Supreme Court | ಸುಪ್ರೀಂ ಕೋರ್ಟ್
ನವದೆಹಲಿ: ದೇಶಾದ್ಯಂತ ಪ್ರಮುಖ ಅಡೆತಡೆಗಳ ನಂತರ ಒಂದು ವಾರದವರೆಗೆ ಸಾವಿರಾರು ವಿಮಾನಗಳ ಹಾರಾಟ ರದ್ದಾಗಿದ್ದ ಇಂಡಿಗೊ ಬಿಕ್ಕಟ್ಟನ್ನು ತುರ್ತು ವಿಚಾರಣೆಗೆ ಒಳಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್(Supreme Court) ಸೋಮವಾರ (ಡಿ.08) ವಜಾಗೊಳಿಸಿದೆ.
ಈ ಅರ್ಜಿಯ ಬಗ್ಗೆ ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿಗಳು, ಪರಿಸ್ಥಿತಿ ಗಂಭೀರವಾಗಿದೆ ಮತ್ತು ಲಕ್ಷಾಂತರ ಜನರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೆ, ನ್ಯಾಯಾಲಯವು ವಿಮಾನಯಾನ ಸಂಸ್ಥೆಯನ್ನು ಕಾರ್ಯನಿರ್ವಹಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಪ್ರತಿಕ್ರಿಯಿಸಿದರು. ಭಾರತ ಸರ್ಕಾರವು ಈಗಾಗಲೇ ಬಿಕ್ಕಟ್ಟನ್ನು ಅರ್ಥಮಾಡಿಕೊಂಡಿದೆ ಮತ್ತು ಸಕಾಲಿಕ ಕ್ರಮ ಕೈಗೊಂಡಂತೆ ತೋರುತ್ತದೆ ಎಂದು ಹೇಳಿದ್ದಾರೆ.
ನಾವು ವಿಮಾನಯಾನ ಸಂಸ್ಥೆಯನ್ನು ನಡೆಸಲು ಸಾಧ್ಯವಿಲ್ಲ. ಇದು ತುಂಬಾ ಗಂಭೀರ ಸಮಸ್ಯೆಯಾಗಿದೆ. ನಮಗೆ ಅದು ಅರ್ಥವಾಗಿದೆ. ಲಕ್ಷಾಂತರ ಜನರು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ, ತುರ್ತು ಕೆಲಸವಿರುವವರು, ಆರೋಗ್ಯ ಸಮಸ್ಯೆಗಳನ್ನು ನೋಡಿಕೊಳ್ಳಬೇಕಾದವರು. ಆದರೆ ಭಾರತ ಸರ್ಕಾರವು ಈ ಬಗ್ಗೆ ಗಮನ ಹರಿಸಿದೆ. ಸಕಾಲಿಕ ಕ್ರಮ ಕೈಗೊಂಡಂತೆ ತೋರುತ್ತಿದೆ. ಅಲ್ಲದೆ, ಏನಾಗುತ್ತದೆ ಎಂದು ನೋಡೋಣ ಎಂದು ಸಿಜೆಐ ಕಾಂತ್ ತಿಳಿಸಿದರು.
ಇಂಡಿಗೋ ಏರ್‌ಲೈನ್ಸ್‌ನ ನಿಯಮಗಳ ಉಲ್ಲಂಘನೆಯಲ್ಲಿ ಅನಿಯಂತ್ರಿತ ರದ್ದತಿ, ಓವರ್‌ಬುಕಿಂಗ್, ಪ್ರಯಾಣಿಕರ ಹಕ್ಕುಗಳ ಉಲ್ಲಂಘನೆ, ತಾರತಮ್ಯದ ಅಭ್ಯಾಸಗಳು ಮತ್ತು ಡಿಜಿಸಿಎ ಅನುಸರಣೆ ವೈಫಲ್ಯಗಳು ಸೇರಿದಂತೆ ನಡೆಯುತ್ತಿರುವ ವಿಮಾನಯಾನ ಬಿಕ್ಕಟ್ಟಿಗೆ ಕಾರಣವಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್)ಯನ್ನು ಬುಧವಾರ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಒಪ್ಪಿಕೊಂಡಿತು.
ಸೋಮವಾರ ದೆಹಲಿ ಹೈಕೋರ್ಟ್ ಮುಂದೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅದರೆ ಇಂಡಿಗೋದ ದೊಡ್ಡ ಪ್ರಮಾಣದ ವಿಮಾನ ರದ್ದತಿಯ ಬಗ್ಗೆ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ದೇಶಾದ್ಯಂತ ವಿವಿಧ ವಿಮಾನ ನಿಲ್ದಾಣಗಳಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯಗಳನ್ನು ತಕ್ಷಣವೇ ಒದಗಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇಂಡಿಗೋ ಕಾರ್ಯಾಚರಣೆಯಲ್ಲಿ ಸತತ ಏಳನೇ ದಿನವಾದ ಸೋಮವಾರವೂ ಅಡಚಣೆಗಳು ಮುಂದುವರೆದಿದ್ದು, 450 ವಿಮಾನಗಳು ರದ್ದಾಗಿವೆ. ಕಳೆದ ವಾರ ಮಂಗಳವಾರದಿಂದ, ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ 4,500 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ.
ದೇಶಾದ್ಯಂತದ ದೊಡ್ಡ ಪ್ರಮಾಣದ ಅಡಚಣೆಗಳ ಬಗ್ಗೆ ವಿವರಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಮತ್ತು ಕಂಪನಿಯ ಜವಾಬ್ದಾರಿಯುತ ವ್ಯವಸ್ಥಾಪಕರಿಗೆ ಶೋಕಾಸ್ ನೋಟಿಸ್‌ಗಳನ್ನು ನೀಡಿದ್ದರು,(ಏಜೆನ್ಸೀಸ್).