ಸಿಎಂ ಮಮತಾ ಬ್ಯಾನರ್ಜಿ 
ದೇಶ

ಪಶ್ಚಿಮ ಬಂಗಾಳ ಚುನಾವಣೆ; ಭಯೋತ್ಪಾದನೆ ಕೆಲಸ ಮಾಡ್ತಿದ್ದಾರೆ; ಚುನಾವಣಾಧಿಕಾರಿಗಳ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಕಿಡಿ | CM Mamata Banerjee

ಕೋಲ್ಕತ್ತಾ: ಇಂದು(ಏ. 29) ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಕೊನೆಯ ಹಂತದ ಮತದಾನ ನಡೆಯುತ್ತಿದ್ದು, ಚುನಾವಣಾ ಅಧಿಕಾರಿಗಳು ಮತ್ತು ವೀಕ್ಷಕರ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಮಮತಾ ಬ್ಯಾನರ್ಜಿ, ಅವರು ಜನರನ್ನು ಎದುರಿಸುವ ಭಯೋತ್ಪಾದನೆಯ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೋಲ್ಕತ್ತಾದ ಭವಾನಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹೊರಗಿನಿಂದ ತುಂಬಾ ವೀಕ್ಷಕರು ಬಂದಿದ್ದಾರೆ. ಬಿಜೆಪಿ ಏನು ಹೇಳುತ್ತದೋ ಅದನ್ನು ಅವರು ಮಾಡುತ್ತಿದ್ದಾರೆ. ಸುತ್ತಲೂ ನೋಡಿ, ನಮ್ಮ ಎಲ್ಲಾ ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ. ಮತದಾನ ಹೀಗೆ ನಡೆಯುತ್ತದೆಯೇ? ಮತ ಚಲಾಯಿಸುವವರು ಮತದಾರರು, ಪೊಲೀಸರು ಅಥವಾ ಭದ್ರತಾ ಪಡೆಗಳಲ್ಲ. ಹೊರಗಿನಿಂದ ಜನರನ್ನು ಕರೆ ತರಲಾಗಿದ್ದು, ಅವರು ತಮಗೆ ತಿಳಿದಿದ್ದನ್ನು ಮಾಡ್ತಿದ್ದು, ಭಯೋತ್ಪಾದನೆ ಕೆಲಸ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಕಾರ್ಯಕರ್ತನ ಮೇಲಿನ ಹಲ್ಲೆಯನ್ನು ಖಂಡಿಸಿದ ಅವರು, ನಮ್ಮ ಕಾರ್ಯಕರ್ತನನ್ನು ರಾತ್ರಿಯಲ್ಲಿ ಹೇಗೆ ಥಳಿಸಲಾಗಿದೆ ಎಂಬುದನ್ನು ನೋಡಿ. ಎಂತಹ ಗೂಂಡಾಗಿರಿ ನಡೆಯುತ್ತಿದೆ? ಮತದಾನ ಈ ರೀತಿ ನಡೆಯುವುದಿಲ್ಲ. ಮತದಾನ ಶಾಂತಿಯುತವಾಗಿ ನಡೆಯುತ್ತದೆ. ಇದು ಪ್ರಜಾಪ್ರಭುತ್ವದ ಹಬ್ಬ. ಆದರೆ ಬಿಜೆಪಿಯವರು ಅದನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಚುನಾವಣೆಯಲ್ಲಿ ಬಲವಂತವಾಗಿ ರಿಗ್ಗಿಂಗ್ ಮಾಡಲು ಬಯಸಿದ್ದಾರೆ. ನಮ್ಮ ಕಾರ್ಯಕರ್ತರು ಮತ್ತು ಜನರು ಸಾಯಲು ಸಿದ್ಧರಿದ್ದಾರೆ, ಆದರೆ ಅವರು ಸ್ಥಳದಿಂದ ಹೊರಹೋಗುವುದಿಲ್ಲ ಎಂದಿದ್ದಾರೆ.
ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮಾತನಾಡಿ, ಬಂಗಾಳದ ಚುನಾವಣೆಯಲ್ಲಿ ಐಎನ್ಎಸ್ ಯುದ್ಧನೌಕೆಗಳು ಮತ್ತು ರಫೇಲ್ ಅನ್ನು ಮಾತ್ರ ಇನ್ನೂ ನಿಯೋಜಿಸಲಾಗಿಲ್ಲ. ಅದನ್ನೂ ಕೂಡ ನಿಯೋಜಿಸಿ. ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಿರುದ್ಧ ಮಾಡಬೇಕಾದ ಕೆಲಸವನ್ನು ನೀವು ಬಂಗಾಳದ ಜನರ ವಿರುದ್ಧ ಮಾಡುತ್ತಿದ್ದೀರಿ ಮತ್ತು ನಮ್ಮನ್ನು ಬಾಂಗ್ಲಾದೇಶಿಗಳು ಎಂದು ಕರೆಯುತ್ತಿದ್ದೀರಿ. ಈ ನಿಮ್ಮ ಎಲ್ಲಾ ಆಟವನ್ನು ಬಂಗಾಳಿಗಳು ನೋಡುತ್ತಿದ್ದಾರೆ. ಅವರು ಸರಿಯಾದ ಉತ್ತರ ಕೊಡ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಯ ಕೊನೆಯ ಹಂತದ ಮತದಾನ ನಡೆಯುತ್ತಿದ್ದು, ರಾಜಧಾನಿ ಕೋಲ್ಕತ್ತಾದ 11 ಸ್ಥಾನಗಳು ಸೇರಿ ಒಟ್ಟು 142 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ 1,448 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಿಗ್ಗೆ 7ಗಂಟೆಗೆ ಮತದಾನ ಪ್ರಾರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.
ಕಳೆದ ಏ. 23ರಂದು ಮೊದಲ ಹಂತದಲ್ಲಿ 152 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು,ಶೇ. 92ರಷ್ಟು ಮತದಾನವಾಗಿತ್ತು. ಮೇ 04ರಂದು ಪಶ್ಚಿಮ ಬಂಗಾಳ ಸೇರಿ ಪಂಚರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ (ಏಜೆನ್ಸೀಸ್).