High Court 
ದೇಶ

ಕಲುಷಿತ ನೀರು ಪ್ರಕರಣ: 10 ನಿಮಿಷದಲ್ಲಿ ಶುದ್ಧ ನೀರು ಕೊಡಿ! ಇಂದೋರ್ ಪಾಲಿಕೆಗೆ ಹೈಕೋರ್ಟ್‌ ಖಡಕ್ ಆದೇಶ

ಇಂದೋರ್: 10 ನಿಮಿಷಗಳಲ್ಲಿ ಹೆಚ್ಚುವರಿ ನೀರು ಟ್ಯಾಂಕರ್‌ಗಳನ್ನು ಕಳುಹಿಸಿ ಸ್ವಚ್ಛ ಕುಡಿಯುವ ನೀರು ಪೂರೈಕೆ ಮಾಡುವಂತೆ ಇಂದೋರ್ ಮಹಾನಗರ ಪಾಲಿಕೆಗೆ ಶುಕ್ರವಾರ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಬೆಂಚ್ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ದ್ವಾರಕಾಧೀಶ್ ಬನ್ಸಾಲ್ ಮತ್ತು ರಾಜೇಂದ್ರ ಕುಮಾರ್ ವಾಣಿ ಅವರಿದ್ದ ಡಿವಿಷನ್ ಬೆಂಚ್, "ಜನರು ಕಲುಷಿತ ನೀರಿನಿಂದ ಸಾಯುತ್ತಿದ್ದರೆ ಇದು ತಪ್ಪು. ಇಂದೋರ್‌ನ ಸೌಂದರ್ಯವನ್ನು ಕಾಪಾಡಿ" ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ಪಾಲಿಕೆ ಈಗಾಗಲೇ 30 ಟ್ಯಾಂಕರ್‌ಗಳನ್ನು ಕಳುಹಿಸಿದೆ ಎಂದು ತಿಳಿಸಿದ್ದರೂ, ಹೆಚ್ಚುವರಿ ಟ್ಯಾಂಕರ್‌ಗಳನ್ನು 10 ನಿಮಿಷಗಳಲ್ಲಿ ತಲುಪಿಸುವಂತೆ ನಿರ್ದೇಶಿಸಲಾಗಿದೆ.

ಪ್ರಕರಣ ಏನು..?

ಭಾಗೀರಥಪುರ ಪ್ರದೇಶದಲ್ಲಿ ನರ್ಮದಾ ನೀರು ಪೂರೈಕೆ ಪೈಪ್‌ಲೈನ್‌ನಲ್ಲಿ ಸೋರಿಕೆಯಾಗಿ, ಮೇಲ್ಭಾಗದಲ್ಲಿ ನಿರ್ಮಿತವಾದ ಶೌಚಾಲಯದ ಮಾಲಿನ್ಯ ನೀರಿನೊಂದಿಗೆ ಬೆರೆತಿದ್ದರಿಂದ ಡಿಸೆಂಬರ್ ಅಂತ್ಯದಿಂದ ಜನರು ವಾಂತಿ, ಭೇದಿ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ಈ ಘಟನೆಯಿಂದ ಕನಿಷ್ಠ 9 ಜನರು ಸಾವು ಸಂಭವಿಸಿದ್ದು, 1,100 ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೀಡಾಗಿದ್ದಾರೆ. ಅಲ್ಲದೆ, 200ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಮಸ್ಯೆಯನ್ನು ಗಂಭೀರವಾಗಿ ಹೈಕೋರ್ಟ್‌ನ ಇಂದೋರ್ ಬೆಂಚ್, ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆಯಲ್ಲಿ ಇಂದೋರ್ ಮಹಾನಗರ ಪಾಲಿಕೆಗೆ ತಕ್ಷಣ ಹೆಚ್ಚುವರಿ ನೀರು ಟ್ಯಾಂಕರ್‌ಗಳನ್ನು ಕಳುಹಿಸಿ ಸ್ವಚ್ಛ ಕುಡಿಯುವ ನೀರು ಪೂರೈಕೆ ಮಾಡುವಂತೆ ಆದೇಶಿಸಿದೆ.
ಕೋರ್ಟ್ ರಾಜ್ಯ ಸರ್ಕಾರಕ್ಕೆ ಉತ್ತಮ ಚಿಕಿತ್ಸೆ ನೀಡುವಂತೆಯೂ ಆದೇಶಿಸಿದ್ದು, ಜನವರಿ 2ರೊಳಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೆಲವರನ್ನು ಅಮಾನತುಗೊಳಿಸಲಾಗಿದೆ.ಈ ಘಟನೆ ಇಂದೋರ್‌ನ ಸ್ವಚ್ಛತೆ ಖ್ಯಾತಿಗೆ ಧಕ್ಕೆ ತಂದಿದ್ದು, ಜನರು ಟ್ಯಾಪ್ ನೀರನ್ನು ಬಳಸದಂತೆ ಸಲಹೆ ನೀಡಲಾಗಿದೆ,(ಏಜೆನ್ಸೀಸ್​).