West Bengal Election Result | ಬ್ಯಾನರ್ಜಿ ಭದ್ರಕೋಟೆಯಲ್ಲಿ ಬಿಜೆಪಿ ಮುನ್ನಡೆ 
ದೇಶ

ಬ್ಯಾನರ್ಜಿ ಭದ್ರಕೋಟೆಯಲ್ಲಿ ಬಿಜೆಪಿ ಮುನ್ನಡೆ...ಡೈಮಂಡ್ ಹಾರ್ಬರ್‌ನಲ್ಲಿ ಹಳೆ ಎದುರಾಳಿಗಳ ನಡುವೆ ತೀವ್ರ ಹಣಾಹಣಿ! | West Bengal Election Result

West Bengal Election Result: ಪಶ್ಚಿಮ ಬಂಗಾಳದ ಹೈವೋಲ್ಟೇಜ್ ಕ್ಷೇತ್ರಗಳಲ್ಲೊಂದಾದ ಡೈಮಂಡ್ ಹಾರ್ಬರ್‌ನಲ್ಲಿ ಮತ ಎಣಿಕೆ ಕಾರ್ಯ ಅತ್ಯಂತ ಕುತೂಹಲಕಾರಿಯಾಗಿ ಸಾಗುತ್ತಿದ್ದು, ಸದ್ಯ ಈ ಕ್ಷೇತ್ರದಲ್ಲಿ ಬಿಜೆಪಿಯ ದೀಪಕ್ ಕುಮಾರ್ ಹಾಲ್ಡರ್, ಆಡಳಿತಾರೂಢ ಟಿಎಂಸಿ ಅಭ್ಯರ್ಥಿ ಪನ್ನಾ ಲಾಲ್ ಹಾಲ್ಡರ್ ವಿರುದ್ಧ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೀಪಕ್ ಕುಮಾರ್ ಹಾಲ್ಡರ್ 6,578 ಮತಗಳನ್ನು ಗಳಿಸಿದ್ದರೆ, ಪನ್ನಾಲಾಲ್ ಹಾಲ್ಡರ್ 3,998 ಮತಗಳನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ. ಇದರೊಂದಿಗೆ ಬಿಜೆಪಿ ಅಭ್ಯರ್ಥಿ ಸದ್ಯ 2,580 ಮತಗಳ ಮುನ್ನಡೆಯಲ್ಲಿದ್ದು, ಇನ್ನೂ ಹಲವು ಸುತ್ತುಗಳ ಎಣಿಕೆ ಬಾಕಿ ಇರುವುದರಿಂದ ಅಂತಿಮ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಕ್ಷೇತ್ರದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದ್ದರೂ, ಕಾಂಗ್ರೆಸ್‌ನ ಗೌತಮ್ ಭಟ್ಟಾಚಾರ್ಯ ಮತ್ತು ಸಿಪಿಐಎಂನ ಸಮರ್ ನಯ್ಯಾ ಸೇರಿದಂತೆ ಒಟ್ಟು 10 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷಕ್ಕಿಳಿದಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಡೈಮಂಡ್ ಹಾರ್ಬರ್ ಕ್ಷೇತ್ರವು ಶೇಕಡಾ 92.48ರಷ್ಟು ದಾಖಲೆ ಮಟ್ಟದ ಮತದಾನಕ್ಕೆ ಸಾಕ್ಷಿಯಾಗಿದ್ದು, ಇದು 2021ರ ಚುನಾವಣೆಗೆ (88.04%) ಹೋಲಿಸಿದರೆ ಶೇಕಡಾ 4.44ರಷ್ಟು ಹೆಚ್ಚಳ ಕಂಡಿರುವುದು ವಿಶೇಷ. ಕಳೆದ ದಶಕದ ಇತಿಹಾಸವನ್ನು ಗಮನಿಸಿದರೆ, ಇಲ್ಲಿ ಮತದಾನದ ಪ್ರಮಾಣ ನಿರಂತರವಾಗಿ ಏರಿಕೆ ಕಾಣುತ್ತಿದೆ.
2021ರ ಚುನಾವಣೆಯಲ್ಲಿ ಟಿಎಂಸಿಯ ಪನ್ನಾಲಾಲ್ ಹಾಲ್ಡರ್, ಬಿಜೆಪಿಯ ದೀಪಕ್ ಕುಮಾರ್ ಹಾಲ್ಡರ್​​​ರನ್ನು 16,996 ಮತಗಳ ಅಂತರದಿಂದ ಸೋಲಿಸಿದ್ದರು. 2011 ಮತ್ತು 2016ರಲ್ಲಿ ದೀಪಕ್ ಕುಮಾರ್ ಹಾಲ್ಡರ್ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇಲ್ಲಿಂದ ಸತತ ಜಯ ಸಾಧಿಸಿದ್ದರು. ಆದರೆ ಈ ಬಾರಿ ದೀಪಕ್ ಕುಮಾರ್ ಹಾಲ್ಡರ್ ಕೇಸರಿ ಪಾಳೆಯದಿಂದ ಕಣಕ್ಕಿಳಿದು ತಮ್ಮ ಹಳೆಯ ಎದುರಾಳಿಗೆ ಕಠಿಣ ಸವಾಲು ನೀಡುತ್ತಿದ್ದಾರೆ. ಹಂತ ಹಂತವಾಗಿ ಪರಿಸ್ಥಿತಿ ಬದಲಾಗುತ್ತಿರುವುದರಿಂದ ಡೈಮಂಡ್ ಹಾರ್ಬರ್ ಫಲಿತಾಂಶವು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸುವೇಂದು ಅಧಿಕಾರಿ , ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹಿಂದೂ ಮತದಾರರು ಮತ ಚಲಾಯಿಸಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಭವಾನಿಪುರ ಕ್ಷೇತ್ರದಲ್ಲಿ ತಮಗೆ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮಮತಾ ಬ್ಯಾನರ್ಜಿ ಈ ಬಾರಿ ಹೀನಾಯ ಸೋಲನ್ನು ಎದುರಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದ್ದಾರೆ. ಎಣಿಕೆಯ ಆರಂಭಿಕ ಸುತ್ತುಗಳಲ್ಲಿ ಸುವೇಂದು ಅಧಿಕಾರಿ, ದೀದಿ ವಿರುದ್ಧ ಮೇಲುಗೈ ಸಾಧಿಸಿದ್ದು, ಪ್ರತಿ ಸುತ್ತಿನಲ್ಲೂ ಈ ಸ್ಪರ್ಧೆಯು ಹೊಸ ತಿರುವುಗಳನ್ನು ಪಡೆಯುತ್ತಿದೆ. ಇಡೀ ದೇಶದ ಗಮನ ಸೆಳೆದಿರುವ ಈ ಹೈವೋಲ್ಟೇಜ್ ಕದನದಲ್ಲಿ ಮತ ಎಣಿಕೆ ಮುಂದುವರಿದಂತೆ ಫಲಿತಾಂಶದ ಚಿತ್ರಣವು ಮತ್ತಷ್ಟು ಸ್ಪಷ್ಟಗೊಳ್ಳುವ ನಿರೀಕ್ಷೆಯಿದೆ(ಏಜೆನ್ಸೀಸ್​​).