Perfect February 
ದೇಶ

ಪರ್ಫೆಕ್ಟ್ ಫೆಬ್ರವರಿ 2026: ಈ ತಿಂಗಳ ಅಪರೂಪದ ಕ್ಯಾಲೆಂಡರ್ ವಿನ್ಯಾಸದ ಬಗ್ಗೆ ನಿಮಗೆ ಗೊತ್ತೇ? Perfect February

ನವದೆಹಲಿ: ಪ್ರತಿ ವರ್ಷವೂ ಫೆಬ್ರವರಿ ತಿಂಗಳು ಬಂದು ಹೋಗುತ್ತದೆ. ಆದರೆ, ಈ ವರ್ಷದ (2026) ಫೆಬ್ರವರಿ ಬಗ್ಗೆ ಇಂಟರ್ನೆಟ್‌ನಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಜನರು ಇದನ್ನು 'ಪರ್ಫೆಕ್ಟ್ ಫೆಬ್ರವರಿ' (Perfect February) ಎಂದು ಕರೆಯುತ್ತಿದ್ದಾರೆ. ಯಾಕೆ? ಎನ್ನುವ ಪ್ರಶ್ನೆ ನಿಮಗೆ ಇದ್ದರೆ ನಾವು ಈ ಕುರಿತಾಗಿ ತಿಳಿಸಿ ಕೊಡಲಿದ್ದೇವೆ.
ಸಾಮಾನ್ಯವಾಗಿ ಫೆಬ್ರವರಿ ತಿಂಗಳು ಅಂದ ಕೂಡಲೇ ನೆನಪಾಗುವುದು ಕಡಿಮೆ ದಿನಗಳು. ಆದರೆ ಈ ವರ್ಷದ (2026) ಫೆಬ್ರವರಿ ತಿಂಗಳನ್ನು ನೆಟ್ಟಿಗರು 'ಪರ್ಫೆಕ್ಟ್ ಫೆಬ್ರವರಿ' ಅಥವಾ 'ಪರಿಪೂರ್ಣ ಫೆಬ್ರವರಿ' ಎಂದು ಕರೆಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ತಿಂಗಳ ದಿನಾಂಕಗಳು ಕ್ಯಾಲೆಂಡರ್‌ನಲ್ಲಿ ಜೋಡಣೆಯಾಗಿರುವ ರೀತಿಯಾಗಿದೆ.
ಈ ವರ್ಷದ ಫೆಬ್ರವರಿಯಲ್ಲಿ ಒಟ್ಟು 28 ದಿನಗಳಿವೆ. ಇದು ಸರಿಯಾಗಿ ನಾಲ್ಕು ವಾರಗಳಿಗೆ (7 x 4 = 28) ಸಮನಾಗಿದೆ.
ಈ ತಿಂಗಳು ಭಾನುವಾರ (ಫೆಬ್ರವರಿ 1) ರಿಂದ ಪ್ರಾರಂಭವಾಗಿ ಶನಿವಾರ (ಫೆಬ್ರವರಿ 28) ರಂದು ಮುಕ್ತಾಯವಾಗುತ್ತದೆ.
ಕ್ಯಾಲೆಂಡರ್‌ ನೋಡಿದಾಗ, ಯಾವುದೇ ದಿನಗಳು ಅರ್ಧಕ್ಕೆ ನಿಲ್ಲದೆ, ನಾಲ್ಕು ಸಾಲುಗಳಲ್ಲಿ ಅಚ್ಚುಕಟ್ಟಾಗಿ ಜೋಡಣೆಯಾಗಿದೆ. ಯಾವುದೇ ಹೆಚ್ಚುವರಿ ದಿನಗಳು ಅಥವಾ ಖಾಲಿ ಜಾಗಗಳು ಇರುವುದಿಲ್ಲ. ಈ ತಿಂಗಳ ಆರಂಭ ಭಾನುವಾರದಿಂದ ಶುರುವಾಗಿ ಶನಿವಾರಕ್ಕೆ ಕೊನೆಗೊಳ್ಳುತ್ತಿರುವುದು ವಿಶೇಷವಾಗಿದೆ.
ಕ್ಯಾಲೆಂಡರ್‌ನಲ್ಲಿ ಇದನ್ನು ನೋಡಿದಾಗ, ಯಾವುದೇ ದಿನಗಳು ಅಕ್ಕಪಕ್ಕ ಚಾಚಿಕೊಳ್ಳದೆ ನಾಲ್ಕು ಸಾಲುಗಳಲ್ಲಿ ಅಚ್ಚುಕಟ್ಟಾಗಿ ಕಾಣಿಸುತ್ತದೆ. ಈ ರೀತಿಯ ವಿನ್ಯಾಸವು ಎಲ್ಲರಿಗೂ ನೋಡಲು ಸುಂದರವಾಗಿ ಕಾಣುವುದರಿಂದ ಮತ್ತು ತಿಂಗಳ ಪ್ಲ್ಯಾನ್ ಮಾಡಲು ಸುಲಭವಾಗಿರುವುದರಿಂದ ನೆಟ್ಟಿಗರು ಇದನ್ನು ಸಂಭ್ರಮಿಸುತ್ತಿದ್ದಾರೆ.
ಪ್ರತಿ ವರ್ಷ ಫೆಬ್ರವರಿ ಹೀಗೆ ಇರುವುದಿಲ್ಲ. 29 ದಿನಗಳಿರುತ್ತವೆ ಮತ್ತು ಸಾಮಾನ್ಯ ವರ್ಷಗಳಲ್ಲೂ ತಿಂಗಳು ಭಾನುವಾರ ಅಥವಾ ಸೋಮವಾರವೇ ಆರಂಭವಾಗಬೇಕು ಎಂದಿರುವುದಿಲ್ಲ. ಹೀಗಾಗಿ ಇಂತಹ ಕಾಕತಾಳೀಯವನ್ನು ಜನರು ಸಂಭ್ರಮಿಸುತ್ತಿದ್ದಾರೆ.

