ಟೀಮ್ ಇಂಡಿಯಾದಿಂದ ಯುವಿ, ಗೌತಿಯನ್ನು ಕೈಬಿಟ್ಟಿದ್ದು ಧೋನಿ ಅಲ್ಲ? ದಶಕದ ನಂತರ ಹೊರಬಂತು ಆ ಘೋರ ಸತ್ಯ!
ಮುಂಬೈ: ಭಾರತೀಯ ಕ್ರಿಕೆಟ್ ಇತಿಹಾಸದ ಸುವರ್ಣ ಯುಗದ ಆಟಗಾರರಾದ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್ ಅವರ ತಂಡದಿಂದ ಹೊರಬೀಳುವ ಪ್ರಕ್ರಿಯೆಯ ಹಿಂದೆ ಅಂದಿನ ನಾಯಕ ಎಂ.ಎಸ್. ಧೋನಿ ಅವರ ಕೈವಾಡವಿತ್ತೇ ಎಂಬ ದಶಕಗಳ ಪ್ರಶ್ನೆಗೆ ಅಂದಿನ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್(Sandeep Patil) ತೆರೆ ಎಳೆದಿದ್ದಾರೆ.
ಯುವರಾಜ್ ಸಿಂಗ್: ಧೋನಿ ಮೇಲೆ ಹೊರಿಸಿದ್ದು ತಪ್ಪು ದೂರು!
ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಧೋನಿ ವಿರುದ್ಧ ಅನೇಕ ಬಾರಿ ಕಿಡಿಕಾರಿದ್ದರು. ಧೋನಿಯೇ ತನ್ನ ಮಗನ ವೃತ್ತಿಜೀವನವನ್ನು ಹಾಳುಗೆಡವಿದರು ಎಂದು ಆರೋಪಿಸಿದ್ದರು. ಆದರೆ ಸಂದೀಪ್ ಪಾಟೀಲ್ ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಮುಂದುವರೆದು ಮಾತನಾಡಿದ ಸಂದೀಪ್ ಪಾಟೀಲ್, ನಾನು ದಾಖಲೆ ಸಮೇತ ಹೇಳುತ್ತಿದ್ದೇನೆ, ಆಯ್ಕೆ ಸಮಿತಿ ಸಭೆಯಲ್ಲಾಗಲಿ ಅಥವಾ ಪ್ರವಾಸದ ಸಮಯದಲ್ಲಾಗಲಿ ಧೋನಿ ಒಮ್ಮೆಯೂ ಯುವರಾಜ್ ಸಿಂಗ್ ಅವರನ್ನು ತಂಡದಿಂದ ಕೈಬಿಡಿ ಎಂದು ಹೇಳಲೇ ಇಲ್ಲ. ಆಯ್ಕೆ ಸಮಿತಿಯ ತೀರ್ಮಾನವನ್ನು ಧೋನಿ ಗೌರವಿಸುತ್ತಿದ್ದರು. ಸಮಿತಿಯು ಯುವರಾಜ್ ಅವರನ್ನು ಕೈಬಿಡುವ ನಿರ್ಧಾರ ತೆಗೆದುಕೊಂಡಾಗ ಧೋನಿ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ, ಬದಲಿಗೆ ಸಮಿತಿಯ ಮೇಲೆ ಪೂರ್ಣ ನಂಬಿಕೆ ಇಟ್ಟಿದ್ದರು ಎಂದು ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್: ನಿವೃತ್ತಿಯ ಬಗ್ಗೆ ಕೇಳಿದಾಗ ಸಚಿನ್ ಗಾಬರಿಗೊಂಡಿದ್ದರು!
ಕ್ರಿಕೆಟ್ ದೇವರೆಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರ ನಿವೃತ್ತಿಯ ವಿಷಯ ಬಂದಾಗ ನಡೆದ ಘಟನೆಯನ್ನು ಪಾಟೀಲ್ ಮೆಲುಕು ಹಾಕಿದ್ದಾರೆ. ಆಯ್ಕೆ ಸಮಿತಿಯು ಸಚಿನ್ ಅವರ ಭವಿಷ್ಯದ ಯೋಜನೆಯ ಬಗ್ಗೆ ನೇರವಾಗಿ ಮಾತನಾಡಲು ನಿರ್ಧರಿಸಿತ್ತು.
