IUML Controversy | ಸತೀಶನ್ ಆಯ್ಕೆ ಬೆನ್ನಲ್ಲೇ ಐಯುಎಂಎಲ್ ಕಾರ್ಯಕರ್ತರ ಉದ್ಧಟತನದ ಘೋಷಣೆ!
ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ ಡಿ ಸತೀಶನ್ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದ ಬೆನ್ನಲ್ಲೇ, ಮೈತ್ರಿಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML Controversy) ಆಯೋಜಿಸಿದ್ದ ಸಂಭ್ರಮಾಚರಣೆ ಮೆರವಣಿಗೆಯೊಂದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇಡುಕ್ಕಿ ಜಿಲ್ಲೆಯಲ್ಲಿ ನಡೆದ ಈ ಮೆರವಣಿಗೆಯಲ್ಲಿ ಐಯುಎಂಎಲ್ ಕಾರ್ಯಕರ್ತರು ಪ್ರಚೋದನಕಾರಿ ಮತ್ತು ನಿಂದನಾತ್ಮಕ ಘೋಷಣೆಗಳನ್ನು ಕೂಗಿದ್ದು, ಇದು ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಮೆರವಣಿಗೆಯ ಆರಂಭದಲ್ಲಿ ಸತೀಶನ್ ಪರವಾಗಿ ಘೋಷಣೆಗಳು ಕೇಳಿಬಂದರೂ, ನಂತರದಲ್ಲಿ ಅಲ್ಲಿನ ಪರಿಸ್ಥಿತಿ ಬದಲಾಯಿತು. ಮುಸ್ಲಿಂ ಲೀಗ್ ಆಳುವ ಕೇರಳದ ಮಣ್ಣಿನಲ್ಲಿ ಕಾನೂನುಗಳನ್ನು ನಿರ್ಧರಿಸುವುದು ಲೀಗ್ ಮಾತ್ರ ಎಂಬಂತಹ ಘೋಷಣೆಗಳ ಮೂಲಕ ಕಾರ್ಯಕರ್ತರು ಅತಿರೇಕವಾಗಿ ವರ್ತಿಸಿದರು. ಅಷ್ಟೇ ಅಲ್ಲದೆ, ಕೇರಳದ ಪ್ರಬಲ ಸಮುದಾಯಗಳಾದ ನಾಯರ್ ಸರ್ವೀಸ್ ಸೊಸೈಟಿ (ಎನ್‌ಎಸ್‌ಎಸ್) ಮುಖ್ಯಸ್ಥ ಸುಕುಮಾರನ್ ನಾಯರ್ ಮತ್ತು ಎಸ್‌ಎನ್‌ಡಿಪಿ ಯೋಗದ ಪ್ರಧಾನ ಕಾರ್ಯದರ್ಶಿ ವೆಲ್ಲಪ್ಪಳ್ಳಿ ನಟೇಶನ್ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಲಾಯಿತು ಎನ್ನಲಾಗಿದೆ.
ವೆಲ್ಲಪ್ಪಳ್ಳಿ ಮತ್ತು ಸುಕುಮಾರನ್ ಯಾರು? ಹತ್ತಿರದಿಂದ ನೋಡಿ, ಇದು ಪಾಣಕ್ಕಾಡ್ ಲೀಗ್ ಎಂದು ಕೂಗಾಡುವ ಮೂಲಕ ಜಾತಿ ಸಂಘಟನೆಗಳ ನಾಯಕರನ್ನು ಬಹಿರಂಗವಾಗಿ ಹೀಯಾಳಿಸಲಾಯಿತು. ತಮ್ಮ ಸ್ವಾಭಿಮಾನವನ್ನು ಯಾರ ಮುಂದೆಯೂ ಅಡಮಾನ ಇಡುವುದಿಲ್ಲ ಎಂಬರ್ಥದ ಮಾತುಗಳು ಕೂಡ ಈ ವೇಳೆ ಕೇಳಿಬಂದವು.
