ಸಾಕುಪ್ರಾಣಿಗಳಿಗೂ ಸಮರ ಸಂಕಷ್ಟ 
ದೇಶ

ಸಾಕುಪ್ರಾಣಿಗಳಿಗೂ ಸಮರ ಸಂಕಷ್ಟ

Vijayavan
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸುತ್ತಿರುವ ವೈಮಾನಿಕ ದಾಳಿ ಈಗ 10ನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್ ಕೂಡ ತೀವ್ರತರವಾಗಿ ಪ್ರತಿದಾಳಿ ನಡೆಸುತ್ತಿದೆ. ಅಮೆರಿಕಕ್ಕೆ ವಿವಿಧ ರೀತಿಯಲ್ಲಿ ನೆರವು ನೀಡುತ್ತಿರುವ ಕೊಲ್ಲಿ ರಾಷ್ಟ್ರಗಳೇ ಇರಾನ್​ನ ಟಾರ್ಗೆಟ್. ಯಾವಾಗ ಎಲ್ಲಿ ಕ್ಷಿಪಣಿ ಅಪ್ಪಳಿಸುತ್ತದೆಯೋ ಯಾರಿಗೂ ಗೊತ್ತಿಲ್ಲ. ಪ್ರತಿದಿನ ಜೀವ ಕೈಯಲ್ಲಿ ಹಿಡಿದುಕೊಂಡೇ ಬದುಕುವ ಸ್ಥಿತಿ ನಿರ್ವಣವಾಗಿದೆ. ಇಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ವಿದೇಶಿ ಮೂಲದ ಜನರು ಈ ಸ್ಥಿತಿಯಿಂದ ತಪ್ಪಿಸಿಕೊಳ್ಳಲು ದೇಶವನ್ನೇ ತೊರೆಯುತ್ತಿದ್ದಾರೆ. ತಮ್ಮ ಮತ್ತು ಕುಟುಂಬ ಸದಸ್ಯರ ಜೀವ ಉಳಿಸಿಕೊಂಡರೆ ಸಾಕು ಎಂಬ ಧಾವಂತದಲ್ಲಿ ತಮ್ಮ ಸಾಕುಪ್ರಾಣಿಗಳನ್ನು ಅಲ್ಲಲ್ಲೇ ಬಿಟ್ಟು ಹೋಗುತ್ತಿದ್ದಾರೆ. ಇದರಿಂದಾಗಿ ಈಗ ದುಬೈನ ಬೀದಿಗಳು ಈ ‘ಪರಿತ್ಯಕ್ತ’ ನಾಯಿ- ಬೆಕ್ಕು- ಮೊಲಗಳಿಂದ ತುಂಬಿಹೋಗಿವೆ.
ದುಬೈನ ಪಶುವೈದ್ಯರ ಪ್ರಕಾರ, ಯುದ್ಧ ಹೀಗೆಯೇ ಮುಂದುವರಿದರೆ ಸಾಕುಪ್ರಾಣಿಗಳಿಗೆ ಅವುಗಳ ಮಾಲೀಕರೇ ‘ದಯಾಮರಣ’ ನೀಡಬೇಕಾದಂತಹ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ! ಕೆಲವರು ಈಗಾಗಲೇ ಈ ಬಗೆಗಿನ ಕಾನೂನು-ನಿಯಮಗಳ ಕುರಿತು ವಿಚಾರಿಸುತ್ತಿದ್ದಾರಂತೆ. ಸಂಯುಕ್ತ ಅರಬ್ ಎಮಿರೇಟ್ಸ್​ನಲ್ಲಿ 