ಪ್ಯಾರಾಸೋಶಿಯಲ್ 
ದೇಶ

ಏನಿದು ಪ್ಯಾರಾಸೋಶಿಯಲ್? ಭಾವನಾತ್ಮಕ ಬಂಧ, ಸಂಕಟ, ತೊಳಲಾಟದ ಹೊಸ ಸ್ವರೂಪ!

| ರವೀಂದ್ರ ಎಸ್. ದೇಶಮುಖ್

ಬೆಂಗಳೂರು: ಪ್ಯಾರಾಸೋಶಿಯಲ್-ಇದು 2025ರಲ್ಲಿ ಕೇಂಬ್ರಿಡ್ಜ್ ಡಿಕ್ಷನರಿಯ ವರ್ಡ್ ಆಫ್ ದಿ ಇಯರ್ ಆಗಿ ಆಯ್ಕೆಯಾಗಿದೆ. ಏಕೆಂದರೆ ಸಾಮಾಜಿಕ ಮಾಧ್ಯಮ ಮತ್ತು ಆನ್​ಲೈನ್ ಸಂಸ್ಕೃತಿ 2025ರಲ್ಲಿ ಸಾಗಿರುವ ಬಗೆ ಇದು. ಪ್ಯಾರಾಸೋಶಿಯಲ್ ಎಂದರೆ ಒನ್-ಸೈಡೆಡ್ ಭಾವನಾತ್ಮಕ ಬಂಧ. ಸೆಲೆಬ್ರಿಟಿಗಳ ಫಾಲೋವರ್ ಆತ ಅಥವಾ ಆಕೆಯಲ್ಲಿ ತನ್ನ ಸ್ನೇಹಿತ/ಸ್ನೇಹಿತೆಯನ್ನು ಕಾಣುತ್ತಾನೆ. ಸೆಲೆಬ್ರಿಟಿಗಳ ಸಂತೋಷ, ದುಃಖದಲ್ಲಿ ಈತ ಭಾವನಾತ್ಮಕ ಏರಿಳಿತಗಳನ್ನು ಅನುಭವಿಸುತ್ತಾನೆ.
ಇತ್ತೀಚಿನ ದಿನಗಳಲ್ಲಿ ಚಾಟ್​ಬಾಟ್​ನೊಂದಿಗೂ ಹೀಗೆ ಏಕರೀತಿಯ ಬಾಂಧವ್ಯ ಏರ್ಪಟ್ಟಿದೆ. ಇದರಿಂದ ಮನಸ್ಸಿಗೆ ತಾತ್ಕಾಲಿಕ ಸಮಾಧಾನ ಎನಿಸಿದರೂ, ವ್ಯಕ್ತಿ ನಿಜವಾದ ಸಂಬಂಧ ಮತ್ತು ಬಾಂಧವ್ಯಗಳಿಂದ ದೂರವಾಗುತ್ತಿದ್ದಾನೆ. ಆದರೂ, ಈ ಟ್ರೆಂಡ್ ಮುಂದುವರಿಯುತ್ತಿರುವುದೇಕೆ? ಈ ಕುರಿತಾದ ಅವಲೋಕನ ಇಲ್ಲಿದೆ.