ನಾವು ಸಚಿನ್ ಜೊತೆ ಕುಳಿತು ಮಾತನಾಡಿದೆವು. ನಿಮ್ಮ ಮುಂದಿನ ಯೋಜನೆ ಏನು ಎಂದು ನಾನು ಕೇಳಿದೆ. ಅದಕ್ಕೆ ಅವರು ಯಾಕೆ ಎಂದು ಮರುಪ್ರಶ್ನೆ ಮಾಡಿದರು. ಅಲ್ಲದೆ, ಆಯ್ಕೆ ಸಮಿತಿಯು ನಿಮ್ಮ ಸ್ಥಾನಕ್ಕೆ ಪರ್ಯಾಯ ಆಟಗಾರನನ್ನು ಹುಡುಕುತ್ತಿದೆ ಎಂದು ಹೇಳಿದಾಗ ಸಚಿನ್ ಅಕ್ಷರಶಃ ಆಘಾತಕ್ಕೊಳಗಾದರು. ನಂತರ ಅವರು ನನಗೆ ಕರೆ ಮಾಡಿ ನೀವು ಗಂಭೀರವಾಗಿ ಹೇಳುತ್ತಿದ್ದೀರಾ ಎಂದು ಕೇಳಿದರು. ನಾನು ಹೌದು ಎಂದು ಉತ್ತರಿಸಿದೆ ಎಂದಿದ್ದಾರೆ. ಆದರೆ, ಒಬ್ಬ ಆಟಗಾರನ ವೃತ್ತಿಜೀವನ ಮುಗಿಯಿತು ಎಂದು ಹೇಳುವ ಅಧಿಕಾರ ಆಯ್ಕೆಗಾರರಿಗಿಲ್ಲ, ನಾವು ಕೇವಲ ತಂಡದಿಂದ ಕೈಬಿಡಬಹುದು ಅಷ್ಟೇ , ಪಾಟೀಲ್ ತಿಳಿಸಿದ್ದಾರೆ.
ಗೌತಮ್ ಗಂಭೀರ್: ಮರೆಯದ ಮತ್ತು ಕ್ಷಮಿಸದ ಸ್ವಭಾವ!
ಎಲ್ಲಕ್ಕಿಂತ ಹೆಚ್ಚು ಕುತೂಹಲ ಮೂಡಿಸಿದ್ದು ಗೌತಮ್ ಗಂಭೀರ್ ಮತ್ತು ಸಂದೀಪ್ ಪಾಟೀಲ್ ನಡುವಿನ ಮುನಿಸು. ಗಂಭೀರ್ ಅವರ ಫಾರ್ಮ್ ಕುಸಿದಾಗ ಶಿಖರ್ ಧವನ್ ಅವರಿಗೆ ಅವಕಾಶ ನೀಡಲಾಗಿತ್ತು. ಅಂದಿನಿಂದ ಗಂಭೀರ್ ಅವರು ಪಾಟೀಲ್ ಅವರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ.
ಪಾಟೀಲ್ ಹೇಳುವಂತೆ, ಗೌತಿ ಮತ್ತು ನಾನು ಈಗಲೂ ಹಲವು ಟಿವಿ ಶೋಗಳಲ್ಲಿ ಒಟ್ಟಿಗೆ ಇರುತ್ತೇವೆ. ಆದರೆ ಅವರು ನನ್ನ ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ. ನಾನು ಹಲೋ ಎಂದು ಹೇಳಿದರೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಹಿಂದೆ ಅವರು ನನಗೆ ಪ್ರತಿ ಎರಡು ವಾರಕ್ಕೊಮ್ಮೆ ಕರೆ ಮಾಡುತ್ತಿದ್ದರು. ನಾನು ಕೋಚ್ ಹುದ್ದೆಯಿಂದ ಕೆಳಗಿಳಿದಾಗಲೂ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದರು. ಆದರೆ ಆಯ್ಕೆ ಸಮಿತಿಯ ನಿರ್ಧಾರದ ನಂತರ ಅವರು ಸಂಪೂರ್ಣ ಬದಲಾದರು. ಗೌತಮ್ ಯಾವುದನ್ನೂ ಮರೆಯುವುದಿಲ್ಲ ಮತ್ತು ಯಾರನ್ನೂ ಕ್ಷಮಿಸುವುದಿಲ್ಲ ಎಂದು ಸಂದೀಪ್ ಹೇಳಿದ್ದಾರೆ.
ದ್ರಾವಿಡ್, ಲಕ್ಷ್ಮಣ್ ಮತ್ತು ಗಂಗೂಲಿ ಅವರಂತಹ ದಿಗ್ಗಜರು ತಂಡದಿಂದ ಹೊರಗುಳಿದಾಗ ಅದನ್ನು ಶಾಂತವಾಗಿ ಸ್ವೀಕರಿಸಿದರು, ಆದರೆ ಗಂಭೀರ್ ಇಂದಿಗೂ ಆ ಕಹಿಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ ಎಂದು ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಂದೀಪ್ ಪಾಟೀಲ್ ಅವರ ಈ ಹೇಳಿಕೆಗಳು ಭಾರತೀಯ ಕ್ರಿಕೆಟ್‌ನಲ್ಲಿ ಆಟಗಾರರು ಮತ್ತು ಆಯ್ಕೆಗಾರರ ನಡುವಿನ ಸಂಬಂಧ ಎಷ್ಟು ಜಟಿಲವಾಗಿರುತ್ತದೆ ಎಂಬುದನ್ನು ತೋರಿಸುತ್ತದೆ. ಧೋನಿ ಅವರ ಮೇಲಿದ್ದ ವಿಲನ್ ಪಟ್ಟವನ್ನು ಈ ಹೇಳಿಕೆ ಕಿತ್ತೆಸೆದಿದೆ,(ಏಜೆನ್ಸೀಸ್).