20 ಲಕ್ಷಕ್ಕೂ ಹೆಚ್ಚು ಸಾಕುಪ್ರಾಣಿಗಳಿವೆ. ದುಬೈ ಮತ್ತು ಈ ಪ್ರದೇಶದಾದ್ಯಂತ ನಾಯಿಗಳಿಗಿಂತ ಬೆಕ್ಕುಗಳ ಸಂಖ್ಯೆಯೇ ಎರಡು ಪಟ್ಟು ಜಾಸ್ತಿ ಇದೆ. ಏಕೆಂದರೆ, ಹಿಂದೆ ನಡೆಸಿದ್ದ ಒಂದು ಸಮೀಕ್ಷೆ ಪ್ರಕಾರ ಇಲ್ಲಿ ಶೇ. 64.98ರಷ್ಟು ಸಾಕುಪ್ರಾಣಿ ಮಾಲೀಕರು ಬೆಕ್ಕುಗಳನ್ನು ಇಷ್ಟಪಡುತ್ತಾರೆ. ಸಾವಿರಾರು ಜನರು ತಮ್ಮ ಸಾಕುಪ್ರಾಣಿಗಳನ್ನು ಈ ರೀತಿ ಬಿಟ್ಟುಹೋಗುತ್ತಿರುವುದು ಈಗ ಅಲ್ಲಿ ಒಂದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ.
ಸ್ವದೇಶಕ್ಕೆ ಲಕ್ಷಾಂತರ ಜನ: ಕಳೆದ ಹತ್ತೇ ದಿನಗಳಲ್ಲಿ ಕೊಲ್ಲಿ ರಾಷ್ಟ್ರಗಳಿಂದ ಲಕ್ಷೋಪಲಕ್ಷ ಜನರು ತಮ್ಮ ದೇಶಗಳಿಗೆ ತೆರಳಿದ್ದಾರೆ. ಅಮೆರಿಕ ಮತ್ತು ಇಸ್ರೇಲ್​ನ ತಲಾ ಸುಮಾರು 20,000 ನಾಗರಿಕರು ತಮ್ಮ ದೇಶಗಳಿಗೆ ತೆರಳಿದ್ದಾರೆ. ಬ್ರಿಟನ್​ನ 3 ಲಕ್ಷ ಪ್ರಜೆಗಳು ಕೊಲ್ಲಿ ರಾಷ್ಟ್ರಗಳಲ್ಲಿದ್ದು, ಅವರಲ್ಲಿಯೂ ಹಲವರು ಸ್ವದೇಶಕ್ಕೆ ಮರಳಿದ್ದಾರೆ. ಇರಾನ್​ನಿಂದ ಹೊರಹೋದವರ ಸಂಖ್ಯೆ ಸುಮಾರು 1 ಲಕ್ಷ ಎಂದು ಅಂದಾಜಿಸಲಾಗಿದೆ. ಲೆಬನಾನ್​ನಲ್ಲಿಯೂ 60 ಸಾವಿರಕ್ಕೂ ಹೆಚ್ಚು ಜನರು ಮನೆಗಳನ್ನು ತೊರೆದಿದ್ದಾರೆ. ಮಾ. 1ರಿಂದ 7ರವರೆಗಿನ ಒಂದೇ ವಾರದಲ್ಲಿ, ಸುಮಾರು 52,000ಕ್ಕೂ ಹೆಚ್ಚು ಭಾರತೀಯರು ಕೊಲ್ಲಿ ರಾಷ್ಟ್ರಗಳಿಂದ ಭಾರತಕ್ಕೆ ತೆರಳಿದ್ದಾರೆ. ಇವರಲ್ಲಿ ಸುಮಾರು 32,107 ಜನರು ಭಾರತೀಯ ವಿಮಾನಯಾನ ಸಂಸ್ಥೆಗಳ ಮೂಲಕ ಮರಳಿದ್ದಾರೆ (ಮಾಹಿತಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯ).

