ಡಿಸಿಎಂ ಉದಯನಿಧಿ ಸ್ಟಾಲಿನ್ 
ದೇಶ

ಇಡಿ, ಸಿಬಿಐ ಅಲ್ಲ ಮೋದಿ ಅಪ್ಪ ಬಂದ್ರೂ ನಾವು ಹೆದರಲ್ಲ; ತಮಿಳುನಾಡಿಗೆ ಅನ್ಯಾಯವಾಗಲು ಬಿಡಲ್ಲ; ಡಿಸಿಎಂ ಉದಯನಿಧಿ ಸ್ಟಾಲಿನ್ | Udayanidhi Stalin

ಕೊಯಮತ್ತೂರು: ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ಕಾವು ಏರತೊಡಗಿದ್ದು, ರಾಜಕೀಯ ನಾಯಕರ ನಡುವೆ ಆರೋಪ, ಪ್ರತ್ಯಾರೋಪ ಮತ್ತು ಮಾತಿನ ಸಮರ ಆರಂಭವಾಗಿದ್ದು, ಡಿಎಂಕೆ ನಾಯಕ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್(Udayanidhi Stalin), ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಕೊಯಮತ್ತೂರಿನಲ್ಲಿ ಭಾನುವಾರ(ಫೆ.22) ನಡೆದ ಡಿಎಂಕೆ ಯುವ ಘಟಕದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿರುವ ಅವರು, ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನಡುವಿನ ರಾಜಕೀಯ ಯುದ್ಧವೆಂದು ಘೋಷಣೆ ಮಾಡಿದ್ದಾರೆ.
ಮುಂದುವರೆದು ಪ್ರಧಾನಿ ಮೋದಿ ವಿರುದ್ಧ ಗುಡುಗಿರುವ ಉದಯನಿಧಿ, ಡಿಎಂಕೆ ಸರ್ಕಾರ ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸುವುದನ್ನು ಮುಂದುವರಿಸುತ್ತದೆ. ಧಾನಿ ನರೇಂದ್ರ ಮೋದಿಯವರಿಗೆ ಡಿಎಂಕೆ ಬೆದರುವುದಿಲ್ಲ. ತಮಿಳುನಾಡಿನ ಕಲ್ಯಾಣಕ್ಕಾಗಿ ನಮ್ಮ ಹಕ್ಕುಗಳನ್ನು ಎಂದಿಗೂ ಬಿಟ್ಟುಕೊಡಲ್ಲ. ಇಡಿ, ಸಿಬಿಐ ಅಲ್ಲ, ಮೋದಿಯವರ ಅಪ್ಪ ಬಂದ್ರೂ ನಾವು ಹೆದರಲ್ಲ ಎಂದು ಟೀಕಿಸಿದ್ದಾರೆ.
ಪ್ರಧಾನಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗಲೆಲ್ಲಾ ಜನರು ಸಂಭಾವ್ಯ ಘೋಷಣೆಗಳ ಬಗ್ಗೆ ಭಯಪಡುತ್ತಾರೆ. ಅವರು ಏನು ಘೋಷಿಸಲಿದ್ದಾರೆಂದು ಆತಂಕಕ್ಕೆ ಒಳಗಾಗುತ್ತಾರೆ. ನೋಟು ರದ್ದತಿ ಮತ್ತು ಕೊರೊನಾ ಲಾಕ್‌ಡೌನ್ ಘೋಷಣೆಗಳು ಜನರನ್ನು ಭಯಭೀತರನ್ನಾಗಿ ಮಾಡಿತು. ಆದರೆ ಸಿಎಂ ಸ್ಟಾಲಿನ್ ಟಿವಿಯಲ್ಲಿ ಕಾಣಿಸಿಕೊಂಡರೆ, ಜನರು ಹೊಸ ಘೋಷಣೆ ಯೋಜನೆಗಳ ಬಗ್ಗೆ ಸಂತೋಷಪಡುತ್ತಾರೆ ಎಂದು ಅವರು ಹೇಳಿದ್ದಾರೆ.
ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧವೂ ಕಿಡಿಕಾರಿರುವ ಉದಯನಿಧಿ, ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ತಮಿಳುನಾಡಿಗೆ ಯಾವುದೇ ಕಲ್ಯಾಣ ಯೋಜನೆಗಳನ್ನು ಘೋಷಿಸಲಾಗಿಲ್ಲ. ತಕ್ಷಣವೇ, ಇಪಿಎಸ್ ಬಜೆಟ್ ಅನ್ನು ಹೊಗಳಿದರು. ಅವರು ಬಿಜೆಪಿಯ ಗುಲಾಮರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).