ದಳಪತಿ ವಿಜಯ್ 
ದೇಶ

ನಮಗೆ ಜನರ ಬೆಂಬಲವಿದೆ; ಡಿಎಂಕೆ-ಎಐಎಡಿಎಂಕೆಗೆ ಸರ್ಕಾರ ರಚಿಸಲು ಮುಂದಾದ್ರೆ 108 ಶಾಸಕರು ರಾಜೀನಾಮೆ; ಟಿವಿಕೆ ಎಚ್ಚರಿಕೆ | TVK

ಚೆನ್ನೈ: ನಮಗೆ ಜನರ ಬೆಂಬಲವಿದೆ, ಸರ್ಕಾರ ರಚಿಸಲು ನಮಗೆ ಅವಕಾಶ ಸಿಗಬೇಕು. ಅದು ಬಿಟ್ಟು ಎಂ.ಕೆ. ಸ್ಟಾಲಿನ್ ಅವರ ಡಿಎಂಕೆ ಇಲ್ಲ, ಎಡಪ್ಪಾಡಿ.ಕೆ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರ ರಚಿಸಲು ಮುಂದಾದರೆ, ನಮ್ಮ 108 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಟಿವಿಕೆ(TVK) ಎಚ್ಚರಿಸಿದೆ ಎಂದು ವರದಿಯಾಗಿದೆ.
ಟಿವಿಕೆ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದರು, ರಾಜ್ಯಪಾಲರು ಶಾಸಕರ ಬಹುಮತದ ಕೊರತೆ ಕಾರಣಕ್ಕೆ ಪ್ರಮಾಣವಚನಕ್ಕೆ ನಿರಾಕರಿಸಿದ್ದಾರೆ. ಇದರ ನಡುವೆ ಟಿವಿಕೆಗೆ ಅಧಿಕಾರ ವಹಿಸಿಕೊಳ್ಳದಂತೆ ತಡೆಯಲು ಡಿಎಂಕೆ ತನ್ನ ದೀರ್ಘಕಾಲದ ಎದುರಾಳಿ ಎಐಎಡಿಎಂಕೆ ಜೊತೆ ಹಿನ್ನಲೆ ಮಾತುಕತೆ ಆರಂಭಿಸಿದೆ ಎಂಬ ವರದಿ ಬಳಿಕ ಟಿವಿಕೆ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಮೂಲಗಳ ಪ್ರಕಾರ, ಯಾವುದೇ ಪಕ್ಷವು ಸ್ವತಂತ್ರವಾಗಿ ಸರ್ಕಾರ ರಚಿಸಲು ಸಾಕಷ್ಟು ಸಂಖ್ಯಾಬಲವನ್ನು ಹೊಂದಿಲ್ಲದಿದ್ದರೂ, ಟಿವಿಕೆ ಪಕ್ಷವು ವಿಧಾನಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೂ, ಟಿವಿಕೆ ಅಧಿಕಾರ ವಹಿಸಿಕೊಳ್ಳುವುದನ್ನು ತಡೆಯಲು ಮತ್ತು ಅಧಿಕಾರದಿಂದ ದೂರವಿಡಲು, ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಗುಪ್ತ ಹೊಂದಾಣಿಕೆ ನಡೆಯುತ್ತಿರುವುದರ ಬಗ್ಗೆ ಟಿವಿಕೆ ಅಸಮಾಧಾನಗೊಂಡಿದೆ ಎನ್ನಲಾಗಿದೆ.
ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿದೆ. ಅದರಲ್ಲಿ ವಿಜಯ್ ಗೆದ್ದ ಎರಡು ಸ್ಥಾನಗಳು ಸೇರಿವೆ. ಸಾಂವಿಧಾನಿಕ ನಿಯಮದಂತೆ ವಿಜಯ್ ಒಂದು ಸ್ಥಾನವನ್ನು ಖಾಲಿ ಮಾಡುವ ನಿರೀಕ್ಷೆಯಿರುವುದರಿಂದ, ಅದರ ಬಲ 107ಕ್ಕೆ ಕುಸಿಯಲಿದೆ. ಕಾಂಗ್ರೆಸ್​ನ ಐವರು ಶಾಸಕರು ಬೆಂಬಲ ನೀಡಿದ್ದು, 113ಕ್ಕೆ ಏರಿದ್ದು, ಬಹುಮತಕ್ಕೆ ಇನ್ನೂ ಐದು ಸ್ಥಾನಗಳು ಕಡಿಮೆಯಿದೆ. ಎಡಪಕ್ಷಗಳು ಮತ್ತು ವಿಸಿಕೆಯ ಬೆಂಬಲ ನೀಡುವ ನಿರೀಕ್ಷೆಯಿದೆ. 
ಇನ್ನೂ ಡಿಎಂಕೆ ಗುರುವಾರ ನಾಲ್ಕು ನಿರ್ಣಯಗಳನ್ನು ತೆಗೆದುಕೊಂಡಿದ್ದು, ಅದರಲ್ಲಿ ಮರು ಚುನಾವಣೆ ತಡೆಯುವುದು, ಸ್ಥಿರ ಸರ್ಕಾರ ರಚಿಸುವುದು ಸೇರಿವೆ. ಮರು ಚುನಾವಣೆ ನಡೆಯಬಾರದೆಂದು ಬಯಸಿದರೆ, ಅವರು ಬೇರೆಯವರನ್ನು ಬೆಂಬಲಿಸಬೇಕು. ಅಥವಾ, ಅವರು ಎಐಎಡಿಎಂಕೆ ಜೊತೆ ಸೇರಿ ಸರ್ಕಾರ ರಚಿಸಲು ಮುಂದೆ ಬರಬೇಕು. ಎರಡು ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸಲು ಮುಂದಾಗಿವೆ ಎಂದು ಗುಸುಗುಸು ಕೇಳಿ ಬರುತ್ತಿದೆ. ಆದರೆ ಡಿಎಂಕೆ ಮತ್ತು ಎಐಎಡಿಎಂಕೆ ಈ ವಿಚಾರವನ್ನು ತಳ್ಳಿಹಾಕಿವೆ (ಏಜೆನ್ಸೀಸ್).