ವಾಟ್ ಬ್ರೋ.. ಏನಿದು ಬ್ರೋ?: ಸಿಎಂ ವಿಜಯ್ ಕಾಲೆಳೆದ ಸಂಸದ ಎ. ರಾಜಾ! ಮಾಧ್ಯಮಗಳಿಗೆ ಹೆದರಿ ಓಡಿ ಬಂದ್ರಿ ಎಂದು ತೀವ್ರ ವಾಗ್ದಾಳಿ!
ಚೆನ್ನೈ: ತಮಿಳುನಾಡು ರಾಜಕೀಯ ರಂಗದಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಹಾಗೂ ಡಿಎಂಕೆ ನಾಯಕರ ನಡುವಿನ ಶೀತಲ ಸಮರ ಈಗ ಬೀದಿ ಜಗಳವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ತಿರುಚಿಯಲ್ಲಿ ನಡೆದ ಟಿವಿಕೆ ಪಕ್ಷದ ಬೃಹತ್ ಧನ್ಯವಾದ ಸಭೆಯಲ್ಲಿ ಡಿಎಂಕೆ ಸರ್ಕಾರ ಹಾಗೂ ಎಂ. ಕೆ. ಸ್ಟಾಲಿನ್ ವಿರುದ್ಧ ಸಿಎಂ ವಿಜಯ್ ನಡೆಸಿದ್ದ ವಾಗ್ದಾಳಿಗೆ ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಎ. ರಾಜಾ(A. Raja Mocks Cm Vijay) ಅತ್ಯಂತ ತೀಕ್ಷ್ಣ ಹಾಗೂ ವ್ಯಂಗ್ಯಭರಿತ ತಿರುಗೇಟು ನೀಡಿದ್ದಾರೆ. ಸಿಎಂ ವಿಜಯ್ ಅವರ ರಾಜಕೀಯ ಮುತ್ಸದ್ದಿತನವನ್ನು ಪ್ರಶ್ನಿಸಿರುವ ಎ. ರಾಜಾ, ಪ್ರತಿಯೊಂದು ವಾಕ್ಯದಲ್ಲೂ ಬ್ರೋ.. ಬ್ರೋ.. ಎಂದು ಲೇವಡಿ ಮಾಡುವ ಮೂಲಕ ಮುಖ್ಯಮಂತ್ರಿಯ ಕಾಲೆಳೆದಿದ್ದಾರೆ.
"ಏನಿದು ಬ್ರೋ ನಿಮ್ಮ ರಾಜಕಾರಣ?" - ವಿಜಯ್ ವಿರುದ್ಧ ಮುಗಿಬಿದ್ದ ಎ. ರಾಜಾ!
ಸಿಎಂ ವಿಜಯ್ ಅವರ ಇತ್ತೀಚಿನ ನಡೆ ಹಾಗೂ ಭಾಷಣಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಂಸದ ಎ. ರಾಜಾ ಮಾಧ್ಯಮಗಳ ಎದುರು ಹರಿಹಾಯ್ದಿದ್ದಾರೆ. ಅಲ್ಲ ಬ್ರೋ.. ಏನಿದು ಬ್ರೋ ನಡೀತಿರೋದು ಇಲ್ಲಿ ಎಂದಿದ್ದಾರೆ. ಯಾಕೆ ಬ್ರೋ ಹೀಗೆಲ್ಲಾ ಮಾಡ್ತಿದ್ದೀರಾ, ನಮ್ಮ ನಾಯಕ ಎಂ. ಕೆ. ಸ್ಟಾಲಿನ್ ಮತ್ತು ಡಿಎಂಕೆ ಹೆಸರನ್ನು ಜಪಿಸದಿದ್ದರೆ ನಿಮಗೆ ನಿದ್ದೆಯೇ ಬರುವುದಿಲ್ಲವೇ ಎಂದು ರಾಜಾ ಬಹಿರಂಗವಾಗಿ ಅಣಕಿಸಿದ್ದಾರೆ.
ತಮಿಳುನಾಡಿನಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ೬ ತಿಂಗಳು ಯಾವುದೇ ಟೀಕೆ ವ್ಯಕ್ತಪಡಿಸಬಾರದು, ಆಡಳಿತ ಸುಸೂತ್ರವಾಗಿ ನಡೆಯಲು ಅವಕಾಶ ನೀಡಬೇಕು ಎಂದು ನಮ್ಮ ನಾಯಕ ಎಂ. ಕೆ. ಸ್ಟಾಲಿನ್ ನಮಗೆ ಹಾಗೂ ನಮ್ಮ ಮೈತ್ರಿಕೂಟದ ಪಕ್ಷಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ನಾವು ರಾಜಕೀಯ ಶಿಷ್ಟಾಚಾರವನ್ನು ಕಾಯ್ದುಕೊಂಡು ಗೌರವ ನೀಡಿದ್ದೇವೆ. ಆದರೆ, ವಿಜಯ್ ನಮ್ಮ ವಿರುದ್ಧವೇ ಪಿತೂರಿಯ ಆರೋಪ ಮಾಡುತ್ತಿರುವುದು ಕೇವಲ ಹುಚ್ಚುತನದ ಪರಮಾವಧಿ ಎಂದು ರಾಜಾ ಆಕ್ರೋಶ ಹೊರಹಾಕಿದ್ದಾರೆ.