ಮರುಭೂಮಿಯಲ್ಲಿ ಮೂಕಪ್ರಾಣಿಗಳ ಹನನ

ರಸ್ತೆಬದಿಯ ಕಂಬಗಳಿಗೆ ಕಟ್ಟಿರುವ, ಆಹಾರವಿಲ್ಲದೆ ಕಂಗಾಲಾಗಿರುವ ನಾಯಿಗಳ ಹೃದಯವಿದ್ರಾವಕ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೆಲವರು ತಮ್ಮ ಸಾಕುಪ್ರಾಣಿಗಳನ್ನು ಕಂಬಗಳಿಗೆ ಕಟ್ಟಿ ಹಾಕಿ ಹಾಗೆಯೇ ಬಿಟ್ಟು ಹೋಗುತ್ತಿದ್ದಾರೆ. ಗಡಿ ಸಮೀಪದ ಮರುಭೂಮಿಯಲ್ಲಿ ಎರಡು ನಾಯಿಗಳನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂಬ ಆಘಾತಕಾರಿ ಸಂಗತಿಯೂ ವರದಿಯಾಗಿದೆ.

ಮನಕಲಕುವ ಘಟನೆಗಳು

ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವ ಜನರು ಮನಸ್ಸಿಲ್ಲದಿದ್ದರೂ ಮೂಕಪ್ರಾಣಿಗಳನ್ನು ಕ್ಷಿಪಣಿ ದಾಳಿ ನಡೆಯುವ ಅಪಾಯಕಾರಿ ಪ್ರದೇಶಗಳಲ್ಲೇ ಬಿಟ್ಟು ಹೋಗುತ್ತಿದ್ದಾರೆ. ಸಾಧ್ಯವಾದಷ್ಟೂ ಸುರಕ್ಷಿತ ಸ್ಥಳದಲ್ಲಿ ಬಿಟ್ಟುಹೋಗಲು ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಕೆಲವು ಘಟನೆಗಳಿಂದ ಸಾಬೀತಾಗುತ್ತಿದೆ. ಇತ್ತೀಚೆಗೆ, ಪ್ರಾಣಿರಕ್ಷಣಾ ಸಂಸ್ಥೆಯೊಂದರ ಪದಾಧಿಕಾರಿಯ ಮನೆ ಮುಂದು ಒಂದು ತಾಯಿ ಬೆಕ್ಕು ಮತ್ತು ಅದರ ನಾಲ್ಕು ಮರಿಗಳಿದ್ದ ಪೆಟ್ಟಿಗೆ ಸಿಕ್ಕಿದೆ. ಆ ಪೆಟ್ಟಿಗೆಯ ಮೇಲೊಂದು ಪತ್ರವೂ ಇತ್ತು. ‘ಇಲ್ಲಿನ ಪರಿಸ್ಥಿತಿಯಿಂದಾಗಿ ಅನಿವಾರ್ಯವಾಗಿ ದೇಶ ತೊರೆಯುತ್ತಿದ್ದೇನೆ’ ಎಂದು ಆ ಪತ್ರದಲ್ಲಿ ಬರೆಯಲಾಗಿತ್ತು. ಮತ್ತೊಂದೆಡೆ, ಕೆಲವು ಪಾರ್ಕ್ ಗಳಲ್ಲಿ ಮೊಲಗಳಿರುವ ಪಂಜರಗಳು ದೊರೆತಿವೆ. ಅದರಲ್ಲಿ ಕೆಲವು ದಿನಗಳಿಗಾಗುವಷ್ಟು ಆಹಾರವನ್ನೂ ಅವುಗಳ ಮಾಲೀಕರು ಇಟ್ಟು ಹೋಗಿದ್ದಾರೆ! ದುಬೈನ ಕೆ9 ಫ್ರೆಂಡ್ಸ್ ಮತ್ತು ದ ರ್ಬಾಂಗ್ ಲಾಟ್ ಸಂಸ್ಥೆಗಳ ಸಿಬ್ಬಂದಿ ಇಂತಹ ಪ್ರಾಣಿಗಳನ್ನು ತೆಗೆದುಕೊಂಡು ಹೋಗಿ ಆಶ್ರಯತಾಣಗಳಲ್ಲಿ ಬಿಡುತ್ತಿದ್ದಾರೆ. ಆದರೆ ಆ ತಾಣಗಳೂ ಈಗ ಹೌಸ್​ಫುಲ್!

ದಯಾಮರಣ ಕರುಣಿಸಿಬಿಡಿ...

ಯುದ್ಧ ಆರಂಭವಾದಾಗಿ ನಿಂದ, ಅನೇಕ ಮಾಲೀಕರು ತಮ್ಮ ಸಾಕುಪ್ರಾಣಿಗಳಿಗೆ ದಯಾಮರಣ ನೀಡುವಂತೆ ಪಶುವೈದ್ಯರಿಗೆ ಕರೆ ಮಾಡುತ್ತಿದ್ದಾರೆ. ತಮ್ಮೊಂದಿಗೆ ಕರೆದೊಯ್ಯಲು ಸಾಧ್ಯವಾಗದ ಕಾರಣಕ್ಕೆ ಆರೋಗ್ಯವಂತ ಪ್ರಾಣಿಗಳನ್ನು ಕೊಲ್ಲಲು ಮುಂದಾಗುತ್ತಿರುವುದು ಪರಿಸ್ಥಿತಿಯ ಕ್ರೂರ ವ್ಯಂಗ್ಯಕ್ಕೆ ಸಾಕ್ಷಿ. ಕೆಲವರಂತೂ ತಾವು ದತ್ತು ಪಡೆದಿದ್ದ ನಾಯಿಗಳನ್ನು ಮರಳಿ ಆಶ್ರಯ ತಾಣಗಳಿಗೆ ವಾಪಸ್ ನೀಡಲು ಮುಗಿಬೀಳುತ್ತಿದ್ದಾರೆ. ‘ಇಂತಹ ಪ್ರಕರಣಗಳನ್ನು ನಿಭಾಯಿಸುವಷ್ಟರಲ್ಲಿ ಸಾಕುಸಾಕಾಗಿ ಹೋಗುತ್ತಿದೆ’ ಎನ್ನುತ್ತಾರೆ ಬೀದಿಪಾಲಾದ ಸಾಕುಪ್ರಾಣಿಗಳಿಗೆ ಪುನರ್ವಸತಿ ಕಲ್ಪಿಸುವ 53 ವರ್ಷದ ಕ್ಲೇರ್ ಹಾಪ್ಕಿನ್ಸ್.

