- ಬಿಜೆಪಿ ಶಾಸಕನ 2ನೇ ಮದುವೆಗೆ ಫಸ್ಟ್ ವೈಫ್ ವಿರೋಧ
- ಮೊದಲ ಪತ್ನಿ ಪೊಲೀಸ್ ಮೆಟ್ಟಿಲೇರುತ್ತಿದ್ದಂತೆಯೇ ಶುರುವಾಯ್ತು ಸಂಕಷ್ಟ!
- ಹಿರಣ್ ಚಟರ್ಜಿ 2ನೇ ಮದುವೆ ವಿವಾದ
ಕೋಲ್ಕತ್ತಾ: ( Divorce) ಪಶ್ಚಿಮ ಬಂಗಾಳದ ಖರಗ್‌ಪುರ ಸದರ್‌ನ ಬಿಜೆಪಿ ಶಾಸಕ ಹಿರಣ್ ಚಟರ್ಜಿ, ವಾರಣಾಸಿಯ ಗಂಗಾ ಘಾಟ್‌ನಲ್ಲಿ 21 ವರ್ಷದ ಮಾಡೆಲ್ ರಿತಿಕಾ ಗಿರಿ ಅವರನ್ನು ಎರಡನೇ ವಿವಾಹವಾದ ನಂತರ ವಿವಾದಕ್ಕೆ ಗುರಿಯಾಗಿದ್ದಾರೆ.
ಹಿರಣ್ ಚಟರ್ಜಿ ಮತ್ತು ರಿತಿಕಾ ಗಿರಿ ಅವರ ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡವು. ವಾರಣಾಸಿಯ ಗಂಗಾ ನದಿಯ ದಡದಲ್ಲಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಈ ಜೋಡಿ ವಿವಾಹವಾಗುತ್ತಿರುವುದು ಕಂಡುಬಂದಿದೆ. ಈ ಫೋಟೋಗಳು ಹೊರಬಂದ ತಕ್ಷಣ, ಟಾಲಿವುಡ್‌ನಿಂದ ಬಂಗಾಳ ರಾಜಕೀಯದವರೆಗೆ ಚರ್ಚೆಗಳು ಸುತ್ತಿಕೊಂಡವು.
ಹಿರಣ್ ಚಟರ್ಜಿ ಅವರ ಎರಡನೇ ಮದುವೆ ಸುದ್ದಿ ಹೊರಬೀಳುತ್ತಿದ್ದಂತೆಯೇ ಅವರ ಮೊದಲ ಪತ್ನಿ ಅನಿಂದಿತಾ ಚಟರ್ಜಿ ಕೋಲ್ಕತ್ತಾದ ಆನಂದಪುರ ಪೊಲೀಸ್ ಠಾಣೆಯಲ್ಲಿ ಹಿರಣ್ ಚಟರ್ಜಿ ವಿರುದ್ಧ ದೂರು ದಾಖಲಿಸಿದ್ದಾರೆ. ನಮ್ಮಿಬ್ಬರ ನಡುವೆ ಇನ್ನೂ ಕಾನೂನುಬದ್ಧವಾಗಿ ವಿಚ್ಛೇದನ ಆಗಿಲ್ಲ. ವಿಚ್ಛೇದನ ಪಡೆಯದೆಯೇ ಅವರು ಎರಡನೇ ಮದುವೆಯಾಗಿದ್ದಾರೆ ಎಂದಿದ್ದಾರೆ.
ನಾವು 2000 ದ ಡಿಸೆಂಬರ್ 11 ರಿಂದ ವಿವಾಹವಾಗಿದ್ದೇವೆ. ನಮಗೆ 19 ವರ್ಷದ ಮಗಳು ಕೂಡ ಇದ್ದಾಳೆ. ನಾನು ಬಹಳ ಸಮಯದಿಂದ ಚಿತ್ರಹಿಂಸೆ ಎದುರಿಸುತ್ತಿದ್ದೆ ಆದರೆ ನನ್ನ ಮಗಳು ಮತ್ತು ನಮ್ಮ ಕುಟುಂಬದ ಹಿತದೃಷ್ಟಿಯಿಂದ ನಾನು ಮೌನವನ್ನು ಕಾಯ್ದುಕೊಂಡೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಿರಣ್ ಮತ್ತು ಮಾಡೆಲ್ ರಿತಿಕಾ ಗಿರಿ ಅವರ ವಿವಾಹ ಮಹೋತ್ಸವ ವಾರಣಾಸಿಯ ಗಂಗಾ ನದಿಯ ದಡದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆದಿದೆ. ಈ ಮದುವೆಯ ಫೋಟೋಗಳು ಹೊರಬೀಳುವವರೆಗೂ ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ಫೋಟೋಗಳು ವೈರಲ್ ಆದ ಬೆನ್ನಲ್ಲೇ ಬಂಗಾಳದ ರಾಜಕೀಯ ಮತ್ತು ಚಿತ್ರರಂಗದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಈ ಕುರಿತು ಶಾಸಕ ಹಿರಣ್ ಚಟರ್ಜಿ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.