ಗೊರಖ್‌ಪುರ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಕಠಿಣ ಆಡಳಿತ ಮತ್ತು ಶಿಸ್ತಿಗೆ ಹೆಸರಾದವರು. ಆದರೆ, ಇತ್ತೀಚೆಗೆ ಅವರ ಸೌಮ್ಯ ಹಾಗೂ ಪ್ರೀತಿಯ ಸ್ವಭಾವವನ್ನು ಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಜನರ ಮನಗೆದ್ದಿದೆ. ಗೊರಖ್‌ಪುರದ ಪ್ರಸಿದ್ಧ ಮಕರ ಸಂಕ್ರಾಂತಿಯ 'ಖಿಚಡಿ ಮೇಳೆ'ಯ ಸಂದರ್ಭದಲ್ಲಿ ಈ ಅಪರೂಪದ ಘಟನೆ ನಡೆದಿದೆ.
ನಡೆದಿದ್ದೇನು?
ಗೊರಖ್‌ನಾಥ್ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳ ನಡುವೆ, ಸಿಎಂ ಯೋಗಿ ಆದಿತ್ಯನಾಥ್ ಅವರು ಅಲ್ಲಿಗೆ ಬಂದಿದ್ದ ಸಾರ್ವಜನಿಕರೊಂದಿಗೆ ಸಂವಹನ ನಡೆಸುತ್ತಿದ್ದರು. ಈ ವೇಳೆ ಒಬ್ಬ ವ್ಯಕ್ತಿ ತನ್ನ ಪುಟ್ಟ ಮಗುವನ್ನು ಎತ್ತಿಕೊಂಡು ಮುಖ್ಯಮಂತ್ರಿಗಳ ಬಳಿ ಬಂದರು. ಮಗುವನ್ನು ಪ್ರೀತಿಯಿಂದ ಮಾತನಾಡಿಸಿದ ಯೋಗಿ ಆದಿತ್ಯನಾಥ್, ಬಾಲಕನ ಹತ್ತಿರ ಬಾಗಿ ಮುಗುಳ್ನಗುತ್ತಾ, "ನಿನಗೇನು ಬೇಕು ಮಗು? ಕೇಳು..." (ಔರ್ ಕ್ಯಾ ಚಾಹಿಯೇ ಬತಾವೋ?) ಎಂದು ಪ್ರಶ್ನಿಸಿದರು.
ನೆಟ್ಟಿಗರ ಮನಗೆದ್ದ ಬಾಲಕನ ಉತ್ತರ!
ಮುಖ್ಯಮಂತ್ರಿಗಳ ಪ್ರಶ್ನೆಗೆ ಕಿಂಚಿತ್ತೂ ಭಯಪಡದ ಆ ಪುಟ್ಟ ಬಾಲಕ, ಅತ್ಯಂತ ಮುಗ್ಧತೆಯಿಂದ ಅವರ ಕಿವಿಯ ಹತ್ತಿರ ಹೋಗಿ ಪಿಸುಗುಟ್ಟಿದ. ಆತ ಕೇಳಿದ್ದೇನು ಗೊತ್ತೇ? ಕೇವಲ "ಚಿಪ್ಸ್" (Chips)! ಬಾಲಕನ ಈ ಅನಿರೀಕ್ಷಿತ ಮತ್ತು ಮುಗ್ಧ ಬೇಡಿಕೆಯನ್ನು ಕೇಳಿದ ತಕ್ಷಣ ಯೋಗಿ ಆದಿತ್ಯನಾಥ್ ಅವರು ಮನಸಾರೆ ನಕ್ಕರು. ಅಲ್ಲಿ ನೆರೆದಿದ್ದ ಅಧಿಕಾರಿಗಳು ಮತ್ತು ಸಾರ್ವಜನಿಕರೂ ಸಹ ಬಾಲಕನ ಈ ಮುದ್ದಾದ ಉತ್ತರವನ್ನ ಕೇಳಿ ನಗು ಹಂಚಿಕೊಂಡರು. ಸಿಎಂ ಅವರು ಕೂಡಲೇ ಮಗುವಿಗೆ ಚಾಕೊಲೇಟ್ ಮತ್ತು ತಿಂಡಿಗಳನ್ನು ನೀಡಿ ಆಶೀರ್ವದಿಸಿದರು.
ಈ ಪುಟ್ಟ ಸಂಭಾಷಣೆಯ ವಿಡಿಯೋ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. "ಮಕ್ಕಳ ಮುಗ್ಧತೆಗೆ ಯಾವುದೇ ಅಧಿಕಾರ ಅಥವಾ ಅಂತಸ್ತಿನ ಹಂಗಿಲ್ಲ" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು "ಇದು ದಿನದ ಅತ್ಯಂತ ಸುಂದರ ವಿಡಿಯೋ" ಎಂದು ಒಬ್ಬರು ಬರೆದರೆ, ಮತ್ತೊಬ್ಬರು ''ಬಾಲಕನಿಗೆ ದೊಡ್ಡ ದೊಡ್ಡ ಬೇಡಿಕೆಗಳಿಗಿಂತ ಚಿಪ್ಸ್ ಪ್ಯಾಕೆಟ್ ಮುಖ್ಯವಾಯಿತು, ಇದೇ ನಿಜವಾದ ಮುಗ್ಧತೆ" ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).