West Bengal Election | ಎರಡನೇ ಹಂತದ ಈ ವೋಟಿಂಗ್ ಗೇಮ್ ಚೇಂಜರ್ ಯಾಕೆ ಗೊತ್ತಾ..?
West Bengal Election: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಅಂತಿಮ ಹಾಗೂ ಅತ್ಯಂತ ನಿರ್ಣಾಯಕ ಘಟ್ಟಕ್ಕೆ ವೇದಿಕೆ ಸಿದ್ಧವಾಗಿದ್ದು, ನಾಳೆ (ಏಪ್ರಿಲ್ 29) ಒಟ್ಟು 142 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ, ಸೋಮವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ದಕ್ಷಿಣ ಬಂಗಾಳ ಮತ್ತು ಕೋಲ್ಕತ್ತಾ ಜಿಲ್ಲೆಗಳ ಮೇಲೆ ಕೇಂದ್ರೀಕೃತವಾಗಿರುವ ಈ ಹಂತವು ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಾಲಿಗೆ ತುಂಬಾ ಪ್ರಮುಖವಾಗಿದೆ.
ಏಪ್ರಿಲ್ 23 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ರಾಜ್ಯವು ಶೇ. 93.2 ರಷ್ಟು ದಾಖಲೆಯ ಮತದಾನವನ್ನು ಕಂಡಿದೆ. ಈ ಬೃಹತ್ ಪ್ರಮಾಣದ ಮತದಾನವು ಟಿಎಂಸಿ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಗೆಲುವಿನ ಆಸೆಯನ್ನು ಹೆಚ್ಚಿಸಿದ್ದು, ಪ್ರಧಾನಿ ಮೋದಿ ಮೊದಲ ಹಂತದ ಮತದಾನದ ಬಗ್ಗೆ ಪ್ರತಿಕ್ರಿಯಿಸುತ್ತಾ, ಇದು ಬಂಗಾಳದಲ್ಲಿ ದೀರ್ಘಕಾಲದ ನಂತರ ಕಂಡುಬರುತ್ತಿರುವ ಬದಲಾವಣೆಯ ಅಲೆಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೊದಲ ಹಂತದ 152 ಸ್ಥಾನಗಳಲ್ಲಿ ಕಳೆದ ಬಾರಿ ಟಿಎಂಸಿ 92 ಮತ್ತು ಬಿಜೆಪಿ 59 ಸ್ಥಾನಗಳನ್ನು ಗೆದ್ದಿದ್ದವು.
ಟಿಎಂಸಿ ಭದ್ರಕೋಟೆಯಲ್ಲಿ ಸಮರ
ಎರಡನೇ ಹಂತದ 142 ಸ್ಥಾನಗಳು ಮಮತಾ ಬ್ಯಾನರ್ಜಿ ಭದ್ರಕೋಟೆ ಎನಿಸಿಕೊಂಡಿರುವ ದಕ್ಷಿಣ ಬಂಗಾಳದ ಎಂಟು ಜಿಲ್ಲೆಗಳನ್ನು ಒಳಗೊಂಡಿವೆ. 2021ರ ಚುನಾವಣೆಯಲ್ಲಿ ಟಿಎಂಸಿ ಈ ಭಾಗದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿ 123 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಬಿಜೆಪಿ ಆಕ್ರಮಣಕಾರಿ ಪ್ರಚಾರದ ಹೊರತಾಗಿಯೂ ಕೇವಲ 18 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಈ ಹಂತದಲ್ಲಿ ಕೋಲ್ಕತ್ತಾ ಉತ್ತರ, ಕೋಲ್ಕತ್ತಾ ದಕ್ಷಿಣ, ಹೌರಾ, ನಾಡಿಯಾ ಮತ್ತು ಉತ್ತರ ಹಾಗೂ ದಕ್ಷಿಣ 24 ಪರಗಣಗಳಂತಹ ಪ್ರಮುಖ ಜಿಲ್ಲೆಗಳು ಕಣದಲ್ಲಿವೆ.
ಎರಡನೇ ಹಂತದ ಅತ್ಯಂತ ಕುತೂಹಲಕಾರಿ ಕದನ ಭಬಾನಿಪುರ ಕ್ಷೇತ್ರದಲ್ಲಿ ನಡೆಯಲಿದೆ. ಇಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವಿಪಕ್ಷ ನಾಯಕ ಸುವೇಂದು ಅಧಿಕಾರಿಯನ್ನು ಎದುರಿಸುತ್ತಿದ್ದಾರೆ. ಕಣದಲ್ಲಿರುವ ಇತರ ಪ್ರಮುಖ ನಾಯಕರಲ್ಲಿ ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್, ಸಚಿವರಾದ ಚಂದ್ರಿಮಾ ಭಟ್ಟಾಚಾರ್ಯ ಮತ್ತು ಅರೂಪ್ ಬಿಸ್ವಾಸ್ ಸೇರಿದ್ದಾರೆ. ಬಿಜೆಪಿ ಪರವಾಗಿ ಮಾಜಿ ರಾಜ್ಯಸಭಾ ಸದಸ್ಯೆ ಸ್ವಪನ್ ದಾಸ್‌ಗುಪ್ತಾ ಮತ್ತು ನಟಿ ರೂಪಾ ಗಂಗೂಲಿ ಕಣದಲ್ಲಿದ್ದಾರೆ. ವಿಶೇಷವೆಂದರೆ, ಆರ್‌ಜಿ ಕರ್ ಘಟನೆಯ ಸಂತ್ರಸ್ತೆಯ ತಾಯಿಯನ್ನು ಬಿಜೆಪಿ ಪಾಣಿಹಟಿ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಚುನಾವಣಾ ವಿಷಯಗಳೇನು..?
ಹೆಚ್ಚಿನ ಮತದಾನದ ಪ್ರಮಾಣವನ್ನು ಟಿಎಂಸಿ ಪರವಾದ ಅಲೆ ಎಂದು ವಿಶ್ಲೇಷಿಸಿರುವ ಮಮತಾ ಬ್ಯಾನರ್ಜಿ, ಜನರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಮತ ಚಲಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರುತ್ತದೆ ಎಂಬ ಆತಂಕವನ್ನು ಅವರು ಪ್ರಚಾರದುದ್ದಕ್ಕೂ ವ್ಯಕ್ತಪಡಿಸಿದ್ದಾರೆ. ಹತ್ತು ವರ್ಷಗಳಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಬೆಳೆದಿರುವ ಬಿಜೆಪಿ, ಈ ಬಾರಿ ಟಿಎಂಸಿಯ ಭದ್ರಕೋಟೆಯನ್ನು ಭೇದಿಸುವ ಇರಾದೆಯಲ್ಲಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಶೂನ್ಯಕ್ಕೆ ಕುಸಿದಿದ್ದು, ಈ ಬಾರಿಯ ದ್ವಿಪಕ್ಷೀಯ ಹೋರಾಟದಲ್ಲಿ 142 ಸ್ಥಾನಗಳ ಈ ಹಂತವು ಬಂಗಾಳದ ಮುಂದಿನ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ(ಏಜೆನ್ಸೀಸ್).