ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ-2026(West Bengal elections) ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, ಇದೇ ವೇಳೆ ಕುಮಾರ್ಗಂಜ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಭೇಂದು ಸರ್ಕಾರ್ ಅವರನ್ನು ಹೊಲಗಳಲ್ಲಿ ಟಿಎಂಸಿ ಕಾರ್ಯಕರ್ತರು ಅಟ್ಟಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುಮಾರ್ ಗಂಜ್ ಕ್ಷೇತ್ರದ 8-10 ಮತಗಟ್ಟೆಗಳ ಬೂತ್ ಏಜೆಂಟ್ಗಳ ತೆಗೆದು ಹಾಕಿದ್ದರಿಂದ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಸರ್ಕಾರ್ ಸ್ಥಳಕ್ಕೆ ಭೇಟಿ ನೀಡಿದಾಗ ವಾತಾವರಣ ಮತ್ತಷ್ಟು ಉದ್ವಿಗ್ನತೆಗೆ ಹೋಗಿ ಗಲಾಟೆಗೆ ಕಾರಣವಾಗಿದೆ.
ಅಭ್ಯರ್ಥಿ ಸುಭೇಂದು ಸರ್ಕಾರ ತಮ್ಮ ಕುಮಾರ್ಗಂಜ್ ಕ್ಷೇತ್ರದ ಮತಗಟ್ಟೆಗೆ ತೆರಳುತ್ತಿದ್ದಾಗ ತೃಣಮೂಲ ಕಾಂಗ್ರೆಸ್ ಕಾರ್ಯರ್ತರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಓರ್ವ ಪೊಲೀಸ್ ಅಧಿಕಾರಿಯೊಂದಿಗೆ ಸರ್ಕಾರ್ ಹೊಲದಲ್ಲಿ ಓಡುತ್ತಿದ್ದು, ಅವರನ್ನು ಕೆಲವರು ಬೆನ್ನಟ್ಟಿ ಹಲ್ಲೆ ಮಾಡ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಕುರಿತು ಸ್ವತಃ ಮಾತನಾಡಿರುವ ಸುಭೇಂದು ಸರ್ಕಾರ್, ಕುಮಾರಗಂಜ್ ಕ್ಷೇತ್ರದಲ್ಲಿ 8-10 ಮತಗಟ್ಟೆಗಳಲ್ಲಿ ನಮ್ಮ ಮತಗಟ್ಟೆ ಏಜೆಂಟ್‌ಗಳನ್ನು ಬಲವಂತವಾಗಿ ತೆಗೆದು ಹಾಕಿದ್ದಾರೆ. ನಾನು ಸ್ಥಳಕ್ಕೆ ಭೇಟಿ ನೀಡಿ, ಅವರನ್ನು ಮತ್ತೆ ಬೂತ್ಗೆ ಕಳುಹಿಸಿದ್ದೆ. ಬಳಿಕ ಮತಗಟ್ಟೆ24ರಲ್ಲಿ ಪರಿಶೀಲಿಸಲು ತೆರಳಿದಾಗ ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿ ಚುನಾವಣೆಯಲ್ಲಿ ಸೋತಿದ್ದಾರೆ, ಮತ್ತು ತೃಣಮೂಲ ಕಾಂಗ್ರೆಸ್ ಈ ಪ್ರದೇಶದ ನಾಲ್ಕು ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ. ಸಂಪೂರ್ಣ ಹತಾಶೆ ಮತ್ತು ಭಯದಿಂದ ಅವರು ನಮ್ಮ ಮೇಲೆ ದಾಳಿ ನಡೆಸಿದ್ದಾರೆ. ನನಗೆ ಗಂಭೀರ ಗಾಯಗಳಾಗಿದ್ದು, ನನ್ನ ಕಾರನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಚುನಾವಣೆ ಆಯೋಗವು, ಘಟನೆ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದೆ. ವೀಡಿಯೊ ದೃಶ್ಯಾವಳಿಗಳ ಮೂಲಕ ಗುರುತಿಸಲ್ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹೇಳಿದೆ (ಏಜೆನ್ಸೀಸ್).