ಭಾರತ ಚಿನ್ನ ಖರೀದಿ ಮಾಡದಿದ್ದರೆ ಏನು ಕಥೆ? 
ದೇಶ

1 ವರ್ಷ ಭಾರತೀಯರು ಚಿನ್ನ ಬೇಡವೆಂದ್ರೆ ಏನು ಕಥೆ? ಯಾವ ರಾಷ್ಟ್ರಗಳಿಗೆ ಹೆಚ್ಚು ನಷ್ಟ? ಇಲ್ಲಿದೆ ಕುತೂಹಲಕಾರಿ​ ವರದಿ

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನಂತೆ ಭಾರತೀಯರು ಚಿನ್ನ ಬೇಡವೆಂದ್ರೆ ಹೇಗೆ?
  • ಒಂದು ವರ್ಷ ಚಿನ್ನ ಖರೀದಿ ಕೈಬಿಟ್ಟರೆ ಯಾವ ರಾಷ್ಟ್ರಗಳಿಗೆ ಹೊಡೆತ?
  • ಇದರಿಂದ ಭಾರತದ ಆರ್ಥಿಕತೆಗೆ ಎಷ್ಟು ಬಲ?
ನವದೆಹಲಿ: ಇಸ್ರೇಲ್​ ಜೊತೆಗೂಡಿ ಇರಾನ್​ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿರುವ ವಿಶ್ವದ ದೊಡ್ಡಣ್ಣ, ಶಾಂತಿಯ ಒಪ್ಪಂದವನ್ನು ತಿರಸ್ಕರಿಸುವ ಮೂಲಕ ಸಮರವನ್ನು ಮುಂದುವರಿಸಿದ್ದಾರೆ. ಸದ್ಯ ಅಮೆರಿಕ ಅಧ್ಯಕ್ಷನ ಈ ನಡೆ ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಗೆ ಕಾರಣವಾಗಿದೆ. ಇದನ್ನು ಗಮನಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಗೆ ಒಂದು ವರ್ಷದ ಮಟ್ಟಿಗೆ ಅನಗತ್ಯವಾಗಿ ಚಿನ್ನವನ್ನು ಖರೀದಿ ಮಾಡಬೇಡಿ ಎಂದು ಕರೆ ನೀಡಿದ್ದಾರೆ.
ಇದು ಕೇವಲ ಒಂದು ಸಲಹೆಯಲ್ಲ, ಬದಲಿಗೆ ಭಾರತದ ಆರ್ಥಿಕತೆಯನ್ನು ಉಳಿಸುವ ಮೋದಿ ಅವರ ಬ್ರಹ್ಮಾಸ್ತ್ರ ಎಂಬುದು ಇತರೆ ರಾಷ್ಟ್ರಗಳಿಗೂ ಅದಾಗಲೇ ಗೊತ್ತಾಗಿದೆ. ಗೋಲ್ಡ್ ಖರೀದಿಯಿಂದ ಆದಷ್ಟು ದೂರವಿರಿ ಎಂದು ಹೇಳಿರುವ ಪ್ರಧಾನಿ, ಈ ವರ್ಷವಂತು ಚಿನ್ನದ ಕಡೆ ತಲೆಯೂ ಹಾಕಬೇಡಿ ಎನ್ನುವಂತೆ ಹೇಳಿರುವುದು ಸದ್ಯ ಚಿನ್ನ ಪ್ರಿಯರಿಗೆ ಕೊಂಚ ಬೇಸರ ಮೂಡಿಸಿದೆ. ಹಾಗಿದ್ದರೆ, ಭಾರತೀಯರು ಪ್ರಧಾನಿ ಅವರ ಮಾತಿನಿಂತೆ ಚಿನ್ನವನ್ನು ಬೇಡವೇ ಬೇಡ ಎಂದು ಸುಮ್ಮನಾದರೆ ಏನು ವ್ಯತ್ಯಾಸ? ಯಾವ ರಾಷ್ಟ್ರಗಳಿಗೆ ನಷ್ಟ? ಎಂಬುದರ ಕಂಪ್ಲೀಟ್​ ಚಿತ್ರಣ ಹೀಗಿದೆ ಗಮನಿಸಿ.

ಭಾರತಕ್ಕೆ ಚಿನ್ನದ ಅಗತ್ಯ ಎಷ್ಟಿದೆ?

