- ಮೈಸೂರಿನಲ್ಲಿ ಮಹಿಳಾ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ
- ಭಾವಿ ಪತ್ನಿ ಸಾವಿಗೀಡಾದ ಬೆನ್ನಲ್ಲೇ ಯುವಕ ಕೂಡ ನೇಣಿಗೆ ಶರಣು
- ಸಾವಿಗೂ ಮುನ್ನ ವಿಡಿಯೋ ಕಾಲ್ನಲ್ಲಿ ಮಾತಾಡಿದ್ದ ಭಾವಿ ಜೋಡಿಗಳು
ಕಾಸರಗೋಡು: ಮೊನ್ನೆಯಷ್ಟೇ ವಿವಾಹ ನಿಶ್ಚಿತಾರ್ಥವಾಗಿದ್ದ ಜೋಡಿಯೊಂದು ವಿಡಿಯೋ ಕಾಲ್ ಎಂಡ್ ಆದ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಹಲವರನ್ನು ಭಾರಿ ಅಚ್ಚರಿಗೆ ದೂಡಿದೆ. ಕಣ್ಣೆದುರೇ ಭಾವಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ಯುವಕನೂ ಸಾವಿಗೆ ಶರಣಾದ ಘಟನೆಗೆ ಏನು ಕಾರಣ ಎಂಬುದು ಆರಂಭದಲ್ಲಿ ತಿಳಿದಿರಲಿಲ್ಲ. ಆದರೀಗ, ವಿಡಿಯೋ ಕಾಲ್ ವೇಳೆ ಏನಾಯಿತು ಎಂಬುದರ ಕುರಿತು ಕೆಲವು ಮಾಹಿತಿಗಳು ಲಭಿಸಿವೆ.
ಕಾಸರಗೋಡಿನ ಪೂಚಕ್ಕಾಡ್ ಕಿಯಕ್ಕೇಕರೆಯ ನಿವಾಸಿ ಪಿ.ಅನುಶ್ರೀ (25) ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಇವರ ಭಾವೀ ಪತಿ ಕಣ್ಣೂರು ಇರಿಟ್ಟಿಯ ವಿಲಮನದ ಅಂಬಲತಾಡ್ ನಿವಾಸಿ ಅಮಲ್ (27) ಕೂಡಾ ನೇಣಿಗೆ ಶರಣಾಗಿದ್ದಾರೆ. ಇವರು ಎರ್ನಾಕುಲಂನ ಹೋಟೆಲ್ ಕೊಠಡಿಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವರದಿಯಾಗಿದೆ.
ಈ ಕೃತ್ಯಕ್ಕೂ ಮೊದಲು ಇವರಿಬ್ಬರೂ ವಿಡಿಯೋ ಕರೆ ಮಾಡಿ ಮಾತನಾಡಿದ್ದರು. ಅದಾದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವುದು ಭಾರಿ ಗೊಂದಲ ಹುಟ್ಟುಹಾಕಿತು. ವೃತ್ತಿಯಲ್ಲಿ ಇವರಿಬ್ಬರೂ ಬ್ಯಾಂಕ್ ಉದ್ಯೋಗಿಗಳಾಗಿದ್ದು, ಮದುವೆಯನ್ನು ಡಿಸೆಂಬರ್ 26ರಂದು ನಡೆಸಲು ದಿನಾಂಕವನ್ನು ಕೂಡ ಫಿಕ್ಸ್ ಮಾಡಲಾಗಿತ್ತು. ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾದ ಕಾರಣ, ಭಾವಿ ಪತಿಯನ್ನು ಬೆದರಿಸಲು ಹೋಗಿ ಯುವತಿ ಅಕಸ್ಮಾತ್ತಾಗಿ ಜೀವ ಕಳೆದುಕೊಂಡಿದ್ದಾರೆ ಎಂದು ವಿವರಿಸಲಾಗಿದೆ.
ಅಷ್ಟಕ್ಕೂ ಏನಾಯಿತು?
ಮೃತ ಅನುಶ್ರೀ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಶಾಖೆಯಲ್ಲಿ ಉದ್ಯೋಗಿಯಾಗಿದ್ದರೆ, ಅಮಲ್ ಎರ್ನಾಕುಲಂನ ಎಂ.ಜಿ. ರಸ್ತೆ ಎಸ್‌ಬಿಐ ಶಾಖೆಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 11ರ ರಾತ್ರಿ ಇಬ್ಬರೂ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಯಾವುದೋ ವಿಚಾರಕ್ಕೆ ಸಣ್ಣದಾಗಿ ಜಗಳವಾಗಿದೆ. ಇದರಿಂದ ಕೋಪಗೊಂಡ ಅನುಶ್ರೀ, ಅಮಲ್ರನ್ನು ಹೆದರಿಸಲು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು ಎನ್ನಲಾಗಿದೆ.
ಭಾವಿ ಪತಿಗೆ ವಿಡಿಯೋ ಕಾಲ್ ಮಾಡಿದ್ದ ಅನುಶ್ರೀ, ಕಾಲ್‌ನಲ್ಲೇ ಸ್ಟೂಲ್ ಮೇಲೆ ನಿಂತು ಚೂಡಿದಾರ್ ಶಾಲನ್ನು ಫ್ಯಾನ್‌ಗೆ ಕಟ್ಟಿ ಕುತ್ತಿಗೆಗೆ ಸಿಕ್ಕಿಸಿಕೊಂಡಿದ್ದಾರೆ. ಆದರೆ, ದುರದೃಷ್ಟವಶಾತ್ ಸ್ಟೂಲ್ ಜಾರಿಬಿದ್ದ ಪರಿಣಾಮ ಶಾಲ್ ಬಿಗಿದುಕೊಂಡು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವಿವರಿಸಲಾಗಿದೆ. ಇದೇ ವೇಳೆ, ವಿಡಿಯೋ ಕಾಲ್‌ನಲ್ಲೇ ಈ ಭೀಕರ ದೃಶ್ಯವನ್ನು ಕಣ್ಣಾರೆ ಕಂಡ ಅಮಲ್ ತೀವ್ರ ಆಘಾತಕ್ಕೊಳಗಾಗಿ, ತಕ್ಷಣವೇ ಅನುಶ್ರೀ ತಂದೆಗೆ ವಿಷಯ ತಿಳಿಸಿದ್ದಾರೆ.
ಕುಟುಂಬಸ್ಥರು ಹುಣಸೂರಿಗೆ ಧಾವಿಸಿ ಬಂದು ನೋಡುವಷ್ಟರಲ್ಲಿ ಅನುಶ್ರೀ ಶವವಾಗಿ ಪತ್ತೆಯಾಗಿದ್ದಾರೆ. ಇತ್ತ ಪ್ರೀತಿಸಿದ ಹುಡುಗಿಯ ದುರಂತ ಅಂತ್ಯವನ್ನು ಕಣ್ಣಾರೆ ಕಂಡು ಅತೀವ ದುಃಖಕ್ಕೆ ಒಳಗಾದ ಅಮಲ್, ಎರ್ನಾಕುಲಂನ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ, ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).