ಅಮಿತ್ ಶಾ ಮತ್ತು ಸಿಎಂ ಮಮತಾ ಬ್ಯಾನರ್ಜಿ 
ದೇಶ

ಪಶ್ಚಿಮ ಬಂಗಾಳ ಚುನಾವಣೆ: ಅಮಿತ್ ಶಾ ಚಾರ್ಜ್​ಶೀಟ್​ಗೆ ಟಿಎಂಸಿ ಕೌಂಟರ್; ಮಣಿಪುರ ಹಿಂಸಾಚಾರ, ದೇಶದ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ| TMC

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ 15 ವರ್ಷಗಳ ಟಿಎಂಸಿ ಸರ್ಕಾರದ ವಿರುದ್ಧ ಶನಿವಾರ(ಮಾ. 28) ಕೇಂದ್ರ ಗೃಹಸಚಿವ ಅಮಿತ್ ಶಾ ಬಿಡುಗಡೆ ಮಾಡಿದ ಚಾರ್ಜ್​ಶೀಟ್​ಗೆ ಪ್ರತಿಯಾಗಿ ಟಿಎಂಸಿ(TMC), ಮಣಿಪುರದಲ್ಲಿನ ದೀರ್ಘಕಾಲದ ಹಿಂಸಾಚಾರ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳಾ ಸುರಕ್ಷತೆ ಮತ್ತು ಅಕ್ರಮ ವಲಸೆಯ ಪ್ರಶ್ನೆಯನ್ನು ಎತ್ತಿ ಕೌಂಟರ್ ನೀಡಿದೆ.
ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಈ ಬಾರಿ ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಪಣತೊಟ್ಟಿರುವ ಅಮಿತ್ ಶಾ, ಟಿಎಂಸಿ ಸರ್ಕಾರದ ವಿರುದ್ಧ ರಾಜಕೀಯ ಚಾರ್ಜ್‌ಶೀಟ್ ಬಿಡುಗಡೆ ಮಾಡಿ, ಈ ಚುನಾವಣೆಯನ್ನು ಬಂಗಾಳಕ್ಕಾಗಿ ಮಾತ್ರವಲ್ಲದೆ ದೇಶದ ಭದ್ರತೆಗಾಗಿ ನಡೆಯುವ ಯುದ್ಧವೆಂದು ಘೋಷಣೆ ಮಾಡಿದ್ದರು. ತುಷ್ಟೀಕರಣ ರಾಜಕೀಯ, ಭ್ರಷ್ಟಾಚಾರ ಹಾಗೂ ರಾಜಕೀಯ ಹಿಂಸಾಚಾರದಿಂದಾಗಿ ರಾಜ್ಯವು ದೇಶದ ಒಳನುಸುಳುವಿಕೆಗೆ ಪ್ರಮುಖ ಕಾರಿಡಾರ್ ಆಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ್ದರು.
ಅಮಿತ್ ಶಾ ಸುದ್ದಿಗೋಷ್ಠಿಗೆ ಪ್ರತಿಯಾಗಿ ಹಿರಿಯ ಟಿಎಂಸಿ ನಾಯಕರಾದ ಮಹುವಾ ಮೊಯಿತ್ರಾ, ಬ್ರಾತ್ಯ ಬಸು ಹಾಗೂ ಕೀರ್ತಿ ಆಜಾದ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಮಹಿಳಾ ಸುರಕ್ಷತೆಯ ಕುರಿತು ಟಿಎಂಸಿ ಸರ್ಕಾರದ ವಿರುದ್ಧ ಅಮಿತ್ ಶಾ ಮಾಡಿದ್ದ ಆರೋಪಗಳು ಮತ್ತು ಟೀಕಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಮಹುವಾ ಮೊಯಿತ್ರಾ

ಸಂಸದೆ ಮಹುವಾ ಮೊಯಿತ್ರಾ ಮಾತನಾಡಿ ಅಮಿತ್ ಶಾ ಅವರನ್ನು ವಿದೂಷಕ ಎಂದು ಬಣ್ಣಿಸಿದ ಅವರು, ಒಬ್ಬ ವಿದೂಷಕ ಸಿಂಹಾಸನದ ಮೇಲೆ ಕುಳಿತಾಗ, ಅವನು ರಾಜನಾಗುವುದಿಲ್ಲ, ಆದರೆ ಅದು ಸರ್ಕಸ್ ಆಗುತ್ತದೆ. ಕೇಂದ್ರ ಸಂಸ್ಥೆಗಳು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿರುವಾಗ ಅವರು ಕ್ಯಾಮೆರಾಗಳ ಮುಂದೆ ನಿಂತು ಆರೋಪಪಟ್ಟಿ ಸಲ್ಲಿಸಿರುವುದಾಗಿ ಘೋಷಿಸುತ್ತಿರುವುದು ವಿಷಾದಕರ ಎಂದಿ ಅಪಹಾಸ್ಯ ಮಾಡಿದ್ದಾರೆ.
ಅಮಿತ್ ಶಾ ಮಹಿಳಾ ಭದ್ರತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಹಿಳಾ ಸುರಕ್ಷತೆಯ ಸ್ಥಿತಿ ಹೇಗಿದೆ? ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ರಕ್ತಸಿಕ್ತವಾಗಿರುವ ಮಣಿಪುರದಲ್ಲಿನ ಹಿಂಸಾಚಾರದ ಬಗ್ಗೆ ಶಾ ಮೊದಲು ಉತ್ತರಿಸಬೇಕು ಎಂದು ಕಿಡಿಕಾರಿದ್ದಾರೆ.