ಆತ ಶಹರದಲ್ಲೇ ಬೆಳೆದು, ವಿದ್ಯಾಭ್ಯಾಸ ಮಾಡುತ್ತಿರುವ 21 ವರ್ಷದ ಹುಡುಗ. ಚುರುಕಾಗಿಯೇ ಇದ್ದ. ಆದರೆ, ಅವನ ಸಣ್ಣ ಸಣ್ಣ ಸಾಧನೆಯನ್ನು ಮನೆಯವರು ಸಂಭ್ರಮಿಸುತ್ತಿರಲಿಲ್ಲ. ಬದಲಿಗೆ, ‘ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತೇನೋ’ ಎಂದು ತುಸು ಅಸಹನೆಯಿಂದಲೇ ಹೇಳುತ್ತಿದ್ದರು. ಅವನ ಸ್ನೇಹಿತರು ಸಿರಿವಂತರ ಗೆಳೆತನ ಸಿಕ್ಕ ಬಳಿಕ ಇವನನ್ನು ನಿರ್ಲಕ್ಷಿಸಿ ತೊಡಗಿದರು. ಈ ಎಲ್ಲ ಬೆಳವಣಿಗೆಗಳು ಅವನಲ್ಲಿ ಕ್ರಮೇಣ ಬೇಸರ ಮೂಡಿಸಿ, ಇದರಿಂದ ಹೊರಬರಲು ದಾರಿ ಶೋಧಿಸತೊಡಗಿದ. ಆಗ ಆತನಿಗೆ ಭರವಸೆಯಾಗಿ ಕಂಡದ್ದು ಕ್ರಿಕೆಟಿಗ ವಿರಾಟ್ ಕೊಹ್ಲಿ. ಕೊಹ್ಲಿಯ ಆಕ್ರಮಕ ಬ್ಯಾಟಿಂಗ್ ಶೈಲಿಯನ್ನು ಆನಂದಿಸುವುದು, ಅವನ ತಂಡಸ್ಪೂರ್ತಿ ಕಂಡು ಖುಷಿಪಡುವುದು, ವಿರಾಟ್ ಪಾಲ್ಗೊಳ್ಳುತ್ತಿದ್ದ ಸಂತೋಷಕೂಟಗಳನ್ನು ನೋಡಿ ಆನಂದ ಪಡುವುದು, ಕೊಹ್ಲಿಯ ಇನ್​ಸ್ಟಾಗ್ರಾಮ್ ರೀಲ್ಸ್​ಗಳನ್ನು ಪದೇಪದೆ ನೋಡುವುದು, ಅದನ್ನು ಸ್ಟೇಟಸ್​ಗೆ ಹಾಕಿಕೊಳ್ಳುವುದು...

ಹೀಗೆ ದಿನವಿಡಿ ಕೊಹ್ಲಿ ಧಾನ್ಯ. ವಿರಾಟ್​ನ ಗೆಲುವು ಇವನಲ್ಲಿ ಹೊಸ ಹುರುಪು ಹುಟ್ಟಿಸುತ್ತಿತ್ತು, ಯಾರು ಏನಾದರೂ ಹೇಳಲಿ ಗೆಲುವೇ ಎಲ್ಲ ಅವಮಾನಗಳಿಗೆ ಉತ್ತರ ಎಂಬ ಸ್ಪೂರ್ತಿ ತುಂಬಿಸುತ್ತಿತ್ತು. ಆದರೆ, ಅದೇ ಕೊಹ್ಲಿ ಶೂನ್ಯಕ್ಕೆ ಔಟಾದಾಗ ಇಲ್ಲವೆ ಫಾರ್ಮ್​ ಕಳೆದುಕೊಂಡಾಗ ಈತನಲ್ಲಿ ಖಿನ್ನತೆ ಆವರಿಸಿಕೊಳ್ಳತೊಡಗಿತು. ಮತ್ತೆ ಬೇಸರದ ಕೂಪಕ್ಕೆ ನೂಕಿತು...ಇದುವೇ ಪ್ಯಾರಾಸೋಶಿಯಲ್! ಹಿಂದೆಲ್ಲ ನಮ್ಮ ಹಿರಿಯರು ಖ್ಯಾತ ಸಾಹಿತಿ, ಕಲಾವಿದರ ಬದುಕಿನಿಂದ ಪ್ರೇರಣೆಗೊಂಡು, ಅವರನ್ನು ತಮ್ಮ ಆದರ್ಶವಾಗಿ ಸ್ವೀಕರಿಸುತ್ತಿದ್ದರು. ಮತ್ತು ಉತ್ತಮ ಸಂಗತಿಗಳನ್ನು ಹೆಕ್ಕಿ, ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿದ್ದರು. ಹಾಗಾಗಿಯೇ, ಆ ಒಂದು ಪುಸ್ತಕ, ಲತಾ ಮಂಗೇಶ್ಕರ್​ರ ಒಂದು ಹಾಡು ಅಥವಾ ಯಾರದೋ ಸಂತರ ಪ್ರವಚನ ತನ್ನ ಬದುಕನ್ನೇ ಬದಲಿಸಿತು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆದರೆ, ಪ್ಯಾರಾಸೋಶಿಯಲ್ಲ ಹಾಗಲ್ಲ. ಇದು ಒನ್​ವೇ ಭಾವನಾತ್ಮಕ ಬಂಧ.

