WestBengal Elections 2026  
ದೇಶ

WestBengal Elections 2026: ಆರ್‌.ಜಿ ಕರ್ ಸಂತ್ರಸ್ತೆಯ ತಾಯಿಗೆ 5067 ಮತಗಳ ಮುನ್ನಡೆ!

ಕೋಲ್ಕತ್ತಾ: ಇಡೀ ದೇಶದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದ(WestBengal Elections 2026) ಪಾಣಿಹಟಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದಲ್ಲಿ ಭಾರಿ ಸಂಚಲನ ಉಂಟಾಗಿದೆ. ಆರ್‌.ಜಿ ಕರ್ ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತ ವೈದ್ಯೆಯ ತಾಯಿ, ಬಿಜೆಪಿ ಅಭ್ಯರ್ಥಿ ರತ್ನಾ ದೆಬ್‌ನಾಥ್ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ವಿರುದ್ಧ 5067 ಮತಗಳ ಭರ್ಜರಿ ಮುನ್ನಡೆ ಸಾಧಿಸುವ ಮೂಲಕ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟುಮಾಡಿದ್ದಾರೆ.
ಪಾಣಿಹಟಿಯಲ್ಲಿ ಐದು ಬಾರಿ ಶಾಸಕರಾಗಿದ್ದವರ ಪುತ್ರ ಟಿಎಂಸಿಯ ತೀರ್ಥಂಕರ್ ಘೋಷ್ ವಿರುದ್ಧ ರತ್ನಾ ದೆಬ್‌ನಾಥ್ ಅವರು ಜಯದತ್ತ ಮುನ್ನುಗ್ಗುತ್ತಿದ್ದಾರೆ. ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ನಡೆದಿದ್ದ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ.

ಮಗಳ ನ್ಯಾಯಕ್ಕಾಗಿ ಚುನಾವಣಾ ಸಮರ

2024 ರಲ್ಲಿ ಆರ್‌.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಭೀಕರ ಘಟನೆಯಲ್ಲಿ ಮಗಳನ್ನು ಕಳೆದುಕೊಂಡ ರತ್ನಾ ಅವರು, ಮಹಿಳೆಯರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ಕುಸಿತವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಚುನಾವಣಾ ಕಣಕ್ಕಿಳಿದಿದ್ದರು. "ನನ್ನ ಮಗಳ ಸಾವಿಗೆ ಮಮತಾ ಬ್ಯಾನರ್ಜಿ ಮತ್ತು ಅವರ ಭ್ರಷ್ಟ ಪಕ್ಷದ ನಾಯಕರೇ ಕಾರಣ. ಜನತೆ ನನಗೆ ಅದ್ಭುತ ಬೆಂಬಲ ನೀಡುತ್ತಿದ್ದಾರೆ. ನಾನು ವೈದ್ಯೆಯಲ್ಲದಿದ್ದರೂ, ಜನಪ್ರತಿನಿಧಿಯಾಗಿ ನನ್ನ ಮಗಳ ಸೇವೆಯ ಉದ್ದೇಶವನ್ನು ಮುಂದುವರಿಸುತ್ತೇನೆ," ಎಂದು ರತ್ನಾ ದೆಬ್‌ನಾಥ್ ಭಾವೋದ್ವೇಗದಿಂದ ನುಡಿದರು.

ಪ್ರತಿಜ್ಞೆ ಮಾಡಿದ ತಾಯಿ

ಚುನಾವಣಾ ನಾಮಪತ್ರ ಸಲ್ಲಿಕೆಗೂ ಮುನ್ನ ರತ್ನಾ ಅವರು, "ನನ್ನ ಮಗಳಿಗೆ ನ್ಯಾಯ ಸಿಗುವವರೆಗೂ ನಾನು ತಲೆ ಬಾಚುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದ್ದರು. ಇವರ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ರತ್ನಾ ಅವರನ್ನು ಮಹಿಳಾ ಚೈತನ್ಯದ ಸಂಕೇತ ಎಂದು ಬಣ್ಣಿಸಿದ್ದರು. ಅಲ್ಲದೆ, ಟಿಎಂಸಿ ಗುಂಡಾಗಳು ಸಂತ್ರಸ್ತೆಯ ತಾಯಿಯನ್ನು ಅವಮಾನಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದರು.

ಟಿಎಂಸಿ ಸಮರ್ಥನೆ

ಇನ್ನೊಂದೆಡೆ, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಟಿಎಂಸಿ ಸಂಸದೆ ಡೋಲಾ ಸೇನ್ ಅವರು ತಳ್ಳಿಹಾಕಿದ್ದಾರೆ. "ಆರ್‌.ಜಿ ಕರ್ ಘಟನೆ ದುರದೃಷ್ಟಕರ, ಆದರೆ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಕರಣವನ್ನು ಅತ್ಯಂತ ಪಾರದರ್ಶಕವಾಗಿ ನಿಭಾಯಿಸಿದ್ದಾರೆ. ಬೇರೆ ಯಾವುದೇ 'ಡಬಲ್ ಇಂಜಿನ್' ಸರ್ಕಾರಗಳು ಇಷ್ಟು ವೇಗವಾಗಿ ಕ್ರಮ ಕೈಗೊಂಡಿಲ್ಲ. ಕೋಲ್ಕತ್ತಾ ಇಂದಿಗೂ ಸುರಕ್ಷಿತ ನಗರ," ಎಂದು ಅವರು ಹೇಳಿದ್ದಾರೆ.
ಆದರೆ, ಪ್ರಸ್ತುತ ಮತ ಎಣಿಕೆಯ ಟ್ರೆಂಡ್ ನೋಡಿದರೆ ಮತದಾರರು ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ಮಮತಾ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ,(ಏಜೆನ್ಸೀಸ್​).