ನಮಗೆ ಬಿಜೆಪಿಯಿಂದ ಮುಕ್ತವಾದ ರಾಮ ಬೇಕು: ಕಮಲ ಪಾಳೆಯದ ವಿರುದ್ಧ ಉದ್ಧವ್ ಆಕ್ರೋಶ! 
ದೇಶ

ನಮಗೆ ಬಿಜೆಪಿಯಿಂದ ಮುಕ್ತವಾದ ರಾಮ ಬೇಕು: ಕಮಲ ಪಾಳೆಯದ ವಿರುದ್ಧ ಉದ್ಧವ್ ಆಕ್ರೋಶ! Uddhav Thackeray

ಮುಂಬೈ: ಅಯೋಧ್ಯೆಯ ಶ್ರೀರಾಮ ಮಂದಿರದ ಕಾಣಿಕೆ ಹಣ ದುರುಪಯೋಗ ಪ್ರಕರಣವನ್ನು ಮುಂದಿಟ್ಟುಕೊಂಡು ಮಹಾರಾಷ್ಟ್ರದ ಮಾಜಿ ಸಿಎಂ ಹಾಗೂ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackeray) ಶನಿವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ತನ್ನ ಹಿಂದುತ್ವದ ಹೆಸರಿನಲ್ಲಿ ಮಂದಿರಗಳನ್ನು ಲೂಟಿ ಮಾಡುತ್ತಿದೆ ಮತ್ತು ಹಿಂದೂಗಳ ಭಾವನೆಗಳೊಂದಿಗೆ ಚೆಲ್ಲಾಟವಾಡಿ ಅವರಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ದೇಶಕ್ಕೆ ಈಗ ಬಿಜೆಪಿ ಮುಕ್ತ ರಾಮ ಬೇಕಾಗಿದ್ದು, ಇದರ ವಿರುದ್ಧ ತಮ್ಮ ಪಕ್ಷವು ಪ್ರತಿಭಟನೆಯ ನೇತೃತ್ವ ವಹಿಸಲಿದೆ ಎಂದು ಅವರು ಘೋಷಿಸಿದ್ದಾರೆ.
ಯವತ್ಮಾಲ್-ವಾಶಿಮ್ ಲೋಕಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಱಲಿಯನ್ನುದ್ದೇಶಿಸಿ ಮಾತನಾಡಿದ ಉದ್ಧವ್​, ಇತ್ತೀಚೆಗೆ ಎಸ್‌ಐಟಿ (SIT) ತನಿಖೆಯಲ್ಲಿ ಬಯಲಾಗಿರುವ ರಾಮಮಂದಿರ ಚಂದಾ ಹಣದ ಅಕ್ರಮಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.

ನೈಜ ಹಿಂದುತ್ವ ಮಾನವೀಯತೆ ಕಲಿಸುತ್ತದೆ: ಠಾಕ್ರೆ ಪ್ರತಿಪಾದನೆ

ನಿಜವಾದ ಹಿಂದುತ್ವವು ಮಾನವೀಯತೆಯನ್ನು ಕಲಿಸುತ್ತದೆ. ಆದರೆ ಮಂದಿರಗಳನ್ನು ಲೂಟಿ ಮಾಡುವ ಬಿಜೆಪಿಯ ಹಿಂದುತ್ವವನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ನಮಗೆ ಈಗ ಬಿಜೆಪಿಯಿಂದ ಮುಕ್ತವಾದ ರಾಮ ಬೇಕು. ಈ ದ್ರೋಹದ ವಿರುದ್ಧ ಶಿವಸೇನಾ (ಯುಬಿಟಿ) ಬೀದಿಗಿಳಿದು ಹೋರಾಡಲಿದೆ ಎಂದು ಉದ್ಧವ್ ಠಾಕ್ರೆ ಗುಡುಗಿದ್ದಾರೆ.
ಅಯೋಧ್ಯೆ ಮಂದಿರದಲ್ಲಿ ಭಕ್ತರು ನೀಡಿದ ಕೋಟ್ಯಂತರ ರೂಪಾಯಿ ಕಾಣಿಕೆ ಹಣ ನಿರ್ವಹಣೆಯಲ್ಲಿ ಭಾರಿ ಲೋಪಗಳು ನಡೆದಿರುವುದು ಮತ್ತು ಈ ಸಂಬಂಧ ಎಂಟು ಜನರನ್ನು ಬಂಧಿಸಿ ಅವರಿಂದ ಸುಮಾರು 80 ಲಕ್ಷ ರೂಪಾಯಿ ವಶಪಡಿಸಿಕೊಂಡಿರುವುದು ದೇಶಾದ್ಯಂತ ಈಗಾಗಲೇ ದೊಡ್ಡ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ಒಡೆಯುವ ಸಂಚು ರೂಪಿಸುತ್ತಿದೆ ಎಂದು ಠಾಕ್ರೆ ದೂರಿದ್ದಾರೆ.