ಪ್ರಾಣಿವಿಮಾನ ಸಂಸ್ಥೆಗಳಿಗೂ ಬಿಸಿ

ದುಬೈನಲ್ಲಿ ಸಾಕುಪ್ರಾಣಿಗಳನ್ನು ವಿಮಾನದಲ್ಲಿ ಸಾಗಿಸುವುದಕ್ಕಾಗಿಯೇ ಆರಂಭಿಸಲಾದ ಪೆಟ್​ಎಕ್ಸ್​ಜೆಟ್ಸ್ ಎಂಬ ಸಂಸ್ಥೆ ಇದೆ. ನಾಗರಿಕ ವಿಮಾನಗಳಲ್ಲಿ ಪ್ರಾಣಿಗಳನ್ನು ಸಾಗಿಸುವುದು ದೊಡ್ಡ ಸಮಸ್ಯೆ ಎಂಬ ಹಿನ್ನೆಲೆಯಲ್ಲಿ ಇಂತಹ ಹಲವು ಸಂಸ್ಥೆಗಳು ಮೊದಲೇ ಸ್ಥಾಪನೆಯಾಗಿವೆ. ಕಳೆದ ಹತ್ತು ದಿನಗಳಲ್ಲಿ ಇಂತಹ ಸಂಸ್ಥೆಗಳಿಗೆ ಸಾಕುಪ್ರಾಣಿಗಳನ್ನು ಸಾಗಿಸುವುದಕ್ಕಾಗಿ ಬರುವ ಬೇಡಿಕೆಗಳಿಗಿಂತ ಜನರಿಗೆ ಸೇವೆ ಒದಗಿಸುವಂತೆ ಒತ್ತಾಯಿಸುವ ಕರೆಗಳೇ ಜಾಸ್ತಿ ಬರುತ್ತಿವೆ! ಯುಎಇಯಿಂದ ತುರ್ತಾಗಿ ಹೊರಬರಲು ಬಯಸುವ ಗರ್ಭಿಣಿಯರು, ವೃದ್ಧರು ಮತ್ತು ಯುವಕರು ಸೇರಿದಂತೆ ನೂರಾರು ಪ್ರಯಾಣಿಕರು ಈ ‘ಪ್ರಾಣಿ ವಿಮಾನ’ಗಳನ್ನು ಬಳಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ.

ದುಬೈನಲ್ಲಿ ಸ್ಮಾರ್ಟ್ ಫೀಡಿಂಗ್ ವ್ಯವಸ್ಥೆ

ಈ ಬಿಕ್ಕಟ್ಟಿನ ನಡುವೆಯೇ, ದುಬೈ ಮುನ್ಸಿಪಾಲಿಟಿ ಬೀದಿಪ್ರಾಣಿಗಳ ಹಸಿವು ನೀಗಿಸಲು ಮತ್ತು ಅವುಗಳ ಆರೋಗ್ಯ ರಕ್ಷಣೆಗಾಗಿ ‘ಎಹ್ಸಾನ್ ಸ್ಟೇಷನ್ಸ್’ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. ಇದು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಆಧರಿಸಿದ ಸ್ಮಾರ್ಟ್ ಫೀಡಿಂಗ್ ವ್ಯವಸ್ಥೆ. ನಗರದ ಪ್ರಮುಖ 12 ಸ್ಥಳಗಳಲ್ಲಿ ಇಂತಹ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಸ್ಮಾರ್ಟ್ ನಿಲ್ದಾಣಗಳು ಪ್ರಾಣಿಗಳು ಸಮೀಪಕ್ಕೆ ಬಂದಾಗ ಅವುಗಳನ್ನು ಸ್ವಯಂಚಾಲಿತವಾಗಿ ಗುರುತಿಸಿ, ನಿಗದಿತ ಪ್ರಮಾಣದ ಆಹಾರ ಮತ್ತು ನೀರನ್ನು ಒದಗಿಸುತ್ತವೆ. ಕೇವಲ ಹಸಿವು ನೀಗಿಸುವುದು ಮಾತ್ರವಲ್ಲದೆ, ಈ ಸಾಧನಗಳು ಪ್ರಾಣಿಗಳ ಸಂಖ್ಯೆ, ಜಾತಿ ಮತ್ತು ಅವುಗಳ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಡೇಟಾ ಸಂಗ್ರಹಿಸಲು ಸಹಕಾರಿಯಾಗಿವೆ. ನಗರದ ಸ್ವಚ್ಛತೆಯನ್ನು ಕಾಪಾಡುವ ಜತೆಗೆ, ಸಂಘರ್ಷದಂತಹ ಬಿಕ್ಕಟ್ಟಿನ ಸಮಯದಲ್ಲಿ ಅನಾಥವಾಗುತ್ತಿರುವ ಮೂಕಪ್ರಾಣಿಗಳಿಗೆ ಮಾನವೀಯ ನೆರವು ನೀಡುವುದು ಈ ಯೋಜನೆಯ ಆಶಯ.

