Ajit Pawar Death | ಎನ್‌ಸಿಪಿ ಎಂಎಲ್‌ಸಿ ಅಮೋಲ್ ಮಿಟ್ಕರಿ
ಪುಣೆ: ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿನ (Ajit Pawar Death) ಸುತ್ತಲಿನ ನಿಗೂಢತೆ ಈಗ ರಾಜಕೀಯ ಬಿರುಗಾಳಿ ಎಬ್ಬಿಸಿದ್ದು, ಬಾರಾಮತಿಯಲ್ಲಿ ನಡೆದ ವಿಮಾನ ದುರಂತದ ಬಗ್ಗೆ ಎನ್‌ಸಿಪಿ ಎಂಎಲ್‌ಸಿ ಅಮೋಲ್ ಮಿಟ್ಕರಿ ನೀಡಿರುವ ಹೇಳಿಕೆ ಈಗ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
ಅಜಿತ್ ಪವಾರ್ ಸಾವನಪ್ಪಿ ಸುಮಾರು ಒಂದು ತಿಂಗಳಾಗುತ್ತ ಬಂದಿದ್ದು, ಘಟನೆಯ ಸುತ್ತಲಿನ ವಿವಾದ ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಜನವರಿ 28 ರಂದು ಮುಂಬೈನಿಂದ ಹೊರಟ ವಿಮಾನ, ಬಾರಾಮತಿ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದ್ದು, ಈ ವೇಳೆ ಅಜಿತ್ ದಾದಾ ಸೇರಿ ಅನೇಕರು ಸಾವನ್ನಪ್ಪಿದರು.
ದಾದಾ ಸಾವು ನಿಗೂಢ: ಎನ್‌ಸಿಪಿ ಎಂಎಲ್‌ಸಿ
ಅಕೋಲಾದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಿಟ್ಕರಿ, ದಾದಾರ ಸಾವು ಬಂಜರು ಭೂಮಿಯ ಮೇಲಿನ ಒಗಟಿನಂತೆ ನಿಗೂಢವಾಗಿಯೇ ಉಳಿದಿದೆ. ಗೋಜುಬಾವಿ ಮಲ್ರಾನ್ ರಹಸ್ಯವು ದಾದಾ ಸಾವಿನ ಸುತ್ತಲಿನ ನಿಗೂಢತೆಯಂತೆಯೇ ಇದೆ.
ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್, ಬಾಬಾಸಾಹೇಬ್ ಅಂಬೇಡ್ಕರ್, ಶಾಹು ಮಹಾರಾಜ್ ಮತ್ತು ಇತರ ಮಹಾನ್ ವ್ಯಕ್ತಿಗಳ ಹೆಸರುಗಳನ್ನು ಅನೇಕ ನಾಯಕರು ನೆನಪಿಸಿಕೊಳ್ಳುತ್ತಾರೆ, ಆದರೆ, ಆ ಎಲ್ಲಾ ಮಹನೀಯರ ಆದರ್ಶಗಳನ್ನು ನಿಜವಾಗಿಯೂ ಆಚರಣೆಗೆ ತಂದಿದ್ದರೆ ಅದು ಅಜಿತ್ ಪವಾರ್ ಎಂದು ಹೇಳಿದರು.
ಅಜಿತ್ ದಾದಾ ದುರಂತ ಸಾವಿನ ಕುರಿತಾಗಿ ಅನೇಕ ಪ್ರಶ್ನೆಗಳು ಉತ್ತರವಿಲ್ಲದೇ ಹಾಗೇ ಉಳಿದಿದ್ದು, ಅದು ಅಪಘಾತವೇ ಅಥವಾ ಪಿತೂರಿಯೇ? ಎಂದು ಪ್ರಶ್ನಿಸಿದರು. ಯಾರಾದರೂ ಅದು ಅಪಘಾತವಲ್ಲ ಎಂದು ಹೇಳುವುದಾದರೆ ಸಾಬೀತುಪಡಿಸಬೇಕು. ನಮ್ಮ ಅನುಮಾನಗಳಿಗೆ ಸ್ಪಷ್ಟನೆ ಬೇಕಿದ್ದು, ಇದು ಹೊಂಚುದಾಳಿಯೇ ಅಥವಾ ಅಪಘಾತವೇ? ಮಹಾರಾಷ್ಟ್ರ ಸತ್ಯವನ್ನು ತಿಳಿದುಕೊಳ್ಳಲು ಅರ್ಹವಾಗಿದ್ದು, ಇಷ್ಟೆಲ್ಲಾ ನಡೆದರು ಸರ್ಕಾರ ಇನ್ನೂ ಏಕೆ ಸುಮ್ಮನಿದೆ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿಗೆ ಪತ್ರ : ಅಮೋಲ್ ಮಿಟ್ಕರಿ ಒತ್ತಾಯ
ಪಕ್ಷದ ಶಾಸಕರು ಸ್ಪಷ್ಟನೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವಂತೆ ಮಿಟ್ಕರಿ ಒತ್ತಾಯಿಸಿದ್ದು, ಅಜಿತ್ ಪವಾರ್ ಪ್ರಯಾಣಿಸಿದ ವಿಮಾನದ ಪೈಲಟ್ ಕಪೂರ್ ಮದ್ಯ ಸೇವನೆಯ ಇತಿಹಾಸ ಹೊಂದಿದ್ದು, ಬಿಎಸ್ಆರ್ ಕಂಪನಿಯಿಂದ ಮೂರು ಬಾರಿ ಅಮಾನತುಗೊಂಡಿದ್ದಾರೆ ಎಂದು ತಿಳಿಸಿದರು.
