Arvind Kejriwal | ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ 
ದೇಶ

ಕೇಜ್ರಿವಾಲ್​ಗೆ 'ಕ್ಲೀನ್ ಚಿಟ್'...ಸಂಚಲನ ಸೃಷ್ಟಿಸಿದ ಅಣ್ಣಾ ಹಜಾರೆ ಸ್ಟೇಟ್‌ಮೆಂಟ್ | Arvind Kejriwal

ದೆಹಲಿ: ಬಹುಚರ್ಚಿತ ಮದ್ಯ ನೀತಿ ಪ್ರಕರಣದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ದೋಷಮುಕ್ತರಾಗಿರುವುದನ್ನು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಸ್ವಾಗತಿಸಿದ್ದು, ನ್ಯಾಯಾಂಗವೇ ಸರ್ವೋಚ್ಚವಾದ್ದರಿಂದ ಅದರ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂದಿದ್ದಾರೆ.
ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ತಮ್ಮ ಹುಟ್ಟೂರು ರಾಲೇಗನ್ ಸಿದ್ಧಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಣ್ಣಾ ಹಜಾರೆ, ವೈಯಕ್ತಿಕವಾಗಿ ಮತ್ತು ಪಕ್ಷದ ಬಗ್ಗೆ ಯೋಚಿಸದೆ, ಸಮಾಜ ಮತ್ತು ದೇಶಕ್ಕಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ವಿರುದ್ಧ ಈ ಹಿಂದೆ ಮಾಡಿದ್ದ ಟೀಕೆಗಳ ಕುರಿತು ಮಾತನಾಡಿದ ಅವರು, ಆ ಸಮಯದಲ್ಲಿ ನ್ಯಾಯಾಲಯ ಯಾವುದೇ ತೀರ್ಪು ನೀಡಿರಲಿಲ್ಲ ಎಂದು ಹೇಳಿದರು. ನ್ಯಾಯಾಂಗವು ನಮ್ಮ ದೇಶದ ಸರ್ವೋಚ್ಚ ವ್ಯವಸ್ಥೆಯಾಗಿದೆ. ಹಲವಾರು ರಾಜಕೀಯ ಪಕ್ಷಗಳು, ಜಾತಿಗಳು, ಪಂಥಗಳು ಮತ್ತು ಧರ್ಮಗಳನ್ನು ಒಳಗೊಂಡಿರುವ ದೊಡ್ಡ ದೇಶ, ಮತ್ತು ನ್ಯಾಯಾಂಗ ವ್ಯವಸ್ಥೆಯಿಂದಾಗಿ ಅದು ಇನ್ನೂ ಸರಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಭಾಗಿಯಾಗಿರುವ ಬಗ್ಗೆ ನಾನು ಹೇಳಿದ್ದೆಲ್ಲವೂ ನ್ಯಾಯಾಂಗದ ಆದೇಶ ಬರುವ ಮೊದಲೇ ಆಗಿತ್ತು. ಆ ಸಮಯದಲ್ಲಿ, ಆರೋಪಗಳು ಗಾಳಿಯಲ್ಲಿದ್ದವು. ಈಗ ನ್ಯಾಯಾಂಗವು ಅವರ ಪಾತ್ರವಿಲ್ಲ ಎಂದು ತೀರ್ಪು ನೀಡಿದೆ. ನಾವು ಅದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು. ಹಜಾರೆ, ಕೇಜ್ರಿವಾಲ್ ಮತ್ತು ಸಿಸೋಡಿಯಾ 2011 ರಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧದ ಚಳವಳಿಯ ಪ್ರಮುಖ ಮುಖಗಳಾಗಿ ಹೊರಹೊಮ್ಮಿದ್ದರು, ಇದು ಜನ ಲೋಕಪಾಲ್ ಮಸೂದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿತು. ಆ ಸಮಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಅಧಿಕಾರದಲ್ಲಿತ್ತು.
ಇದಾದ ಕೆಲ ದಿನಗಳಲ್ಲೇ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ (ಎಎಪಿ) ಸ್ಥಾಪಿಸಿ ದೆಹಲಿ ಚುನಾವಣೆಯಲ್ಲಿ ಜಯಗಳಿಸಿದರು. ಭ್ರಷ್ಟಾಚಾರ ವಿರುದ್ಧದ ಚಳುವಳಿ ರಾಜಕೀಯ ತಿರುವು ಪಡೆದ ಬಳಿಕ ಹಜಾರೆ ಅವರೆಲ್ಲರಿಂದ ದೂರ ಸರಿದರು.

ಕೇಜ್ರಿವಾಲ್​ರನ್ನು ಟೀಕಿಸಿದ್ದ ಅಣ್ಣಾ

2024 ರ ಮಾರ್ಚನಲ್ಲಿ ಕೇಜ್ರಿವಾಲ್ ಬಂಧನಕ್ಕೊಳಗಾದ ಬಳಿಕ ಅಣ್ಣಾ ಹಜಾರೆ ಮಾಜಿ ಸಿಎಂರನ್ನು ಟೀಕಿಸಿ, ಜನಲೋಕಪಾಲ್ ಚಳವಳಿಯ ಭಾಗವಾಗಿದ್ದವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂಬುದು ವಿಪರ್ಯಾಸ ಎಂದು ಹೇಳಿದ್ದರು. ಕೇಜ್ರಿವಾಲ್ ಕೋಟ್ಯಂತರ ದೇಶವಾಸಿಗಳ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದ್ದ ಹಜಾರೆ, ಅವರ ರಾಜಕೀಯ ಮಹತ್ವಾಕಾಂಕ್ಷೆಗಳು 2011 ರ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ನಾಶಪಡಿಸಿದವು ಎಂದು ಬೇಸರ ವ್ಯಕ್ತಪಡಿಸಿದ್ದರು(ಏಜೆನ್ಸೀಸ್​​).