Narendra Modi | ಪ್ರಧಾನಿ ನರೇಂದ್ರ ಮೋದಿ 
ದೇಶ

Narendra Modi | ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ; ಯುಪಿ ಎನ್​ಡಿಎ ಸಂಸದರ ಸಭೆಯಲ್ಲಿ ಪ್ರಧಾನಿ ಮೋದಿ ಕಿವಿಮಾತು

ದೆಹಲಿ: ಸಂಸದರುಗಳು ಸಾರ್ವಜನಿಕರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಬೇಕು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು ಮತ್ತು ಸಾಮಾಜಿಕ ಜಾಲತಾಣಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ(Narendra Modi ) ಎನ್​ಡಿಎ ಸದಸ್ಯರಿಗೆ ಸಲಹೆ ನೀಡಿದ್ದಾರೆ.
ಶುಕ್ರವಾರ ಉತ್ತರ ಪ್ರದೇಶದ ಎನ್‌ಡಿಎ ಮಿತ್ರಪಕ್ಷಗಳ ಸಂಸದರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಕಿವಿಮಾತು ಹೇಳಿದ್ದಾರೆ.

ನಿಮ್ಮ ಕೆಲಸದತ್ತ ಗಮನ ಹರಿಸಿ...

ಕಾಂಗ್ರೆಸ್ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿರುವ ಪ್ರಧಾನಿಗಳು, ಆ ಹಳೆಯ ಪಕ್ಷವು ಕೇವಲ ನಕಲಿ ಭರವಸೆಗಳನ್ನು ನೀಡುತ್ತದೆ ಮತ್ತು ಚುನಾವಣೆಗಳು ಹತ್ತಿರ ಬಂದಾಗ ಮಾತ್ರ ಕೆಲಸ ಮಾಡುವವರಂತೆ ನಟಿಸುತ್ತದೆ, ಇದಕ್ಕೆ ವ್ಯತಿರಿಕ್ತವೆಂಬಂತೆ ಎನ್‌ಡಿಎ ಸರ್ಕಾರ ಜನರಿಗಾಗಿ ದಿನದ 24 ಗಂಟೆಯೂ ಕೆಲಸ ಮಾಡುತ್ತೇವೆ, ಆದರೆ ನಮ್ಮ ಯೋಜನೆಗಳು ಮತ್ತು ಸಾಧನೆಗಳು ಜನರಲ್ಲಿ ಸಮರ್ಪಕವಾಗಿ ಪ್ರಚಾರಗೊಳ್ಳುವುದಿಲ್ಲ ಎಂದು ಹೇಳಿದರು.
2027 ರಲ್ಲಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ನಡೆಯಲಿದ್ದು, 80 ಸಂಸದರು ಲೋಕಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಾರೆ. 2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷದ ನೇತೃತ್ವದ NDA 36 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇದರಲ್ಲಿ ಬಿಜೆಪಿಯ 33, ರಾಷ್ಟ್ರೀಯ ಲೋಕದಳದ 2 ಮತ್ತು ಅಪ್ನಾ ದಳ 1 ಸಂಸದರಿದ್ದಾರೆ. ಸ್ವತಃ ಪ್ರಧಾನಿ ಮೋದಿ ರಾಜ್ಯದ ವಾರಣಾಸಿಯ ಸಂಸದರಾಗಿದ್ದು, 2014 ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್ 19 ರಂದು ಮುಕ್ತಾಯಗೊಳ್ಳಲಿದ್ದು, ಗುರುವಾರ ಪ್ರಧಾನಿ ಮೋದಿ ನವದೆಹಲಿಯ ತಮ್ಮ 7, ಲೋಕ ಕಲ್ಯಾಣ್ ಮಾರ್ಗ ನಿವಾಸದಲ್ಲಿ ಎಲ್ಲಾ ಎನ್‌ಡಿಎ ಸಂಸದರಿಗೆ ಭೋಜನ ಕೂಟ ಆಯೋಜಿಸಿದ್ದರು.

ಎಕ್ಸ್​ ಫೋಸ್ಟ್​...

ಔತಣಕೂಟದ ವಿಷಯವಾಗಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ನಮ್ಮ ಸಂಸದರಿಗೆ ಭೋಜನ ಕೂಟ ಆಯೋಜಿಸಲು ಸಂತೋಷವಾಗಿದೆ. ಎನ್‌ಡಿಎ ಕುಟುಂಬವು ಉತ್ತಮ ಆಡಳಿತ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಪ್ರಾದೇಶಿಕ ಆಕಾಂಕ್ಷೆಗಳಿಗೆ ಹಂಚಿಕೆಯ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಮುಂದಿನ ವರ್ಷಗಳಲ್ಲಿ ನಮ್ಮ ರಾಷ್ಟ್ರದ ಅಭಿವೃದ್ಧಿ ಪ್ರಯಾಣವನ್ನು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ(ಏಜೆನ್ಸೀಸ್​).