ಎಷ್ಟು ವರ್ಷಕ್ಕೊಮ್ಮೆ ಬರುತ್ತದೆ ಈ 'ಪರ್ಫೆಕ್ಟ್ ಫೆಬ್ರವರಿ'?

ಗ್ರೆಗೋರಿಯನ್ ಕ್ಯಾಲೆಂಡರ್‌ನ ಲೆಕ್ಕಾಚಾರದ ಪ್ರಕಾರ, ಫೆಬ್ರವರಿ ತಿಂಗಳು ಭಾನುವಾರದಿಂದ ಆರಂಭವಾಗಿ ಶನಿವಾರಕ್ಕೆ ಸರಿಯಾಗಿ 28 ದಿನಕ್ಕೆ ಮುಕ್ತಾಯವಾಗುವ ಈ ವಿದ್ಯಮಾನವು ಒಂದು ನಿರ್ದಿಷ್ಟ ಕ್ರಮದಲ್ಲಿ ಮರುಕಳಿಸುತ್ತದೆ. ಈ 'ಪರ್ಫೆಕ್ಟ್ ಫೆಬ್ರವರಿ' ಸಾಮಾನ್ಯವಾಗಿ ಪ್ರತಿ 6 ವರ್ಷ ಅಥವಾ 11 ವರ್ಷಕ್ಕೊಮ್ಮೆ ಬರುತ್ತದೆ. ಈ ಹಿಂದೆ 2021 ರಲ್ಲಿ ಪರ್ಫೆಕ್ಟ್ ಫೆಬ್ರವರಿ ಇತ್ತು. ಈಗ 2026 ರಲ್ಲಿ ಇದು ಬಂದಿದೆ. ಇದರ ನಂತರ, ಮುಂದಿನ ಬಾರಿ 2032 ರಲ್ಲಿ ಇದು ಬರಬೇಕಿತ್ತು, ಆದರೆ ಅದು ಲೀಪ್ ವರ್ಷ (29 ದಿನ) ಆಗಿರುವುದರಿಂದ, ನಮಗೆ ಪರ್ಫೆಕ್ಟ್ ಫೆಬ್ರವರಿ ಸಿಗುವುದು 2037 ರಲ್ಲಿ ಮತ್ತೆ ಈ ಪರ್ಫೆಕ್ಟ್ ಫೆಬ್ರವರಿ ಸಿಗಲಿದೆ.

ಯಾಕೆ ಪ್ರತಿ ವರ್ಷ ಪರ್ಫೆಕ್ಟ್ ಫೆಬ್ರವರಿ ಬರಲ್ಲ?

ಪ್ರತಿ ವರ್ಷ 365 ದಿನಗಳಿರುತ್ತವೆ. ಒಂದು ವರ್ಷದಿಂದ ಇನ್ನೊಂದು ವರ್ಷಕ್ಕೆ ವಾರದ ದಿನಗಳು ಒಂದು ದಿನ ಮುಂದೆ ಹೋಗುತ್ತವೆ (ಉದಾಹರಣೆಗೆ ಈ ವರ್ಷ ಫೆಬ್ರವರಿ 1 ಸೋಮವಾರವಾಗಿದ್ದರೆ, ಮುಂದಿನ ವರ್ಷ ಅದು ಮಂಗಳವಾರವಾಗುತ್ತದೆ).ಕೆಲವೊಮ್ಮೆ ಎರಡು ದಿನ ಮುಂದೆ ಹೋಗುತ್ತದೆ. ಹೀಗಾಗಿ, ಸರಿಯಾಗಿ ಭಾನುವಾರವೇ ಫೆಬ್ರವರಿ 1 ಬರಲು ಇಷ್ಟು ವರ್ಷ ಕಾಯಬೇಕಾಗುತ್ತದೆ ಎನ್ನಲಾಗಿದೆ.