ನಾನು ನಿಮಗೆ ನಿಂತಾಡಲು ಹೆದರು ಬೊಂಬೆಯನ್ನು ಕೊಟ್ಟಿದ್ದೆ: ಬಂಡಾಯ ಸಂಸದರ ವಿರುದ್ಧ ವ್ಯಂಗ್ಯ

ಇತ್ತೀಚೆಗೆ ತಮ್ಮ ಪಕ್ಷದಿಂದ ಡಿಸಿಎಂ ಏಕನಾಥ್ ಶಿಂದೆ ಬಣಕ್ಕೆ ಸೇರಿದ ಬಂಡಾಯ ಸಂಸದ ಸಂಜಯ್ ದೇಶ್‌ಮುಖ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉದ್ಧವ್, ಭಾವುಕರಾಗಿ ಮತದಾರರ ಕ್ಷಮೆ ಯಾಚಿಸಿದ್ದಾರೆ.
ನನ್ನ ಸಲಹೆಯ ಮೇರೆಗೆ, ನಾನು ನಿಮಗೆ ಒಬ್ಬ ಹೆದರು ಬೊಂಬೆಯನ್ನು ಅಭ್ಯರ್ಥಿಯನ್ನಾಗಿ ಕೊಟ್ಟಿದ್ದೆ. ಶಿವಸೇನಾ ಮುಖ್ಯಸ್ಥರ ಮುಖ ನೋಡಿ ಮತ್ತು ನನ್ನ ಮಾತನ್ನು ನಂಬಿ ನೀವು ಆತನನ್ನು ಗೆಲ್ಲಿಸಿದ್ದೀರಿ. ಅದಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಆದರೆ ಆತ ನಮಗೆ ದ್ರೋಹ ಬಗೆದು, ನೀವು ಇಟ್ಟಿದ್ದ ನಂಬಿಕೆಗೆ ಮಸಿ ಬಳಿದಿದ್ದಾನೆ. ಮಹಾರಾಷ್ಟ್ರದಲ್ಲಿ ಈಗ ಇಂತಹ ದ್ರೋಹಿಗಳ ಹಿಂಡೇ ಸೃಷ್ಟಿಯಾಗಿದೆ ಎಂದು ಉದ್ಧವ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಿಜವಾದ ಶಿವಸೈನಿಕರು ಇಂದಿಗೂ ನನ್ನೊಂದಿಗೇ ಇದ್ದಾರೆ ಎಂದ ಠಾಕ್ರೆ, ಪಕ್ಷಾಂತರ ಮಾಡಿದ ನಾಯಕರ ನಡವಳಿಕೆಯನ್ನು ಕಂಡು ನನಗೆ ನಾಚಿಕೆಯಾಗುತ್ತಿದೆ ಎಂದರು.

50 ಕೋಟಿ ಘೋಷಣೆ ಮರುಕಳಿಸಿದ ಠಾಕ್ರೆ

2022ರಲ್ಲಿ ಶಿವಸೇನಾ ಪಕ್ಷ ಒಡೆದ ಸಂದರ್ಭದಲ್ಲಿ ಕೇಳಿಬಂದಿದ್ದ 50 ಖೋಕಾ ಆಮಿಷದ ಆರೋಪವನ್ನು ಉದ್ಧವ್ ಠಾಕ್ರೆ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. ಶಿಂದೆ ಅಲ್ಲಿ ದ್ರೋಹ ಎಸಗಿ ಕುಳಿತಿದ್ದಾರೆ. ಅಂದು ಶಾಸಕರ ರೇಟು 50 ಕೋಟಿ ಎಂದು ಎತ್ತುಗಳ ಮೇಲೆ ಬರೆಯಲಾಗಿತ್ತು. ಶಾಸಕರಿಗೇ 50 ಕೋಟಿ ಬೆಲೆಯಾಗಿದ್ದರೆ, ಇನ್ನು ಈಗ ಪಕ್ಷ ಬಿಟ್ಟಿರುವ ಸಂಸದರ ಬೆಲೆ ಎಷ್ಟು ಆಗಿರಬಹುದು ಎಂದು ಪ್ರಶ್ನಿಸುವ ಮೂಲಕ ಶಿಂದೆ ಸರ್ಕಾರ ಭ್ರಷ್ಟಾಚಾರದ ಮೇಲೆ ನಿಂತಿದೆ ಎಂದು ವ್ಯಂಗ್ಯವಾಡಿದ್ದಾರೆ. ಮಹಾರಾಷ್ಟ್ರ ರಾಜಕಾರಣದಲ್ಲಿ ವಿಪಕ್ಷಗಳು ಬಳಸುವ ಈ 50 ಖೋಕಾ ಘೋಷಣೆ ಈಗ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ,(ಏಜೆನ್ಸೀಸ್​).