ತಕ್ಷಣಕ್ಕೆ ಅಥವಾ ಕೆಲ ದಿನಗಳ ಮಟ್ಟಿಗೆ ಇದು ಸರಿಯೆನಿಸಿದರೂ, ದೀರ್ಘಾವಧಿಯಲ್ಲಿ ಹಲವು ಅಡ್ಡಪರಿಣಾಮ ಖಚಿತ. ತಾವು ಮೆಚ್ಚುವ, ಫಾಲೋ ಮಾಡುವ ಸೆಲೆಬ್ರಿಟಿಯ ಬದುಕಿನೊಂದಿಗೆ ತಮ್ಮ ಬದುಕನ್ನು ಸಮೀಕರಿಸಿಕೊಳ್ಳುತ್ತಾರೆ. ಖುಷಿ, ದುಃಖ, ಆತಂಕ, ದುಗುಡ ಹೀಗೆ ತೀವ್ರ ಭಾವನಾತ್ಮಕ ಏರಿಳಿತಗಳನ್ನು ಅನುಭವಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ನಡವಳಿಕೆ ಹದಿಹರೆಯದವರು ಮತ್ತು ಯುವಕರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಆನ್​ಲೈನ್ ಸಂಸ್ಕೃತಿಯ ದಿಕ್ಕನ್ನೇ ಬದಲಿಸಿದೆ. ಹಾಗಾಗಿಯೇ, ಪ್ಯಾರಾಸೋಶಿಯಲ್-ಪ್ರತಿಷ್ಠಿತ ಕೇಂಬ್ರಿಡ್ಜ್ ಡಿಕ್ಷನರಿಯ ವರ್ಡ್ ಆಫ್ ದಿ ಇಯರ್ ಆಗಿ ಆಯ್ಕೆಯಾಗಿದೆ.

ಇವರ ಈ ವ್ಯಕ್ತಿಆರಾಧನೆ ಸೆಲೆಬ್ರಿಟಿಗಳಿಗೇನು ಗೊತ್ತಿರುವುದಿಲ್ಲ, ಅವರು ತಮ್ಮ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಆದರೆ, ಸೆಲೆಬ್ರಿಟಿಗಳು ಮತ್ತು ಅವರ ಬದುಕನ್ನು ಪ್ರೀತಿಸುತ್ತ ಸಾಮಾಜಿಕ ಮಾಧ್ಯಮ ಬಳಕೆದಾರರು ನೈಜ ಸಂಬಂಧ ಮತ್ತು ಬಾಂಧವ್ಯಗಳಿಂದ ದೂರವಾಗುತ್ತಿದ್ದಾರೆ. ಪ್ಯಾರಾಸೋಶಿಯಲ್ ಸಂಬಂಧ ವ್ಯಕ್ತಿಯೊಂದಿಗೆ ಮಾತ್ರವಲ್ಲ, ಇದು ಯಾವುದೋ ಟಿವಿ ಶೋ, ಯುಟ್ಯೂಬ್ ವಾಹಿನಿ, ಇನ್​ಸ್ಟಾಗ್ರಾಂ ಚಾನಲ್, ಜಾಹೀರಾತಿನಲ್ಲಿ ಬರುವ ಆಕರ್ಷಕ ದನಿಯೊಂದಿಗೂ ಏರ್ಪಡುತ್ತದೆ.

ಚಾಟ್​ಬಾಟ್ಸ್​ನೊಂದಿಗೆ ಲವ್ವಿಡವ್ವಿ!