ತಮ್ಮೊಂದಿಗೇಕೆ ಕರೆದೊಯ್ಯುತ್ತಿಲ್ಲ?

ಯುದ್ಧಪೀಡಿತ ಪ್ರದೇಶಗಳಿಂದ ಸ್ವದೇಶಕ್ಕೆ ಹೋಗುತ್ತಿರುವ ಅನಿವಾಸಿಗಳು ತಮ್ಮ ಸಾಕುಪ್ರಾಣಿಗಳನ್ನು ಅಲ್ಲೇ ಬಿಟ್ಟು ಹೋಗುತ್ತಿರುವು ದಕ್ಕೆ ಕೆಲವು ಬಲವಾದ ಕಾರಣಗಳಿವೆ. ಸಾಕುಪ್ರಾಣಿಗಳನ್ನು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಿಮಾನದ ಮೂಲಕ ಸಾಗಿಸುವುದು ದುಬಾರಿ ಪ್ರಕ್ರಿಯೆ. ತುರ್ತು ಪರಿಸ್ಥಿತಿಯಲ್ಲಿ ವಿಮಾನ ಟಿಕೆಟ್ ದರಗಳು ಏರಿಕೆಯಾದಾಗ, ಪ್ರಾಣಿಗಳ ಸಾಗಣೆ ವೆಚ್ಚ ಲಕ್ಷಾಂತರ ರೂ. ಆಗಬಹುದು. ಅನೇಕ ಮಧ್ಯಮ ವರ್ಗದ ಅನಿವಾಸಿಗಳಿಗೆ ಈ ಹಠಾತ್ ಆರ್ಥಿಕ ಹೊರೆಯನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಯುದ್ಧಸಮಯದ ವಿಶೇಷ ವಿಮಾನಗಳಲ್ಲಿ ಅಥವಾ ತುರ್ತು ಸ್ಥಳಾಂತರದ ವಿಮಾನಗಳಲ್ಲಿ ಪ್ರಾಣಿಗಳನ್ನು ಕರೆದೊಯ್ಯಲು ಅನುಮತಿ ಇರುವುದಿಲ್ಲ. ಅಲ್ಲಿ ಮನುಷ್ಯರ ಜೀವರಕ್ಷಣೆಗೆ ಮೊದಲ ಆದ್ಯತೆ. ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಸಾಕುಪ್ರಾಣಿಗಳಿಗೆ ಹೆಲ್ತ್ ಸರ್ಟಿಫಿಕೇಟ್, ನಿರ್ದಿಷ್ಟ ಲಸಿಕೆ ಹಾಕಿಸುವುದು, ಮೈಕ್ರೋಚಿಪ್ ಅಳವಡಿಸುವುದು ಅತ್ಯಗತ್ಯ.
ಯುದ್ಧದ ಸಮಯದಲ್ಲಿ ಪಶುವೈದ್ಯಕೀಯ ಆಸ್ಪತ್ರೆಗಳು ಮುಚ್ಚಿರುವುದರಿಂದ ಅಥವಾ ಸಮಯದ ಅಭಾವದಿಂದ ಇದೆಲ್ಲವನ್ನೂ ಮಾಡಲು ಪ್ರಾಣಿಗಳ ಮಾಲೀಕರಿಗೆ ಸಾಧ್ಯವಾಗುತ್ತಿಲ್ಲ. ಕೆಲವು ದೇಶಗಳು ಹೊರಗಿನಿಂದ ಬರುವ ಪ್ರಾಣಿಗಳನ್ನು ವಾರಗಟ್ಟಲೆ ಕ್ವಾರಂಟೈನ್​ನಲ್ಲಿ ಇರಿಸುತ್ತವೆ. ಇದರ ವೆಚ್ಚ ಮತ್ತು ಆ ಪ್ರಾಣಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊರುವುದು ಸ್ವತಃ ಸಂಕಷ್ಟದಲ್ಲಿರುವ ಮಾಲೀಕರಿಗೆ ಕಷ್ಟಕರವಾಗುತ್ತದೆ. ಭೂಮಾರ್ಗದ ಮೂಲಕ (ಉದಾಹರಣೆಗೆ ಓಮನ್ ಗಡಿ) ತೆರಳುವಾಗ, ಗಡಿ ಭದ್ರತಾ ಅಧಿಕಾರಿಗಳು ಪ್ರಾಣಿಗಳಿಗೆ ಪ್ರವೇಶ ನಿರಾಕರಿಸಬಹುದು. ಇಂತಹ ಸಂದರ್ಭದಲ್ಲಿ ಮಾಲೀಕರು ಅನಿವಾರ್ಯವಾಗಿ ಪ್ರಾಣಿಗಳನ್ನು ಅಲ್ಲೇ ಬಿಟ್ಟು ಹೋಗಬೇಕಾಗುತ್ತದೆ.

