ಸಂಸದೆ ಮಹುವಾ ಮೊಯಿತ್ರಾ ಮತ್ತು ಅಮಿತ್ ಶಾ 
ದೇಶ

ಪಶ್ಚಿಮ ಬಂಗಾಳ ಚುನಾವಣೆ; ‘ಏ ದೀದಿ’ ಎಂದ ಅಮಿತ್ ಶಾ: ಒನ್ಸ್​ ಎ ಗೂಂಡಾ, ಆಲ್​ವೇಸ್ ಗೂಂಡಾ ಎಂದು ಅಮಿತ್ ಶಾ ವಿರುದ್ಧ ಟಿಎಂಸಿ ಕಿಡಿ | TMC

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚುನಾವಣೆಯ ಮೊದಲ ಹಂತದ ಮತದಾನದ 48 ಗಂಟೆ ಮೊದಲು ಮಂಗಳವಾರ(ಏ. 21) ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಏ ದೀದಿ ಎಂದು ಸಂಬೋಧಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ತಿರುಗೇಟು ನೀಡಿರುವ ಟಿಎಂಸಿ(TMC), ಒನ್ಸ್​ ಎ ಗೂಂಡಾ, ಆಲ್​ವೇಸ್ ಗೂಂಡಾ ಎಂದು ವಾಗ್ದಾಳಿ ನಡೆಸಿದೆ.
ಈ ಕುರಿತು ಎಕ್ಸ್​ನಲ್ಲಿ ವಿಡಿಯೋ ಮೂಲಕ ಮಾತನಾಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಇಂದು ಬಂಗಾಳದ ಎಲ್ಲಾ ನಮ್ಮ ಸಹೋದರಿಯರು ಮತ್ತು ತಾಯಂದಿರು ಅಮಿತ್ ಶಾ ಅವರು ಮಾತನಾಡಿದ್ದನ್ನು ನೋಡಿದ್ದಾರೆ. 2021ರಲ್ಲಿ ಪ್ರಧಾನಿ ಮೋದಿಯವರು ದೀದಿ ಓ ದೀದಿ ಹೇಳಿದ್ದರ ಪರಿಣಾಮ ಏನಾಗಿತ್ತು ತಿಳಿದಿದೆ.
ಇಂದು ಅವರು ಏ ದೀದಿ, ಕಿವಿ ತೆರೆದು ಕೇಳು ಎಂದು ಬೆದರಿಕೆ ಹಾಕುತ್ತಿದ್ದಾರೆ. ಇದು ಅವರ ನಕಲಿ ನಾರಿ ಶಕ್ತಿ ನಾಟಕವನ್ನು ಬಯಲು ಮಾಡಿದೆ. ಅವರಿಗೆ ಬಂಗಾಳದ ಸಂಸ್ಕೃತಿ ಗೊತ್ತಿಲ್ಲ. ಬಂಗಾಳದಲ್ಲಿ ಮಹಿಳೆಯರನ್ನು ಯಾರೂ ಈ ರೀತಿ ಮಾತನಾಡಿಸಲ್ಲ. ಬಂಗಾಳದ ಮಹಿಳೆಯರು ಶಾ ಅವರ ಈ ಮಾತನ್ನು ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
ನಾನೂ ಯಾವಗಲೂ ಒನ್ಸ್​ ಎ ಗೂಂಡಾ, ಆಲ್​ವೇಸ್ ಎ ಗೂಂಡಾ ಎಂದು ಹೇಳುತ್ತೇನೆ. ಮೇ 4ರಂದು ಬಂಗಾಳದ ಜನ ಇದಕ್ಕೆ ಉತ್ತರ ಕೊಡುತ್ತಾರೆ. ಮೊದಲು ಅವರು ಪಹಲ್‌ಗಾಮ್ ದಾಳಿ, ಮಣಿಪುರ್, ರಾಷ್ಟ್ರೀಯ ಭದ್ರತೆಯ ಬಗ್ಗೆ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಿತ್ ಶಾ ಹೇಳಿದ್ದೇನು?

ಪಶ್ಚಿಮ ಮೇದಿನಿಪುರದಲ್ಲಿ ಮಂಗಳವಾರ ನಡೆದ ಅಂತಿಮ ಹಂತದ ಪ್ರಚಾರ ಱಲಿಯಲ್ಲಿ ಮಾತನಾಡಿರುವ ಅಮಿತ್ ಷಾ, ಮಮತಾ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದರು. ಹಿಂದಿಯಲ್ಲಿ ಅಬ್ಬರಿಸಿದ ಷಾ, ಏ ದೀದಿ, ಕಣ್ಣು ಮತ್ತು ಕಿವಿ ತೆರೆದು ಕೇಳಿಸಿಕೊ.. ಈ ಬಾರಿ ಬಂಗಾಳದ ಮತದಾರರು ನಿಮ್ಮನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದಾರೆ. ನಿಮ್ಮ ಸಮಯ ಮುಗಿದಿದೆ. ಟಾಟಾ, ಬೈ ಬೈ ದೀದಿ ಎಂದು ಲೇವಡಿ ಮಾಡಿದ್ದರು. ಅಷ್ಟೇ ಅಲ್ಲದೆ, ಬಂಗಾಳದ ಜನರನ್ನು ನೀವು ಸಾಕಷ್ಟೂ ಪೀಡಿಸಿದ್ದೀರಿ. ಈಗ ನೀವು ಹೋಗುವ ಕಾಲ ಬಂದಿದೆ, ಬಿಜೆಪಿ ಬರುವ ಕಾಲ ಬಂದಿದೆ ಎಂದು ಷಾ ಗುಡುಗಿದ್ದರು (ಏಜೆನ್ಸೀಸ್).