ವಿಪಕ್ಷಗಳ ಪ್ರತಿಭಟನೆ 
ದೇಶ

ಪಶ್ಚಿಮ ಏಷ್ಯಾದ ಸಂಘರ್ಷ: ಅಧಿವೇಶನದಲ್ಲಿ ಸುದೀರ್ಘ ಚರ್ಚೆಗೆ ಒತ್ತಾಯಿಸಿ ಸಂಸತ್​ ಆವರಣದಲ್ಲಿ ವಿಪಕ್ಷಗಳ ಪ್ರತಿಭಟನೆ | Opposition parties

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತು ಅದಕ್ಕೆ ಸಂಬಂಧಿಸಿದ ಭಾರತದ ತೈಲ, ಗ್ಯಾಸ್ ವ್ಯಾಪಾರ ಬಿಕ್ಕಟ್ಟಿನ ಬಗ್ಗೆ ಅಧಿವೇಶನದಲ್ಲಿ ಪೂರ್ಣ ಪ್ರಮಾಣದಲ್ಲಿ ಚರ್ಚೆ ನಡೆಸುವಂತೆ ಒತ್ತಾಯಿಸಿ ಇಂದು(ಮಾ. 09) ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಾಯಕರು(Opposition parties) ಮತ್ತು ಸಂಸದರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ವಿರೋಧ ಪಕ್ಷದ ಸಂಸದರು, ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕದ ಯುದ್ಧದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಹಿಸಿದ್ದನ್ನು ವಿರೋಧಿಸಿ ಪ್ರತಿಭಟಿಸಿದರು.
ಕೊಲ್ಲಿಯಲ್ಲಿ ಬೆಂಕಿ, ತೈಲ ಆಘಾತ. ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರು. ಭಾರತಕ್ಕೆ ನಾಯಕತ್ವ ಬೇಕು - ಮೌನವಲ್ಲ ಎಂದು ಬರೆದ ಬೃಹತ್ ಬ್ಯಾನರ್‌ನೊಂದಿಗೆ ಸಂಸದರು ಪ್ರತಿಭಟನೆ ನಡೆಸಿದ್ದು, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದಕ್ಕೂ ಮೊದಲು ಎರಡನೇ ಹಂತದ ಬಜೆಟ್ ಅಧಿವೇಶನದಲ್ಲಿ ಚರ್ಚಿಸಬೇಕಾದ ವಿಷಯ ಮತ್ತು ಅದರ ಕುರಿತಾದ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಸಂಸತ್​ ಕೊಠಡಿಯಲ್ಲಿ ಸಭೆ ನಡೆಸಿದ್ದರು.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಮಲ್ಲಿಕಾರ್ಜುನ ಖರ್ಗೆ, ಎರಡನೇ ಹಂತದ ಸಂಸತ್ ಬಜೆಟ್ ಅಧಿವೇಶನ ಶುರುವಾಗುತ್ತಿದ್ದಂತೆ, ಇರಾನ್ ಜೊತೆಗಿನ ಅಮೆರಿಕ-ಇಸ್ರೇಲ್ ಯುದ್ಧವು ನಮ್ಮ ಹಿತ್ತಲನ್ನು ತಲುಪಿದೆ. ಈ ವೇಳೆ ಪ್ರಸ್ತುತ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಪೂರ್ಣ ಪ್ರಮಾಣದ ಚರ್ಚೆ ನಡೆಸುವುದು ಅತ್ಯಗತ್ಯವಾಗಿದೆ.
ವಿದೇಶಾಂಗ ಇಲಾಖೆಯ ಏಕಪಕ್ಷೀಯ ಹೇಳಿಕೆ ಪರಿಹಾರವಲ್ಲ. ನಾವು ಸಾಮೂಹಿಕವಾಗಿ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಮ್ಮ ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ನಮ್ಮ ವ್ಯಾಪಾರಿಗಳಿಗೆ ಸಹಾಯ ಮಾಡಲು, ನಮ್ಮ ರಫ್ತಿಗೆ ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸಲು ಮತ್ತು ಬೆಲೆ ಏರಿಕೆಯಿಂದ ನಮ್ಮ ಜನರಿಗೆ ದಂಡ ವಿಧಿಸುವುದನ್ನು ನಿಲ್ಲಿಸಲು GOI ವಿವರವಾದ ಆಕಸ್ಮಿಕ ಯೋಜನೆಯನ್ನು ಹೊರತರಬೇಕು. ಈ ಬಗ್ಗೆ ವಿಪಕ್ಷಗಳು ಸ್ಪಷ್ಟನೆ ಬಯಸುತ್ತವೆ ಎಂದಿದ್ದಾರೆ (ಏಜೆನ್ಸೀಸ್).