುವೆಲಾದ ಮಾರ್ಗಗಳು ಮಾದಕ ವಸ್ತು ಸಾಗಣೆಗಾರರಿಗೆ ರಹದಾರಿ ಮಾಡಿಕೊಟ್ಟಿತು. ಸೈನಲೋವಾ ಮತ್ತು ಜಾಲಿಸ್ಕೋ ನ್ಯೂ ಜನರೇಶನ್ ಕಾರ್ಟೆಲ್‌ಗಳಂತಹ ಮೆಕ್ಸಿಕನ್ ಸಂಘಟನೆಗಳು ಯುರೋಪಿನ ಮಾರುಕಟ್ಟೆಗಳಿಗೆ ತಮ್ಮ ಮಾದಕ ವಸ್ತುಗಳ ಪೂರೈಕೆಯನ್ನು ವಿಸ್ತರಿಸಲು ವೆನಿಜುವೆಲಾದ ಮಾರ್ಗಗಳನ್ನು ಬಳಸಿಕೊಂಡಿದ್ದವೆಂದು ಆರೋಪಿಸಲಾಗಿದೆ. ಈ ವ್ಯವಸ್ಥೆಯಲ್ಲಿ ವೆನಿಜುವೆಲಾ, ಮಾದಕ ವಸ್ತುವಿನ ಉತ್ಪಾದನೆ ಮತ್ತು ಜಾಗತಿಕ ವಿತರಣೆಯ ನಡುವಿನ ಪ್ರಮುಖ ಕೊಂಡಿಯಾಗಿತ್ತು.
ಇಂಧನ ಮತ್ತು ತೈಲ: ಜಾಗತಿಕ ಆತಂಕದ ನಡುವೆ ಭಾರತದ ನೈಜ ಸ್ಥಿತಿ
ವೆನಿಜುವೆಲಾ ಜಗತ್ತಿನಲ್ಲೇ ಅತಿದೊಡ್ಡ ತೈಲ ಭಂಡಾರಗಳನ್ನು ಹೊಂದಿದೆ. 300 ಬಿಲಿಯನ್ ಬ್ಯಾರಲ್‌ಗಳಿಗಿಂತ ಹೆಚ್ಚಿದೆ. ಮುಖ್ಯವಾಗಿ ಒರಿನೋಕೋ ಬೆಲ್ಟ್‌ನಲ್ಲಿ ತೈಲ ಭಂಡಾರವಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ತೈಲ ಅಸ್ಥಿರತೆಯ ಬಗ್ಗೆ ಇದೀಗ ಆತಂಕ ಉಂಟಾಗಿದೆ. ಆದರೆ ಭಾರತದ ವಿಚಾರದಲ್ಲಿ ಈ ಚಿತ್ರಣ ಭಿನ್ನವಾಗಿದೆ. ಏಕೆಂದರೆ, 2026ರ ಜನವರಿ ವೇಳೆಗೆ, ವೆನಿಜುವೆಲಾದ ತೈಲವು ಭಾರತದ ಒಟ್ಟು ಕಚ್ಚಾ ತೈಲ ಆಮದುಗಳಲ್ಲಿ ಕೇವಲ 0.3 ರಷ್ಟು ಮಾತ್ರ. ಇದು 2013ರಲ್ಲಿ ಇದ್ದ ಶೇ. 12.4 ಮಟ್ಟಕ್ಕಿಂತ ಭಾರೀ ಕುಸಿತವಾಗಿದೆ. ಭಾರತಕ್ಕೆ ಒಂದು ದಿನಕ್ಕೆ 40 ಲಕ್ಷ ಬ್ಯಾರಲ್‌ಗಳಿಗಿಂತ ಹೆಚ್ಚಿನ ತೈಲದ ಅಗತ್ಯವಿದೆ. ಆದರೆ, ವೆನಿಜುವೆಲಾದಿಂದ ಬರುವ ಪ್ರಮಾಣ ತುಂಬಾ ಅಲ್ಪವಾಗಿದೆ. ರಷ್ಯಾ, ಮಧ್ಯಪ್ರಾಚ್ಯ, ಅಮೆರಿಕ ಮತ್ತು ಆಫ್ರಿಕಾ ರಾಷ್ಟ್ರಗಳಿಂದ ತೈಲ ಆಮದು ಮಾಡಿಕೊಳ್ಳುವ ಭಾರತದ ತಂತ್ರವು ದೇಶವನ್ನು ದೊಡ್ಡ ಮಟ್ಟದ ಇಂಧನ ಪೂರೈಕೆ ಆಘಾತಗಳಿಂದ ರಕ್ಷಿಸಿದೆ.
