ನವದೆಹಲಿ: ಕಾಂಗ್ರೆಸ್ ಪಕ್ಷ ಮತ್ತು ಅದರ ಯುವ ಘಟಕವಾದ ಯೂತ್ ಕಾಂಗ್ರೆಸ್ ನಾಯಕರ ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ಪೋಸ್ಟ್ಗಳಿಗೆ ನಿರ್ಬಂಧ ಹೇರಲಾಗುತ್ತಿದೆ ಎಂಬ ಆರೋಪದ ನಡುವೆಯೇ, ಮೆಟಾ ನೀತಿ ನಿರೂಪಣಾ ತಂಡವು ಕಾಂಗ್ರೆಸ್ ಸಾಮಾಜಿಕ ಜಾಲತಾಣ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದೆ. ಈ ಸಭೆಯಲ್ಲಿ ಮಾತನಾಡಿದ ಮೆಟಾ (Meta) ಪ್ರತಿನಿಧಿಗಳು, ತಮ್ಮ ಕಂಪನಿಯು ಭಾರತೀಯ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ ಮತ್ತು ಸಂಪೂರ್ಣ ಪಾರದರ್ಶಕ ನೀತಿಗಳನ್ನು ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿರುವುದಾಗಿ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ಗೆ ಸಂಬಂಧಿಸಿದ ಖಾತೆಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಆರೋಪಿಸಿದ ನಂತರ ಎರಡು ಕಡೆಯವರ ನಡುವೆ ನಡೆದ ಮೊದಲ ಅಧಿಕೃತ ಸಭೆ ಇದಾಗಿದೆ. ಹೈದರಾಬಾದ್, ಗುರುಗ್ರಾಮ ಮತ್ತು ಮುಂಬೈನಲ್ಲಿರುವ ಮೆಟಾ ಕಚೇರಿಗಳ ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಈ ಮಾತುಕತೆ ನಡೆದಿದೆ. ಸಭೆಯ ಸಂದರ್ಭದಲ್ಲಿ ಕಾಂಗ್ರೆಸ್ ನಿಯೋಗವು, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಉಲ್ಲೇಖಿಸುವ ಪೋಸ್ಟ್ಗಳಿಗೆ ಮೆಟಾ ಉದ್ದೇಶಪೂರ್ವಕವಾಗಿ ನಿರ್ಬಂಧ ಹೇರುತ್ತಿದೆ ಎಂಬುದನ್ನು ತೋರಿಸುವ ಕೆಲವು ದಾಖಲೆಗಳನ್ನು ಕಂಪನಿಯ ಮುಂದಿಟ್ಟಿದೆ.
ಶುಕ್ರವಾರ ಹೈದರಾಬಾದ್ನ ಗಚ್ಚಿಬೌಲಿಯಲ್ಲಿರುವ ಮೆಟಾ ಕಚೇರಿ ಎದುರು ನಡೆದ ಪ್ರತಿಭಟನೆಯ ವೇಳೆ ಮಾತನಾಡಿದ ತೆಲಂಗಾಣ ಯುವ ಕಾಂಗ್ರೆಸ್ ಅಧ್ಯಕ್ಷ ಜಕ್ಕಿಡಿ ಶಿವ ಚರಣ್ ರೆಡ್ಡಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ರಾಷ್ಟ್ರೀಯ ಉಸ್ತುವಾರಿ ಮನೀಶ್ ಶರ್ಮಾ ಅವರ ಇನ್ಸ್ಟಾಗ್ರಾಮ್ ಖಾತೆಗಳನ್ನು ಮೆಟಾ ಅಮಾನತುಗೊಳಿಸಿದೆ ಅಥವಾ ನಿರ್ಬಂಧಿಸಿದೆ ಎಂದು ಆರೋಪಿಸಿದ್ದರು. ಪ್ರತಿಭಟನಾ ನಿರತ ಕಾರ್ಯಕರ್ತರು ಕಚೇರಿಯೊಳಗೆ ನುಗ್ಗಿ, ಸ್ಥಗಿತಗೊಂಡಿರುವ ಖಾತೆಗಳನ್ನು ತಕ್ಷಣವೇ ಮರುಸ್ಥಾಪಿಸುವಂತೆ ಒತ್ತಾಯಿಸಿದ್ದರು. ಈ ವೇಳೆ ಪೊಲೀಸರು ಶಿವ ಚರಣ್ ರೆಡ್ಡಿ ಸೇರಿದಂತೆ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು.