ಈ ಘಟನೆಯು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದು, 140 ಸದಸ್ಯ ಬಲದ ವಿಧಾನಸಭೆಯಲ್ಲಿ 22 ಶಾಸಕರನ್ನು ಹೊಂದಿರುವ ಐಯುಎಂಎಲ್, ಯುಡಿಎಫ್ ಮೈತ್ರಿಕೂಟದ ಎರಡನೇ ದೊಡ್ಡ ಶಕ್ತಿಯಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲರಂತಹ ಪ್ರಭಾವಿಗಳಿದ್ದರೂ, ಲೀಗ್ ಮೊದಲೇ ಸತೀಶನ್ ಪರವಾಗಿ ಬಹಿರಂಗ ಬೆಂಬಲ ಸೂಚಿಸಿತ್ತು. ಸತೀಶನ್ರನ್ನು ಎನ್‌ಎಸ್‌ಎಸ್ ಮತ್ತು ಎಸ್‌ಎನ್‌ಡಿಪಿ ನಾಯಕರು ವಿರೋಧಿಸುತ್ತಾ ಬಂದಿದ್ದರು ಎಂದು ತಿಳಿದುಬಂದಿದ್ದು, ಆದ್ದರಿಂದಲೇ ಮೆರವಣಿಗೆಯಲ್ಲಿ ಈ ರೀತಿಯ ಘೋಷಣೆಗಳು ಹಳೆಯ ರಾಜಕೀಯ ಸಂಘರ್ಷದ ಮುಂದುವರಿದ ಭಾಗವಾಗಿ ಕಂಡುಬಂದವು.
ವಿಪಕ್ಷಗಳ ಕಿಡಿ..
ಈ ಬೆಳವಣಿಗೆಯನ್ನು ಅಸ್ತ್ರವಾಗಿ ಬಳಸಿಕೊಂಡಿರುವ ವಿಪಕ್ಷಗಳಾದ ಬಿಜೆಪಿ ಮತ್ತು ಸಿಪಿಐ(ಎಂ), ಕೇರಳದ ಕಾಂಗ್ರೆಸ್ ಸಂಪೂರ್ಣವಾಗಿ ಮುಸ್ಲಿಂ ಲೀಗ್‌ನ ಪ್ರಭಾವಕ್ಕೆ ಒಳಗಾಗಿದೆ ಮತ್ತು ಅದರ ಅಜೆಂಡಾವನ್ನೇ ಅನುಸರಿಸುತ್ತಿದೆ ಎಂದು ಆರೋಪಿಸಿವೆ. ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಸತೀಶನ್ ಆಯ್ಕೆಯ ಹಿಂದೆ ಮುಸ್ಲಿಂ ಲೀಗ್ ಮತ್ತು ಜಮಾತೆ-ಇ-ಇಸ್ಲಾಮಿಯಂತಹ ಸಂಘಟನೆಗಳ ಕೈವಾಡವಿದೆ ಎಂದು ದೂರಿದ್ದಾರೆ. ಅಲ್ಲದೆ, ಬಿಜೆಪಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳ ಮೂಲಕ ಕಾಂಗ್ರೆಸ್ ಮತ್ತು ಐಯುಎಂಎಲ್ ಮೈತ್ರಿಯನ್ನು ಲೇವಡಿ ಮಾಡಿದೆ. ಮುಂದಿನ ಐದು ವರ್ಷಗಳ ಕಾಲ ಕೇರಳದ ಆಡಳಿತವು ಪರೋಕ್ಷವಾಗಿ ಮುಸ್ಲಿಂ ಲೀಗ್ ಕೈಯಲ್ಲೇ ಇರಲಿದೆ ಎಂಬುದು ಬಿಜೆಪಿಯ ಆರೋಪವಾಗಿದೆ.
ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಮುಸ್ಲಿಂ ಯೂತ್ ಲೀಗ್, ಶಿಸ್ತುಕ್ರಮವಾಗಿ ತನ್ನ ಇಡುಕ್ಕಿ ಜಿಲ್ಲಾ ಸಮಿತಿಯನ್ನು ಅಮಾನತುಗೊಳಿಸಿರುವುದಾಗಿ ವರದಿಯಾಗಿದೆ. ಹತ್ತು ದಿನಗಳ ಕಾಲ ನಡೆದ ಹಗ್ಗಜಗ್ಗಾಟದ ಬಳಿಕ ವಿ ಡಿ ಸತೀಶನ್ ಮುಖ್ಯಮಂತ್ರಿಯಾಗಿದ್ದು, ಇಂತಹ ಸಂದರ್ಭದಲ್ಲೇ ಈ ವಿವಾದ ಎದ್ದಿರುವುದು ಹೊಸ ಸರ್ಕಾರಕ್ಕೆ ದೊಡ್ಡ ಮುಜುಗರವನ್ನು ಉಂಟುಮಾಡಿದೆ(ಏಜೆನ್ಸೀಸ್).