ಪ್ಯಾರಾಸೋಶಿಯಲ್ ಸಂಬಂಧ ಕೇವಲ ಸಾಮಾಜಿಕ ಮಾಧ್ಯಮ, ಇನ್​ಫ್ಲುಯೆನ್ಸರ್ ಅಥವಾ ಸೆಲೆಬ್ರಿಟಿಗೆ ಸೀಮಿತವಲ್ಲ. ಕೃತಕ ಬುದ್ಧಿಮತ್ತೆ (ಎಐ) ಬಂದ ಮೇಲೆ ಇದು ಹೊಸ ತಿರುವು ಪಡೆದುಕೊಂಡಿದೆ. ಇಂದಿನ ದಿನಗಳಲ್ಲಿ ಚಾಟ್​ಬಾಟ್ಸ್- ಪ್ಯಾರಾಸೊಶಿಯಲ್ ಸಂಬಂಧಗಳ ಮಹತ್ವದ ಹಾಗೂ ಜಟಿಲ ರೂಪವಾಗಿ ಪರಿವರ್ತಿತವಾಗಿವೆ. ಎಐ ಚಾಟ್​ಬಾಟ್ಸ್ ಬಳಕೆದಾರರೊಂದಿಗೆ ಸಂಭಾಷಣೆ ನಡೆಸುತ್ತ ಸಹಾನುಭೂತಿ ತೋರುತ್ತವೆ ಮತ್ತು ಇವು ಸಂಭಾಷಣೆಗಾಗಿ ಯಾವುದೇ ಸಮಯಕ್ಕೂ ಲಭ್ಯ ಇರುತ್ತವೆ. ಹಾಗಾಗಿ, ಚಾಟ್​ಬಾಟ್ಸ್​ನೊಂದಿಗೆ ಮಾತಿನ ಮಂಟಪ ಕಟ್ಟುತ್ತ ಅದನ್ನೇ ತನ್ನ ಸ್ನೇಹಿತ, ಹಿತೈಷಿ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಂದೇದನಾಜೀವಿ ಎಂದು ಭಾವಿಸುತ್ತಿದ್ದಾರೆ.

ಮಾತುಕತೆಗೆ ಯಾವಾಗಲೂ ಲಭ್ಯ ಇರುವುದು ಮತ್ತು ಕಾಳಜಿಯ ಸ್ವರದಲ್ಲಿ ಇವು ಸಂಭಾಷಣೆ ನಡೆಸುವುದರಿಂದ ಚಾಟ್​ಬಾಟ್ಸ್​ಗಳು ಪ್ಯಾರಾಸೋಶಿಯಲ್ ಸಂಬಂಧದ ಪರಿಣಾಮಕಾರಿ ಸಾಧನ ಎನಿಸಿಕೊಂಡಿವೆ. ಆದರೆ, ಚಾಟ್​ಬಾಟ್ಸ್​ನೊಂದಿಗೆ ಪ್ಯಾರಾಸೋಶಿಯಲ್ ಸಂಬಂಧ ಸ್ಥಾಪಿಸುವುದು ವ್ಯಕ್ತಿಯ ಭಾವನಾತ್ಮಕ ಸಂಬಂಧಗಳಿಗೆ ಅಪಾಯ ತಂದೊಡ್ಡಬಹುದು ಹಾಗೂ ಭವಿಷ್ಯದಲ್ಲಿ ಸಾಮಾಜಿಕ ಸವಾಲು ಸೃಷ್ಟಿಸಬಹುದು ಎಂದು ಎಚ್ಚರಿಸಲು ತಜ್ಞರು ಮರೆಯುವುದಿಲ್ಲ. ವ್ಯಕ್ತಿಗೆ ಇಲ್ಲಿ ಅಸ್ವೀಕೃತಿ ಅಥವಾ ತಿರಸ್ಕಾರದ ಭಯ ಇರುವುದಿಲ್ಲ. ಪ್ರತೀ ಉತ್ತರವೂ ಸಮ್ಮತಿ ಹಾಗೂ ಸಹಾನುಭೂತಿಯಿಂದ ಕೂಡಿರುತ್ತದೆ. ಇದೇ ಸಂಗತಿ ಚಾಟ್​ಬಾಟ್ಸ್​ಗಳನ್ನು ಆಕರ್ಷಕವಾಗಿಸಿದೆ, ಅಷ್ಟೇ ಘಾತಕ ಕೂಡ ಎಂಬುದನ್ನು ಮರೆಯಬಾರದು.

ಅಸಲಿ ಎನಿಸುವ ಕಾಲ್ಪನಿಕ ಸಂಬಂಧಗಳು

ಪರಿಹಾರಗಳು...