ಬ್ರಾತ್ಯ ಬಸು 

ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬ್ರಾತ್ಯ ಬಸು ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಆಳ್ವಿಕೆ ನಡೆಸುತ್ತಿದೆ. ಅದು 15 ರಾಜ್ಯಗಳನ್ನು ಮತ್ತು ಹೆಚ್ಚಿನ ಗಡಿ ರಾಜ್ಯಗಳನ್ನು ಆಳುತ್ತದೆ, ಅವುಗಳ ಮೂಲಕ ಒಳನುಸುಳುವಿಕೆ ನಡೆಯುತ್ತಿದೆ. ಅಮಿತ್ ಶಾ ಸ್ವತಃ ಕೇಂದ್ರ ಗೃಹ ಸಚಿವರಾಗಿದ್ದಾರೆ. ಹಾಗಾದರೆ ಅವರು ನಿಖರವಾಗಿ ಏನು ಕಾಯುತ್ತಿದ್ದರು? ಅಕ್ರಮ ವಲಸಿಗರನ್ನು ಗುರುತಿಸಿ ಗಡೀಪಾರು ಮಾಡುವಲ್ಲಿ ಕೇಂದ್ರ ಗೃಹ ಸಚಿವಾಲಯ ಯಾಕೆ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಗಾಳದಲ್ಲಿ ವಿಭಜನೆಯನ್ನು ಸೃಷ್ಟಿಸಲು ಬಿಜೆಪಿ ಒಳನುಸುಳುವಿಕೆಯ ವಿಷಯವನ್ನು ಬಳಸುತ್ತಿದೆ ಎಂದು ಆರೋಪಿಸಿರುವ ಅವರು, ಬಂಗಾಳಿ ಮತ್ತು ಬಾಂಗ್ಲಾದೇಶಿಗಳ ನಡುವಿನ ರೇಖೆಯನ್ನು ಮಸುಕುಗೊಳಿಸಲು ಬಿಜೆಪಿ ಬಯಸುತ್ತದೆ, ಇದರಿಂದಾಗಿ ಅವರು ತಮ್ಮ ದ್ವೇಷಪೂರಿತ ಅಸ್ಸಾಂ ಶೈಲಿಯ ಬಂಧನ ಶಿಬಿರ ಮಾದರಿಯನ್ನು ಬಂಗಾಳಕ್ಕೆ ಆಮದು ಮಾಡಿಕೊಳ್ಳಬಹುದು ಎಂದು ಆರೋಪಿಸಿದ್ದಾರೆ.

ಕೀರ್ತಿ ಅಜಾದ್

ಸಂಸದ ಕೀರ್ತಿ ಅಜಾದ್ ಮಾತನಾಡಿ, ಬಿಜೆಪಿ ಸರ್ಕಾರವು ರಾಜ್ಯದ 1 ಲಕ್ಷ ಕೋಟಿ ರೂ. ಬಾಕಿ ಹಣವನ್ನು ತಡೆಹಿಡಿದಿದೆ. ಮತ್ತು ಎಲ್ಲಾ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಹಣವನ್ನು ತಡೆಹಿಡಿದಿದೆ. ಆದರೆ ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಸ್ಥಾನಕ್ಕೆ ಈ ರೀತಿ ಮಾಡಿಲ್ಲ ಎಂದ ಅವರು, ಇತಿಹಾಸದಲ್ಲಿ ತಮ್ಮ ವಿರುದ್ಧ ಪ್ರಕರಣಗಳನ್ನು ಹೊಂದಿರುವ ಏಕೈಕ ಕೇಂದ್ರ ಗೃಹ ಸಚಿವರು ಶಾ ಎಂದು ಹೇಳಿದ್ದಾರೆ (ಏಜೆನ್ಸೀಸ್).