ಭಾರತದಲ್ಲಿ ಚಿನ್ನ ಎಂದರೆ ಕೇವಲ ಒಂದು ಆಭರಣ ಮಾತ್ರವಲ್ಲ. ಅದೊಂದು ಸಂಪ್ರದಾಯ, ಹೂಡಿಕೆ ಮತ್ತು ಕಷ್ಟಕಾಲದಲ್ಲಿ ಕೈಹಿಡಿಯುವ ಆಪತ್ಬಾಂಧವ. ದೇಶವು ವರ್ಷಕ್ಕೆ ಸುಮಾರು 700ರಿಂದ 800 ಟನ್ ಚಿನ್ನವನ್ನು ಬಳಕೆ ಮಾಡುತ್ತದೆ. ವಿಶೇಷವೆಂದರೆ, ಬೇಡಿಕೆಯ ಶೇ.90ಕ್ಕಿಂತ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಭಾರತ ಪ್ರತಿವರ್ಷ ಕೋಟ್ಯಂತರ ಡಾಲರ್ ಹಣವನ್ನು ವಿದೇಶಕ್ಕೆ ಪಾವತಿಸುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಚಿನ್ನದ ಖರೀದಿ ನಿಂತರೆ ಆರ್ಥಿಕತೆ ಮೇಲಿನ ಪರಿಣಾಮಗಳೇನು?

ವಿದೇಶಿ ವಿನಿಮಯ ಮೀಸಲು ಉಳಿತಾಯ: ಭಾರತದ ವಾರ್ಷಿಕ ಚಿನ್ನದ ಆಮದು ಬಿಲ್ ಸರಿಸುಮಾರು 60 ಬಿಲಿಯನ್ ಡಾಲರ್. ತಜ್ಞರ ಪ್ರಕಾರ, ಗೋಲ್ಡ್ ಇಂಪೋರ್ಟ್​ ಶೇ.10ರಷ್ಟು ಕಡಿಮೆಯಾದರೆ, 5ರಿಂದ 6 ಬಿಲಿಯನ್ ಉಳಿತಾಯವಾಗಲಿದೆ. ಅದೇ ಶೇ.50ರಷ್ಟು ಇಳಿಕೆಯಾದರೆ, 30 ಬಿಲಿಯನ್ ಡಾಲರ್​ ವಿದೇಶಿ ವಿನಿಮಯ ಉಳಿಯಲಿದೆ. ಒಂದು ವೇಳೆ ಶೇ.75ರಷ್ಟು ಕಡಿತವಾದರೆ, ಭಾರತಕ್ಕೆ ಬರೋಬ್ಬರಿ 44 ಬಿಲಿಯನ್ ಡಾಲರ್​ ಉಳಿತಾಯವಾಗಲಿದೆ.

ರೂಪಾಯಿ ಮೌಲ್ಯ ಸೇಫ್​!

ಡಾಲರ್ ರೂಪದಲ್ಲಿ ವಿದೇಶಕ್ಕೆ ಹಣ ಹರಿಯುವುದು ಕಡಿಮೆಯಾದಾಗ, ರೂಪಾಯಿ ಮೌಲ್ಯದ ಮೇಲಿನ ಒತ್ತಡ ಕುಸಿಯುತ್ತದೆ. ಇದು ದೇಶದ ಚಾಲ್ತಿ ಖಾತೆ ಕೊರತೆಯನ್ನು (Current Account Deficit) ಸರಿದೂಗಿಸಲು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.

ಯಾವ ರಾಷ್ಟ್ರಗಳಿಗೆ ಆರ್ಥಿಕ ಹೊಡೆತ?

ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನ ಕೊಳ್ಳುವ ದೇಶ. ಹೀಗಿರುವಾಗ, ಖರೀದಿಯನ್ನು ಹಂತ ಹಂತವಾಗಿ ಕಡಿತಗೊಳಿಸಿದರೆ, ಸ್ವಿಟ್ಜರ್ಲೆಂಡ್ ಮತ್ತು ಯುಎಇ (ದುಬೈ) ದೇಶಗಳು ಭಾರೀ ನಷ್ಟ ಅನುಭವಿಸಲಿದೆ. ಈ ರಾಷ್ಟ್ರಗಳು ಭಾರತದ ಪ್ರಮುಖ ಚಿನ್ನದ ಪೂರೈಕೆದಾರರಾಗಿದ್ದು, ಅಲ್ಲಿನ ಸಂಸ್ಕರಣಾಗಾರಗಳು ನೇರವಾಗಿ ಸಂಕಷ್ಟಕ್ಕೆ ಸಿಲುಕುತ್ತವೆ. ಇದರೊಟ್ಟಿಗೆ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಕೂಡ ಭಾರತಕ್ಕೆ ಚಿನ್ನ ರಫ್ತು ಮಾಡುವ ಈ ದೇಶಗಳು ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).