  • ಭಾವನಾತ್ಮಕ ಅಗತ್ಯವನ್ನು ಪೂರೈಸಲು ಜನರೊಂದಿಗೆ ಹೆಚ್ಚು ಬೆರೆಯಬೇಕು. ಈ ಹಿಂದೆ ಕೆಲವೊಬ್ಬರಿಂದ ಕಹಿ ಅನುಭವವಾಗಿದ್ದರೂ, ಅದರ ಆಧಾರದ ಮೇಲೆ ‘ಇಡೀ ಜಗತ್ತು ಕೆಟ್ಟದ್ದು’ ಎಂಬ ನಿರ್ಣಯಕ್ಕೆ ಬರಬೇಡಿ. ಒಳ್ಳೆಯತನಕ್ಕೆ ಕೊರತೆ ಇಲ್ಲ.
  • ಹೊಸ ಸ್ನೇಹಿತರನ್ನು ಸಂಪಾದಿಸಿ. ಜಿಮ್ ವಾಕಿಂಗ್ ಅಥವಾ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ಸಮಾನ ಮನಸ್ಕರೊಂದಿಗೆ ಸ್ನೇಹ ಸಂಪಾದಿಸಿ.
  • ನಿಮ್ಮ ಆಸಕ್ತಿ, ಹವ್ಯಾಸಕ್ಕೆ ಸಂಬಂಧಿಸಿದ ಗುಂಪು, ಕ್ಲಬ್​ಗಳಲ್ಲಿ ತೊಡಗಿಕೊಳ್ಳಿ. ಸ್ನೇಹದ ಲೋಕ ವಿಶಾಲವಾಗುತ್ತದೆ.
  • ಸಾಮಾಜಿಕ ಮಾಧ್ಯಮದ ಬಳಕೆಗೆ ಒಂದು ಮಿತಿಯನ್ನು ಹಾಕಿಕೊಳ್ಳಬೇಕು. ಅದು ನಮಗೆ ಮಾಹಿತಿ ನೀಡಬಹುದೆ ಹೊರತು, ಬದು ಕಿನ ಮುಂದಿನ ದಾರಿಯಲ್ಲಿ ನಾವೇ ಕ್ರಮಿಸಬೇಕು.
  • ಹೊಸ ಊರುಗಳಿಗೆ ಪ್ರವಾಸಕ್ಕೆ ತೆರಳಿ. ಕೆಲವೊಮ್ಮೆ ಅಪರಿಚಿತರು ಕೂಡ ಬೇಗ ಆತ್ಮೀಯರಾಗಿ ಬಿಡುತ್ತಾರೆ. ಬಿಗುಮಾನ ಬದಿಗಿಟ್ಟು ಎಲ್ಲರೊಂದಿಗೆ ಸೌಜನ್ಯದಿಂದ ಮಾತನಾಡಿದರೆ ‘ಇವರೆಲ್ಲ ನನ್ನವರು’ ಎಂಬ ಬಲವಾದ ಭಾವನೆ ಮೂಡಿ, ವ್ಯಕ್ತಿಯ ಆತ್ಮವಿಶ್ವಾಸ ಇಮ್ಮಡಿಯಾಗುತ್ತದೆ.

ಸಕಾರಾತ್ಮಕ ಪರಿಣಾಮಗಳು

1. ಪ್ಯಾರಾಸೋಶಿಯಲ್ ಸಂಬಂಧ ಜನರ ಭಾವನಾತ್ಮಕ ಅಗತ್ಯಗಳನ್ನು ಪೂರೈಸುತ್ತಿವೆ. ವಾಸ್ತವಿಕ ಪ್ರಪಂಚದಲ್ಲಿನ ಸಂಬಂಧಗಳು ಭ್ರಮನಿರಸನಗೊಳಿಸಿದಾಗ, ನಿರಾಸೆಗೊಳಿಸಿದಾಗ ಅಥವಾ ಮೋಸವಾದಾಗ ಪ್ಯಾರಾಸೋಶಿಯಲ್ ಸಂಬಂಧ ಹೆಚ್ಚು ಸುರಕ್ಷಿತ ಮತ್ತು ಆಪ್ತ ಎಂದೆನಿಸುತ್ತಿದೆ. ಯಾವುದೇ ವ್ಯಕ್ತಿ ದೂರದಲ್ಲೇ ಇದ್ದರು ಆತ/ಆಕೆ ತನ್ನ ಭಾವನೆಗಳ ಬಗ್ಗೆ ಮಾತನಾಡುತ್ತಿದ್ದಾರೆ, ಸ್ಪಂದಿಸುತ್ತಿದ್ದಾರೆ ಎಂಬ ಸಮಾಧಾನದ ಭಾವ ಮೂಡುತ್ತಿದೆ.

