ಭುವನೇಶ್ವರ: ಯುದ್ಧಗಳು ಇನ್ನು ಮುಂದೆ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಂದ ಮಾತ್ರವಲ್ಲ, ಆರ್ಥಿಕತೆಗಳನ್ನು ಗುರಿಯಾಗಿಸಿಕೊಂಡು ಸಹ ನಡೆಯುತ್ತಿವೆ. ಮತ್ತು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸೈಬರ್ ಭಯೋತ್ಪಾದಕರಿಂದ ರಕ್ಷಿಸುವ ಅಗತ್ಯವಿದೆ ಎಂದು ಭಾನುವಾರ(ಅ. 25) ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭುವನೇಶ್ವರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನ 169 ಕೋಟಿ ರೂ. ವೆಚ್ಚದ ಡೇಟಾ ಸೆಂಟರ್ ಮತ್ತು ಸೈಬರ್ ಸೆಕ್ಯುರಿಟಿ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಯುದ್ಧಗಳು ಕೇವಲ ಶಸ್ತ್ರಾಸ್ತ್ರಗಳಿಂದ ಮಾತ್ರ ನಡೆಯುತ್ತಿಲ್ಲ. ಒಂದು ದೇಶವನ್ನು ದುರ್ಬಲಗೊಳಿಸಬೇಕಾದ್ರೆ, ಅದರ ಆರ್ಥಿಕತೆಯ ಮೇಲೆ ದಾಳಿ ಮಾಡುವ ಮೂಲಕ ಮಾಡಬಹುದು ಎಂದಿದ್ದಾರೆ.
ಭಾರತ ಆರ್ಥಿಕವಾಗಿ ಬಲಿಷ್ಠವಾಗುತ್ತಿರುವಂತೆ, ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸೈಬರ್ ದರೋಡೆಕೋರರು ಮತ್ತು ಸೈಬರ್ ಭಯೋತ್ಪಾದಕರಿಂದ ರಕ್ಷಿಸುವುದು ಅಷ್ಟೇ ಕಡ್ಡಾಯವಾಗಿದೆ. ಸೈಬರ್ ಬೆದರಿಕೆಗಳ ಸ್ವರೂಪವೂ ಬದಲಾಗುತ್ತಿದ್ದು, ಹಳೆಯ ವ್ಯವಸ್ಥೆಗಳು ಮತ್ತು ಸಾಧನಗಳೊಂದಿಗೆ ಹೊಸ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ. ಆಧುನಿಕ ಮೂಲಸೌಕರ್ಯಗಳು ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಅವರು, ಅವರ ಆಡಳಿತದ ಅವಧಿಯಲ್ಲಿ ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸೇವೆಗಳನ್ನು ನಿರಾಕರಿಸಲಾಗಿತ್ತು ಎಂದು ಆರೋಪಿಸಿದರು. 1960 ಮತ್ತು 1970 ರ ದಶಕಗಳಲ್ಲಿ ಬಡವರ ಹೆಸರಿನಲ್ಲಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಆದರೆ 2014 ರಲ್ಲಿ ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಬ್ಯಾಂಕಿಂಗ್ ಪರಿಸರ ವ್ಯವಸ್ಥೆಯ ಹೊರಗಿದ್ದಾರೆ ಎಂದು ತಿಳಿಯಿತು ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಆಳ್ವಿಕೆಯಲ್ಲಿ ಶ್ರೀಮಂತರು ಮತ್ತು ಉತ್ತಮ ಸಂಪರ್ಕ ಹೊಂದಿರುವ ಜನರಿಗೆ ಫೋನ್ ಕರೆಗಳ ಮೂಲಕ ಸಾವಿರಾರು ಕೋಟಿ ರೂಪಾಯಿ ಸಾಲಗಳು ಸಿಗುತ್ತಿದ್ದವು. ಆದ್ರೆ ಮಧ್ಯಮ ವರ್ಗದವರಿಗೆ ಬ್ಯಾಂಕ್ ಸಾಲಗಳು ಕನಸಾಗಿದ್ದು, ಬಡವರು, ಸಣ್ಣ ರೈತರು ಮತ್ತು ಮಹಿಳೆಯರು ಅದರ ಬಗ್ಗೆ ಯೋಚಿಸಲು ಸಹ ಸಾಧ್ಯವಿರಲಿಲ್ಲ. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿ ಬದಲಾಯಿತು ಎಂದು ಹೇಳಿದ್ದಾರೆ (ಏಜೆನ್ಸೀಸ್).