Assam Elections | (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ 
ದೇಶ

ಕಾಂಗ್ರೆಸ್ ಬಿಜೆಪಿಯ ಎ ಟೀಮ್​ ಎಂದ ಓವೈಸಿ; ಅಸ್ಸಾಂ ಪ್ರಚಾರದಲ್ಲಿ ಕೋಮು ಹೇಳಿಕೆ ನೀಡಿದರೆ ನಿರ್ನಾಮ ಮಾಡ್ತೀನಿ ಅಂದ್ರು ಸಿಎಂ ಶರ್ಮಾ | Assam Elections

ದಿಸ್ಪೂರ್​​: ಮುಂಬರುವ ವಿಧಾನಸಭಾ ಚುನಾವಣೆಯ (Assam Elections) ನಿಮಿತ್ತ ಅಸ್ಸಾಂಗೆ ಭೇಟಿ ನೀಡಿರುವ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕೈ ಪಕ್ಷವನ್ನು ಬಿಜೆಪಿಯ ಎ ಟೀಮ್​ ಎಂದು ಕರೆದಿದ್ದಾರೆ.
ಕಾಂಗ್ರೆಸ್ ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಬಿಜೆಪಿಯನ್ನು ತಡೆಯಲು ಸಾಧ್ಯವಾಗಲಿಲ್ಲ ಮತ್ತು ಅವರ ಅನೇಕ ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದರಿಂದ ಜನರು ಆ ಪಕ್ಷದ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಓವೈಸಿ ಟೀಕಿಸಿದ್ದಾರೆ.
ಬಿಜೆಪಿ ವಿರುದ್ಧದ ಹೋರಾಟವು ಕೇವಲ ಸಾಂಕೇತಿಕವಾಗಿರಬಾರದು, ಅದು ತಳ ಮಟ್ಟದಲ್ಲಿ ನಡೆಯಬೇಕು ಹಾಗೂ ಸ್ವತಂತ್ರ ಧ್ವನಿಯನ್ನು ಬಲಪಡಿಸುವುದು ಇಂದಿನ ಅಗತ್ಯವಾಗಿದೆ ಎಂದಿರುವ ಓವೈಸಿ, ಎಐಎಂಐಎಂ ಪಕ್ಷವನ್ನು ಬಿಜೆಪಿಯ ಬಿ ಟೀಮ್​ ಎಂದು ಕರೆಯುವ ಕಾಂಗ್ರೆಸ್​​ನ ಅಸ್ಸಾಂನ ಸ್ಥಿತಿಯನ್ನು ನೋಡಿದರೆ ಕಾಂಗ್ರೆಸ್ ಪಕ್ಷವೇ ಬಿಜೆಪಿಯ ಎ ಟೀಮ್​ ಎಂಬುದಕ್ಕೆ ಸಾಕ್ಷಿ ಎಂದು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಸ್ಸಾಂನ ಚುನಾವಣಾ ಹೋರಾಟವು ನಿರ್ಣಾಯಕ ಹಂತ ತಲುಪಿರುವ ಈ ಸಮಯದಲ್ಲಿ, ಐಡೆಂಟಿಟಿ ಮತ್ತು ಪ್ರಾತಿನಿಧ್ಯದ ರಾಜಕೀಯವನ್ನು ಮುನ್ನೆಲೆಗೆ ತಂದಿರುವ ಓವೈಸಿ, ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಅಸ್ಸಾಂನಲ್ಲಿ ಮುಸ್ಲಿಂ ಸಮುದಾಯದ ನೈಜ ನಾಯಕತ್ವವನ್ನು ಎಐಯುಡಿಎಫ್ ಪ್ರತಿನಿಧಿಸುತ್ತದೆ ಮತ್ತು ಮುಸ್ಲಿಮರನ್ನು ಅಂಚಿಗೆ ತಳ್ಳಲಾಗುತ್ತಿರುವ ಈ ಸಂದರ್ಭದಲ್ಲಿ ಅವರ ಪೌರತ್ವ ಹಾಗೂ ಘನತೆಯ ರಕ್ಷಣೆಗಾಗಿ ಸ್ವತಂತ್ರ ಧ್ವನಿಯ ಅಗತ್ಯವಿದೆ ಎಂದಿದ್ದಾರೆ.

ಹಿಮಂತ್​ ಶರ್ಮಾ ಬಗ್ಗೆ ಓವೈಸಿ ಹೇಳಿದ್ದೇನು..?

ಇದೇ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆಡಳಿತ ವೈಖರಿಯನ್ನು ಟೀಕಿಸಿದ ಓವೈಸಿ, ಸರಿಯಾದ ಪುನರ್ವಸತಿ ಕಲ್ಪಿಸದೆ ಬಡವರನ್ನು ಮತ್ತು ಅಂಚಿನಲ್ಲಿರುವ ಮುಸ್ಲಿಮರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಸ್ಸಾಂನ ಪ್ರಸ್ತುತ ರಾಜಕೀಯವು ತಾರತಮ್ಯದಿಂದ ಕೂಡಿದ್ದು ಸಂವಿಧಾನಬಾಹಿರವಾಗಿದೆ ಎಂದು ದೂರಿದ್ದಾರೆ.
ಮುಖ್ಯಮಂತ್ರಿಯ ಕರ್ತವ್ಯ ಸಂವಿಧಾನವನ್ನು ಎತ್ತಿಹಿಡಿಯುವುದಾಗಿರಬೇಕು, ಆದರೆ ರಾಜ್ಯದಲ್ಲಿ ಅದು ಸಾಧ್ಯವಾಗುತ್ತಿಲ್ಲ, ಸಂವಿಧಾನದ ಚೌಕಟ್ಟಿನಲ್ಲೇ ತಾವು ಇಂತಹ ನೀತಿಗಳನ್ನು ಪ್ರಶ್ನಿಸುವುದಾಗಿ ತಿಳಿಸಿರುವ ಓವೈಸಿ, ಜನರು ನ್ಯಾಯಕ್ಕಾಗಿ ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಮತದಾರರ ಪ್ರಾಬಲ್ಯವಿರುವ 29 ಸ್ಥಾನಗಳಲ್ಲಿ ಎಐಯುಡಿಎಫ್ ಸ್ಪರ್ಧಿಸುತ್ತಿದ್ದು, ಓವೈಸಿ ಭೇಟಿಯು ಈ ಕ್ಷೇತ್ರಗಳಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಓವೈಸಿ ರಾಜ್ಯ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಯಾವುದೇ ಕೋಮುವಾದಿ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ತಮಗೆ ಅಲ್ಲಾಹು ಅಕ್ಬರ್ ಎಂಬ ಘೋಷಣೆಯ ಬಗ್ಗೆ ಯಾವುದೇ ಅಭ್ಯಂತರವಿಲ್ಲ, ಆದರೆ ಚುನಾವಣಾ ಪ್ರಚಾರದಲ್ಲಿ ಓವೈಸಿ ಕೋಮುವಾದಿ ಪ್ರಚೋದನೆ ನೀಡಲು ಪ್ರಯತ್ನಿಸಿದರೆ ಅವರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದು ತಮಗೆ ಚೆನ್ನಾಗಿ ತಿಳಿದಿದ್ದು, ಅಂತಹ ಹೇಳಿಕೆಗಳನ್ನು ನೀಡಿದರೆ ಅವರನ್ನು ನಿರ್ನಾಮ ಮಾಡುವುದಾಗಿ ಶರ್ಮಾ ಎಚ್ಚರಿಕೆ ನೀಡಿದ್ದಾರೆ(ಏಜೆನ್ಸೀಸ್​​).