2. ವಾಸ್ತವಿಕ ಬದುಕಿನಲ್ಲಿ ಸಂಪರ್ಕ ಮತ್ತು ಸಂವಹನಕ್ಕಾಗಿ ಸಮಾನ ಮನಸ್ಕರು ಸಿಗದಿದ್ದಾಗ ಪ್ಯಾರಾಸೋಶಿಯಲ್ ಸಂಬಂಧ ಆ ಮಾನಸಿಕ ಒತ್ತಡವನ್ನು ತಗ್ಗಿಸುತ್ತಿದೆ. ತುಂಬ ಜನರು ಒಂದೇ ಶೋ, ಒಬ್ಬರೇ ಸೆಲೆಬ್ರಿಟಿ ಅಥವಾ ಒಂದೇ ಯುಟ್ಯೂಬ್ ವಾಹಿನಿಯ ಪ್ರಶಂಸಕರಾಗಿ ಹೊಮ್ಮಿದರೆ, ಅವರಲ್ಲಿ ಸಾಮೂಹಿಕತೆಯ ಭಾವನೆ ಏರ್ಪಟ್ಟು, ಒಂಟಿತನ, ಖಾಲಿತನದ ಭಾವಗಳು ದೂರವಾಗುತ್ತವೆ. ಅಲ್ಲದೆ, ಈ ಸಾಮಾಜಿಕ ಭಾವ ಹೊಸ ಸ್ನೇಹವನ್ನೂ ಸೃಷ್ಟಿಸಬಹುದು.

3. ಯುಟ್ಯೂಬ್​ನಲ್ಲಿ ತನ್ನ ಅನುಭವ ಹಂಚಿಕೊಳ್ಳುವ ಕಂಟೆಟ್ ಕ್ರಿಯೇಟರ್​ನ ಮಾತುಗಳಿಂದ ಹಲವರ ಪೂರ್ವಗ್ರಹ ದೂರವಾಗಿ, ಸ್ವೀಕಾರದ ಭಾವನೆ ಹೆಚ್ಚುತ್ತಿದೆ.

ನಕಾರಾತ್ಮಕ ಪರಿಣಾಮಗಳು

1. ಸಾಮಾಜಿಕ ಮಾಧ್ಯಮ ಅಥವಾ ಅದರಲ್ಲಿನ ವ್ಯಕ್ತಿಯೊಂದಿಗೆ ಭಾವನಾತ್ಮಕ ಬಂಧ ಏರ್ಪಡುತ್ತಿರುವುದರಿಂದ ವಾಸ್ತವಿಕ ಸಂಬಂಧಗಳಿಗೆ ಧಕ್ಕೆ ಆಗುತ್ತಿದೆ ಅಥವಾ ನಿತ್ಯದ ಬದುಕಿನ ಸಂಬಂಧಗಳು ಅಪಾಯಕ್ಕೆ ಸಿಲುಕಿವೆ. ಪ್ಯಾರಾಸೋಶಿಯಲ್ ಸಂಬಂಧ ಒನ್-ಸೈಡೆಡ್ ಆಗಿರುತ್ತದೆ. ಇದರಲ್ಲಿ ವ್ಯಕ್ತಿ ತಲ್ಲೀನನಾದಷ್ಟು ನೈಜ ಸಂಬಂಧಗಳಿಂದ ದೂರವಾಗುತ್ತ ಹೋಗುತ್ತಾನೆ. ಇದರಿಂದ ಸಾಮಾಜಿಕ ಅಂತರ ಹೆಚ್ಚುತ್ತ ಹೋಗುತ್ತದೆ ಮತ್ತು ಸಮುದಾಯದಲ್ಲಿದ್ದು ಒಂಟಿಯಾಗುತ್ತ ಹೋಗುತ್ತಾನೆ. ಆದರೆ, ಈ ವಾಸ್ತವ ಗೊತ್ತಾಗುವಷ್ಟರ ಹೊತ್ತಿಗೆ ತುಂಬ ತಡವಾಗಿರುತ್ತದೆ. ಸಂಬಂಧ ಮತ್ತು ಬಾಂಧವ್ಯಗಳು ಕೈತಪ್ಪಿರುತ್ತವೆ.

