ಪ್ರಿಯಾಂಕಾ ಗಾಂಧಿ 
ದೇಶ

ಪಶ್ಚಿಮ ಏಷ್ಯಾ ಸಂಘರ್ಷದ ಬಿಕ್ಕಟ್ಟು; ಪ್ರಧಾನಿ ಹೊಸದೇನೂ ಹೇಳಿಲ್ಲ: ಸಂಸತ್​ನಲ್ಲಿ ಸುದೀರ್ಘ ಚರ್ಚೆ ನಡೆಯಲಿ: ಪ್ರಿಯಾಂಕಾ ಗಾಂಧಿ | Priyanka Gandhi

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಅದರ ಪರಿಣಾಮಗಳ ಬಗ್ಗೆ ಸಂಸತ್​ನಲ್ಲಿ ಪ್ರಧಾನಿ ಮೋದಿಯವರು ನೀಡಿದ ಹೇಳಿಕೆಯಲ್ಲಿ ಹೊಸದೇನೂ ಇಲ್ಲ, ಈ ಕುರಿತು ಎಲ್ಲಾ ಕಡೆಯವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಂಸತ್​​ನಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಲಿ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.
ಪ್ರಧಾನಿಯವರ ಭಾಷಣಕ್ಕೆ ಸಂಬಂಧಿಸಿದಂತೆ ಸಂಸತ್​ ಆವರಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಪ್ರಸ್ತುತ ಬಿಕ್ಕಟ್ಟಿನ ಬಗ್ಗೆ ಮಾಹಿತಿ ನೀಡಿದರು. ಆದರೆ ಹೊಸದಾಗಿ ಏನನ್ನೂ ಹೇಳಲಿಲ್ಲ. ಚರ್ಚೆಗಾಗಿ ನಾವು ನೀಡಿರುವ ಸೂಚನೆಯನ್ನು ಕೈಗೆತ್ತಿಕೊಳ್ಳಬೇಕು. ಇದರಿಂದ ನಾವು ಸಹ ಉತ್ತರಿಸಬಹುದು. ಮತ್ತು ಎಲ್ಲಾ ಕಡೆಯವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಬಹುದು. ಚರ್ಚೆ ನಡೆಯಲಿ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು? 

ಸೋಮವಾರ ಮಧ್ಯಾಹ್ನ 2 ಸುಮಾರಿಗೆ ಲೋಕಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಮಧ್ಯಪ್ರಾಚ್ಯದ ಸಂಘರ್ಷದ ಸಮಯದಲ್ಲಿ ಭಾರತೀಯರ ಭದ್ರತೆಯು ಸರ್ಕಾರದ ಅತಿದೊಡ್ಡ ಆದ್ಯತೆಯಾಗಿದೆ. ಮತ್ತು ಕೇಂದ್ರವು ಸೂಕ್ಷ್ಮ, ಜಾಗರೂಕ ಮತ್ತು ಎಲ್ಲಾ ಸಹಾಯವನ್ನು ನೀಡಲು ಸಿದ್ಧವಾಗಿದೆ ಎಂದು ಹೇಳಿದ್ದರು.
ಜಾಗತಿಕ ಆರ್ಥಿಕತೆ ಮತ್ತು ಜನರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಈ ಪರಿಸ್ಥಿತಿಯನ್ನು ಆತಂಕಕಾರಿ ಎಂದು ಬಣ್ಣಿಸಿದ ಅವರು, ಯುದ್ಧದ ಆರಂಭದಿಂದಲೂ ಹಾರ್ಮುಜ್ ಜಲಸಂಧಿಯ ಮೂಲಕ ಸರಕು ಸಾಗಣೆ ಒಂದು ಸವಾಲಾಗಿದೆ. ಆದರೆ ಸರ್ಕಾರವು ಅನಿಲ ಮತ್ತು ಇಂಧನ ಸರಬರಾಜುಗಳು ಕನಿಷ್ಠ ಪರಿಣಾಮ ಬೀರುವಂತೆ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದ್ದರು.
ಭಾರತವು ತನ್ನ ಎಲ್‌ಪಿಜಿ ಅಗತ್ಯಗಳಲ್ಲಿ ಶೇ. 60 ರಷ್ಟು ಆಮದು ಮಾಡಿಕೊಳ್ಳುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅನಿಶ್ಚಿತ ಪೂರೈಕೆಯಿಂದಾಗಿ, ಸರ್ಕಾರವು ದೇಶೀಯ ಪೂರೈಕೆಗೆ ಆದ್ಯತೆ ನೀಡುತ್ತಿದೆ. ದೇಶದಲ್ಲಿ ಎಲ್‌ಪಿಜಿ ಉತ್ಪಾದನೆಯನ್ನು ಸಹ ಹೆಚ್ಚಿಸಲಾಗುತ್ತಿದೆ. ಎರಡು ಕೋವಿಡ್ ಅಲೆಗಳು ತಂದ ಸಂಕಷ್ಟವನ್ನು ತರುವ ಸಾಧ್ಯತೆಯಿದ್ದು, ಸರ್ಕಾರ ಎಲ್ಲವನ್ನು ಎದುರಿಸಲು ಸಿದ್ದವಾಗಿದೆ ಎಂದು ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).