ಸಾಂದರ್ಭಿಕ ಚಿತ್ರ 
ದೇಶ

ಪಶ್ಚಿಮ ಏಷ್ಯಾದ ಸಂಘರ್ಷ; ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಇಂದು ಸಂಜೆ 5 ಗಂಟೆಗೆ ಸರ್ವಪಕ್ಷ ಸಭೆ ನಡೆಸಲಿರುವ ಕೇಂದ್ರ ಸರ್ಕಾರ | All party meeting

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತು ಅದರಿಂದ ಉದ್ಭವಿಸಿರುವ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಇಂದು(ಮಾ. 25) ಸಂಜೆ 5 ಗಂಟೆಗೆ ಸರ್ವಪಕ್ಷ ಸಭೆ ನಡೆಸಲಿದೆ. 
ಸಂಘರ್ಷದಿಂದ ಅಗತ್ಯ ವಸ್ತುಗಳ ಪ್ರಮುಖ ಸಾಗಾಣೆ ಮಾರ್ಗವಾಗಿರುವ ಹಾರ್ಮುಲ್ ಜಲಸಂಧಿಯಿಂದ ದೇಶದಲ್ಲಿ ಎಲ್​ಪಿಜಿ, ಕಚ್ಚಾತೈಲ ಸೇರಿ ಹಲವು ವಸ್ತುಗಳು ಪೂರೈಕೆಯ ಕೊರತೆಯನ್ನು ಎದುರಿಸುತ್ತಿರುವ ಹಿನ್ನೆಲೆ ಸೋಮವಾರ ಸಂಸತ್​​ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಸಂಘರ್ಷವನ್ನು ಚಿಂತಾಜನಕ ಎಂದು ಕರೆದಿದ್ದರು. 
ಯುದ್ಧಕ್ಕೆ ಸಾಕ್ಷಿಯಾಗಿರುವ ಪಶ್ಚಿಮ ಏಷ್ಯಾ ದೇಶಗಳೊಂದಿಗೆ ಭಾರತ ವ್ಯಾಪಾರ ಸಂಬಂಧಗಳನ್ನು ಹೊಂದಿದೆ. ದೇಶದ ಕಚ್ಚಾತೈಲ ಮತ್ತು ಎಲ್​ಪಿಜಿ ಪೂರೈಕೆಯನ್ನು ಯುದ್ಧ ಪೀಡಿತ ದೇಶಗಳು ಪೂರೈಸುತ್ತವೆ. ಇದು ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಹಲವು ಸವಾಲುಗಳನ್ನು ಒಡ್ಡುತ್ತದೆ ಎಂದು ಹೇಳಿದ್ದರು.
ನಿನ್ನೆ ಕೂಡ ಸಂಘರ್ಷದಿಂದ ತಲೆದೂರಿರುವ ಬಿಕ್ಕಟ್ಟಿನ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತದ ರಕ್ಷಣಾ ಸನ್ನದ್ಧತೆಯನ್ನು ನಿರ್ಣಯಿಸಲು ಪರಿಶೀಲನಾ ಸಭೆಯನ್ನು ನಡೆಸಿದ್ದರು. ಸಭೆಯಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಅಮರ್ ಪ್ರೀತ್ ಸಿಂಗ್, ಜನರಲ್ ಉಪೇಂದ್ರ ದ್ವಿವೇದಿ, ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಮೀರ್ ಕಾಮತ್ ಮತ್ತು ಇತರರು ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಇನ್ನೂ ಇಂದಿನ ಸಭೆಗೆ ಹಾಜರಾಗುವುದಿಲ್ಲ ಎಂದಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೇರಳದಲ್ಲಿ ನನಗೆ ಕಾರ್ಯಕ್ರಮವಿರುವುದರಿಂದ ನಾನು ಹಾಜರಾಗಲು ಸಾಧ್ಯವಾಗುವುದಿಲ್ಲ. ಸರ್ವಪಕ್ಷ ಸಭೆ ನಡೆಯಬೇಕು. ಆದರೆ ಸರ್ಕಾರದ ರಚನಾತ್ಮಕತೆಯಲ್ಲೇ ಪ್ರಮಾದವಾಗಿದೆ. ಮತ್ತು ಇದನ್ನು ಸರಿಪಡಿಸಲು ಸಾಧ್ಯವಿಲ್ಲ. ವಿಶೇಷವಾಗಿ ಪ್ರಧಾನಿಗೆ ಸಾಧ್ಯವಿಲ್ಲ. ಅವರು ಅಮೆರಿಕ ಏನು ಹೇಳುತ್ತದೋ ಅದನ್ನು ಮಾಡುತ್ತಾರೆ. ರೈತರು ಮತ್ತು ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡುವುದಿಲ್ಲ. ಅವರು ಅಮೆರಿಕ ಮತ್ತು ಇಸ್ರೇಲ್ ಏನು ಹೇಳುತ್ತದೋ ಅದನ್ನು ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಏ. 28ರಂದು ಇರಾನ್ ಮೇಲೆ ಇಸ್ರೇಲ್-ಅಮೆರಿಕಾ ಜಂಟಿಯಾಗಿ ಮಿಲಿಟರಿ ಕಾರ್ಯಾಚರಣೆ ನಡೆಸಿದವು. ಮೊದಲ ದಿನ ದಾಳಿಯಲ್ಲೇ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯಾದರು. ಇದರಿಂದ ಕೆರಳಿದ ಇರಾನ್ ಹಲವಾರು ಗಲ್ಫ್ ರಾಷ್ಟ್ರಗಳಾದ್ಯಂತ ಇಸ್ರೇಲಿ ಮತ್ತು ಅಮೆರಿಕದ ಸ್ವತ್ತುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಪ್ರಮುಖ ವ್ಯಾಪಾರ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿತು. ಇದರಿಂದ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ (ಏಜೆನ್ಸೀಸ್).