2. ಒನ್-ವೇ ಭಾವನಾತ್ಮಕ ಬಂಧ ವ್ಯಕ್ತಿಯಲ್ಲಿ ಒಂಟಿತನ, ಭಾವನಾತ್ಮಕ ಖಾಲಿತನ, ನಿರಾಸೆ ಮತ್ತು ಸಾಮಾಜಿಕ ಬದುಕಿನಲ್ಲಿ ಅಸಮತೋಲನವನ್ನು ಸೃಷ್ಟಿಸುತ್ತದೆ. ಪ್ಯಾರಾಸೋಶಿಯಲ್ ಸಂಬಂಧ ಆರಂಭದ ಕೆಲ ದಿನಗಳಲ್ಲಿ ಸಮಾಧಾನ ನೀಡಿದಂತೆ ಎನಿಸಿದರೂ, ದೀರ್ಘಾವಧಿಯಲ್ಲಿ ಇದು ಕೂಡ ಬೇಸರ ಮತ್ತು ಖಿನ್ನತೆಯನ್ನು ಉಂಟು ಮಾಡಬಲ್ಲದು.

3. ಪ್ಯಾರಾಸೋಶಿಯಲ್ ಸಂಬಂಧದ ಮೂಲಕ ಜೀವನದಲ್ಲಿನ ಕಠಿಣ ಪರಿಸ್ಥಿತಿಗಳಿಂದ ಬಚಾವಾಗುವ ಸುಲಭ ಮಾರ್ಗ ಕಂಡುಕೊಳ್ಳುತ್ತಾರೆ. ಇದರಿಂದ ನೈಜ ಜೀವನದಲ್ಲಿನ ಕ್ಲಿಷ್ಟ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಸನ್ನಿವೇಶಗಳನ್ನು ನಿರ್ವಹಿಸುವ ಕ್ಷಮತೆ ಕ್ಷಿಣಿಸುತ್ತದೆ. ಪರಿಣಾಮ, ಕ್ರಮೇಣ ವ್ಯಕ್ತಿಯ ಸೃಜನಶೀಲತೆ ಮತ್ತು ಕೆಲಸ ಮಾಡುವ ಸಾಮರ್ಥ್ಯ ಕುಂದುತ್ತದೆ.

4. ಸೆಲೆಬ್ರಿಟಿಗಳ ಬದುಕಿನೊಂದಿಗೆ ತಮ್ಮ ಬದುಕನ್ನು ಹೋಲಿಕೆ ಮಾಡುತ್ತ ಮಾಡುತ್ತ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಇದರಿಂದ ಆತ್ಮಸಮ್ಮಾನಕ್ಕೆ ಪೆಟ್ಟು ಬೀಳುತ್ತದೆ.

ಆಸಕ್ತಿದಾಯಕ ಸಂಗತಿಗಳು

  • ಶೇಕಡ 50ಕ್ಕೂ ಹೆಚ್ಚು ಜನರು ಸಾಮಾಜಿಕ ಮಾಧ್ಯಮ ಕಂಟೆಂಟ್​ನೊಂದಿಗೆ ಭಾವನಾತ್ಮಕ ಬಂಧ ಅನುಭವಿಸುತ್ತಾರೆ.
  • ಶೇಕಡ 36ರಷ್ಟು ಜನರು ಯುಟ್ಯೂಬರ್ ಅಥವಾ ಸೋಶಿಯಲ್ ಮೀಡಿಯಾ ನಿರೂಪಕರು ತಮಗೆ ‘ಆತ್ಮೀಯ/ಹತ್ತಿರದವರು’ ಎಂದುಕೊಳ್ಳುತ್ತಾರೆ.
  • ಶೇ.61ರಷ್ಟು ಹದಿಹರೆಯದವರು ತಮ್ಮ ನೆಚ್ಚಿನ ಸೆಲೆಬ್ರಿಟಿ ಹತ್ತಿರದ ಸಂಬಂಧಿಕರಂತೆ ಎನಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.

(ನ್ಯೂಯಾರ್ಕ್ ಪೋಸ್ಟ್ ನಡೆಸಿದ ಸಮೀಕ್ಷೆಯ ಮಾಹಿತಿ ಆಧರಿಸಿ)