ಕಪೂರ್ 50 ಕೋಟಿ ವಿಮಾ ರಕ್ಷಣೆಯನ್ನು ಹೊಂದಿದ್ದರು ಎಂದು ವರದಿಯಾಗಿದೆ. ಹಾಗಿದ್ದರೆ ಆತ ಆತ್ಮಹತ್ಯಾ ಬಾಂಬರ್ ಆಗಿದ್ದನೇ? ರಾಜೀವ್ ಗಾಂಧಿ ಕಾಲದಲ್ಲಿ ಎಲ್‌ಟಿಟಿಇ ಆತ್ಮಹತ್ಯಾ ಬಾಂಬರ್‌ಗಳನ್ನು ಬಳಸಿತ್ತಲ್ಲವೇ? ಎಂದು ಪ್ರಶ್ನಿಸಿದ ಮಿಟ್ಕರಿ, ಒಬ್ಬ ಮಹಿಳೆ ರಾಜೀವ್ ಗಾಂಧಿಗೆ ಹಾರ ಹಾಕಿ ಪಾದಗಳನ್ನು ಮುಟ್ಟಿದರು, ಇದಾದ ಕೆಲವೇ ಹೊತ್ತಲ್ಲಿ ಬಾಂಬ್ ಸ್ಫೋಟಗೊಂಡು ದೇಹವನ್ನು ಚಿದ್ರ ಮಾಡಿದವು ಎಂದು ಮಿಟ್ಕರಿ ಹೇಳಿದ್ದಾರೆ.
ಪೈಲಟ್ ಕಪೂರ್ ಈಗ ಎಲ್ಲಿದ್ದಾರೆ? ಎಂದು ಪ್ರಶ್ನಿಸಿರುವ ಮಿಟ್ಕರಿ, ಅವರ ಪತ್ನಿ ಮೂರನೇ ದಿನ ಬಂದು ತನ್ನ ಪತಿ ಜೀವಂತವಾಗಿದ್ದಾರೆ ಎಂದು ಹೇಳಿದ್ದಾರೆ, ಡಿಜಿಸಿಎ ಆರು ಜನರು ಸತ್ತಿದ್ದಾರೆ ಎಂದು ಹೇಳಿದರೆ, ಒಬ್ಬ ವ್ಯಕ್ತಿ ಎಲ್ಲಿಗೆ ಹೋದರು?. ಕೊನೆಯ ಕ್ಷಣದಲ್ಲಿ ಬದಲಾಯಿಸಲ್ಪಟ್ಟ ಇಬ್ಬರು ಪೈಲಟ್‌ಗಳಾದ ಸಾಹಿಲ್ ಮದನ್ ಮತ್ತು ಯಶ್ ಈಗ ಎಲ್ಲಿದ್ದಾರೆ?.
ಮಹಾರಾಷ್ಟ್ರವು ಈ ಪ್ರಶ್ನೆಗಳನ್ನು ಕೇಳುವ ಧೈರ್ಯವನ್ನು ಬೆಳಿಸಿಕೊಳ್ಳಬೇಕು, ಇದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಇದು ಪವಾರ್ ಕುಟುಂಬಕ್ಕೆ ಮಾತ್ರವಲ್ಲ, ಇದು ಇಡೀ ಮಹಾರಾಷ್ಟ್ರ ರಾಜ್ಯಕ್ಕೆ ನಷ್ಟವಾಗಿದೆ. ನಾವು ಈಗಲೇ ಎಚ್ಚರಗೊಳ್ಳದಿದ್ದರೆ, ಭವಿಷ್ಯದ ಪೀಳಿಗೆಗಳು ನಮ್ಮ ಮೌನವನ್ನು ಖಂಡಿತ ಪ್ರಶ್ನಿಸುತ್ತವೆ ಎಂದು ಹೇಳಿದರು(ಏಜೆನ್ಸೀಸ್).