ಹಿಂದೆಯೂ ಹೀಗಾಗಿತ್ತು

‘ಇದು ಯುಎಇಗೆ ಸೀಮಿತವಾದ ಸಮಸ್ಯೆಯಲ್ಲ; ಈ ಹಿಂದೆ ಇರಾಕ್ ಮತ್ತು ಯೂಕ್ರೇನ್​ನಲ್ಲೂ ಇಂತಹ ಘಟನೆಗಳು ನಡೆದಿದ್ದವು. ಸುಸಜ್ಜಿತ ಮತ್ತು ಶ್ರೀಮಂತ ರಾಷ್ಟ್ರವಾದ ದುಬೈನಲ್ಲಿ, ಮಾಲೀಕರು ತಮ್ಮ ಪ್ರಾಣಿಗಳನ್ನು ಕನಿಷ್ಠ ಪಕ್ಷ ಪಶುವೈದ್ಯರ ಬಳಿಯೂ ಬಿಡದೆ ಬೀದಿಗಳಲ್ಲಿ ಅನಾಥವಾಗಿ ಬಿಟ್ಟು ಹೋಗುತ್ತಿರುವುದು ಅಕ್ಷಮ್ಯ’ ಎಂದು ಕಿಡಿ ಕಾರಿದ್ದಾರೆ ವಾರ್ ಪಾಸ್ ಸಂಸ್ಥೆಯ ಸಿಇಒ ಲೂಯಿಸ್ ಹ್ಯಾಸ್ಟಿ.
ಸಾಕುಪ್ರಾಣಿಗಳನ್ನು ಬೀದಿಪಾಲು ಮಾಡುತ್ತಿರುವ ಪ್ರಕರಣಗಳು ಕಳೆದೊಂದು ವಾರದಲ್ಲಿ ನೂರಾರು ಪಟ್ಟು ಹೆಚ್ಚಾಗಿರುವುದ ರಿಂದ ಪ್ರಾಣಿ ರಕ್ಷಣಾ ಕೇಂದ್ರಗಳು ತೀವ್ರ ಒತ್ತಡ ಎದುರಿಸುತ್ತಿವೆ. ‘ರಕ್ಷಣಾ ಕೇಂದ್ರಗಳಿಗೆ ಬರುತ್ತಿರುವ ಪ್ರಾಣಿಗಳ ಸಂಖ್ಯೆ ಮಿತಿಮೀರಿದೆ. ಎಲ್ಲ ಪ್ರಾಣಿಗಳನ್ನು ನಿರ್ವಹಿಸುವುದು ಅಸಾಧ್ಯವಾಗುತ್ತಿದೆ’ ಎಂದು ದುಬೈನ ಪ್ರಾಣಿ ಆರೈಕೆ ಕೇಂದ್ರ ‘ರ್ಬಾಂಗ್ ಲಾಟ್’ನ ಸಂಸ್ಥಾಪಕಿ ಅದಿತಿ ಗೌರಿ ಹೇಳಿದ್ದಾರೆ.