ಪ್ರತಿಭಟನೆಯ ದಿನವೇ ಯುವ ಕಾಂಗ್ರೆಸ್ ಮೆಟಾಗೆ 7 ದಿನಗಳ ಗಡುವು ನೀಡಿದ್ದು, ಈ ನಿರ್ಬಂಧಗಳ ಕುರಿತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದೆ. ಒಂದು ವೇಳೆ ಕಂಪನಿ ಪ್ರತಿಕ್ರಿಯಿಸಲು ವಿಫಲವಾದರೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಮತ್ತು ಈ ವಿಷಯವನ್ನು ನ್ಯಾಯಾಲಯದ ಮೆಟ್ಟಿಲೇರಿಸುವುದಾಗಿ ಎಚ್ಚರಿಕೆ ನೀಡಿದೆ.
ಕಳೆದ ಆರು ತಿಂಗಳಲ್ಲಿ ಸರ್ಕಾರದ ಆದೇಶದ ಮೇರೆಗೆ ಎಷ್ಟು ಭಾರತೀಯ ಖಾತೆಗಳನ್ನು ನಿರ್ಬಂಧಿಸಲಾಗಿದೆ ಮತ್ತು ಅವುಗಳಲ್ಲಿ ಎಷ್ಟು ಖಾತೆಗಳು ಇನ್ನೂ ಬ್ಲಾಕ್ ಆಗಿವೆ ಎಂಬ ಮಾಹಿತಿಯನ್ನು ಮೆಟಾ ಬಹಿರಂಗಪಡಿಸಬೇಕು ಎಂದು ಯುವ ಘಟಕ ಒತ್ತಾಯಿಸಿದೆ. ಅಲ್ಲದೆ, ರಾಹುಲ್ ಗಾಂಧಿ ಅವರನ್ನು ಉಲ್ಲೇಖಿಸುವ ಅಥವಾ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪೋಸ್ಟ್ಗಳನ್ನು ಸ್ವಯಂಚಾಲಿತವಾಗಿ ಬ್ಲಾಕ್ ಮಾಡುತ್ತಿರುವ ಬಗ್ಗೆಯೂ ವಿವರಣೆ ಕೇಳಿದೆ. ವಿರೋಧ ಪಕ್ಷದ ನಾಯಕರು, ಪತ್ರಕರ್ತರು ಮತ್ತು ಕಂಟೆಂಟ್ ಕ್ರಿಯೇಟರ್ಗಳ ಖಾತೆಗಳ ಮೇಲಿನ ಅಕ್ರಮ ನಿರ್ಬಂಧಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಯೂತ್ ಕಾಂಗ್ರೆಸ್ ಆಗ್ರಹಿಸಿದೆ.
ಮತ್ತೊಂದೆಡೆ, ಯುವ ಕಾಂಗ್ರೆಸ್ ಬೆಂಗಳೂರಿನಾದ್ಯಂತ ಮೆಟಾ ವಿರುದ್ಧ ಬೃಹತ್ ಹೋರ್ಡಿಂಗ್ಗಳನ್ನು ಅಳವಡಿಸುವ ಮೂಲಕ ಆಕ್ರೋಶ ಹೊರಹಾಕಿದೆ. ಮೆಟಾ ಸಂಸ್ಥೆಯು ಬಿಜೆಪಿಗೆ ಪರವಾಗಿ ಕೆಲಸ ಮಾಡುತ್ತಿದೆ ಮತ್ತು ಸುಳ್ಳು ಸುದ್ದಿ ಹಾಗೂ ದ್ವೇಷ ಭಾಷಣಗಳನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಈ ಫಲಕಗಳಲ್ಲಿ ಆರೋಪಿಸಲಾಗಿದೆ. ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಗೇಟ್ ಬಳಿ ಅಳವಡಿಸಲಾಗಿರುವ ಒಂದು ಹೋರ್ಡಿಂಗ್ನಲ್ಲಿ, ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅವರನ್ನು ಆರ್ಎಸ್ಎಸ್ ವೇಷಭೂಷಣದಲ್ಲಿ ಚಿತ್ರಿಸಲಾಗಿದ್ದು, ಅದರ ಕೆಳಗೆ ಮೆಟಾ, ಬಿಜೆಪಿ ಕಾ ಬೇಟಾ (ಮೆಟಾ, ಬಿಜೆಪಿಯ ಮಗ) ಎಂಬ ಘೋಷವಾಕ್ಯವನ್ನು ಬರೆಯಲಾಗಿದೆ. ಈ ಪೋಸ್ಟರ್ಗಳು ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ(ಏಜೆನ್ಸೀಸ್).