ಭಾರತದ ನಿಜವಾದ ಅವಕಾಶ ಏನು?
ಪ್ರಸ್ತುತ ಅಮೆರಿಕ-ವೆನೆಜುವೆಲಾ ಬೆಳವಣಿಗೆಯಲ್ಲಿನ ಭಾರತದ ಪ್ರಮುಖ ವಿಚಾರ ತೈಲ ಪೂರೈಕೆ ಅಲ್ಲ. ಇದರ ಬದಲಾಗಿ ಆಸ್ತಿ ಮರುಪಡೆಯುವ ಅವಕಾಶ. ONGC ವಿಧೇಶ್ ಸಂಸ್ಥೆ, ವೆನಿಜುವೆಲಾದ ಸಾನ್ ಕ್ರಿಸ್ಟೋಬಲ್ ತೈಲಕ್ಷೇತ್ರದಲ್ಲಿ 40 ರಷ್ಟು ಪಾಲನ್ನು ಹೊಂದಿದೆ. ಇದೇ ರೀತಿಯಾಗಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಆಯಿಲ್ ಇಂಡಿಯಾ ತಲಾ 3.5 ರಷ್ಟು ಪಾಲನ್ನು ಕಾರಾಬೋಬೊ–1 ತೈಲಕ್ಷೇತ್ರದಲ್ಲಿ ಹೊಂದಿವೆ. ಸ್ಪೇನ್‌ನ ರೆಪ್ಸೋಲ್ ಸಹ ಈ ಕನ್ಸಾರ್ಟಿಯಂನಲ್ಲಿ ಭಾಗವಾಗಿದೆ. ಅಮೆರಿಕದ ನಿರ್ಬಂಧಗಳ ಕಾರಣದಿಂದಾಗಿ, ಈ ಹೂಡಿಕೆಗಳು ಹಲವು ವರ್ಷಗಳಿಂದ ವಾಣಿಜ್ಯವಾಗಿ ಅಂಟಿಕೊಂಡಿದ್ದು, ಸುಮಾರು 1 ಬಿಲಿಯನ್ ಡಾಲರ್‌ಗಳಷ್ಟು ಲಾಭಾಂಶಗಳು ಪಾವತಿಯಾಗದೇ ಉಳಿದಿವೆ. ಇದೀಗ ರಾಜಕೀಯ ಸ್ಥಿರತೆ ಮತ್ತು ನಿರ್ಬಂಧ ಸಡಿಲಿಕೆಯಾದರೆ, ಈ ಆಸ್ತಿಗಳು ಭಾರತದ ಪಾಲಿಗೆ ದೊಡ್ಡ ಲಾಭದ ಮೂಲವಾಗಬಹುದು.
ಅಮೆರಿಕ ನ್ಯಾಯಾಲಯ ಮತ್ತು ಜಾಗತಿಕ ಕಾನೂನು ಪರಿಣಾಮ
ಮಡುರೊ ಅವರನ್ನು ಅಮೆರಿಕದ ನ್ಯಾಯಾಲಯದ ಮುಂದೆ ಹಾಜರುಪಡಿಸಿರುವುದು ಅಪರೂಪದ ಕಾನೂನು ಪರಿಸ್ಥಿತಿ ಸೃಷ್ಟಿಯಾದಂತಿದೆ. ಮಾದಕ ವಸ್ತು–ಭಯೋತ್ಪಾದನೆ ಕಾಯಿದೆಗಳು, ಅಂತಾರಾಷ್ಟ್ರೀಯ ಸಂಚು ಆರೋಪಗಳು ಮತ್ತು ಆಸ್ತಿ ಜಪ್ತಿ ನಿಯಮಗಳು ಈ ಪ್ರಕರಣದ ಆಧಾರವಾಗುವ ಸಾಧ್ಯತೆ ಇದೆ. ಇಂತಹ ಉದಾಹರಣೆಗಳು ವಿರಳವಾಗಿದ್ದು, ಇದು ಭವಿಷ್ಯದಲ್ಲಿ ದೇಶೀಯ ಕಾನೂನುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಬಳಸಬಹುದು ಎಂಬ ಪ್ರಶ್ನೆಯನ್ನು ಎತ್ತಿದೆ.
