Mallikarjun Kharge | ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ದೆಹಲಿ: ಮಹಿಳಾ ಮೀಸಲಾತಿ ಜಾರಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಕುರಿತು ಕೇಂದ್ರ ಸರ್ಕಾರದ ಕ್ರಮಗಳನ್ನು ವಿರೋಧಿಸಿ ವಿರೋಧ ಪಕ್ಷಗಳು ಒಗ್ಗೂಡಿದ್ದು, ಬುಧವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ದೆಹಲಿಯ ನಿವಾಸದಲ್ಲಿ ಇಂಡಿಯಾ ಬ್ಲಾಕ್ ನಾಯಕರು ಸಭೆ ನಡೆಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಖರ್ಗೆ, ವಿರೋಧ ಪಕ್ಷಗಳು ಮಹಿಳಾ ಮೀಸಲಾತಿಯನ್ನು ತಾತ್ವಿಕವಾಗಿ ಬೆಂಬಲಿಸುತ್ತವೆಯೇ ಹೊರತು, ಸರ್ಕಾರ ಈ ಮಸೂದೆಯನ್ನು ಮಂಡಿಸಿದ ಅಸಂವಿಧಾನಿಕ ವಿಧಾನವನ್ನು ಬಲವಾಗಿ ವಿರೋಧಿಸುತ್ತವೆ ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಈ ನಡೆ ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದ್ದು, ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದರು.
ನಾವೆಲ್ಲರೂ ಮಹಿಳಾ ಮೀಸಲಾತಿ ಮಸೂದೆಯ ಪರವಾಗಿದ್ದೇವೆ, ಆದರೆ ಅದನ್ನು ತಂದಿರುವ ರೀತಿಯಲ್ಲಿ ನಮಗೆ ಆಕ್ಷೇಪಗಳಿವೆ. ಮಹಿಳಾ ಮೀಸಲಾತಿಯನ್ನು ನಾವು ನಿರಂತರವಾಗಿ ಬೆಂಬಲಿಸಿದ್ದರೂ, ಸರ್ಕಾರವು ಡಿಲಿಮಿಟೇಶನ್ (ಕ್ಷೇತ್ರ ಪುನರ್ವಿಂಗಡಣೆ) ಹೆಸರಿನಲ್ಲಿ ಹೊಸ ತಂತ್ರಗಳನ್ನು ಹೂಡುತ್ತಿದೆ. ಸಂವಿಧಾನವು ಸಂಸತ್ತಿಗೆ ನೀಡಿರುವ ಅಧಿಕಾರಗಳನ್ನು ಕಾರ್ಯಾಂಗವು ತನ್ನದಾಗಿಸಿಕೊಳ್ಳುತ್ತಿದೆ ಎಂದರು.
ಜನಗಣತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ಡಿಲಿಮಿಟೇಶನ್ ಬದಲಾಯಿಸುವ ಅಧಿಕಾರ ಪಡೆದುಕೊಳ್ಳುತ್ತಿರುವುದು ಸಂಶಯಾಸ್ಪದವಾಗಿದ್ದು, ಈಗಾಗಲೇ ಅಸ್ಸಾಂ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನಮಗೆ ವಂಚನೆಯಾಗಿದೆ, ಸಂಸತ್ತಿನಲ್ಲಿ ಒಗ್ಗಟ್ಟಿನಿಂದ ಹೋರಾಡಲು ಮತ್ತು ಡಿಲಿಮಿಟೇಶನ್ ಮಸೂದೆಯನ್ನು ವಿರೋಧಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿದ್ದವರು..
ಈ ಮಹತ್ವದ ಸಭೆಯಲ್ಲಿ ಲೋಕಸಭೆಯ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಡಿಎಂಕೆ ನಾಯಕ ಟಿ.ಆರ್. ಬಾಲು, ಆರ್‌ಜೆಡಿಯ ತೇಜಸ್ವಿ ಯಾದವ್, ಶಿವಸೇನೆಯ ಸಂಜಯ್ ರಾವುತ್, ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಎನ್‌ಸಿಪಿಯ ಸುಪ್ರಿಯಾ ಸುಳೆ, ಆಪ್ ನಾಯಕ ಸಂಜಯ್ ಸಿಂಗ್, ಟಿಎಂಸಿಯ ಡೆರೆಕ್ ಒ'ಬ್ರೇನ್ ಮತ್ತು ಸಮಾಜವಾದಿ ಪಕ್ಷ, ಸಿಪಿಐ(ಎಂ), ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖರು ಭಾಗವಹಿಸಿದ್ದರು.
ಕಿರಣ್ ರಿಜಿಜು ತಿರುಗೇಟು..
ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮಹಿಳಾ ಮೀಸಲಾತಿಯನ್ನು ಯಾವುದೇ ಪಕ್ಷ ವಿರೋಧಿಸುತ್ತಿಲ್ಲ ಮತ್ತು ಇದು ರಾಷ್ಟ್ರೀಯ ಹಿತಾಸಕ್ತಿಯ ವಿಷಯ ಎಂದು ಹೇಳಿದ್ದಾರೆ. ರಾಜಕೀಯ ಉದ್ದೇಶಕ್ಕಾಗಿ ಕೆಲವು ಹೇಳಿಕೆಗಳಿರಬಹುದು, ಆದರೆ ಮಹಿಳೆಯರಿಗೆ ಮೀಸಲಾತಿ ನೀಡುವ ಮೂಲ ಉದ್ದೇಶವನ್ನು ಯಾರೂ ವಿರೋಧಿಸುತ್ತಿಲ್ಲ. ಈಗಾಗಲೇ ನಾವು 40 ವರ್ಷ ಕಾಯ್ದಿದ್ದೇವೆ, ಇನ್ನು ವಿಳಂಬ ಮಾಡುವುದು ಅತ್ಯಂತ ನೋವಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಏಪ್ರಿಲ್ 16 ರಿಂದ ಪ್ರಾರಂಭವಾಗಲಿರುವ ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನವು 2029 ರ ಲೋಕಸಭಾ ಚುನಾವಣೆಯಿಂದ ಶೇ. 33 ರಷ್ಟು ಮೀಸಲಾತಿ ಜಾರಿಗೊಳಿಸುವ ಗುರಿಯನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ರಾಷ್ಟ್ರದ ಭಾವನೆ ಎಂದು ಕರೆದಿದ್ದು, ಈ ಮಸೂದೆಯು ಅಂತಿಮವಾಗಿ ಕಾನೂನಾಗಿ ರೂಪುಗೊಳ್ಳುವ ಹಾದಿಯಲ್ಲಿ ಸಂಸತ್ತಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಚರ್ಚೆಗೆ ವೇದಿಕೆ ಸಜ್ಜಾಗಿದ್ದು, ಅಧಿವೇಶನದಲ್ಲಿ ಎಲ್ಲಾ ಪಕ್ಷಗಳು ಒಟ್ಟಾಗಿ ಕೆಲಸ ಮಾಡುವಂತೆ ರಿಜಿಜು ಮನವಿ ಮಾಡಿದ್ದಾರೆ(ಏಜೆನ್ಸೀಸ್).