Raghav Chadha | ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಆಪ್ ಸಂಸದ ರಾಘವ್ ಚಡ್ಡಾ
ದೆಹಲಿ: ಆಮ್ ಆದ್ಮಿ ಪಕ್ಷದಲ್ಲಿನ (AAP) ಆಂತರಿಕ ಭಿನ್ನಾಭಿಪ್ರಾಯಗಳು ಈಗ ಬೀದಿಗೆ ಬಂದಿದ್ದು, ರಾಜ್ಯಸಭಾ ಸಂಸದ ರಾಘವ್ ಛಡ್ಡಾ (Raghav Chadha) ಮತ್ತು ಪಕ್ಷದ ನಾಯಕತ್ವದ ನಡುವಿನ ಬಿರುಕು ಬಹಿರಂಗವಾಗಿದೆ. ರಾಜ್ಯಸಭೆಯಲ್ಲಿ ರಾಘವ್ ಛಡ್ಡಾರನ್ನು ಪಕ್ಷದ ಉಪ ನಾಯಕ ಸ್ಥಾನದಿಂದ ಪದಚ್ಯುತಗೊಳಿಸಿದ ಬಳಿಕ ಈ ವದಂತಿಗಳಿಗೆ ರೆಕ್ಕೆ ಪುಕ್ಕ ಬಂದಿದೆ.
ಪಕ್ಷವು ತನ್ನನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಛಡ್ಡಾ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡ ಬೆನ್ನಲ್ಲೇ ಸಂಘರ್ಷ ತಾರಕಕ್ಕೇರಿದೆ. ಇದಕ್ಕೆ ಪ್ರತಿಯಾಗಿ ಎಎಪಿ ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಅನುರಾಗ್ ಧಂಡಾ, ಛಡ್ಡಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸದರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ ಮತ್ತು ದೇಶದ ನಿಜವಾದ ಸಮಸ್ಯೆಗಳನ್ನು ಎತ್ತುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ರಾಘವ್ ಅವರು ಪ್ರಧಾನಿ ಮೋದಿಯವರಿಗೆ ಹೆದರುತ್ತಿದ್ದಾರೆ ಮತ್ತು ಸಂಸತ್ತಿನಲ್ಲಿ ದೇಶವನ್ನು ಉಳಿಸುವ ಗಂಭೀರ ವಿಷಯಗಳ ಬಗ್ಗೆ ಮಾತನಾಡುವ ಬದಲು ವಿಮಾನ ನಿಲ್ದಾಣದ ಕ್ಯಾಂಟೀನ್‌ಗಳಲ್ಲಿ ಸಮೋಸಾಗಳ ಬೆಲೆ ಅಗ್ಗವಾಗಿಸುವಂತಹ ಕ್ಷುಲ್ಲಕ ವಿಷಯಗಳ ಮೇಲೆ ಕೇಂದ್ರೀಕರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ ನಾವು ಅರವಿಂದ್ ಕೇಜ್ರಿವಾಲ್ ಅವರ ಸೈನಿಕರು ಮತ್ತು ನಿರ್ಭಯತೆ ನಮ್ಮ ಗುರುತಾಗಿದೆ, ಆದರೆ ಯಾರಾದರೂ ನರೇಂದ್ರ ಮೋದಿಗೆ ಹೆದರುತ್ತಿದ್ದರೆ ಅವರು ದೇಶಕ್ಕಾಗಿ ಹೋರಾಡಲು ಸಾಧ್ಯವೇ ಎಂದು ಧಂಡಾ ಪ್ರಶ್ನಿಸಿದ್ದಾರೆ.
ಗುಜರಾತ್‌ನಲ್ಲಿ ಆಪ್ ಕಾರ್ಯಕರ್ತರನ್ನು ಬಂಧಿಸಿದಾಗ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಿರ್ಣಯ ತಂದಾಗ ಛಡ್ಡಾ ಮೌನ ವಹಿಸಿದ್ದರು ಮತ್ತು ಸಹಿ ಹಾಕಲು ನಿರಾಕರಿಸಿದ್ದರು ಎಂದು ಆರೋಪಿಸಿರುವ ಧಂಡಾ, ಪಕ್ಷದ ಸದಸ್ಯರು ಸದನದಿಂದ ಹೊರನಡೆದಾಗಲೂ ಛಡ್ಡಾ ಪ್ರಧಾನಿಯವರ ಹಾಜರಾತಿಯನ್ನು ಗುರುತಿಸಲು ಅಲ್ಲೇ ಕುಳಿತಿದ್ದರು ಎಂದು ಕುಟುಕಿದ್ದಾರೆ.
ಸಂಸದ ಛಡ್ಡಾ ಹೇಳಿದ್ದೇನು..?
ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದ ಸಂಸದ ರಾಘವ್ ಛಡ್ಡಾ, ತಮ್ಮ ಸ್ವಂತ ಪಕ್ಷವೇ ತಮ್ಮನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಸಂಸತ್ತಿನಲ್ಲಿ ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದು ಅಪರಾಧವೇ ಎಂದು ಪ್ರಶ್ನಿಸಿದ ಅವರು, ತಮಗೆ ಮಾತನಾಡಲು ಅವಕಾಶ ನೀಡಬಾರದು ಎಂದು ಎಎಪಿ ಸಂಸತ್ತಿಗೆ ತಿಳಿಸಿದೆ ಎಂದಿದ್ದು, ನನ್ನ ಮೌನವನ್ನು ಸೋಲು ಎಂದು ಭಾವಿಸಬೇಡಿ, ನಾನು ಅಜೇಯನಾಗಿ ಉಳಿದಿದ್ದೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಆಮ್ ಆದ್ಮಿ ಪಕ್ಷವು ರಾಘವ್ ಛಡ್ಡಾರನ್ನು ರಾಜ್ಯಸಭೆಯ ಉಪ ನಾಯಕ ಸ್ಥಾನದಿಂದ ತೆಗೆದುಹಾಕುವಂತೆ ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಅವರ ಸ್ಥಾನಕ್ಕೆ ಪಂಜಾಬ್ ಸಂಸದ ಅಶೋಕ್ ಮಿತ್ತಲ್ ಹೆಸರನ್ನು ಪ್ರಸ್ತಾಪಿಸಿದೆ. ಅಲ್ಲದೆ, ಸಂಸತ್ತಿನಲ್ಲಿ ಪಕ್ಷದ ಕೋಟಾದಡಿ ಛಡ್ಡಾ ಅವರಿಗೆ ಮಾತನಾಡಲು ಸಮಯ ನೀಡಬಾರದು ಎಂದು ಸಹ ಪಕ್ಷವು ಒತ್ತಾಯಿಸಿದೆ. ಒಂದು ಕಾಲದಲ್ಲಿ ಅರವಿಂದ್ ಕೇಜ್ರಿವಾಲ್ರ ಅತ್ಯಂತ ಆಪ್ತರು ಮತ್ತು ಪಕ್ಷದ ಪ್ರಭಾವಿ ನಾಯಕರಾಗಿದ್ದ ಛಡ್ಡಾ ಈಗಿನ ಸ್ಥಿತಿಯು ಎಎಪಿ ಒಳಗಿನ ದೊಡ್ಡ ಮಟ್ಟದ ಬಿಕ್ಕಟ್ಟನ್ನು ಜಗಜ್ಜಾಹೀರುಗೊಳಿಸಿದೆ(ಏಜೆನ್ಸೀಸ್).