ಜಾಗತಿಕ ಪ್ರತಿಕ್ರಿಯೆ ಮತ್ತು ಚೀನಾ–ತೈವಾನ್ ಹಿನ್ನೆಲೆ
ವೆನೆಜುವೆಲಾ ಮೇಲೆ ನಡೆದ ದಾಳಿ, ಅಂತಾರಾಷ್ಟ್ರೀಯ ಕಾನೂನು ಮತ್ತು ರಾಷ್ಟ್ರ ಸಾರ್ವಭೌಮತೆ ಆದ ಧಕ್ಕೆ ಎಂದು ಯುರೋಪಿಯನ್ ರಾಷ್ಟ್ರಗಳು ಎಚ್ಚರಿಕೆ ನೀಡಿದರೆ, ಚೀನಾ, ರಷ್ಯಾ ಮತ್ತು ಇರಾನ್ ಸೇರಿದಂತೆ ಕೆಲವು ರಾಷ್ಟ್ರಗಳು ಇದನ್ನು ಅಮೆರಿಕದ ಏಕಪಕ್ಷೀಯ ಶಕ್ತಿ ಪ್ರದರ್ಶನವೆಂದು ಖಂಡಿಸಿವೆ. ಲ್ಯಾಟಿನ್ ಅಮೆರಿಕದಾಚೆಗೂ ಈ ಬೆಳವಣಿಗೆ ಪರಿಣಾಮ ಬೀರುತ್ತಿದ್ದು, ತೈವಾನ್ ವಿಚಾರದಲ್ಲಿ ಅಮೆರಿಕದ ತಂತ್ರಾತ್ಮಕ ಸಂದೇಶಗಳನ್ನೂ ಬೀಜಿಂಗ್ ಹೊಸ ರೀತಿಯಲ್ಲಿ ವಿಶ್ಲೇಷಿಸುವ ಸಾಧ್ಯತೆ ಇದೆ.
ಭಾರತದ ಪಾಲಿಗೆ ಪಾಠವೇನು?
ಭಾರತಕ್ಕೆ ಇದು ತಕ್ಷಣದ ಸಂಕಷ್ಟವಲ್ಲ ಬದಲಾಗಿ, ಒಂದು ತಂತ್ರಾತ್ಮಕ ತಿರುವು ಎನ್ನಬಹುದು. ಇಂಧನ ಭದ್ರತೆ ದೃಢವಾಗಿದ್ದು, ಆರ್ಥಿಕ ಹೊರೆ ಕಡಿಮೆ. ಆದರೆ, ರಾಜತಾಂತ್ರಿಕ ಚಾತುರ್ಯ, ಆಸ್ತಿ ಮರುಪಡೆಯುವಿಕೆ ಮತ್ತು ಭವಿಷ್ಯದ ಹೂಡಿಕೆ ಅವಕಾಶಗಳೇ ಭಾರತದ ಮುಂದೆ ಇರುವ ನಿಜವಾದ ಅಜೆಂಡಾಗಳಾಗಿವೆ. ಜಾಗತಿಕ ರಾಜಕೀಯ ಗದ್ದಲದ ನಡುವೆ, ಭಾರತಕ್ಕೆ ಮುಖ್ಯವಾದುದು ಅವಕಾಶಗಳನ್ನು ಗುರುತಿಸುವುದು ಮತ್ತು ಅದರ ಲಾಭವನ್ನು ಪಡೆಯುವುದು.
Follow; Karadilife/Bangalore