ದೆಹಲಿ ಭೇಟಿಯ ರಹಸ್ಯ ಕೆದಕಿದ ಸಂಸದ; ಮಾಧ್ಯಮಗಳಿಗೆ ಹೆದರಿದ್ರಾ ಮುಖ್ಯಮಂತ್ರಿ?
ಸಿಎಂ ವಿಜಯ್ ಅವರ ಇತ್ತೀಚಿನ ನವದೆಹಲಿ ಪ್ರವಾಸವನ್ನು ತೀವ್ರವಾಗಿ ಪ್ರಶ್ನಿಸಿರುವ ಎ. ರಾಜಾ, ಅದನ್ನೊಂದು ಸಂವಿಧಾನ ವಿರೋಧಿ ನಡೆ ಎಂದು ಕರೆದಿದ್ದಾರೆ. ನೀವು ದೆಹಲಿಗೆ ಹೋದಾಗ ಕೇವಲ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮಾತ್ರ ಏಕೆ ಭೇಟಿಯಾದ್ರಿ ಎಂದಿದ್ದಾರೆ. ದೇಶದ ಬೇರೆ ಯಾವುದೇ ಪ್ರಮುಖ ನಾಯಕರನ್ನು ಭೇಟಿಯಾಗುವ ಧೈರ್ಯ ನಿಮಗೇಕೆ ಇರಲಿಲ್ಲ, ಅದಕ್ಕಿಂತ ಮಿಗಿಲಾಗಿ, ದೇಶದ ಪ್ರಧಾನಿಯನ್ನು ಭೇಟಿಯಾದ ನಂತರ ಪ್ರೆಸ್ ಮೀಟ್ ನಡೆಸಿ ಜನರಿಗೆ ಮಾಹಿತಿ ನೀಡುವುದು ಮುಖ್ಯಮಂತ್ರಿಯ ಸಾಂವಿಧಾನಿಕ ಜವಾಬ್ದಾರಿ. ಆದರೆ ವಿಜಯ್ ದೆಹಲಿಯ ಮಾಧ್ಯಮಗಳಿಗೆ ಮುಖ ತೋರಿಸದೆ ಅಡಗಿ ಓಡಿ ಬಂದಿದ್ದೇಕೆ ಎಂದು ಸಾಲು ಸಾಲು ಪ್ರಶ್ನೆಗಳ ಬಾಣ ಬಿಟ್ಟಿದ್ದಾರೆ.
ವಿಧಾನಸಭೆಯಲ್ಲಿ ಹಾಗೂ ಸಚಿವಾಲಯದಲ್ಲಿ ವಿರೋಧ ಪಕ್ಷದ ನಾಯಕರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಂಪ್ಲೀಟ್ ಮೌನಕ್ಕೆ ಶರಣಾಗುವ ಸಿಎಂ ವಿಜಯ್, ಕೇವಲ ತಿರುಚಿಯ ಸಾರ್ವಜನಿಕ ವೇದಿಕೆಗಳಲ್ಲಿ ನಮ್ಮ ವಿರುದ್ಧ ಇಷ್ಟೊಂದು ಜೋರಾಗಿ ಕಿರುಚಾಡುವುದರ ಹಿಂದೆ ಯಾವ ರಹಸ್ಯ ಅಡಗಿದೆ ಎಂದು ರಾಜಾ ಲೇವಡಿ ಮಾಡಿದ್ದಾರೆ.
ಡಿಎಂಕೆ ಎಂದಿಗೂ ಅಸಂಸದೀಯ ಪದಗಳನ್ನು ಬಳಸುವುದಿಲ್ಲ ಮತ್ತು ಗೌರವ ನೀಡಿದರೆ ಮಾತ್ರ ಗೌರವ ವಾಪಸ್ ನೀಡುತ್ತದೆ ಎಂದು ಎಚ್ಚರಿಸಿರುವ ಎ. ರಾಜಾ ಅವರ ಈ ಹೇಳಿಕೆ, ಮುಂಬರುವ ದಿನಗಳಲ್ಲಿ ತಮಿಳುನಾಡಿನಾದ್ಯಂತ ಟಿವಿಕೆ ಹಾಗೂ ಡಿಎಂಕೆ ಕಾರ್ಯಕರ್ತರ ನಡುವೆ ಭೀಕರ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ,(ಏಜೆನ್ಸೀಸ್).